More

    ಇನ್ನೂ ಸಿಕ್ಕಿಲ್ಲ ಕೊಳೆ ರೋಗ ಪರಿಹಾರ

    ಶಿರಸಿ: ಅತಿವೃಷ್ಟಿಗೆ ಸಿಕ್ಕಿ ವಿಪರೀತವಾಗಿ ವ್ಯಾಪಿಸಿದ್ದ ಕೊಳೆ ರೋಗದಿಂದ ಬೆಳೆ ಕಳೆದುಕೊಂಡಿರುವ ಅಡಕೆ ಬೆಳೆಗಾರರಿಗೆ ಸರ್ಕಾರದಿಂದ ಬರಬೇಕಿದ್ದ ಕೋಟ್ಯಂತರ ರೂಪಾಯಿ ಕೊಳೆ ಪರಿಹಾರ ಇನ್ನೂ ಬಿಡುಗಡೆಯಾಗಿಲ್ಲ. ಪರಿಹಾರಕ್ಕಾಗಿ ಕಾದಿರುವ ಬೆಳೆಗಾರರು ಸರ್ಕಾರದ ನಿರ್ಲಕ್ಷ್ಯದಿಂದ ಹತಾಶರಾಗಿದ್ದಾರೆ.

    2019ರ ಆಗಸ್ಟ್​ನಿಂದ ಅಕ್ಟೋಬರ್​ವರೆಗೆ ಸುರಿದ ಅತಿವೃಷ್ಟಿಯಿಂದಾಗಿ ಅಡಕೆ ಬೆಳೆಗೆ ತೀವ್ರ ಕೊಳೆರೋಗ ವ್ಯಾಪಿಸಿತ್ತು. ರೋಗ ನಿಯಂತ್ರಣಕ್ಕೆ ಔಷಧ ಹೊಡೆಯಲೂ ಅವಕಾಶ ನೀಡದೇ ಮಳೆ ಸುರಿದಿತ್ತು. ಇದರಿಂದ ಉಲ್ಬಣಗೊಂಡ ರೋಗ, ಮರದಲ್ಲಿದ್ದ ಎಳೆ ಕಾಯಿಗಳನ್ನು ಆಹುತಿ ತೆಗೆದುಕೊಂಡಿತ್ತು. ರೋಗ ತಗುಲಿದ ಎಳೆಕಾಯಿಗಳು ಮರದ ಕೆಳಗೆ ಹಾಸು ಬಿದ್ದಿದ್ದವು. ಬೆಳೆ ಕಳೆದುಕೊಂಡ ಬೆಳೆಗಾರರು ಪರಿಹಾರ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಇನ್ನೂ ಪರಿಹಾರ ಮರೀಚಿಕೆಯಾಗಿದೆ.

    ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಅಡಕೆ ಕೊಳೆ ರೋಗ ಬಂದ ವರದಿಯ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ, 18,946 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಹಾಗೂ 614 ಹೆಕ್ಟೇರ್ ಕಾಳುಮೆಣಸು, ಅತಿವೃಷ್ಟಿಯಿಂದ ಹಾನಿಯಾಗಿರುವ ವರದಿ ಸಿದ್ಧಪಡಿಸಿದೆ. ವಿವಿಧ ತಾಲೂಕುಗಳಲ್ಲಿ ಕನಿಷ್ಠ ಶೇ.33ರಿಂದ ಗರಿಷ್ಠ ಶೇ.50ರಷ್ಟು ಬೆಳೆ ಹಾನಿಯಾಗಿರುವುದನ್ನು ಗುರುತಿಸಿ ಸರ್ಕಾರಕ್ಕೆ ವರದಿ ನೀಡಿದೆ. ಅಡಕೆ ಮರ ಬಿದ್ದು ಹಾನಿಯಾದವರಿಗೆ ಪ್ರಕೃತಿ ವಿಕೋಪ ನಿಧಿಯಲ್ಲಿ ಪರಿಹಾರ ದೊರೆತಿದೆ. ಕೊಳೆ ರೋಗದಿಂದ 18,946 ಹೆಕ್ಟೇರ್ ಅಡಕೆ ತೋಟದಲ್ಲಿ ಸುಮಾರು 313.29 ಕೋಟಿ ರೂ. ನಷ್ಟವನ್ನು ಅಂದಾಜಿಸಲಾಗಿದೆ. ಈ ಸಂಬಂಧ ಇಲಾಖೆಯು ಬೆಳೆ ಕಳೆದುಕೊಂಡಿರುವ ರೈತವಾರು ಪಟ್ಟಿಯನ್ನೂ ಸಿದ್ಧಪಡಿಸಿ ನೀಡಿದೆ. ಆದರೆ, ಸರ್ಕಾರ ಮಾತ್ರ ಈವರೆಗೆ ಕೊಳೆ ಪರಿಹಾರ ಮೊತ್ತವನ್ನು ರೈತರ ಖಾತೆಗಳಿಗೆ ಜಮಾ ಮಾಡಿಲ್ಲ. ಇದರಿಂದ ಅಡಕೆ ಬೆಳೆಗಾರರು ನಿರಾಶೆ ಅನುಭವಿಸುವಂತಾಗಿದೆ.

    ಎನ್​ಡಿಆರ್​ಎಫ್ ಮತ್ತು ಎಸ್​ಡಿಆರ್​ಎಫ್​ನಲ್ಲಿ ಅಡಕೆ ಕೊಳೆ ರೋಗಕ್ಕೆ ಪರಿಹಾರ ನೀಡಲು ಅವಕಾಶವಿಲ್ಲ. ಕೊಳೆ ರೋಗವನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಆದೇಶಿಸಿದರೆ, ಪರಿಹಾರ ತಂತ್ರಾಂಶದಲ್ಲಿ ರೈತರ ಹೆಸರನ್ನು ಅಪ್​ಲೋಡ್ ಮಾಡಲಾಗುತ್ತದೆ. ನಂತರ ಸರ್ಕಾರ ನೀಡುವ ಅನುದಾನದಲ್ಲಿ ನಿಯಮದಂತೆ ಪ್ರತಿ ಹೆಕ್ಟೇರ್​ಗೆ 18 ಸಾವಿರ ರೂ. ಪರಿಹಾರ ನೀಡಲಾಗುವುದು. | ಡಾ.ಬಿ.ಪಿ. ಸತೀಶ

    ತೋಟಗಾರಿಕೆ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts