ಚಿತ್ರದುರ್ಗ: ಇತಿಹಾಸದ ಅರಿವು ಇಲ್ಲವಾದಲ್ಲಿ ಯಾವ ಸಾಧನೆಯನ್ನೂ ಮಾಡಲಾಗದು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಅಭಿಪ್ರಾಯಪಟ್ಟರು.
ರಾಜ್ಯಪತ್ರಾಗಾರ ಇಲಾಖೆ, ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ವಿಭಾಗ, ದಾವಣಗೆರೆ ವಿವಿ ಇತಿಹಾಸ ಅಧ್ಯಾಪಕರ ವೇದಿಕೆ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ‘ಚಿತ್ರದುರ್ಗ ಜಿಲ್ಲೆ ಸ್ಥಾನಿಕ ಸಂಸ್ಥಾನಗಳು’ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು ಎಂಬ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತು ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ನಾಗರಹಾವು ಸಿನಿಮಾದ ಮೂಲಕ ಚಿತ್ರದುರ್ಗದ ಏಳುಸುತ್ತಿನ ಕೋಟೆ ನಾಡಿನಾದ್ಯಂತ ಪ್ರಸಿದ್ದಿ ಪಡೆದಿದೆ. ಪ್ರತಿ ವಿಷಯಕ್ಕೂ ಒಂದೊಂದು ಇತಿಹಾಸವಿದೆ. ಉಪನ್ಯಾಸಕರು, ಪ್ರಾಧ್ಯಾಪಕರು ಚಿತ್ರದುರ್ಗವನ್ನು ಆಳಿದ ಪಾಳೇಗಾರರು, ವೀರವನಿತೆ ಒನಕೆ ಓಬವ್ವಳ ಇತಿಹಾಸ ತಿಳಿದು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು ಎಂದರು.
ಮದಕರಿನಾಯಕರ ಕಾಲದಲ್ಲಿ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಜೀವನ ಹೇಗಿತ್ತು ಎನ್ನುವುದರ ಬಗ್ಗೆ ಅರಿಯಬೇಕು. ಹಳೆಯ ಚಿತ್ರದುರ್ಗ ಜಿಲ್ಲೆ ಇತಿಹಾಸ, ಆಗು ಹೋಗುಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಎಂದ ಅವರು, ದಾವಣಗೆರೆ ವಿವಿ ಗುಡ್ಡದ ರಂಗವ್ವನಹಳ್ಳಿ ಸ್ನಾತಕೋತ್ತರ ಕೇಂದ್ರಕ್ಕೆ ವೀರವನಿತೆ ಒನಕೆ ಓಬವ್ವ ಹೆಸರಿಡಲು ತೀರ್ಮಾನಿಸಲಾಗಿದೆ ಎಂದರು.
ಸರ್ಕಾರಿ ಕಲಾ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಸ್ವಾತಂತ್ರಾೃನಂತರ ಆರಂಭವಾದ ಕಾಲೇಜುಗಳಲ್ಲಿ ಈ ಕಾಲೇಜು ಸೇರಿದೆ. ದಾವಣಗೆರೆ ವಿವಿಗೆ ಒಳಪಡುವ 130 ಕಾಲೇಜುಗಳಲ್ಲಿ ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿದೆ. ಇಂತಹ ವಿಚಾರ ಸಂಕಿರಣಗಳ ನಡಾವಳಿಗಳನ್ನು ರಾಜ್ಯಸರ್ಕಾರಕ್ಕೆ ಕಳಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಟಿ. ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಂಧ್ರಪ್ರದೇಶ ಅನಂತಪುರದ ಕೃಷ್ಣದೇವರಾಯ ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಆರ್. ಶೇಷಶಾಸ್ತ್ರಿ, ಧಾರವಾಡ ಕರ್ನಾಟಕ ವಿವಿಯ ಡಾ.ರು.ಮ. ಷಡಾಕ್ಷರಯ್ಯ, ದಾವ ಣಗೆರೆ ವಿವಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ವೆಂಕಟರಾವ್ ಎಂ. ಪಲಾಟೆ, ಸ್ನಾತಕೋತ್ತರ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಆರ್. ಶಿವಪ್ಪ, ದಾವಣಗೆರೆ ವಿವಿ ಇತಿಹಾಸ ಅಧ್ಯಾಪಕರ ವೇದಿಕೆ ಅಧ್ಯಕ್ಷ ಪ್ರೊ.ಸಿ. ಜಗದೀಶ, ಐಕ್ಯೂಎಸಿ ಸಂಚಾಲಕಿ ಡಾ.ಆರ್. ತಾರಿಣಿ ಶುಭದಾಯಿನಿ, ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ಆರ್. ಗಂಗಾಧರ್, ರಾಜ್ಯಪತ್ರಾಗಾರ ಇಲಾಖೆ ಉಪ ನಿರ್ದೇಶಕ ಡಾ. ನೆಲ್ಕುದುರಿ ಸದಾನಂದ ಇದ್ದರು.
ಚಿತ್ರದುರ್ಗಕ್ಕಿದೆ ವಿಶೇಷ ಸ್ಥಾನ
ಚಿತ್ರದುರ್ಗಕ್ಕೆ ವಿಶೇಷ, ಅಪರೂಪವಾದ ಸ್ಥಾನವಿದೆ. ಇಲ್ಲಿನ ಇತಿಹಾಸದ ಬಗ್ಗೆ ಜಗತ್ತಿನ ವಿಜ್ಞಾನಿಗಳು ಮಾತನಾಡಿದ್ದಾರೆ. ಮೊಟ್ಟ ಮೊದಲು ಜೀವದ ಉಗಮವಾಗಿದ್ದು ಚಿತ್ರದುರ್ಗದಲ್ಲಿ ಎಂದು ಅಮೆರಿಕಾದ ವಿಜ್ಞಾನಿ ಹೇಳಿದ್ದಾರೆ. ಅದಕ್ಕೆ ಇಲ್ಲಿನ ಬಂಡೆಗಳಲ್ಲಿರುವ ಪಳೆಯುಳಿಕೆಗಳೆ ಸಾಕ್ಷಿಯಾಗಬಹುದು ಎಂದು ದಿಕ್ಸೂಚಿ ಭಾಷಣ ಮಾಡಿದ ಇತಿಹಾಸ ಸಂಶೋದಕ ಡಾ.ಬಿ. ರಾಜಶೇಖರಪ್ಪ ಹೇಳಿದರು.