ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ಪಿ.ಎಚ್. ರಸ್ತೆಯಲ್ಲಿರುವ ಹಾರ್ಡ್‌ವೇರ್ ಅಂಗಡಿಯಲ್ಲಿ ಕಳ್ಳತನ ಮಾಡಿದ ಇಬ್ಬರು ಖದೀಮರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಡಿ.30ರ ರಾತ್ರಿ ಹಾರ್ಡ್‌ವೇರ್ ಅಂಗಡಿಯಲ್ಲಿ ಕಳ್ಳತನವಾಗಿದ್ದ ಸಂಬಂಧ ಕಳ್ಳರ ಪತ್ತೆಗಾಗಿ ಸಿಪಿಐ ದೀಪಕ್ ನೇತೃತ್ವದಲ್ಲಿ ತಂಡವು ಕಾರ್ಯಾಚರಣೆ ಆರಂಭಿಸಿ, ಇಬ್ಬರನ್ನು ಬಂಧಿಸಿದೆ. ಪ್ರಕರಣ ಕುರಿತು ನಡೆದ ವಿಚಾರಣೆಯಲ್ಲಿ ಆರೋಪಿಗಳ ಮೇಲೆ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಒಂದು, ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಒಂದು ಸೇರಿದಂತೆ ಒಟ್ಟು ಏಳು ಪ್ರಕರಣಗಳನ್ನು ಭೇದಿಸಲಾಗಿದೆ. ಇವರಿಂದ ಕಾರಿನ ನಾಲ್ಕು ಚಕ್ರಗಳು, ಒಂದು ಐರನ್ ಕಟ್ಟರ್, ಒಂದು ಟೂಲ್‌ಕಿಟ್, ಒಂದು ಡ್ರಿಲ್ಲಿಂಗ್ ಮಿಷನ್, ಮೂರು ದ್ವಿಚಕ್ರ ವಾಹನಗಳು, 5 ಸಾವಿರ ರೂ. ನಗದು ಸೇರಿದಂತೆ ಒಟ್ಟು 4.75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಠಾಣೆಯ ಪಿಎಸ್‌ಐಗಳಾದ ಶಿವಶಂಕರ, ಸ್ವಾಮಿನಾಯಕ, ಸಿಬ್ಬಂದಿ ಶಂಕರ, ಪ್ರಭಾಕರ, ಸತೀಶ ಕುಮಾರ್, ಅಸ್ಲಂ ಪಾಷಾ, ರವೀಶ, ಮಲ್ಲೇಶ, ನಯೀಮ್ ಅಹಮದ್, ರಘು, ಮಂಜುನಾಥ, ಆನಂದಮೂರ್ತಿ ಇದ್ದರು.