Tuesday, 11th December 2018  

Vijayavani

Breaking News

ಇದಕಾರಂಜುವರು? ಇದಕಾರಳುಕುವರು? ಅನ್ನುವಂತೆ ಬದುಕಿದವರು

Sunday, 31.12.2017, 3:05 AM       No Comments

ಪ್ರೊ. ಬಿ. ಸೋಮಶೇಖರ್. ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಕನ್ನಡ ಮೇಷ್ಟ್ರಾಗಿ ಸೇರಿ ಅಲ್ಲಿ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ನಿವೃತ್ತರಾದರು.

ಕಾಯಿಲೆಗಳು ಒಂದರಮೇಲೊಂದು ಬಂದೆರಗಿದರೂ ಹೆದರದೆ ತಮ್ಮ ವಿಶಿಷ್ಟ ಹಾಸ್ಯಪ್ರಜ್ಞೆಯನ್ನು ಸದಾ ಕಾಪಿಟ್ಟುಕೊಂಡವರು.

‘ಲೇ ಲೇ ಲೇ ಕೃಷ್ಣೇಗೌಡಾ….! ಮನೆ ಹಾಳ ಕಣಲೇ ನೀನು…! ಶಿವ ಶಿವಾ, ಶಿವ ಶಿವಾ! ನನ್ನಂಥಾ ಸಾತ್ವಿಕನ ಬಗ್ಗೆ ಹೀಗೆಲ್ಲಾ ಮಾತಾಡಿದರೆ ರವರವಾದಿ ನರಕಕ್ಕೆ ಹೋಗ್ತಿಯಾ ನೀನು’

ಈ ಬಗೆಯಲ್ಲಿ ಅವರ ಕೈಲಿ ಬಯ್ಯಿಸಿಕೊಳ್ಳೋದು ಅಂದರೆ ತುಂಬಾ ಇಷ್ಟ ನನಗೆ. ಅದಕ್ಕಾಗೇ ಅವರನ್ನು ಆಗಾಗ ಫೋನು ಮಾಡಿಯೋ, ಭೇಟಿಯಾಗಿಯೋ ಒಂದಿಷ್ಟು ಕಾಲೆಳಿತಾ ಇದ್ದೆ.

ಒಂದು ಸಲ ನಾನು, ಕೆ.ಪಿ.ಎಂ(ಪ್ರೊ.ಕೆ.ಪಿ.ಮಹದೇವಪ್ಪ), ಕೃಷ್ಣಪ್ಪ, ಶ್ರೀಧರಮೂರ್ತಿ ಅವರೆಲ್ಲಾ ಅವರ ಮನೆಗೆ ಹೋಗಿದ್ದೆವು. ನಮ್ಮನ್ನು ಕಂಡಕೂಡಲೇ ಅವರು-

‘ರೀ ದಾಕ್ಷಾಯಿಣಿ ಎಲ್ಲಾ ಪಾಪಿಷ್ಟರೂ ಏಕಕಾಲದಲ್ಲಿ ಮನೆಗೆ ಬಂದುಬಿಟ್ಟಿದ್ದಾರೆ. ಮನುಷ್ಯರಾ ಇವರು? ಒಬ್ಬೊಬ್ಬನೂ ಒಬ್ಬೊಬ್ಬ ಬಕಾಸುರನ ಹಾಗೆ ಇದಾರೆ. ಅಡುಗೆ ಮನೆ ಬಾಗಿಲು ಹಾಕಿ ಹೊರಗೆ ಬನ್ನಿ. ಈ ಮನೆಹಾಳರಿಗೆ ಒಂದು ತೊಟ್ಟು ಕಾಫಿನೂ ಕೊಡಬ್ಯಾಡ್ರೀ….!’

ಹಾಗಂತ ಅಡುಗೆಮನೆ ಕಡೆ ಕೂಗಿ ಹೇಳಿ ‘ಬನ್ನಿ ಬನ್ನಿ. ನೀವು ಬಂದಿದ್ದು ಬಹಳ ಸಂತೋಷ ಆಗಿದೆ ನಮಗೆ. ಬೇಗ ಹೋಗ್ತೀರಿ ತಾನೆ?’ ಅಂತ ನಮ್ಮನ್ನು ಸ್ವಾಗತಿಸಿದರು.

ಮಹದೇವಪ್ಪ ಅವರ ಸಹೋದ್ಯೋಗಿ. ನಮಗಿಂತ ಅವರಲ್ಲಿ ಸಲಿಗೆ ಜಾಸ್ತಿ. ಅವರು ಹೇಳಿದರು- ‘ಇದು ನಮ್ಮ ಮನೆ. ನಮಗಿಷ್ಟ ಬಂದಾಗ ಬರ್ತೀವಿ, ನಮಗಿಷ್ಟ ಬಂದಾಗ ಹೋಗ್ತೀವಿ. ಅದನ್ನೆಲ್ಲಾ ಕೇಳೋದಕ್ಕೆ ನೀನ್ಯಾರು? ನಾವೇನು ನಿನ್ನ ಮೊಕಾ ನೋಡಿಕೊಂಡು ಈ ಮನೆಗೆ ಬಂದಿಲ್ಲ. ದಾಕ್ಷಾಯಿಣಿ ಅವರಿಗೆ ಅತಿಥಿ ಸತ್ಕಾರ ಹೇಗೆ ಮಾಡಬೇಕು ಅನ್ನೋದು ಗೊತ್ತಿದೆ. ಅವರು ಮಾಡ್ತಾರೆ. ನೀನು ಬಾಯಿ ಮುಚ್ಕೊಂಡು ಮರ್ಯಾದೆಯಾಗಿ ಕೂತ್ಕೊ.’

ಸ್ವಲ್ಪ ಹೊತ್ತಿನಲ್ಲೇ ದಾಕ್ಷಾಯಿಣಿ ಮೇಡಂ ನಗುನಗುತ್ತಲೇ ಚಕ್ಕುಲಿ, ಕೋಡುಬಳೆ, ಕಾಫಿ ತಂದಿಟ್ಟರು. ಅವರು ಮಾತ್ರ ‘ಎಷ್ಟೊಂದು ಕೊಡ್ತಾ ಇದ್ದೀರಲ್ರೀ. ಸ್ವಲ್ಪ ಕೊಟ್ಟರೆ ಆಗೋದಿಲ್ವಾ? ಈ ಪಾಪಿಗಳು ಎಷ್ಟು ಕೊಟ್ಟರೂ ತಿಂದು ಬಿಡ್ತಾರೆ’

ಇದು ಅವರ ಪ್ರೀತಿಯ, ಉಪಚಾರದ ಮತ್ತೊಂದು ಸ್ಯಾಂಪಲ್.

ಅವರು ಪ್ರೊ. ಬಿ. ಸೋಮಶೇಖರ್. ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಕನ್ನಡ ಮೇಷ್ಟ್ರಾಗಿ ಸೇರಿ ಅಲ್ಲಿ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ರಿಟಾಯಿರ್ ಆದರು. ಹಿಂದೂಸ್ತಾನಿ ಸಂಗೀತ ಅಂದರೆ ಅವರಿಗೆ ಪ್ರಾಣ. ಸ್ವತಃ ಸಂಗೀತಗಾರರು. ಒಳ್ಳೆಯ ಹಾಮೋನಿಯಂ ವಾದಕರು. ‘ಸಪ್ತಸ್ವರ’ ಅಂತ ಸಂಸ್ಥೆಯನ್ನು ಸ್ಥಾಪಿಸಿ ಹಿಂದೂಸ್ತಾನಿ ಸಂಗೀತಕ್ಕೆ ಮೈಸೂರಿನಲ್ಲಿ ಒಂದು ನೆಲೆ ಕಲ್ಪಿಸಿದರು. ಹಲವಾರು ಹಿಂದೂಸ್ತಾನಿ ಸಂಗೀತ ದಿಗ್ಗಜರನ್ನು ಕರೆಸಿ ಮೈಸೂರಿನ ಜನಕ್ಕೆ ಆ ಸಂಗೀತದ ರುಚಿ ಹುಟ್ಟಿಸಿದರು. ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ಮೈಸೂರಿನ ಮಕ್ಕಳು ಕಡಿಮೆ ಖರ್ಚಿನಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯಲು ನೆರವಾದರು. ಮೈಸೂರಿನ ಕುವೆಂಪು ನಗರದಲ್ಲಿರುವ ಅವರ ಮನೆಯ ಹೆಸರೂ ‘ಸಪ್ತಸ್ವರ’ ಅಂತಲೇ.

ಬೇಸಾಯ ಅಂದರೂ ಅವರಿಗೆ ಆಸಕ್ತಿ. ಇಲ್ಲೇ ಮೈಸೂರಿನ ಪಿಲ್ಲಹಳ್ಳಿ ಹತ್ತಿರ ‘ದಿಬ್ಬೇಮನೆ ತೋಟ’ ಅಂತ ಒಂದು ಚೆಂದದ ತೋಟ ಮಾಡಿದ್ದಾರೆ. ತೆಂಗು, ಅಡಿಕೆ, ಬಾಳೆ, ರಾಗಿ. ಜೋಳ ಇತ್ಯಾದಿಗಳನ್ನು ಬೆಳೆಯುತ್ತಾರೆ. ತೋಟದಲ್ಲೊಂದು ಸೊಗಸಾದ ಮನೆಯನ್ನು ಕೂಡಾ ಕಟ್ಟಿಸಿದ್ದಾರೆ. ಒಮ್ಮೊಮ್ಮೆ ತಮ್ಮ ಗೆಳೆಯರನ್ನು ತೋಟಕ್ಕೆ ಕರೆದು ಅಲ್ಲಿ ಹಾಡು, ಹರಟೆ, ಊಟ ಅಂತ ಸಂಭ್ರಮ ಮಾಡುವುದೂ ಇದೆ. ಅಂಥ ಹಲವಾರು ಸಂಭ್ರಮದ ಕೂಟಗಳಲ್ಲಿ ನಾನೂ ಭಾಗಿಯಾಗಿದ್ದೆ. ಅದೊಂದು ಸಾರಿ, ಹೀಗೆ ಐವತ್ತರವತ್ತು ಗೆಳೆಯರು ಸೇರಿದ್ದೆವು. ಹಾಡು, ಹರಟೆ, ಊಟ ಎಲ್ಲಾ ಭರ್ಜರಿಯಾಗೇ ನಡೆದಿತ್ತು. ‘ಏನೋ ಒಂದು ಸಲ ಕರೆದ್ರೆ ಸಾಕು, ಬಂದೇ ಬಿಡ್ತಿರಲ್ಲೋ. ಆಗಲೇ ನೂರಾರು ಎಳನೀರು ಕುಡಿದು ಬುಂಡೆ ಎಸೆದಿದ್ದೀರಿ. ಇಷ್ಟೊಂದು ತಿಂದಿದ್ದೀರಿ. ಕದಳೀವನಕ್ಕೆ ಮದ್ದಾನೆ ಹೊಕ್ಕಹಾಗೆ ಹಾವಳಿ ಮಾಡ್ತಾ ಇದ್ದೀರಲ್ಲೋ! ಪಾಪಿಗಳಾ! ಕರೆದವನ ಮೇಲೆ ಕರುಣೇನೇ ಇಲ್ಲವಲ್ರೋ’ ಅಂತ ಸೋಮಶೇಖರ್ ಎಲ್ಲರನ್ನೂ ಛೇಡಿಸುತ್ತಲೇ ಇದ್ದರು. ಕೊನೆಯಲ್ಲಿ ಕೃತಜ್ಞತೆ ಸಮರ್ಪಣೆ ಮಾಡುವುದಕ್ಕೆ ಅಂತ ನಾನು ಎದ್ದೆ.

‘ಸ್ನೇಹಿತರೇ, ಸೋಮಶೇಖರ್ ಕುಟುಂಬದವರ ಆತ್ಮೀಯ ಕರೆಗೆ ಓಗೊಟ್ಟು ತಾವೆಲ್ಲಾ ಇಲ್ಲಿಗೆ ಬಂದದ್ದು ಅವರಿಗೆ ತುಂಬಾ ಸಂತೋಷತಂದಿದೆ. ಇದು ಶರಣರ ಮನೆ. ನಿಮ್ಮ ಬರುವು ಅವರಿಗೆ ಪ್ರಾಣ ಜೀವಾಳ. ನೀವೆಲ್ಲಾ ಜಂಗಮರಿದ್ದ ಹಾಗೆ. ಆದ್ದರಿಂದ ನೀವು ಪ್ರತೀ ಹದಿನೈದು ದಿನಕ್ಕೋ ತಿಂಗಳಿಗೋ ಹೀಗೆ ಬರುತ್ತಲೇ ಇರಬೇಕು. ನಿಮಗೆಲ್ಲಾ ದಾಸೋಹ ಮಾಡುವುದಕ್ಕೆ ಅದೆಷ್ಟೇ ಖರ್ಚಾಗಲಿ, ಸೋಮಶೇಖರ್ ತುದಿಗಾಲ ಮೇಲೆ ನಿಂತಿರುತ್ತಾರೆ…’

ನನ್ನ ಮಾತಿನ ಮಧ್ಯೆ ಸೋಮಶೇಖರ್ ಬಾಯಿ ಹಾಕಿದರು- ‘ಲೇ ಲೇ ಲೇ ಮನೆಹಾಳ. ದಾಸೋಹ ಮಾಡ್ತೀನಿ ಅಂದ್ರೆ ದಿನಾ ವಕ್ಕರಿಸ್ತಾರೆ ಈ ಪಾಪಿಗಳು. ಅವರು ಮತ್ತೆ ಮತ್ತೆ ಬರ್ತಾನೇ ಇದ್ದರೆ ನನ್ನ ಗತಿಯೇನೋ!’

ಮಹದೇವಪ್ಪ ರೋಫು ಹಾಕಿ ಬಾಯಿ ಮುಚ್ಚಿಸಿದರು- ‘ಬಾಯಿ ಮುಚ್ಚೋ ಮಗನೆ. ಇಷ್ಟೊಂದು ಜನ ಬರೋದು ನಿನ್ನ ಭಾಗ್ಯ ಅಲ್ಲವೇನಲೇ? ಪಾಪ ಅವರೆಷ್ಟು ದೂರದಿಂದ ಎಷ್ಟು ಕಷ್ಟ ಪಟ್ಕೊಂಡು ಬರ್ತಾರೆ. ನಿನ್ನದೊಂದು ಜುಜುಬಿ ತೋಟ ಅವರ ಪಾದಧೂಳಿಯಿಂದ ಪವಿತ್ರವಾಗುತ್ತೆ ತಿಳಕೋ. ಅಷ್ಟಕ್ಕೂ ಅವರೆಲ್ಲಾ ಬಂದ್ರೆ ನಿನಗೇನು ನಷ್ಟ ಆಗೋದು? ಒಂದಿಷ್ಟು ದುಡ್ಡು ತಾನೆ? ದುಡ್ಡಿರೋದೇ ಖರ್ಚು ಮಾಡೋಕೆ ತಾನೆ? ಕೃಷ್ಣೇಗೌಡ್ರೆ ನೀವು ಮಾತಾಡ್ತಾ ಇರೋದು ಸರಿಯಾಗಿದೆ ಮುಂದುವರಿಸಿ’ ಅಂದರು.

ಸೋಮಶೇಖರ್ ಅದೊಂದು ಬಗೆ ನಾಟಕೀಯತೆಯಿಂದ ‘ಈ ಪಾಪಿ ಕೆಪಿಎಂ ನನ್ನ ಬಾಯನ್ನೇ ಮುಚ್ಚಿಸ್ತಾನಲ್ಲೋ? ನಾನು ಈ ತೋಟದ ಮಾಲೀಕ ಅಲ್ಲವೇನ್ರೋ? ಈ ಕೃಷ್ಣೇಗೌಡ ನನ್ನನ್ನ ಒಂದು ಮಾತು ಕೇಳಿ ನಿಮ್ಮನ್ನೆಲ್ಲಾ ಕರೀಬೇಕಲ್ವೇನ್ರೋ?’ಅಂತ ಗೊಣಗುತ್ತಿದ್ದರು.

ನಾನೂ ಅಷ್ಟೇ ನಾಟಕೀಯವಾಗಿ ‘ಅತಿಥಿಗಳು ಅಂದರೆ ಯಾರು? ಜಂಗಮರು, ಸಾಕ್ಷಾತ್ ಶಿವಸ್ವರೂಪಿಗಳು. ಸೋಮಶೇಖರ್ ಅವರು ಶರಣ ಪರಂಪರೆಯಿಂದ ಬಂದವರು. ಶರಣರ ಬದುಕನ್ನು ಅಗಾಧವಾಗಿ ಅಧ್ಯಯನ ಮಾಡಿದವರು. ಅಳವಡಿಸಿಕೊಂಡವರು. ಅವರು ಮೇಲೆ ಮೇಲೆ ಬಯ್ದರೂ ಅಂತರಾಳದಲ್ಲಿ ಸಂತಸಪಡುತ್ತಾರೆ. ಆದ್ದರಿಂದ ನೀವೆಲ್ಲಾ ಆಗಾಗ ಹೀಗೆ ಬರುತ್ತಲೇ ಇರಬೇಕು…’

ಸೋಮಶೇಖರ್ ಮತ್ತೆ ಗೊಣಗಿದರು. ‘ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ. ಈ ಕೃಷ್ಣೇಗೌಡ ಇವರನ್ನೆಲ್ಲಾ ಜಂಗಮರು ಅಂತಾನಲ್ಲಲೇ? ಇವರು ಯಾವ ಸೀಮೆ ಜಂಗಮರೋ? ಇವರೆಲ್ಲಾ ಪಾಪಿ ನನ್ ಮಕ್ಕಳು…’

ಸೋಮಶೇಖರ್ ಜೊತೆಗಿದ್ದವರಿಗೆ ಇಂಥ ರಸಪ್ರಸಂಗಗಳು ಅಪರೂಪವಲ್ಲ. ಅದರಿಂದಲೇ ನಮಗೆ ಅವರು ಅಷ್ಟು ಇಷ್ಟವಾಗುತ್ತಿದ್ದುದು.

ಇದೊಂದು ಪ್ರಸಂಗವನ್ನು ನನ್ನ ಹಾಸ್ಯಗೋಷ್ಠಿಗಳಲ್ಲೆಲ್ಲಾ ಹೇಳಿ ಜನರನ್ನು ನಗಿಸಿದ್ದೇನೆ.

2007ನೇ ಇಸವಿಯಲ್ಲಿ ಸೋಮಶೇಖರ್ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಆಯಿತು. ಆಪರೇಷನ್ ಮುಗಿದ ಮೇಲೆ ಆಗತಾನೇ ಪ್ರಜ್ಞೆ ಬಂದಿತ್ತು. ಸಹಜವಾಗಿಯೇ ತುಂಬಾ ಸುಸ್ತಾಗಿದ್ದರು. ದನಿತೆರೆದು ಮಾತಾಡಲೂ ಆಯಾಸವಾಗುತ್ತಿತ್ತು. ಹೀಗಿರುವಾಗ ಡಾಕ್ಟರು ಈ ಪೇಷಂಟನ್ನು ನೋಡಲು ವಾರ್ಡಿಗೆ ಬಂದರು.

‘ಹೇಗಿದ್ದೀರಿ ಸಾರ್?’ ‘ಪರವಾಗಿಲ್ಲ ಡಾಕ್ಟರೇ, ಚೆನ್ನಾಗಿದ್ದೀನಿ ಅನ್ನಿಸ್ತಾ ಇದೆ’

‘ಏನೂ ಹೆದರಿಕೋ ಬೇಡಿ. ಆಪರೇಷನ್ ಚೆನ್ನಾಗಿ ಆಗಿದೆ. ಮೊದಮೊದಲು ಸುಸ್ತು ಇರುತ್ತೆ. ಅನೆಸ್ತೀಷಿಯಾ ಬೇರೆ ಕೊಟ್ಟಿರ್ತೀವಲ್ಲ ಅದಕ್ಕೆ. ಆಮೇಲೆ ಎಲ್ಲಾ ಸರಿಹೋಗುತ್ತೆ.’

‘ಅದ್ಸರಿ ಡಾಕ್ಟರೇ, ನಿಮ್ಮನ್ನೊಂದು ಮಾತು ಕೇಳಬೇಕಲ್ಲಾ?’ ‘ಕೇಳಿ ಸಾರ್, ಏನು ಬೇಕಾದ್ರೂ ಕೇಳಿ’

‘ನೀವು ಆಪರೇಷನ್ ಮಾಡೋದಕ್ಕೆ ಅಂತ ನನ್ನ ಎದೇನ ಓಪನ್ ಮಾಡಿದಿರಲ್ಲಾ, ಆಗೇನಾದರೂ ಒಳಗೆ ನಾಲ್ಕಕ್ಷರ ಕಂಡವಾ?’

ಪೇಷಂಟಿಗೆ ಪೂರ್ಣಪ್ರಜ್ಞೆ ಬಂದಿಲ್ಲ ಅಂದುಕೊಂಡರು ಡಾಕ್ಟರು. ‘ಏನೂ ಗಾಬರಿಯಾಗಬೇಡಿ. ಅನೆಸ್ತೀಷಿಯಾ ಕೊಟ್ಟಿರ್ತೀವಲ್ಲಾ, ಅದರ ಎಫೆಕ್ಟ್ ಇನ್ನೂ ಸ್ವಲ್ಪ ಇದೆ. ಅದಕ್ಕೇ ಏನೇನೋ ಮಾತಾಡ್ತಾ ಇದೀರಿ ಅಷ್ಟೆ’

‘ಏನೇನೋ ಮಾತಾಡ್ತಾ ಇಲ್ಲ ಡಾಕ್ಟರೇ. ನಾನು ಪೂರ್ತಾ ಎಚ್ಚರವಾಗೇ ಇದೀನಿ. ನೀವು ನನ್ನ ಎದೇನ ಓಪನ್ ಮಾಡಿದಿರಲ್ಲಾ ಆಗ ಅಲ್ಲೆಲ್ಲಾದರೂ ನಾಲ್ಕಕ್ಷರ ಕಂಡವಾ?’ ‘ನಾಲ್ಕಕ್ಷರಾನಾ? ಅಕ್ಷರ ಗಿಕ್ಷರ ಇರಲ್ಲ ಅಲ್ಲಿ’

‘ಹಾಗಂತೀರಾ. ಹಾಗಾದ್ರೆ ನಮ್ಮಪ್ಪ ಹೇಳ್ತಿದ್ದ ಮಾತೇ ಸತ್ಯ ಆಯ್ತು’ ‘ನಿಮ್ಮಪ್ಪ ಏನು ಹೇಳ್ತಾ ಇದ್ರು?’

‘ಈ ನನ್ನ ಮಗನಿಗೆ ಎದೆ ಸೀಳಿದ್ರೆ ನಾಲ್ಕಕ್ಷರ ಇಲ್ಲ ಅಂತಿದ್ರು.’ ಡಾಕ್ಟರೂ ಸೇರಿ, ಮನೆಯವರೆಲ್ಲಾ ಗೊಳ್ಳನೆ ನಕ್ಕರು.

ಶಸ್ತ್ರಚಿಕಿತ್ಸೆ ಆದಮೇಲೆ ಅವರು ಮಾಮೂಲು ಬದುಕಿಗೆ ಹಿಂತಿರುಗಿದರು. ಸಂಗೀತ, ಸಾಹಿತ್ಯ, ನೃಪತುಂಗ ಕನ್ನಡ ಶಾಲೆ, ಸಾವಯವ ಕೃಷಿ, ಅಲ್ಲಲ್ಲಿ ಭಾಷಣ, ವಿಚಾರಗೋಷ್ಠಿ ಅಂತ ಕ್ರಿಯಾಶೀಲರಾದರು. ತಮ್ಮ ತೋಟದಲ್ಲಿ ಬೆಳೆದ ಬಾಳೆಗೊನೆಗಳನ್ನು ತಾವೇ ಕಾರಿಗೆ ತುಂಬಿಕೊಂಡು ಬಂದು ಮಾರ್ಕೆಟ್ಟಿಗೆ ಹಾಕುತ್ತಿದ್ದರು. ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ಕಂಡು ಯದ್ವಾತದ್ವಾ ಬಯ್ಯುತ್ತಿದ್ದರು.

ಸೋಮಶೇಖರ್ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೋಕಿನ ಕುನ್ನಾಳು ಗ್ರಾಮದಲ್ಲಿ ಹುಟ್ಟಿದವರು. ತಂದೆ ಬಸವಲಿಂಗೇ ಗೌಡರು, ತಾಯಿ ಗೌರಮ್ಮ. ಚಿಕ್ಕಂದಿನಿಂದಲೂ ಅವರ ಓದು, ವಿದ್ಯಾಭ್ಯಾಸ ನಡೆದದ್ದು ಸಿರಿಗೆರೆ ಮಠದಲ್ಲಿ. ಮಠದ ಹಿಂದಿನ ಪೀಠಾಧ್ಯಕ್ಷರಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ನೆರಳಿನಲ್ಲೇ ಬೆಳೆದರು ಸೋಮಶೇಖರ್. ಗುರುಗಳನ್ನು ನೆನೆದಾಗಲೆಲ್ಲಾ ಹಾಗೇ ದ್ರವಿಸಿ ಹೋಗುತ್ತಿದ್ದರು ಅವರು.

‘ನಮ್ಮ ಗುರುಗಳು, ಅಬ್ಬ! ಅಂಥಾ ಮಹಾಚೇತನವನ್ನು ನಾನು ನೋಡೇ ಇಲ್ಲ. ಮಹಾನ್ ಕ್ರಾಂತಿಕಾರಿ, ವೈಚಾರಿಕ ಜಗದ್ಗುರು ಕಣೋ ನಮ್ಮ ಗುರುಗಳು. ಎಂಥಾ ಧೀಶಕ್ತಿ, ಧೈರ್ಯ, ದೂರದೃಷ್ಟಿ ಅವರದು! ಅಬ್ಬಬ್ಬ! ಅವರನ್ನ ಅರ್ಥ ಮಾಡ್ಕೋಳ್ಳೋಕೆ ಒಂದು ಜನ್ಮ ಸಾಕಾಗಲ್ಲ ಕಣೋ! ನನ್ನೊಳಗೆ ಒಂದು ವೈಚಾರಿಕತೆಯ ಕಿಡಿಯನ್ನು ಇಟ್ಟವರೇ ನನ್ನ ಗುರುಗಳು. ನನ್ನ ಪ್ರೀತಿ, ಸಿಟ್ಟು ಎಲ್ಲವೂ ನಾನು ಅವರಿಂದಲೇ ಕಲಿತದ್ದು’

ಸಿಟ್ಟು ಅಂದೆನಲ್ಲ, ಅದು ನಿಜವೇ. ಅವರಲ್ಲಿ ಸಿಟ್ಟು, ಪ್ರೀತಿ ಒಂದರೊಡನೊಂದು ಸೇರಿಕೊಂಡು ಸ್ನೇಹಿತರೇ ಕನ್​ಫ್ಯೂಸ್ ಆಗಿಬಿಡುತ್ತಿದ್ದರು. ಅದಿರಲಿ.

ಹೃದಯ ಶಸ್ತ್ರಚಿಕಿತ್ಸೆ ಆದನಂತರ ಮೂರ್ನಾಲ್ಕು ವರ್ಷ ತಮ್ಮ ಕೆಲಸ ಮಾಡಿಕೊಂಡಿದ್ದರು ಸೋಮಶೇಖರ್. ಆದರೆ ನಂತರ ಒಂದಾದ ಮೇಲೊಂದು ಕಾಯಿಲೆಗಳು ಅವರನ್ನು ಆಕ್ರಮಣ ಮಾಡಿದವು. ಮತ್ತೊಂದು ಶಸ್ತ್ರಚಿಕಿತ್ಸೆಯಲ್ಲಿ ಅವರ ಕರುಳಿನಲ್ಲಿ ಏಳೆಂಟು ಇಂಚು ಕತ್ತರಿಸಿಬಿಟ್ಟರು ಡಾಕ್ಟರು. ಆಗಲೂ ಒಮ್ಮೆ ಸೋಮಶೇಖರ್ ಫೋನು ಮಾಡಿ-‘ನನಗೆ ಹೃದಯನೇ ಇಲ್ಲ ಅಂತ ಯಾವ ಮಗನೂ ಹೇಳೋ ಹಾಗಿಲ್ಲ. ಯಾಕೆಂದರೆ ಡಾಕ್ಟರೇ ಅದನ್ನು ತೆಗೆದು ನೋಡಿ ಹೇಳಿದ್ದಾರೆ. ಇನ್ನು ಮೇಲೆ ನನ್ನಲ್ಲಿ ಕರುಣೆ ಕಕ್ಕುಲಾತಿ ಇಲ್ಲ ಅಂದರೆ ಯಾರೂ ತಪು್ಪ ತಿಳಿಯೋಹಾಗಿಲ್ಲ. ಯಾಕೆಂದರೆ ನನ್ನ ಕರುಳು ಈಗ ಮೊದಲಿದ್ದಷ್ಟು ಉದ್ದ ಇಲ್ಲ. ನನ್ನ ಹೊಟ್ಟೇನ ಈ ಡಾಕ್ಟರು ನನ್ನ ಮಕ್ಳು ಕಲ್ಲಂಗಡಿ ಹಣ್ಣು ಅಂತ ತಿಳಕೊಂಡು ಕುಯ್ದಾಕಿ ಬಿಟ್ಟಿದ್ದಾರೆ ಕಣೋ!’ ಹಾಗಂತ ನನ್ನನ್ನು ನಗಿಸಿದ್ದರು.

ಅದಾದ ಮೇಲೆ ವಕ್ಕರಿಸಿದ್ದು ಕ್ಯಾನ್ಸರ್. ಅವರು ಅದಕ್ಕೂ ಹೆದರಲಿಲ್ಲ. ‘ಏನಲೇ, ಈ ನನ್ನ ಮಗನವು ಕಾಯಿಲೆಗಳು ಕ್ಯೂನಿಂತ್ಕೊಂಡು ಬರ್ತಾ ಅದಾವೆ ಕಣೋ. ಬರಲಿ ಬರಲಿ ಹೆದರ್ತೀನಾ ಮಗ ನಾನು? ಕೀಮೋಥೆರಪಿ ಮಾಡಿಸ್ಕೊಂಡು ಈ ಕ್ಯಾನ್ಸರನ್ನ ಸುಟ್ಟು ಹಾಕ್ತೀನಿ ನೋಡ್ತಾ ಇರು’

ಈ ಸೋಮಶೇಖರ್​ಗೆ ಅದೊಂದು ಬಗೆಯ ಶರಣ ನಿರ್ಲಿಪ್ತಿ. ‘ಕರುಣಬಂದರೆ ಕಾಯೋ ಮರಣ ಬಂದರೆ ಒಯ್ಯೋ, ಕರುಣೆ ಕಲ್ಯಾಣಿ ಬಸವಯ್ಯ’ ಅಂತೊಂದು ಜನಪದ ಹಾಡಿದೆಯಲ್ಲ ಅಂಥಾ ಧೋರಣೆ.

ಅವರನ್ನು ಬಲ್ಲವರಿಗೆಲ್ಲಾ ವಿಸ್ಮಯವೆಂದರೆ ಅಂಥಾ ಕಾಯಿಲೆಗಳ ಮಧ್ಯವೂ ಅವರಿಗಿರುವ ಹಾಸ್ಯಪ್ರಜ್ಞೆ. ನಿರ್ಭೀತಿ. ಯಾರೋ ಒಬ್ಬರು ‘ನನಗೊಂದಿಷ್ಟು ಜ್ವರ ತಲೆನೋವು’ ಅಂತ ಹೇಳ್ತಾರಲ್ಲ, ಅಷ್ಟೇ ಲಘುವಾಗಿ ನನಗೆ ಕ್ಯಾನ್ಸರ್ ಅಂತ ಹೇಳುವಾಗ ಅವರ ಪತ್ನಿ ದಾಕ್ಷಾಯಿಣಿಯವರೇ ಒಮ್ಮೊಮ್ಮೆ ರೇಗಿದ್ದಿದೆ. ‘ಅದ್ಯಾಕೆ ನಿಮ್ಮ ಕಾಯಿಲೆ ಬಗ್ಗೆ ಹೇಳಿ ಅವರಿಗೂ ಬೇಜಾರು ಮಾಡ್ತೀರಿ?’ ಅಂತ. ಆಗೆಲ್ಲಾ ಸೋಮಶೇಖರ್ ಅವರದು ಒಂದೇ ಉತ್ತರ. ‘ಹೇಳೋಣ ಬಿಡ್ರೀ ಇದಕಾರಂಜುವರು? ಇದಕಾರಳುಕುವರು? ಅನ್ನೋ ಹಾಗೆ ಬದುಕಬೇಕು ಕಣ್ರೀ’

ಮೊನ್ನೆ 25ನೇ ತಾರೀಕು ಸೋಮವಾರ ಬೆಳಗ್ಗೆ 6 ಗಂಟೆಗೆ ಗೆಳೆಯರಾದ ನಾಗೇಂದ್ರಪ್ಪ ಅಮೆರಿಕಾದಿಂದ ಫೋನು ಮಾಡಿ‘ ಸೋಮಶೇಖರ್ ತೀರಿಕೊಂಡ್ರಲಪಾ. ನಾನೀಗ ಅಮೆರಿಕಾದಲ್ಲಿದೀನಿ. ಮೈಸೂರಿಗೆ ಬರೋಕು ಆಗ್ತಾ ಇಲ್ಲ.’ ಅಂತ ನನಗೆ ಸುದ್ದಿ ತಿಳಿಸಿದರು.

ಹೌದು, ಚಟುವಟಿಕೆ, ತಮಾಷೆ, ವೈಚಾರಿಕತೆ, ಧೈರ್ಯ, ಕುಟುಂಬ ಪ್ರೀತಿ, ಸಾಹಿತ್ಯಕ, ಸಾಂಸ್ಕೃತಿಕ ಆಸಕ್ತಿ ಇವೆಲ್ಲದರಿಂದಲೂ ನಮ್ಮೆದುರಿನ ಒಂದು ಆದರ್ಶವಾಗಿದ್ದ ಸೋಮಶೇಖರ್ ತೀರಿಕೊಂಡಿದ್ದಾರೆ.

ಅವರದು ತುಂಬು ಬಳಗ. ಆದರೂ ದಾಕ್ಷಾಯಿಣಿ ಮೇಡಂ ದೊಡ್ಡ ಮನೆಯಲ್ಲಿ ಒಬ್ಬಂಟಿ ಕುಳಿತಿರುವಂತೆ ಭಾಸವಾಗುತ್ತಿದೆ. ಅವರ ಮಗಳು ರೂಪಾ ಮತ್ತು ಮಗ ವಿವೇಕ್ ಅವರವರ ಕುಟುಂಬದೊಂದಿಗೆ ಅಮೆರಿಕಾದಲ್ಲಿದ್ದಾರೆ. ರೂಪಾ ಹಾಡುತ್ತಾಳೆ. ವಿವೇಕ್ ತಬಲಾ ನುಡಿಸುತ್ತಾರೆ. ಹಾಮೋನಿಯಂ ನುಡಿಸಲು ಸೋಮಶೇಖರ್ ಇಲ್ಲ. ಮೈಸೂರಿನ ಸಾಂಸ್ಕೃತಿಕ ಲೋಕ ಬಡವಾದಂತೆ ಕಾಣುತ್ತಿದೆ.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top