Wednesday, 12th December 2018  

Vijayavani

Breaking News

ಇನ್ನೊಂದು ಅಪೂರ್ವಾ ಅವಕಾಶ

Monday, 16.04.2018, 3:04 AM       No Comments

ಬೆಂಗಳೂರು: ರವಿಚಂದ್ರನ್ ನಾಯಕತ್ವದ ಸಿನಿಮಾದಲ್ಲಿ ಒಮ್ಮೆಯಾದರೂ ನಟಿಸಬೇಕು ಎಂಬುದು ಹಲವು ನಟಿಯರ ಬಯಕೆ. ಆದರೆ ಅಂಥ ಅವಕಾಶ ಎಲ್ಲರಿಗೂ ಒಲಿಯುವಂಥದ್ದಲ್ಲ. ಹಾಗಿರುವಾಗ ಸತತ ಎರಡನೇ ಬಾರಿಗೆ ‘ಕ್ರೇಜಿಸ್ಟಾರ್’ ಜತೆ ತೆರೆ ಹಂಚಿಕೊಳ್ಳುವ ಚಾನ್ಸ್ ಸಿಕ್ಕಿಬಿಟ್ಟರೆ? ಅಂಥದ್ದೊಂದು ಅದೃಷ್ಟ ನಟಿ ಅಪೂರ್ವಾ ಅವರಿಗೆ ಸಿಕ್ಕಿದೆ. ಈ ಹೆಸರು ಕೇಳಿದರೆ ತಕ್ಷಣಕ್ಕೆ ಯಾರಿವರು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಹಿಂದೆ ರವಿಚಂದ್ರನ್ ನಟಿಸಿ, ನಿರ್ವಿುಸಿ, ನಿರ್ದೇಶಿಸಿದ್ದ ‘ಅಪೂರ್ವ’ ಚಿತ್ರಕ್ಕೆ ನಾಯಕಿ ಆಗಿದ್ದವರು ಇದೇ ಅಪೂರ್ವಾ! ಇದೀಗ ಮತ್ತೆ ರವಿಚಂದ್ರನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ ಎನ್ನುತ್ತಿವೆ ಗಾಂಧಿನಗರದ ಮೂಲಗಳು. ಕಳೆದ ವರ್ಷ ‘ರಾಜೇಂದ್ರ ಪೊನ್ನಪ್ಪ’ ಚಿತ್ರ ಸೆಟ್ಟೇರಿತ್ತು. ಅದರಲ್ಲಿ ರವಿಚಂದ್ರನ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಅವರ ಜತೆಗೆ ರಾಧಿಕಾ ಕುಮಾರಸ್ವಾಮಿ ಕೂಡ ನಟಿಸಲಿದ್ದಾರೆ ಎಂಬುದು ಖಚಿತವಾಗಿತ್ತು. ಆದರೆ ಚಿತ್ರದಲ್ಲಿ ಮತ್ತೋರ್ವ ನಾಯಕಿ ಪಾತ್ರ ಇರುವ ಬಗ್ಗೆ ಚಿತ್ರತಂಡ ರಹಸ್ಯ ಕಾಯ್ದುಕೊಂಡಿತ್ತು. ಮೂಲಗಳ ಪ್ರಕಾರ, ಈಗಾಗಲೇ ಅಪೂರ್ವಾ ಜತೆ ಒಂದು ಸುತ್ತಿನ ಮಾತುಕತೆ ಮುಗಿದಿದ್ದು, ಅವರು ಕೂಡ ಒಪ್ಪಿಕೊಂಡಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಕೆಲವೇ ದಿನಗಳಲ್ಲಿ ಅಪೂರ್ವಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

2016ರಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ‘ಅಪೂರ್ವಾ’ ಚಿತ್ರಕ್ಕೆ ಪ್ರೇಕ್ಷಕರ ವಲಯದಿಂದ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿತ್ತು. ಸುದೀಪ್, ರವಿಶಂಕರ್, ವಿಜಯ್ ರಾಘವೇಂದ್ರ ಸೇರಿ ಅನೇಕ ಕಲಾವಿದರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರೆ, ರವಿಚಂದ್ರನ್ ಮತ್ತು ಅಪೂರ್ವಾ ಮುಖ್ಯಭೂಮಿಕೆ ನಿಭಾಯಿಸಿದ್ದರು. ಆ ಚಿತ್ರ ತೆರೆಕಂಡು ವರ್ಷಗಳೇ ಕಳೆದರೂ ಅಪೂರ್ವಾ ಬೇರೊಂದು ಸಿನಿಮಾ ಒಪ್ಪಿಕೊಂಡ ಬಗ್ಗೆ ವರದಿ ಆಗಿರಲಿಲ್ಲ. ಈಗ ‘ರಾಜೇಂದ್ರ ಪೊನ್ನಪ್ಪ’ ಮೂಲಕ ಮತ್ತೆ ರವಿಚಂದ್ರನ್ ಜತೆ ನಟಿಸುತ್ತಿರುವುದರಿಂದ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಅಂದಹಾಗೆ, ಈ ಚಿತ್ರದಲ್ಲಿ ಅಪೂರ್ವಾ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಸದ್ಯಕ್ಕಂತೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ರವಿಚಂದ್ರನ್ ಅವರ ಈಶ್ವರಿ ಪ್ರೊಡಕ್ಷನ್ ಬ್ಯಾನರ್​ನಲ್ಲೇ ಚಿತ್ರ ತಯಾರಾಗುತ್ತಿದ್ದು, ನಿರ್ದೇಶನದ ಜತೆಗೆ ಸಂಗೀತದ ಜವಾಬ್ದಾರಿಯನ್ನೂ ಅವರೇ ನಿಭಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top