ಇದ್ದು ಇಲ್ಲದಂತಾಗಿರುವ ಕ್ರೀಡಾಂಗಣಗಳು

ಮಡಿಕೇರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದಲ್ಲಿ ನಿರ್ಮಿಸಿರುವ ಸ್ಕ್ವಾಷ್ ಮತ್ತು ಬಾಕ್ಸಿಂಗ್ ಕೋರ್ಟ್, ಈಜುಕೊಳ ಇದ್ದು ಇಲ್ಲದಂತಾಗಿದೆ.

ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 53 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾ ಇಲಾಖೆ ಬಾಕ್ಸಿಂಗ್ ಕೋರ್ಟ್ ನಿರ್ಮಾಣ ಮಾಡಿತ್ತು. 2016ರಲ್ಲಿ ಉದ್ಘಾಟನೆ ಕೂಡ ಆಗಿತ್ತು. ಆದರೆ, ಉದ್ಘಾಟನೆಗೊಂಡು 3 ವರ್ಷ ಕಳೆದರೂ ಬಳಕೆಗೆ ಮಾತ್ರ ಬಂದಿಲ್ಲ.

ಉದ್ಘಾಟನೆಗೊಳ್ಳದ ಸ್ಕ್ವಾಶ್ ಕೋರ್ಟ್
ಸುಮಾರು 61 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ಕ್ವಾಶ್ ಕೋರ್ಟ್‌ಗೆ ಇನ್ನೂ ಉದ್ಘಾಟನೆ ಭಾಗ್ಯ ಬಂದಿಲ್ಲ. ಬಾಕ್ಸಿಂಗ್ ಕೋರ್ಟ್ ನಿರ್ಮಾಣ ಸಂದರ್ಭದಲ್ಲಿಯೇ ಸ್ಕ್ವಾಶ್ ಕೋರ್ಟ್‌ಗೆ ಅಡಿಗಲ್ಲಿಟ್ಟಿದ್ದ ಇಲಾಖೆ, ಕಾಮಗಾರಿ ಪೂರ್ಣಗೊಳಿಸಿದರೂ ಕ್ರೀಡಾಪಟುಗಳ ಬಳಕೆಗೆ ಮಾತ್ರ ನೀಡಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀಬಾಯಿ, ಲ್ಯಾಂಡ್ ಆರ್ಮಿಯವರು ಇತ್ತೀಚೆಗೆ ಕೋರ್ಟ್ ಅನ್ನು ಹಸ್ತಾಂತರಿಸಿದ್ದಾರೆ. ಮುಂದಿನ 10 ದಿನದೊಳಗೆ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಬಳಕೆಗೆ ಬಾರದ ಈಜುಕೊಳ
ಕ್ರೀಡಾ ಇಲಾಖೆಯಿಂದ 2015ರಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಿಸಲಾಗಿತ್ತು. ಆದರೆ, ಕಳೆದ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದ ಈಜುಕೊಳ ಹಾನಿಗೀಡಾಗಿತ್ತು. ಬೇಸಿಗೆ ಆರಂಭವಾಗಿ ಹಲವು ದಿನ ಕಳೆದರೂ ಮಕ್ಕಳಿಗೆ ಹಾಗೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿರಲಿಲ್ಲ. ಇದು ಕ್ರೀಡಾಪ್ರೇಮಿಗಳಿಗೆ ಅಸಮಾಧಾನ ತಂದಿತ್ತು. ತದನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ದುರಸ್ತಿಪಡಿಸಿದ್ದಾರೆ. ಆದರೂ ಬಳಕೆಗೆ ಮಾತ್ರ ಅವಕಾಶವಿಲ್ಲ.

ಶಾಲಾ ಮಕ್ಕಳಿಗೆ ಬೇಸರ: ಬೇಸಿಗೆ ರಜೆಯ ಸಮಯದಲ್ಲಿ ಶಾಲಾ ಮಕ್ಕಳಿಗೆ ಈಜುಕೊಳ ಬಳಕೆಯಾಗಬೇಕಿತ್ತು. ಈಜುಕೊಳ ಪ್ರಾರಂಭವಾದ ಎರಡು ತಿಂಗಳು ಮಾತ್ರ ಬಳಕೆಯಾಗಿದೆ. ನಂತರ ದಿನಗಳಲ್ಲಿ ಒಂದಲ್ಲೊಂದು ಕಾರಣದಿಂದ ಈಜುಪ್ರಿಯ ಮಕ್ಕಳಿಗೆ ಬೇಸರ ಉಂಟು ಮಾಡಿದೆ.

ಸೂಕ್ತ ವ್ಯವಸ್ಥೆ ಕಲ್ಪಿಸಿ
ಜಿಲ್ಲಾ ಕ್ರೀಡಾಂಗಣ ಸೇರಿ ಈಜುಕೊಳದಲ್ಲಿ ಮೂಲ ಸೌಲಭ್ಯಗಳಿಲ್ಲ. ಈಗಿರುವ ಶೌಚಗೃಹ, ಸ್ನಾನಗೃಹ ಕೂಡ ಅಚ್ಚುಕಟ್ಟಾಗಿಲ್ಲ. ಹಣ ಕೊಟ್ಟು ಈಜುಕೊಳ ಬಳಸುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಕೂರ್ಗ್ ಟೇಬಲ್ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಎಸ್. ಮಹಮ್ಮದ್ ಆಸೀಫ್ ಆಗ್ರಹಿಸುತ್ತಾರೆ.

ಈಜುಕೊಳ ಬಳಕೆಗೆ ಸಾರ್ವಜನಿಕರಿಂದ 1 ಸಾವಿರ ರೂ. ಸದಸ್ಯತ್ವ ಶುಲ್ಕ ಪಡೆದುಕೊಳ್ಳಲಾಗಿತ್ತು. ಅವರು ಪ್ರತಿ ತಿಂಗಳು 800 ರೂ. ಪಾವತಿಸಬೇಕು. ಸದಸ್ಯತ್ವ ನೀಡದ ಸಾರ್ವಜನಿಕರಿಗೆ 1 ಗಂಟೆಗೆ 50 ರೂ. ಹಾಗೂ 14 ವರ್ಷ ಒಳಪಟ್ಟವರಿಗೆ 30 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಈಜುಕೊಳ ದುರಸ್ತಿ ಮುಕ್ತಾಯಗೊಂಡ ನಂತರ ಪ್ರತಿದಿನ ಬೆಳಗ್ಗೆ 6ರಿಂದ 11 ಹಾಗೂ ಸಂಜೆ 4ರಿಂದ 6 ಗಂಟೆ ತನಕ ಅವಕಾಶ ನೀಡಲಾಗುತ್ತದೆ.

ಬಳಕೆಯಾಗದ ಕೋರ್ಟ್ ‘ಟಿಟಿ’ಗೆ ಕೊಡಿ:ಜಿಲ್ಲೆಯ ನಾನಾ ಕಡೆ ವಿದ್ಯಾರ್ಥಿಗಳಿಗೆ ಟೇಬಲ್ ಟೆನಿಸ್ ಆಡಲು ಅವಕಾಶವಿದೆ. ಆದರೆ, ಜಿಲ್ಲಾಕೇಂದ್ರದಲ್ಲಿ ಇದಕ್ಕೆ ಅವಕಾಶ ಇಲ್ಲದಂತಾಗಿದೆ. ಆಟವಾಡಲು ಅವಕಾಶ ನೀಡದೆ ಇದ್ದರೆ ಆಟ ಮರೆಯಾಗುತ್ತದೆ. ಇಂದು ಸ್ಕ್ವಾಷ್ ಮತ್ತು ಬಾಕ್ಸಿಂಗ್ ಒಳಾಂಗಣ ಕ್ರೀಡಾಂಗಣ ಬಳಕೆಯಾಗುತ್ತಿಲ್ಲ. ಕ್ರೀಡಾ ಅಧಿಕಾರಿಗಳು ಎಚ್ಚೆತ್ತುಕೊಂಡು ಬಳಕೆಗೆ ಅವಕಾಶ ನೀಡಬೇಕು. ಅಥವಾ ಇದೇ ಆವರಣದಲ್ಲಿ ಶಿಕ್ಷಣ ಇಲಾಖೆಗೆ ಸೇರಿದ ಒಂದು ಕಟ್ಟಡ ಖಾಲಿ ಇದ್ದು, ಆ ಕಟ್ಟಡವನ್ನು ದುರಸ್ತಿ ಮಾಡಿಕೊಟ್ಟಲ್ಲಿ ಟೆಬಲ್ ಟೆನಿಸ್ ಆಟದ ಜತೆಗೆ ಮಕ್ಕಳಿಗೆ ತರಬೇತಿ ನೀಡಲು ಸಹಾಯವಾಗುತ್ತದೆ ಎಂದು ಕೂರ್ಗ್ ಟೇಬಲ್ ಟೆನಿಸ್ ಅಸೋಸಿಯೇಷನ್ ಕಾರ್ಯದರ್ಶಿ ರಚನ್ ಹೇಳುತ್ತಾರೆ.

ಯುವ ಸಬಲೀಕರಣ ಮತ್ತಿ ಕ್ರೀಡಾ ಇಲಾಖೆ ಕ್ರೀಡಾಂಗಣದಲ್ಲಿ ಕಳೆದ 25 ವರ್ಷದಿಂದ ಟೆನಿಸ್ ಆಡುತ್ತಿದ್ದೆವು. ಆದರೆ ಈಗ ಅಲ್ಲಿ ಸ್ಕ್ವಾಶ್‌ಕೋರ್ಟ್ ನಿರ್ಮಾಣ ಮಾಡಿದ್ದಾರೆ. ಕ್ರೀಡಾ ಇಲಾಖೆಯ ನಿರ್ದೇಶಕರಿಗೆ ಹಲವು ಬಾರಿ ಟೆಬಲ್ ಟೆನಿಸ್ ಆಡಲು ಜಾಗ ನೀಡುವಂತೆ ಮನವಿ ಮಾಡಿದ್ದೇವೆ. ಆದರೆ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ.
ರಚನ್, ಕಾರ್ಯದರ್ಶಿ, ಕೂರ್ಗ್ ಟೇಬಲ್ ಟೆನಿಸ್ ಅಸೋಸಿಯೇಷನ್

Leave a Reply

Your email address will not be published. Required fields are marked *