ಸಿನಿಮಾ

ಇದು ನನ್ನ ಕೊನೆಯ ಚುನಾವಣೆ

ಕೆ.ಆರ್.ಪೇಟೆ: ಇದು ನನ್ನ ಕೊನೆಯ ಚುನಾವಣೆ. ಕ್ಷೇತ್ರದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ಸಮರ್ಥ ಯುವಕರನ್ನು ಗುರುತಿಸಿ ಅವರಿಗೆ ನಾನು ತಾಲೂಕಿನ ಅಧಿಕಾರವನ್ನು ಧಾರೆ ಎರೆಯುತ್ತೇನೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ನಾನು ಬಿಜೆಪಿಯನ್ನು ನಂಬಿ ಬಂದಿದ್ದೇನೆ. ಕನಸು ಮನಸ್ಸಿನಲ್ಲಿಯೂ ಬಿಜೆಪಿಗೆ ಹಾಗೂ ಕಾರ್ಯಕರ್ತರಿಗೆ ಮೋಸ ಮಾಡುವ ಉದ್ದೇಶವನ್ನು ಹೊಂದಿಲ್ಲ. ಕಾರ್ಯಕರ್ತರಿಗೆ ಏನಾದರೂ ನನ್ನಿಂದ ಅನ್ಯಾಯವಾಗಿದ್ದರೆ ಕ್ಷಮೆ ಕೋರುತ್ತೇನೆ. ಕಳೆದ ಉಪಚುನಾವಣೆಯಲ್ಲಿ ನನ್ನ ಗೆಲುವಿಗೆ ದುಡಿದು ಇತಿಹಾಸ ನಿರ್ಮಾಣ ಮಾಡಿದಂತೆ ಈ ಚುನಾವಣೆಯಲ್ಲಿಯೂ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡುವ ಮೂಲಕ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸುವಂತೆ ಕೈಮುಗಿದು ಮನವಿ ಮಾಡಿದರು.

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಬೆಂಬಲಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಸುಪುತ್ರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು. ನನಗೆ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ದೊರಕಿತು. ನನ್ನ ಶಕ್ತಿ ಮೀರಿ 1800 ಕೋಟಿ ರೂ. ಗಳಿಗೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದೇನೆ. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜತೆಗೆ ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಮಾಡಿದ್ದೇನೆ. ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಬಿಜೆಪಿ ಕನಿಷ್ಠ ಮೂರರಿಂದ ನಾಲ್ಕು ಸ್ಥಾನ ಪಡೆಯುವ ನಿಟ್ಟಿನಲ್ಲಿ ಪಕ್ಷದ ಸಂಘಟನೆಯಾಗಿದೆ. ಬಿಜೆಪಿಯ ಬಿ ಫಾರ್ಮ್‌ಗಾಗಿ ಎಲ್ಲ ತಾಲೂಕುಗಳಲ್ಲಿ ಪೈಪೋಟಿ ಉಂಟಾಗಿದೆ. ಪಕ್ಷ ಸಂಘಟನೆ ಮಾಡಿ ಜೆಡಿಎಸ್ ಕೋಟೆಯಲ್ಲಿ ಕಮಲ ಅರಳುವಂತೆ ಮಾಡಿದ ಕೀರ್ತಿ ನನಗಲ್ಲ, ಕೆ.ಆರ್.ಪೇಟೆಗೆ ಸಲ್ಲುತ್ತದೆ ಎಂದು ಅಭಿಮಾನದಿಂದ ಹೇಳಿದರು.

ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಉಸ್ತುವಾರಿ, ದೆಹಲಿ ರಾಜ್ಯದ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಾಟಿಯಾ ಮಾತನಾಡಿ, ನಾರಾಯಣಗೌಡ ಅವರು ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಮುಂದೆ ರಾಜ್ಯದಲ್ಲಿ ಬರುವ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಲಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗಾಗಿ ದುಡಿದಿರುವ ನಾರಾಯಣಗೌಡರಿಗೆ ಉತ್ತಮ ಸ್ಥಾನಮಾನ ಸಿಗಲಿದೆ ಎಂದರು.

ದೆಹಲಿ ಮೂಲದ ಹಲವಾರು ತಂಡಗಳು ತಾಲೂಕಿನ ಮತದಾರರ ಮನದಾಳದ ಸಮೀಕ್ಷೆ ನಡೆಸಿ ಅಧ್ಯಯನ ಮಾಡಿದ್ದು, ನಾರಾಯಣಗೌಡರು ಶೇ.53ರಷ್ಟು ಮತಗಳನ್ನು ಪಡೆದು ಭರ್ಜರಿ ಗೆಲುವಿನೊಂದಿಗೆ ದಾಖಲೆ ನಿರ್ಮಿಸಲಿದ್ದಾರೆ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಪುರಸಭಾ ಸದಸ್ಯ ಸಂತೋಷ್ ಕುಮಾರ್, ನಟರಾಜು, ತಾಪಂ ಮಾಜಿ ಸದಸ್ಯ ರಾಜಾಹುಲಿ ದಿನೇಶ್, ಎಸ್.ಟಿ.ಮೋರ್ಚಾ ರಾಜ್ಯ ಸಂಚಾಲಕ ಅಗ್ರಹಾರ ಬಾಚಹಳ್ಳಿ ಜಗದೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಬಿಜೆಪಿ ಮುಖಂಡರಾದ ಬಳ್ಳೇಕೆರೆ ವರದರಾಜೇಗೌಡ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕ ಶಿವರಾಮೇಗೌಡ, ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಲತಾ ಮುರಳಿ, ನಗರ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ರಮೇಶ್, ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮೀ ಸೇರಿದಂತೆ ಐನೂರಕ್ಕೂ ಹೆಚ್ಚು ಕಾರ್ಯಕರ್ತರು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Latest Posts

ಲೈಫ್‌ಸ್ಟೈಲ್