ಇಡಿಗಂಟು ಕಳೆದುಕೊಂಡ 11 ಅಭ್ಯರ್ಥಿಗಳು

ಕಾರವಾರ: ಉತ್ತರ ಕನ್ನಡ ಲೋಕಸಭಾ ಕಣದಲ್ಲಿದ್ದ 13 ಅಭ್ಯರ್ಥಿಗಳ ಪೈಕಿ 11 ಜನರು ಇಡಿಗಂಟು ಕಳೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಾಮಾನ್ಯ ಅಭ್ಯರ್ಥಿಗಳು ತಲಾ 25 ಸಾವಿರ ಹಾಗೂ ಎಸ್​ಸಿ, ಎಸ್​ಟಿ ಅಭ್ಯರ್ಥಿಗಳು 12,500 ರೂ.ಗಳನ್ನು ಪಾವತಿಸಿದ್ದರು.

ನಿಯಮದ ಪ್ರಕಾರ ಒಟ್ಟಾರೆ ಚಲಾವಣೆಯಾದ ಮಾನ್ಯ ಮತಗಳ ಪೈಕಿ ಶೇ. 16.6 ಭಾಗ ಮತ ಗಳಿಸಿದವರಿಗೆ ಮತ ಎಣಿಕೆಯ ನಂತರ ಇಡಿಗಂಟನ್ನು ವಾಪಸ್ ನೀಡಲಾಗುವುದು. ಅಷ್ಟು ಮತ ಪಡೆಯದೇ ಇದ್ದಲ್ಲಿ ಆ ಠೇವಣಿಯನ್ನು ಜಪ್ತಿ ಮಾಡಲಾಗುವುದು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ 11,37,463 ಮತಗಳು ಚಲಾವಣೆಯಾಗಿವೆ. ಅದರ ಶೇ. 16.6 ಎಂದರೆ 1,88,818 ಮತಗಳನ್ನು ಗಳಿಸಿದವರು ಮಾತ್ರ ಇಡಿಗಂಟು ವಾಪಸ್ ಪಡೆಯಲು ಅರ್ಹರು. ಗೆದ್ದ ಅಭ್ಯರ್ಥಿ ಅನಂತ ಕುಮಾರ ಹೆಗಡೆ, ಆನಂದ ಅಸ್ನೋಟಿಕರ್ 3,06,393 ಮತ ಪಡೆದಿದ್ದು, ಅವರು ಠೇವಣಿ ವಾಪಸ್ ಪಡೆಯಲು ಅರ್ಹರು. ಉಳಿದ 11 ಅಭ್ಯರ್ಥಿಗಳ ಇಡಿಗಂಟು ಜಪ್ತಿಯಾಗಿದೆ.

ಮತ ಎಣಿಕೆ ನಡೆದಿದ್ದು ಹೇಗೆ?: ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಮತ ಯಂತ್ರಗಳನ್ನು ಪ್ರತ್ಯೇಕವಾಗಿ ಒಂದೊಂದು ಕೊಠಡಿಯಲ್ಲಿ ಎಣಿಕೆ ಮಾಡಲಾಯಿತು. ಇನ್ನೊಂದು ಕೊಠಡಿಯಲ್ಲಿ 4154 ಅಂಚೆ ಮತಗಳನ್ನು ಎಣಿಸಲಾಯಿತು. 7.30 ಕ್ಕೆ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಮತ ಯಂತ್ರವನ್ನಿಟ್ಟ ಕೊಠಡಿಗಳನ್ನು ತೆರೆಯಲಾಯಿತು. 8 ಗಂಟೆಗೆ ಸರಿಯಾಗಿ ಎಣಿಕೆ ಪ್ರಾರಂಭವಾಯಿತು. ಪ್ರತಿ ಕೊಠಡಿಯಲ್ಲಿ 14 ಟೇಬಲ್​ಗಳನ್ನು ಹಾಕಲಾಗಿತ್ತು. ಪ್ರತಿ ಟೇಬಲ್​ಗೆ ಒಬ್ಬ ಎಣಿಕೆ ಅಧಿಕಾರಿ ಒಬ್ಬ ಸಹಾಯಕ ಹಾಗೂ ಡಿ ದರ್ಜೆ ನೌಕರ ಎಣಿಕೆ ಕಾರ್ಯ ನಿರ್ವಹಿಸಿದರು. ಪ್ರತಿ ಟೇಬಲ್​ಗೂ ಒಬ್ಬ ಸೇರಿ ಒಟ್ಟು 128 ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿತ್ತು. ಚುನಾವಣಾ ವೀಕ್ಷಕ ನವೀನ ಎಸ್.ಎಲ್. ಮತ ಎಣಿಕೆ ವೀಕ್ಷಕ ಚಂದ್ರಶೇಖರ ವಲಿಂಬೆ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ನೇತೃತ್ವ ವಹಿಸಿದ್ದರು.

ಕೈ ಕೊಟ್ಟ ಮತ ಯಂತ್ರ: ಹಳಿಯಾಳ ವಿಧಾನಸಭಾ ಕ್ಷೇತ್ರದ 170 ನೇ ಮತಗಟ್ಟೆಯ ಮತ ಯಂತ್ರ ಎಣಿಕೆಯ ಸಂದರ್ಭದಲ್ಲಿ ಬಿದ್ದ ಮತಗಳನ್ನೇ ಸಮರ್ಪಕವಾಗಿ ತೋರಿಸುತ್ತಿರಲಿಲ್ಲ. ಅಧಿಕಾರಿಗಳು ಸಾಕಷ್ಟು ಪ್ರಯತ್ನ ನಡೆಸಿದರೂ ಯಂತ್ರ ಸರಿಯಾಗದ ಕಾರಣ ವಿವಿ ಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಿ ಅದನ್ನು ಮತ ಯಂತ್ರದ ಲೆಕ್ಕಕ್ಕೆ ತೋರಿಸಲಾಯಿತು. ಈ ಕುರಿತು ಆಯೋಗಕ್ಕೆ ಮಾಹಿತಿ ನೀಡಲಾಯಿತು.

ನೋಟಾಕ್ಕೆ ಮೂರನೇ ಸ್ಥಾನ!: ಬಿಜೆಪಿ ಅಭ್ಯರ್ಥಿ ಅನಂತ ಕುಮಾರ ಹೆಗಡೆ ಭಾರಿ ಅಂತರದಿಂದ ಗೆಲುವು ಸಾಧಿಸಿದರೆ ಮೂರನೇ ಸ್ಥಾನವನ್ನು ನೋಟಾ ಪಡೆದುಕೊಂಡಿದೆ. ನೋಟಾಕ್ಕೆ 15997 ಮತಗಳು ಇವಿಎಂ ಯಂತ್ರಗಳಿಂದ ದೊರೆತರೆ 20 ಅಂಚೆ ಮತಗಳು ನೋಟಾಕ್ಕೆ ಚಲಾವಣೆಯಾಗಿವೆ.

ಶೌಚಗೃಹವಿಲ್ಲದೆ ತೊಂದರೆ: ಮತ ಎಣಿಕೆ ಕೇಂದ್ರದಲ್ಲಿ ಒಂದೇ ಕಡೆ ಶೌಚಗೃಹ ವ್ಯವಸ್ಥೆ ಮಾಡಲಾಗಿತ್ತು. 1400 ಕ್ಕೂ ಅಧಿಕ ಮತ ಎಣಿಕೆ, ಭದ್ರತಾ ಸಿಬ್ಬಂದಿ, ಎಣಿಕೆ ಏಜೆಂಟರು ಸೇರಿದ್ದರಿಂದ ಸಂದಣಿ ಉಂಟಾಗಿ ತೊಂದರೆ ಅನುಭವಿಸಬೇಕಾಯಿತು.

ಬಿಗಿ ಭದ್ರತೆ: ಮತ ಎಣಿಕೆ ನಡೆಯುತ್ತಿರುವ ಕುಮಟಾ ಎ.ವಿ. ಬಾಳಿಗಾ ಕಾಲೇಜ್​ನ ಸುತ್ತ ಭಾರಿ ಭದ್ರತೆ ಆಯೋಜಿಸಲಾಗಿತ್ತು. ಎಸ್​ಪಿ ವಿನಾಯಕ ಪಾಟೀಲ ನೇತೃತ್ವದಲ್ಲಿ ಎಎಸ್​ಪಿ, ಮೂವರು ಡಿವೈಎಸ್​ಪಿಗಳು, 10 ಸಿಪಿಐ, 19 ಪಿಎಸ್​ಐ, 29 ಎಎಸ್​ಐ, 650 ಪೊಲೀಸ್ ಸಿಬ್ಬಂದಿ, 300 ಹೋಂ ಗಾರ್ಡ್​ಗಳು, ಕೇಂದ್ರೀಯ ಭದ್ರತಾ ಪಡೆಯ ಒಂದು ಫ್ಲಟೂನ್, 5 ಕೆಎಸ್​ಆರ್​ಪಿ, 6 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಬಾಂಬ್ ನಿಷ್ಕ್ರಿಯ ದಳ ನಿಯೋಜಿಸಲಾಗಿತ್ತು. ಮೊಬೈಲ್​ಗಳನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಎಣಿಕೆ ಸಿಬ್ಬಂದಿಗೆ ಕಾಲೇಜ್​ನ ಆವರಣದ ಒಳಗೇ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿತ್ತು.

ಕೊನೆಯ ದಿನದವರೆಗೂ ಬಂದ ಅಂಚೆ ಮತಗಳು: ಗುರುವಾರ ಮತ ಎಣಿಕೆ ಪ್ರಾರಂಭವಾಗುವ ಕೊನೆಯ ಕ್ಷಣದವರೆಗೂ ಅಂಚೆ ಮತಗಳನ್ನು ಪಡೆಯಲು ಅವಕಾಶವಿದೆ. ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಅಂಚೆ ಮತಗಳು ಬಂದಿದ್ದವು. ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಹಾಗೂ ರಕ್ಷಣಾ ಪಡೆಗಳಲ್ಲಿ ಇರುವ ಸಿಬ್ಬಂದಿಗೆ ಅಂಚೆ ಮತದಾನಕ್ಕೆ ಅವಕಾಶವಿದೆ. ಗುರುವಾರದವರೆಗೂ ಮತಗಳು ಅಂಚೆ ಮೂಲಕ ಬರುತ್ತಲೇ ಇದ್ದವು. ಒಟ್ಟಾರೆ 4109 ಅಂಚೆ ಮತಗಳು ಕ್ರೋಡೀಕರಣವಾಗಿವೆ. ಅವುಗಳಲ್ಲಿ 910 ಮತಗಳು ವಿವಿಧ ಕಾರಣಗಳಿಂದ ತಿರಸ್ಕೃತವಾಗಿವೆ. 3199 ಮಾನ್ಯ ಮತಗಳಲ್ಲಿ ಬಿಜೆಪಿಗೆ 2831, ಜೆಡಿಎಸ್​ಗೆ 263 ಬಿಎಸ್​ಪಿಗೆ 40 ಮತಗಳು ಚಲಾವಣೆಯಾಗಿವೆ.

Leave a Reply

Your email address will not be published. Required fields are marked *