More

  ಇನ್ನೂ ನಿಂತಿಲ್ಲ ಮಂಗನ ಕಾಯಿಲೆ ಆತಂಕ

  ವಿಜಯವಾಣಿ ಸುದ್ದಿಜಾಲ ಸಿದ್ದಾಪುರ/ಕಾರವಾರ: ಕಳೆದ ಬಾರಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದಲ್ಲಿ ಮರಣ ಮೃದಂಗ ಬಾರಿಸಿದ್ದ ಮಂಗನ ಕಾಯಿಲೆ ಈ ವರ್ಷವೂ ಸಾವಿನ ಸರಣಿ ಮುಂದುವರಿಸಿದೆ.

  ತಾಲೂಕಿನ ಮಳಗುಳಿಯ ಭಾಸ್ಕರ ಗಣಪತಿ ಹೆಗಡೆ (64) ಮಂಗನ ಕಾಯಿಲೆಯಿಂದ ಸಾವನ್ನಪ್ಪಿರುವುದು ಸುತ್ತಲಿನ ನಾಗರಿಕರಲ್ಲಿ ತಲ್ಲಣ ಮೂಡುವಂತೆ ಮಾಡಿದೆ. ಅದರಂತೆ ತಾಲೂಕಿನ ಲಕ್ಕಿಜಡ್ಡಿಯ ಮಹಿಳೆಯೊಬ್ಬರಿಗೆ ರೋಗ ಇರುವುದು ಖಚಿತವಾಗಿದ್ದು ಅವರಿಗೆ ತಕ್ಷಣ ಚಿಕಿತ್ಸೆ ಲಭಿಸಿದ್ದರಿಂದ ಈಗ ಗುಣಮುಖರಾಗಿದ್ದಾರೆ ಎಂದು ತಾಲೂಕು ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ವರ್ಷ ತಾಲೂಕೊಂದರಲ್ಲೇ 62 ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್​ಡಿ) ಕಾಣಿಸಿಕೊಂಡಿತ್ತು. ಮೂವರು ಮೃತಪಟ್ಟಿದ್ದರು.

  ಮಂಗಗಳ ಸಾವು: ಮಳಗುಳಿ ಸುತ್ತಮುತ್ತ ಕಳೆದ ಒಂದುವಾರದಲ್ಲಿ ಐದು ಮಂಗಗಳು ಸತ್ತಿರುವ ಬಗ್ಗೆ ಜನತೆ ಆತಂಕವ್ಯಕ್ತಪಡಿಸಿದ್ದಾರೆ. ತಾಲೂಕಿನ ಇಟಗಿ, ಹೊನ್ನೆಘಟಗಿ, ಲಂಬಾಪುರ, ವಂದಾನೆ ಸುತ್ತಮುತ್ತ ಕಳೆದ ಎರಡು ತಿಂಗಳಿನಿಂದ 35ಕ್ಕೂ ಹೆಚ್ಚು ಮಂಗಗಳು ಸತ್ತಿವೆ. ಒಂದು ಮಂಗನಲ್ಲಿ ಕೆಎಫ್​ಡಿ ಇರುವುದು ಖಚಿತವಾಗಿದೆ.

  ಸಾಕಷ್ಟು ಮುನ್ನೆಚ್ಚರಿಕೆ: ಕಳೆದ ಬಾರಿ ಬೇಸಿಗೆಯಲ್ಲಿ ಇದ್ದಕ್ಕಿದ್ದಂತೆ ಸಾಗರ ಭಾಗದಿಂದ ಕೆಎಫ್​ಡಿ ಸಿದ್ದಾಪುರಕ್ಕೆ ವಿಸ್ತರಿಸಿದಾಗ ಜನರು ಬಂದು ಲಸಿಕೆ ಹಾಕಿ ಎಂದು ಕೇಳಿಕೊಂಡರೂ ಇಲ್ಲಿ ಲಸಿಕೆಗಳ ಲಭ್ಯತೆ ಸಾಕಷ್ಟಿರಲಿಲ್ಲ. ಆದರೆ, ಈ ಬಾರಿ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಆಗಸ್ಟ್​ನಿಂದಲೇ ಎಚ್ಚರ ವಹಿಸಿತ್ತು. ಜಿಲ್ಲಾಧಿಕಾರಿ, ಜಿಪಂ ಸಿಇಒ ಸಭೆ ನಡೆಸಿದ್ದರು. ಡಿಎಚ್​ಒ ಡಾ. ಜಿ.ಎನ್.ಅಶೋಕಕುಮಾರ ಅವರು ಒಂದುವರೆ ತಿಂಗಳ ಹಿಂದೆ ಸಿದ್ದಾಪುರದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರಿಗೆ ಲಸಿಕೆ ನೀಡುವುದರೊಂದಿಗೆ ಡಿಎಂಪಿ ತೈಲ ವಿತರಿಸಿ ಮಂಗನ ಕಾಯಿಲೆ ಕುರಿತು ಮಾಹಿತಿ ನೀಡುತ್ತಿದ್ದಾರೆ. ಪ್ರೊಜೆಕ್ಟರ್ ಮೂಲಕ ಕಾಯಿಲೆ ಹರಡುವ ಬಗೆಯನ್ನು ಪ್ರಚಾರ ನಡೆಸಿದ್ದಾರೆ. ಇದುವರೆಗೆ ತಾಲೂಕಿನಲ್ಲಿ 18 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ.

  See also  ಕರೊನಾ ಹೆಮ್ಮಾರಿ ಆತಂಕದ ನಡುವೆಯೇ ಡೆಂಘೆ ಉಲ್ಬಣ

  ಲಸಿಕೆ ಹಾಕಿಸಿಕೊಳ್ಳಿ: ಮೃತ ಭಾಸ್ಕರ ಹೆಗಡೆ ಅವರು ಒಮ್ಮೆ ಲಸಿಕೆ ಪಡೆದುಕೊಂಡಿದ್ದರು ಎನ್ನಲಾಗಿದೆ. ಆದರೂ ಕಾಯಿಲೆ ಹೇಗೆ ಉಲ್ಬಣಿಸಿತು ಎಂಬುದು ಜನರ ಪ್ರಶ್ನೆ. ಆದರೆ, ಒಮ್ಮೆ ಮಾತ್ರ ಲಸಿಕೆ ಹಾಕಿಕೊಂಡರೆ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಾರೆ ತಜ್ಞರು. ಮೊದಲ ಬಾರಿ ಲಸಿಕೆ ಪಡೆದ 1 ತಿಂಗಳಲ್ಲಿ ಮತ್ತೊಮ್ಮೆ ಪಡೆಯಬೇಕು. 6 ತಿಂಗಳಿಗೆ ಮೂರನೇ ಬಾರಿ ಪಡೆಯಬೇಕು. ನಂತರ ಪ್ರತಿ ವರ್ಷಕ್ಕೊಮ್ಮೆ ಲಸಿಕೆ ಪಡೆಯುತ್ತಿರಬೇಕು ಹಾಗಿದ್ದಲ್ಲಿ ಮಾತ್ರ ಸಂಪೂರ್ಣ ರೋಗ ನಿರೋಧಕ ಶಕ್ತಿ ಬೆಳೆಯಲು ಸಾಧ್ಯ ಎನ್ನುತ್ತಾರೆ ಕೆಎಫ್​ಡಿ ವಿಶೇಷ ವೈದ್ಯಾಧಿಕಾರಿ ಡಾ. ಸತೀಶ ಶೇಟ್. ಕೆಲವರು ನೋವಾಗುತ್ತದೆ ಎಂದು ಲಸಿಕೆ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಹಾಗೆ ಮಾಡಬೇಡಿ. ಜ್ವರ ಕಾಣಿಸಿಕೊಂಡರೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ. ಎಲ್ಲ ಪಿಎಚ್​ಸಿಗಳಲ್ಲೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

  ಕಾಡಿಗೆ ಹೋಗುವ ಮುನ್ನ ಇಲಾಖೆಯಿಂದ ನೀಡುವ ತೈಲ ಹಚ್ಚಿಕೊಂಡು ಹೋಗಿ. ಕಾಡಿಗೆ ಹೋಗಿ ಬಂದ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಮಂಗಗಳು ಸಾವನ್ನಪ್ಪಿದರೆ ಇಲಾಖೆಗೆ ಮಾಹಿತಿ ನೀಡಿ ಎಂದು ಅವರು ವಿನಂತಿಸಿದ್ದಾರೆ.

  ಮಂಗನ ಕಾಯಿಲೆ ಹರಡದಂತೆ ಈಗ ಆರೋಗ್ಯ ಇಲಾಖೆ ನೀಡುತ್ತಿರುವ ಲಸಿಕೆಯಿಂದ ಏನೂ ಪ್ರಯೋಜನವಾಗುತ್ತಿಲ್ಲ. ಆದರೆ ಅವರು ನೀಡುವ ಡಿಎಂಪಿ ತೈಲ ಹೆಚ್ಚು ಪ್ರಯೋಜನವಾಗುತ್ತದೆ. ಜನತೆ ರೋಗದ ಕುರಿತು ಹೆಚ್ಚು ಜಾಗೃತರಾಗಿ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡಬೇಕು. | ಗಣಪತಿ ಶಂಕರನಾರಾಯಣ ಹೆಗಡೆ ಮಳಗುಳಿ

  ಮಂಗನ ಕಾಯಿಲೆ ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿತ್ತು. ಆದರೂ ಒಬ್ಬರು ಮೃತರಾಗಿರುವುದು ದುರದೃಷ್ಟದ ಸಂಗತಿ. ಭಾಸ್ಕರ ಹೆಗಡೆ ಅವರು ಜ್ವರ ಕಾಣಿಸಿಕೊಂಡಾಗ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಆರೋಗ್ಯ ಇಲಾಖೆಯಿಂದ ವರದಿ ಪಡೆದು ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. | ಡಾ.ಹರೀಶ ಕುಮಾರ ಜಿಲ್ಲಾಧಿಕಾರಿ, ಉತ್ತರ ಕನ್ನಡ

  See also  ಮಲಯ ಮಾರ್ಟ್ ಆರಂಭ ನಾಡಿದ್ದು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts