ಮದ್ದೂರು: ವಿಶ್ವ ರಂಗಭೂಮಿ ದಿನವು ರಂಗಭೂಮಿ ಕಲೆಗಳ ಪ್ರಾಮುಖ್ಯತೆ, ಮನರಂಜನಾ ಕ್ಷೇತ್ರದಲ್ಲಿ ಅವು ಹೇಗೆ ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ರಂಗಭೂಮಿ ಜೀವನದಲ್ಲಿ ತರುವ ಬದಲಾವಣೆಗಳನ್ನು ಎತ್ತಿ ತೋರಿಸುತ್ತದೆ ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ತಿಳಿಸಿದರು.
ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಗುರುವಾರ ಕರ್ನಾಟಕ ನಾಟಕ ಅಕಾಡೆಮಿ, ಮಹಿಳಾ ಸರ್ಕಾರಿ ಕಾಲೇಜು, ಕ್ಷೀರಸಾಗರ ಮಿತ್ರಕೂಟ ಕೀಲಾರ, ಕರ್ನಾಟಕ ಜಾನಪದ ಪರಿಷತ್ತು ಮದ್ದೂರು ತಾಲೂಕು ಘಟಕ ಹಾಗೂ ರಂಗ ಚಂದಿರ ಟ್ರಸ್ಟ್ ವತಿಯಿಂದ ವಿಶ್ವ ರಂಗಭೂಮಿ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಂಗ ಸಂದೇಶ, ವಿಚಾರ ಸಂಕಿರಣ, ರಂಗ ಗೌರವ ಹಾಗೂ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಕಲಾವಿದರನ್ನು ಅಭಿನಂದಿಸಿ ಮಾತನಾಡಿದರು. ರಂಗಭೂಮಿಯು ವಿವಿಧ ರೀತಿಯ ಲಲಿತ ಕಲೆಗಳ ಸಂಯೋಜನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಪ್ರಾಮುಖ್ಯತೆ ಕ್ಷೀಣಿಸುತ್ತಿದೆ. ಹಾಗಾಗಿ ರಂಗಭೂಮಿ ಮಹತ್ವವನ್ನು ಯುವ ಜನಾಂಗಕ್ಕೆ ತಿಳಿಸಲಾಗುತ್ತಿದೆ ಎಂದರು.
ಮದ್ದೂರು ಪಟ್ಟಣದ ಹಳೇಯ ಬಸ್ ನಿಲ್ದಾಣ ನಿರುಪಯುಕ್ತವಾಗಿರುವುದರಿಂದ ಅದನ್ನು ರಂಗಮಂದಿರವನ್ನಾಗಿ ಮಾರ್ಪಾಡು ಮಾಡಬೇಕು. ಇದರಿಂದ ಕಲಾವಿದರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ರಂಗ ಗೌರವ: ರಾಮಯ್ಯ ಹುರುಗಲವಾಡಿ, ಸಿ.ಪುಟ್ಟಸ್ವಾಮಿ ಹೆಮ್ಮನಹಳ್ಳಿ, ಶಂಕರೇಗೌಡ ತೊರೆಚಾಕನಹಳ್ಳಿ, ಮದ್ದೂರು ಎಂ.ಆರ್.ವೀರಭದ್ರಾಚಾರ್, ದ್ಯಾಪೇಗೌಡ ಕೆ.ಶೆಟ್ಟಹಳ್ಳಿ, ವಿ.ಕೆ.ರಾಮಣ್ಣ ವಳಗೆರೆಹಳ್ಳಿ, ವಸಂತಮ್ಮ ಭಾರತೀನಗರ, ಬಿ.ಎಸ್.ಶಿವಕುಮಾರಸ್ವಾಮಿ ಬೂದಗುಪ್ಪೆ ಅವರಿಗೆ ಕಾರ್ಯಕ್ರಮದಲ್ಲಿ ರಂಗ ಗೌರವ ಸಲ್ಲಿಸಿ ಗೌರವಿಸಲಾಯಿತು.
ಮದ್ದೂರು ತಾಲೂಕು ರಂಗಭೂಮಿ ಕಲಾವಿದರು ರಂಗ ಗೀತೆಗಳು, ಜನಪದ ಮತ್ತು ಬೀದಿ ನಾಟಕ ಕಲಾವಿದರ ಒಕ್ಕೂಟದಿಂದ ಬೀದಿ ನಾಟಕ ಜರುಗಿತು. ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಂಗಭೂಮಿ ಕಲಾವಿದ ಪಣ್ಣೆದೊಡ್ಡಿ ಆನಂದ್ ರಂಗಭೂಮಿ ಮತ್ತು ಚಳವಳಿ ಕುರಿತು ವಿಷಯ ಮಂಡಿಸಿದರು. ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ರಂಗ ಸಂದೇಶ ನೀಡಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ಎ.ಎಸ್.ಚಂದ್ರಶೇಖರ್, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಚಾಮನಹಳ್ಳಿ ಮಂಜು, ಕ್ಷೀರ ಸಾಗರ ಮಿತ್ರ ಕೂಟದ ಅಧ್ಯಕ್ಷ ಕೆ.ಜಯಶಂಕರ್, ಸಂಚಾಲಕ ಕೀಲಾರ ಕೃಷ್ಣೇಗೌಡ, ರಂಗಭೂಮಿ ಕಲಾವಿರಾದ ಪ್ರಮೋದ್‌ಶೆಟ್ಟಿ, ಮುರುಡಯ್ಯ, ರಂಗ ನಿರ್ದೇಶಕ ವೆಂಕಟಾಚಲ ಇದ್ದರು.
