ಇನ್ನೂ ದೊರೆತಿಲ್ಲ ಅರಣ್ಯಇಲಾಖೆ ಅನುಮತಿ

ಸುಭಾಸ ಧೂಪದಹೊಂಡ ಕಾರವಾರ
ಅರಣ್ಯ ಹಾಗೂ ವನ್ಯಜೀವಿ ವಿಭಾಗದ ಅನುಮತಿ ದೊರೆಯದ ಕಾರಣ ಲೋಂಡಾ-ಮಡಗಾಂವ ದ್ವಿಪಥ ಯೋಜನೆ ಜಾರಿಗೆ ವಿಳಂಬವಾಗಿದೆ.

ಹೊಸಪೇಟೆ-ವಾಸ್ಕೋ ರೈಲು ಮಾರ್ಗ ದ್ವಿಪಥ ಯೋಜನೆ 2011ರಲ್ಲೇ ಜಾರಿಗೆ ಬಂದಿದೆ. ಹೊಸಪೇಟೆಯಿಂದ ಹುಬ್ಬಳ್ಳಿವರೆಗೆ ಹಾಗೂ ಧಾರವಾಡದಿಂದ ಲೋಂಡಾವರೆಗೆ ಜೋಡಿ ರೈಲು ಮಾರ್ಗಗಳು ಸಿದ್ಧವಾಗಿವೆ. ಅದೇ ಯೋಜನೆಯ ಭಾಗವಾಗಿ ಲೋಂಡಾ-ಮಡಗಾಂವ ನಡುವಿನ 84 ಕಿಮೀ ಮಾರ್ಗ ದ್ವಿಪಥಗೊಳಿಸಲು 1,197 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಆದರೆ, ಅದಕ್ಕಿನ್ನೂ ಪರಿಸರ ಅನುಮತಿ ದೊರೆತಿಲ್ಲ.

ಅರಣ್ಯ ಭೂಮಿ ಪರಿವರ್ತನೆಗೆ ಅರ್ಜಿ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಅರಣ್ಯ ವಲಯದಲ್ಲಿ 0.88 ಹೆಕ್ಟೇರ್ ಹಾಗೂ ದಾಂಡೇಲಿ ವನ್ಯಜೀವಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ 9.57 ಹೆಕ್ಟೇರ್ ಸೇರಿ ಒಟ್ಟು 10.45 ಹೆಕ್ಟೇರ್, ಗೋವಾದಲ್ಲಿ 122.78 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಲು ಅನುಮತಿ ನೀಡಬೇಕು ಎಂದು ನೈರುತ್ಯ ರೈಲ್ವೆ ಯು ಕೇಂದ್ರ ಪರಿಸರ ಮಂತ್ರಾಲಯಕ್ಕೆ 2017 ರಿಂದ ಪ್ರತ್ಯೇಕವಾಗಿ ವಿವಿಧ ವಿಭಾಗವಾರು ಅರ್ಜಿ ಸಲ್ಲಿಸಿದೆ. ಅಲ್ಲದೆ, ದಾಂಡೇಲಿ ಹಾಗೂ ಗೋವಾದ ವನ್ಯಜೀವಿ ವಿಭಾಗಗಳ ಅನುಮತಿ ಕೋರಿದೆ. ಆದರೆ, ಇದುವರೆಗೂ ಅರ್ಜಿಗಳು ಅರಣ್ಯಾಧಿಕಾರಿಗಳ ಹಂತದಲ್ಲೇ ಪರಿಶೀಲನೆಯಲ್ಲಿವೆ. ಪರಿಸರ ಅನುಮತಿಗೆ ಇನ್ನಷ್ಟೇ ಅರ್ಜಿ ಸಲ್ಲಿಸಬೇಕಿದೆ.

ಹುಬ್ಬಳ್ಳಿ-ಅಂಕೋಲಾಕ್ಕೆ ಪರ್ಯಾಯ: ಉತ್ತರ ಕರ್ನಾಟಕ ಭಾಗದ ವಾಣಿಜ್ಯಾಭಿವೃದ್ಧಿಗೆ ಬೇಕಾದ ಬಂದರು ಸಂಪರ್ಕವನ್ನು ಕಲ್ಪಿಸುವ ಸಮೀಪದ ರೈಲು ಮಾರ್ಗ ಇದಾಗಿದೆ.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ವಿವಿಧ ಕಾರಣಗಳಿಂದ ವಿಳಂಬವಾಗಿದೆ. ಕರ್ನಾಟಕದ ಬೇಲೆಕೇರಿ ಬಂದರು ಅಪವಾದ ಹೊತ್ತು ಬಂದಾಗಿದೆ. ಇದರಿಂದ ಉದ್ಯಮಗಳು ಅದಿರು ಹಾಗೂ ಇತರ ವಹಿವಾಟಿಗೆ ವಾಸ್ಕೋ ಬಂದರನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹುಬ್ಬಳ್ಳಿ-ವಾಸ್ಕೋ ಮಾರ್ಗದಲ್ಲಿ ಹಲವು ವರ್ಷಗಳಿಂದ ಗೂಡ್ಸ್ ರೈಲುಗಳ ಸಂಚಾರವಿದೆ. ಆದರೆ, ಘಟ್ಟ ಪ್ರದೇಶದಲ್ಲಿ ಮಾರ್ಗ ಸಾಗುವುದರಿಂದ ಹೆಚ್ಚಿನ ರೈಲುಗಳ ಓಡಾಟ ಸಾಧ್ಯವಾಗುತ್ತಿಲ್ಲ. ಆದಾಯ ದುಪ್ಪಟ್ಟು ಮಾಡಿಕೊಳ್ಳುವ ಸಲುವಾಗಿ ನೈರುತ್ಯ ರೈಲ್ವೆ ದ್ವಿಪಥ ಯೋಜನೆ ಸಿದ್ಧಪಡಿಸಿದೆ. ಇಲ್ಲಿ ಅದಿರು ಮಾತ್ರವಲ್ಲದೆ, ಕಲ್ಲಿದ್ದಲು, ನಾಟಾ ಮುಂತಾದ ವಸ್ತುಗಳ ಸಾಗಣೆಗೂ ಹೆಚ್ಚು ಅನುಕೂಲವಾಗಿದೆ.

ಹಲವು ಸವಾಲು
ಇಲ್ಲಿ ರೈಲು ಮಾರ್ಗ ದ್ವಿಪಥ ಕಾರ್ಯ ನೈರುತ್ಯ ರೈಲ್ವೆ ಇಲಾಖೆಗೆ ದೊಡ್ಡ ಸವಾಲು. ಹಾಲಿ ಇರುವ ರೈಲ್ವೆ ಹಳಿಯನ್ನು ಬಿಟ್ಟರೆ ಬೇರೆ ರಸ್ತೆ ಮಾರ್ಗ ಇಲ್ಲಿಲ್ಲ. ಸದಾ ನೀರು ಜಿನುಗುತ್ತಿರುವ ಘಟ್ಟಿ ಕಲ್ಲಿನ ಸುರಂಗಗಳು ಇಲ್ಲಿವೆ. ಅವುಗಳನ್ನು ಕಡಿದು ಎರಡನೇ ಹಲಿ ಅಳವಡಿಸಲು ಮಾಡಲು ಕನಿಷ್ಠ 6 ರಿಂದ 7 ವರ್ಷ ಬೇಕಾಗಬಹುದು ಎಂದು ನೈರುತ್ಯ ರೈಲ್ವೆ ಅಧಿಕಾಯೊಬ್ಬರು ಹೇಳುತ್ತಾರೆ.

254 ಕೋಟಿ ಆದಾಯ ನಿರೀಕ್ಷೆ
ಯೋಜನೆಯಿಂದ ಯಾವುದೇ ಜನವಸತಿ ಪ್ರದೇಶಕ್ಕೆ ಹಾನಿಯಾಗುವುದಿಲ್ಲ. ಖಾಸಗಿ ಭೂಮಿಗಳ ಸ್ವಾಧೀನ ಮಾಡುವ ಅವಶ್ಯಕತೆ ಇಲ್ಲ. ಈಗಾಗಲೇ ಒಂದು ರೈಲು ಹಳಿ ಇದ್ದು, ಅದರ ಪಕ್ಕವೇ ಇನ್ನೊಂದು ಹಳಿ ಹಾಕಿದಲ್ಲಿ ಕಡಿಮೆ ಖರ್ಚಿನಲ್ಲಿ ಯೋಜನೆ ರೂಪಿಸಬಹುದಾಗಿದೆ. ಯೋಜನೆಯಿಂದ ಅರಣ್ಯ ಮತ್ತು ವನ್ಯ ಸಂಪತ್ತಿಗೆ ಸುಮಾರು 28.12 ಕೋಟಿ ರೂ. ಹಾನಿಯಾಗಲಿದೆ. ಆದರೆ, ಸರಕು ಸಾಗಣೆಯ ರೈಲುಗಳ ಓಡಾಟ ಮೂರು ಪಟ್ಟು ಹೆಚ್ಚಲಿದೆ. ಪ್ರಯಾಣಿಕರ ರೈಲುಗಳ ಸಂಚಾರವೂ ಹೆಚ್ಚಲಿದೆ. ಇದರಿಂದ ಪ್ರತಿ ವರ್ಷ ನೇರವಾಗಿ 254 ಕೋಟಿ ರೂ. ಆದಾಯ ಬರಲಿದೆ. ಪರ್ಯಾಯವಾಗಿ ಸುಮಾರು 18 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಪ್ರವಾಸೋದ್ಯಮಕ್ಕೆ ಒತ್ತು ದೊರೆಯಲಿದೆ ಎಂದು ರೈಲ್ವೆ ಇಲಾಖೆಯು ಪರಿಸರ ಮಂತ್ರಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ.

ಇಳಿಜಾರಿನಲ್ಲಿ ಸಾಗುವ ಹಳಿ
19 ನೇ ಶತಮಾನದ ಅವಧಿಯಲ್ಲಿ ಗೋವಾವನ್ನು ಆಳುತ್ತಿದ್ದ ಪೋರ್ಚುಗೀಸರಿಂದ ಕ್ಯಾಸಲ್​ರಾಕ್-ಮಡಗಾಂವ ನಡುವೆ ರೈಲು ಹಳಿ ನಿರ್ವಣವಾಯಿತು ಎಂದು ಇತಿಹಾಸ ಹೇಳುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಕೆಲ ವರ್ಷಗಳ ಬಳಿಕವೂ ಈ ಹಳಿ ಪೋರ್ಚುಗೀಸರ ವಶದಲ್ಲೇ ಇತ್ತು. ಗೋವಾ ಸ್ವತಂತ್ರವಾದ ಬಳಿಕ ಭಾರತೀಯ ರೈಲ್ವೆಯ ವಶಕ್ಕೆ ಬಂತು. 1998ರಲ್ಲಿ ಕೊಂಕಣ ರೈಲು ಮಾರ್ಗ ಕಾರ್ಯಾರಂಭ ಮಾಡಿದ ಬಳಿಕ ಇಲ್ಲಿ ಪ್ರಯಾಣಿಕರ ರೈಲುಗಳ ಓಡಾಟ ಪ್ರಾರಂಭವಾಯಿತು. ಕ್ಯಾಸಲ್​ರಾಕ್​ನಿಂದ ಕುಲ್ಲೆಂವರೆಗೆ ಸುಮಾರು 25 ಕಿಮೀ ರೈಲು ಮಾರ್ಗದಲ್ಲಿ ಸಾಕಷ್ಟು ಸುರಂಗಗಳಿವೆ. ಕಲ್ಲಿನಿಂದ ಕಟ್ಟಿದ ಸೇತುವೆಗಳು ಗಮನ ಸೆಳೆಯುತ್ತವೆ. ಕರ್ನಾಟಕ ಹಾಗೂ ಗೋವಾ ಗಡಿಯಲ್ಲಿ ಬ್ರಗಾಂಜಾ ಘಟಾಟ್ ಎಂಬ ಪಶ್ಚಿಮ ಘಟ್ಟದ ನಡುವೆ ತಿರುವು, ಮುರುವಿನ ಹಾದಿಯಲ್ಲಿ ಈ ರೈಲು ಹಳಿ ಸಾಗುತ್ತದೆ. ಇಷ್ಟೇ ದೂರ ಸಾಗಲು ರೈಲುಗಳಿಗೆ ನಾಲ್ಕು ತಾಸು ಬೇಕಾಗುತ್ತದೆ. ಸಾಮಾನ್ಯವಾಗಿ ರೈಲುಗಳು ಸಮತಟ್ಟು ಪ್ರದೇಶದಲ್ಲಿ ಸಾಗುತ್ತವೆ. ಆದರೆ, ಕ್ಯಾಸಲ್​ರ್ಯಾಕ್​ನಿಂದ ಕುಲೇಂವರೆಗೆ ಸುಮಾರು 5 ಕಿ.ಮೀ. ಇಳಿಜಾರಿನಲ್ಲಿ ರೈಲು ಸಾಗುತ್ತದೆ. ಹೀಗಾಗಿ, ಬ್ರೇಕ್ ಹಚ್ಚಲು ಅನುವಾಗುವ ನಿಟ್ಟಿನಲ್ಲಿ ಒಂದೇ ರೈಲಿಗೆ ಮೂರ್ನಾಲ್ಕು ಇಂಜಿನ್​ಗಳನ್ನು ಹಾಕಿ ಓಡಿಸಲಾಗುತ್ತದೆ. ಅತ್ಯಂತ ನಯನ ಮನೋಹರ ಜಲಪಾತ ದೂಧಸಾಗರ ಇಲ್ಲಿದೆ.

Leave a Reply

Your email address will not be published. Required fields are marked *