ಇಡಿ ದಾಳಿ ಸ್ವಾಗತಿಸುತ್ತೇನೆ

blank
blank

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆಸಿರುವುದನ್ನು ಸ್ವಾಗತಿಸುತ್ತೇನೆ. ಜೊತೆಗೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಬಳಕೆಯಾಗಬೇಕಾದ ಹಣ ಚುನಾವಣೆ ಅಕ್ರಮಕ್ಕೆ ಬಳಕೆಯಾಗಿರುವುದು ದರೋಡೆಗಿಂತ ಕ್ರೂರವಾಗಿದೆ. ವ್ಯವಸ್ಥೆಯೊಳಗಿರುವವರೇ ಸೇರಿಕೊಂಡು ಮಾಡಿಸಿರುವ ದರೋಡೆ ಇದು. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಡೆದಾಗ ನಾವು ಸ್ಪಷ್ಟವಾಗಿ ಆರೋಪ ಮಾಡಿದ್ದೆವು. ನಿಗಮದಲ್ಲಿ ಅಕ್ರಮವಾಗಿ ಲೂಟಿ ಹೊಡೆದ ೧೮೭ ಕೋಟಿ ಹಣ ಆಭರಣದ ಅಂಗಡಿಗಳಿಗೆ, ಪೋರ್ಶೆ ಶೋರೂಂಗೆ , ಬಾರ್‌ಗಳಿಗೆ ಹಾಗೂ ಲೋಕಸಭಾ ಚುನಾವಣೆಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದೆವು. ಇದೀಗ ಇಡಿ ದಾಳಿ ಮಾಡಿದೆ. ಸರ್ಕಾರ ನೇಮಕ ಮಾಡಿದ ಸಿಐಡಿ ನಾವು ಮಾಹಿತಿ ನೀಡಿದರೂ ಸರಿಯಾದ ರೀತಿಯಲ್ಲಿ ತನಿಖೆ ಮಾಡಿರಲಿಲ್ಲ ಎಂದು ಆರೋಪಿಸಿದರು.
ಕಾಂತರಾಜ ವರದಿಯನ್ನು ರಾಜ್ಯ ಸರ್ಕಾರ ವೈಜ್ಞಾನಿಕ ಎಂದು ಸಮರ್ಥನೆ ಮಾಡುತ್ತಿತ್ತು. ಸಿಎಂ ಸಿದ್ದರಾಮಯ್ಯ ಇದು ನಮ್ಮ ಮಹತ್ವಾಕಾಂಕ್ಷೆ ಎನ್ನುತ್ತಿದ್ದರು. ಜಯಪ್ರಕಾಶ್ ಹೆಗ್ಡೆ ಅವರು ನಾನು ವರದಿ ಪರಿಶೀಲನೆ ನಡೆಸಿ ಸ್ಕೂಟ್ನಿ ನಡೆಸಿದ್ದೇನೆ. ಎಂದಿದ್ದರು. ಇದಕ್ಕಾಗಿ ನೂರಾರು ಕೋಟಿ ರೂ. ಖರ್ಚು ಮಾಡಿದ್ದಾರೆ. ಈಗ ಮತ್ತೆ ಜಾತಿಗಣತಿ ಎನ್ನುತ್ತಿದ್ದಾರೆ. ಸರ್ಕಾರದ ಬೊಕ್ಕಸದಿಂದ ನೂರಾರು ಕೋಟಿ ರೂ. ಖರ್ಚು ಮಾಡಿ ಮೊದಲು ಮಾಡಿದ ವರದಿ ಅವೈಜ್ಞಾನಿಕ ಎಂದು ಸರ್ಕಾರ ಒಪ್ಪಿಕೊಳ್ಳುತ್ತದೆಯೇ? ಅವೈಜ್ಞಾನಿಕ ಎಂದು ಒಪ್ಪಿಕೊಳ್ಳುವುದೇ ಆದಲ್ಲಿ ವರದಿ ತಯಾರಿಸಲು ಬಳಕೆ ಮಾಡಿದ ನೂರಾರು ಕೋಟಿ ರೂ. ಹಣವನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ಜನಗಣತಿ ಜೊತೆಗೆ ಜಾತಿಗಣತಿ ಮಾಡುವ ಸಂವಿಧಾನದತ್ತ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಆದರೆ ರಾಜ್ಯ ಸರ್ಕಾರ ರಾಜಕೀಯ ಕಾರಣಕ್ಕೆ ವಿಷಯಾಂತರ ಗೊಳಿಸಲು ಮತ್ತೆ ಜಾತಿಗಣತಿ ಎನ್ನುತ್ತಿದ್ದಾರೆ. ಇಚ್ಛಾಶಕ್ತಿ ಇಲ್ಲದ ರಾಜಕೀಯ ತೆವಲಿಗೆ ಜಾತಿ ದುರ್ಬಳಕೆ ಮಾಡಿಕೊಳ್ಳಲು, ಜಾತಿ ಜಾತಿ ಎತ್ತಿಕಟ್ಟಲು ಸರ್ಕಾರದ ಹಣ ಏಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಕಾಂತರಾಜ ವರದಿ ವೈಜ್ಞಾನಿಕ ಎಂದು ಇಷ್ಟು ದಿನಗಳ ಕಾಲ ಹೇಳುವ ಮೂಲಕ ಜನರಿಗೆ ಮಂಕುಬೂದಿ ಎರಚಿದ್ದೀರಾ? ಅಥವಾ ನಿಮ್ಮ ಕೈಕಮಾಂಡ್ ಒತ್ತಡಕ್ಕೆ ಜಾತಿ ವರದಿ ಬಲಿಯಾಯಿತೇ?. ಕಾಂತರಾಜ್ ವರದಿಗೆ, ದಲಿತರಿಗೆ ಹಾಗೂ ನಿಮ್ಮನ್ನು ನಂಬಿದ ಯಾರಿಗೂ ನ್ಯಾಯವೇ ಇಲ್ಲ ಎನ್ನುವಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಂಗಪುರ ಒಂದು ಕಾಲದಲ್ಲಿ ರೋಗಗ್ರಸ್ಥವಾದ ಸಣ್ಣ ಹಳ್ಳಿಯಾಗಿತ್ತು. ಆದರೆ ಬಳಿಕ ಅದನ್ನು ಅಲ್ಲಿನವರು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದರು. ಬೆಂಗಳೂರು ಹೆಸರಿನಲ್ಲಿ ಕಾಂಗ್ರೆಸ್ಸಿಗರು ತಮ್ಮ ಬೇಳೆ ಬೆಳೆಸಿಕೊಳ್ಳುತ್ತಿದ್ದಾರೆ. ಆದರೆ ಇವರಿಗೆ ತುಮಕೂರಿನ ಹೆಸರನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ತನ್ನ ಊರನ್ನೇ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಕೆಂಪೇಗೌಡರು ಕಟ್ಟಿದ ಬೆಂಗಳೂರು ಹೆಸರಿನಲ್ಲಿಯೇ ಕಾಂಗ್ರೆಸ್ಸಿಗರು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿದ್ದಾರೆ. ಇಡೀ ರಾಜ್ಯವನ್ನೇ ಬೆಂಗಳೂರು ಎಂದು ಮಾಡಿಕೊಳ್ಳಲಿ. ತಮ್ಮ ಊರನ್ನು ಬ್ರಾಂಡ್ ಮಾಡಬೇಕು ಎಂಬ ಇಚ್ಛಾ ಶಕ್ತಿ ಕಾಂಗ್ರೆಸ್ಸಿನ ಯಾರಿಗೂ ಇಲ್ಲ ಎಂದು ಕುಟುಕಿದರು.

Share This Article

ಸಂಜೆ 7 ಗಂಟೆಯೊಳಗೆ ಊಟ ಮಾಡಿದರೆ ನಿಮ್ಮ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..? Dinner

Dinner: ನಿಮ್ಮ ದೇಹವು ಸಿರ್ಕಾಡಿಯನ್ ಲಯ ಎಂದು ಕರೆಯಲ್ಪಡುವ ಆಂತರಿಕ ಗಡಿಯಾರವನ್ನು ಹೊಂದಿದೆ ಮತ್ತು ಇದು…