ಇನ್ನೂ ಪತ್ತೆಯಾಗದ ದೇವೇಂದ್ರಪ್ಪ

ರಾಣೆಬೆನ್ನೂರ : ಏ. 22ರಂದು ನಾಪತ್ತೆಯಾಗಿರುವ ತಾಲೂಕಿನ ಇಟಗಿ ಗ್ರಾಮದ ದೇವೇಂದ್ರಪ್ಪ ಶಿವಪ್ಪ ಚೌಟಗಿ (27) ಇನ್ನೂ ಪತ್ತೆಯಾಗದಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.

ಈ ಕುರಿತು ಅವರ ಪತ್ನಿ ಸಿಂಧು ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೇವೇಂದ್ರಪ್ಪ ತಾಲೂಕಿನ ದೇವಗೊಂಡನಕಟ್ಟಿ ಗ್ರಾಮದ ಮಹಿಳೆಯೊಬ್ಬರಿಗೆ ಸಾಲ ಕೊಟ್ಟಿದ್ದರು. ಅವರು ಕಾಣೆಯಾದ ಕುರಿತು ದೂರು ದಾಖಲಾಗುತ್ತಿದ್ದಂತೆ ಅದೇ ಗ್ರಾಮದ ಮನೆಯೊಂದರ ಬಳಿ ಅವರ ಬೈಕ್ ಪತ್ತೆಯಾಗಿತ್ತು. ಅಲ್ಲದೆ, ದೇವೇಂದ್ರಪ್ಪ ಕಾಣೆಯಾದ ಮರುದಿನ ಅವರೇ ಬರೆದಿದ್ದಾನೆ ಎನ್ನಲಾದ ಪತ್ರವೊಂದು ಪೋಸ್ಟ್ ಮೂಲಕ ಅವರ ಮನೆಗೆ ಬಂದಿತ್ತು.

ಪತ್ರದಲ್ಲಿ ‘ನಾನು ಬೇರೆಯವರಿಂದ ಲಕ್ಷಾಂತರ ರೂ. ಸಾಲ ಪಡೆದು ದೇವಗೊಂಡನಕಟ್ಟಿ ಮಹಿಳೆಯೊಬ್ಬಳಿಗೆ ಸಂಕಷ್ಟಕ್ಕೆ ಸಹಾಯ ಮಾಡುವ ಉದ್ದೇಶದಿಂದ ಕೊಟ್ಟಿದ್ದೇನೆ. ಆದರೀಗ ಹಣ ಕೇಳಿದರೆ, ಆಕೆ ಹಾಗೂ ಆಕೆಯ ಪತಿ ನನ್ನನ್ನು ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೆ ಮೂರು ಬಾರಿ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದರು. ನಾನು ಸಾಲ ಪಡೆದ ಬಗ್ಗೆ ದಾಖಲೆಯಿವೆ. ಆದರೆ, ಮಹಿಳೆಗೆ ಕೊಟ್ಟ ಬಗ್ಗೆ ದಾಖಲೆಯಿಲ್ಲ. ಇದರಿಂದ ನಾನು ಮೋಸ ಹೋಗಿದ್ದೇನೆ. ನನ್ನಂಥವರಿಗೆ ಮೋಸ ಮಾಡುತ್ತಿರುವ ಇಂಥ ಮಹಿಳೆಯರಿಗೆ ತಕ್ಕ ಶಿಕ್ಷೆ ಆಗಬೇಕು’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಇದೀಗ ದೇವೇಂದ್ರಪ್ಪ ನಾಪತ್ತೆಯಾಗಿ ತಿಂಗಳು ಕಳೆಯುತ್ತ ಬಂದಿದೆ. ಇನ್ನೂ ಸುಳಿವು ಸಿಗದಿರುವುದು ಕುಟುಂಬಸ್ಥರನ್ನು ಆತಂಕಕ್ಕೆ ದೂಡಿದೆ. ಅವರ ಪತ್ನಿ ಸಿಂಧು ತುಂಬು ಗರ್ಭಿಣಿಯಾಗಿದ್ದಾರೆ. ಪೊಲೀಸರು ಆದಷ್ಟು ಬೇಗ ಪತ್ತೆ ಮಾಡಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಸ್ವಾಮಿ ಕೂಡ ನಾಪತ್ತೆ…
ದೇವೇಂದ್ರಪ್ಪ ಅವರನ್ನು ದೇವಗೊಂಡನಕಟ್ಟಿ ಗ್ರಾಮದ ಸ್ವಾಮಿ ಎಂಬುವರು ನಿತ್ಯವೂ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅವರ ವ್ಯವಹಾರಗಳು ಸ್ವಾಮಿಗೆ ಗೊತ್ತಿವೆ. ಆದ್ದರಿಂದ ತಮ್ಮ ಪತಿ ನಾಪತ್ತೆಯಾಗಲು ಸ್ವಾಮಿಯೇ ಕಾರಣ ಎಂದು ಸಿಂಧು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು, ಕಳೆದ ವಾರ ಸ್ವಾಮಿಯನ್ನು ಕರೆದುಕೊಂಡು ಬಂದು ವಿಚಾರಣೆ ಮಾಡಿ ಕೈ ಬಿಟ್ಟಿದ್ದರು. ಇದೀಗ ಸ್ವಾಮಿ ಕೂಡ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ಬಳಿಕ ಸ್ವಾಮಿ ನಾಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಗೊಂದಲಕ್ಕೀಡು ಮಾಡಿದ ಮತ್ತೊಂದು ಪತ್ರ…
ಕಳೆದ ಎರಡ್ಮೂರು ದಿನದ ಹಿಂದೆ ದೇವೇಂದ್ರಪ್ಪ ಬರೆದಿದ್ದಾರೆ ಎನ್ನಲಾದ ಮತ್ತೊಂದು ಪತ್ರ ಅವರ ಮನೆಗೆ ಬಂದಿದೆ. ಅದರಲ್ಲಿ ‘ನಾನು ಚೆನ್ನಾಗಿದ್ದೇನೆ. ಯಾರ ಮೇಲೆ ಸಂಶಯ ಬೇಡ. ಸಾಲ ಕೊಡಬೇಕಾದ ಮುಸ್ಲಿಮರ ಮನೆ ಎದುರು ಬೈಕ್ ಇಟ್ಟು ಬಂದಿದ್ದೇನೆ. ಅದನ್ನು ತೆಗೆದುಕೊಂಡು ಹೋಗಿ ಅವರು ನನ್ನ ದುಡ್ಡು ಬಹಳ ತಿಂದಿದ್ದಾರೆ’ ಎಂದು ಬರೆಯಲಾಗಿದೆ. ಆದರೆ, ಈ ಹಿಂದಿನ ಪತ್ರದಲ್ಲಿ ದೇವೇಂದ್ರಪ್ಪನ ಸಹಿ ಇತ್ತು. ಈಗ ಬಂದಿರುವ ಪತ್ರದಲ್ಲಿ ಯಾವುದೇ ಸಹಿ ಇಲ್ಲ. ಆದ್ದರಿಂದ ಈ ಪತ್ರವನ್ನು ದೇವೇಂದ್ರಪ್ಪ ಬರೆದಿದ್ದಾರೋ ಅಥವಾ ಪ್ರಕರಣದ ದಿಕ್ಕು ತಪ್ಪಿಸಲು ಬೇರೆಯಾದರೂ ಬರೆದಿದ್ದಾರೋ ಎಂಬ ಕುರಿತು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

ದೇವೇಂದ್ರಪ್ಪನ ಹುಡುಕುವ ಕಾರ್ಯ ನಡೆದಿದೆ. ಎರಡ್ಮೂರು ದಿನದಲ್ಲಿ ಪತ್ತೆ ಮಾಡಲಾಗುವುದು.
| ಶ್ರೀಶೈಲ ಚೌಗಲಾ, ಪಿಎಸ್​ಐ ಹಲಗೇರಿ ಠಾಣೆ

Leave a Reply

Your email address will not be published. Required fields are marked *