ಇನ್ಯಾರು ತೋರಿಸ್ಬೇಕು ಈ ಮಕ್ಕಳಿಗೆ ಕಕ್ಕುಲಾತಿ?

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಬದುಕಿನ ಪಯಣ ನಿರಾಯಾಸ ಪೂರ್ಣಗೊಳಿಸಬೇಕು ಎಂದುಕೊಂಡು ಏನೆಲ್ಲ ಕಷ್ಟಪಡುವ ಕೆಲ ಕುಟುಂಬಗಳ ಜೀವನ ಅದೆಷ್ಟರ ಮಟ್ಟಿಗೆ ದುರ್ವಿಧಿಗೆ ಸಿಲುಕುತ್ತದೆ ಎಂಬ ಕೆಲ ಘಟನೆಗಳು ನಾಗರಿಕ ಸಮಾಜಕ್ಕೆ ಆಗಾಗ್ಗೆ ಎಚ್ಚರಿಕೆ ನೀಡುತ್ತಲೇ ಇವೆ. ಇಂಥದ್ದೇ ಮತ್ತೊಂದು ಮನ ಕಲುಕುವ ಘಟನೆ ಶಹಾಪುರದಲ್ಲಿ ನಡೆದಿದ್ದು, ಹೆತ್ತವರನ್ನ ಕಳೆದುಕೊಂಡ ಬೀದಿಗೆ ಬಂದ ಈ ಜೀವಗಳು ಕಕ್ಕುಲಾತಿಯ ಅಕ್ಕರೆಗೆ ಬಡಾವಣೆ ಜನರಲ್ಲಿ ಆಶ್ರಯ ಪಡೆದಿವೆ.
ಅದೊಂದು ಬಡ ಕುಟುಂಬ. ಜೀವನ ನಡೆಸಲು ಕಳೆದೊಂದು ದಶಕದ ಹಿಂದೆ ಚಿತ್ತಾಪುರ ತಾಲೂಕಿನಿಂದ ಶಹಾಪುರಕ್ಕೆ ಬಂದು ನೆಲೆಸಿತ್ತು. ಆ ಮನೆಯಲ್ಲಿ ಇದ್ದವರು ಗಂಡ-ಹೆಂಡತಿ, ಮೂರು ಮಕ್ಕಳ ಮಾತ್ರ. ಮೂಲತಃ ಬನ್ನೆಟ್ಟಿ ಗ್ರಾಮದ ಶಿವಲಿಂಗನಗೌಡ ಎಂಬಾತ ಮಡದಿಯೊಂದಿಗೆ ಫಿಲ್ಟರ್ ಬೆಡ್ ಕಾಲನಿಯಲ್ಲಿ ವಾಸಿಸುತ್ತಿದ್ದ. ವೃತ್ತಿಯಲ್ಲಿ ಪೇಂಟರ್ ಆಗಿದ್ದ. ಮನೆಗಳಿಗೆ ಬಳಿಯುತ್ತಿದ್ದ ಪೇಂಟಿಂಗ್ನಲ್ಲಿ ಬರುವ ಬಿಡಿಗಾಸು ಯಾವುದಕ್ಕೂ ಸಾಲುತ್ತಿರಲಿಲ್ಲವಾದರೂ ಸಿಕ್ಕ ಸಂಪಾದನೆಯಲ್ಲೇ ನೆಮ್ಮದಿ ಜೀವನ ಸಾಗಿಸುವ ಕುಟುಂಬ ಆತನದ್ದಾಗಿತ್ತು.
ಶಿವಲಿಂಗನಗೌಡ ಮತ್ತು ಶರಬಮ್ಮ ದಂಪತಿಗೆ ಮೂವರು ಮುದ್ದಾದ ಮಕ್ಕಳಿದ್ದು, ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಎಂಬಂತೆ ಸಂಸಾರದ ದೋಣಿ ಯಾವ ಅಡೆತಡೆ ಇಲ್ಲದೆ ಸಾಗುತ್ತಿತ್ತು. ಆದರೆ ಈ ಸಂಸಾರದ ಮೇಲೆ ಕಣ್ಣಿಟ್ಟ ವಿಧಿ 2015ರಲ್ಲಿ ಶಿವಲಿಂಗನಗೌಡ (50)ಗೆ ಹೃದಯಾಘಾತದ ಮೂಲಕ ತನ್ನೆಡೆಗೆ ಕರೆಸಿಕೊಂಡು ಬಿಟ್ಟಿತು. ಪತಿ ಅಗಲಿಕೆ ನೋವಿನಿಂದ ಹೊರಬರಲಾಗದಿದ್ದರೂ ಪತ್ನಿ ಶರಬಮ್ಮ ಮಕ್ಕಳ ಮೊಗದಲ್ಲಿನ ನಗು ಕಂಡು ಸಂಸಾರದ ನೊಗ ಹೊರಲು ಸಿದ್ಧಳಾಗಿ ಕೂಲಿ ಮಾಡಿ ಸಾಕುವ ಜಿವಾಬ್ದಾರಿ ವಹಿಸಿಕೊಂಡಿದ್ದಳು. ಆದರೆ ವಿಧಿ ಆಕೆ ಮೇಲೂ ಕಣ್ಣಿಟ್ಟಿತು.
ಮಾರಕ ಕ್ಯಾನ್ಸರ್ನಿಂದ ಬಳಲುತ್ತಿದ್ದ ಶರಬಮ್ಮ (44) ಡಿಸೆಂಬರ್ 12ರಂದು ತನ್ನ ಮೂರು ಕಂದಮ್ಮಗಳನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾಳೆ. ಇರಲು ಸ್ವಂತ ಸೂರು ಇಲ್ಲದೆ ಮಕ್ಕಳಾದ ಶಾಂತಮ್ಮ (12), ಬಸವರಾಜ (10) ಹಾಗೂ ಆಕಾಶ (8) ಸದ್ಯ ಬೀದಿಯಲ್ಲೇ ಜೀವನ ಸಾಗಿಸುವಂತಾಗಿದೆ. ಈ ಮಕ್ಕಳ ನಿತ್ಯದ ಗೋಳನ್ನು ಕಣ್ಣಾರೆ ಕಂಡ ಫಿಲ್ಟರ್ಬೆಡ್ ಬಡಾವಣೆ ನಿವಾಸಿಗಳು ಸದ್ಯ ಆಸರೆಯಾಗಿದ್ದಾರೆ.
ಜೀವನ ಎಂದರೆ ಏನು ಅಂತಾನೇ ಗೊತ್ತಿರದ ಈ ಮಕ್ಕಳ ಭವಿಷ್ಯದಲ್ಲಿ ವಿಧಿ ತನ್ನ ಅಟ್ಟಹಾಸ ಮೆರೆದಿದ್ದು, ಜೀವನೋಪಾಯಕ್ಕಾಗಿ ದಾನಿಗಳು ದೊಡ್ಡ ಮನಸ್ಸು ಮಾಡಬೇಕಿದೆ.

ಬಡಾವಣೆ ನಿವಾಸಿಗಳೇ ಆಸರೆಯಾದ್ರು: ತಂದೆ, ತಾಯಿ ಕಳೆದುಕೊಂಡ ಈ ಅನಾಥ ಮಕ್ಕಳಿಗೆ ಸದ್ಯ ಸ್ಥಳೀಯ ನಿವಾಸಿಗಳಾದ ನಿಂಗಪ್ಪ ಹಯ್ಯಾಳಕರ್, ಅಬ್ದುಲ್ ಹೆಡಗಿಮದ್ರಿ, ಪರಶುರಾಮ, ಬಸಪ್ಪ ಸಾಲಿಮನಿ, ಅಂಬಲಪ್ಪ ದ್ಯಾವಪುರ, ರಂಗಪ್ಪ ಯಕ್ಷಂತಿ, ಬಸವರಾಜ ನಾಯ್ಕಲ್, ಗೌರಮ್ಮ ಹಳಿಸಗರ, ಲಲಿತಮ್ಮ ದ್ಯಾವಪುರ, ಶಾಂತಮ್ಮ ಸೇರಿ ಕಾಲನಿಯ ಯುವಕರು ನೆರವಿಗೆ ಬಂದು ಮಾನವೀಯತೆ ಮೆರೆದಿದ್ದಾರೆ. ಸಕರ್ಾರಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಮಾಡುವ ಈ ಮಕ್ಕಳಿಗೆ ರಾತ್ರಿ ವೇಳೆ ಭೀಮಮ್ಮ ಹೆಡಗಿಮದ್ರಿ ತಮ್ಮ ಮನೆಯಲ್ಲಿ ಆಶ್ರಯ ನೀಡುತ್ತಿದ್ದಾಳೆ.

ನೆರವಾಗಬೇಕಿದೆ ಸರ್ಕಾರ: ತಂದೆ ತಾಯಿ ಇಲ್ಲದೆ ಅಕ್ಷರಶಃ ಬೀದಿಗೆ ಬಂದಿರುವ ಈ ಮಕ್ಕಳ ಭವಿಷ್ಯಕ್ಕೆ ಸಕರ್ಾರವೇ ಆಸರೆಯಾಗಬೇಕಿದೆ. ನೆಲೆ ನಿಂತುಕೊಳ್ಳಲು ಪುಟ್ಟ ಸೂರು ಕಲ್ಪಿಸಲು ನಗರಸಭೆ ಅಧಿಕಾರಿಗಳು ಮುಂದೆ ಬರಬೇಕು. ಜತೆಯಲ್ಲಿ ಈ ಮಕ್ಕಳ ಭವಿಷ್ಯ ರೂಪಿಸಲು ದಾನಿಗಳು ತಮ್ಮ ಕೈಲಾದಷ್ಟು ನೆರವಿಗೆ ಬರಬೇಕು ಎಂಬುದು ಬಡಾವಣೆ ನಿವಾಸಿಗಳ ಮನವಿಯಾಗಿದೆ.

ಈ ಮಕ್ಕಳ ಯಾತನೆ ಕಂಡರೆ ಕರುಳು ಕಿತ್ತು ಕೈಗೆ ಬಂದಂತಾಗುತ್ತದೆ. ಸರ್ಕಾರ ಅನಾಥ ಕಂದಮ್ಮಗಳ ರಕ್ಷಣೆಗೆ ನಿಲ್ಲಬೇಕು. ಅವರ ವಿದ್ಯಾಭ್ಯಾಸಕ್ಕೆ ಅನೂಕೂಲ ಮಾಡಿದ್ದಲ್ಲಿ ಭವಿಷ್ಯ ರೂಪುಗೊಳ್ಳುತ್ತದೆ. ಇವರ ಪಾಲನೆಗೆ ನಿಂತ ಬಡಾವಣೆ ನಿವಾಸಿಗಳ ಸಹಕಾರ ನಿಜಕ್ಕೂ ಮೆಚ್ಚುವಂಥದ್ದು.
|ಯಲ್ಲಪ್ಪ ಮಾಸ್ತರ್ ಹಳಿಕಟ್ಟಿ
ಫಿಲ್ಟರ್ ಬೆಡ್ ಕಾಲನಿ ನಿವಾಸಿ