Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಇಂದು, ಹಾಲು ಕಡೆದು ಅಮೃತ ಕೊಟ್ಟ ಪುಣ್ಯಾತ್ಮನ ಜನ್ಮದಿನ

Sunday, 26.11.2017, 3:04 AM       No Comments

ವರ್ಗೀಸ್ ಕುರಿಯನ್ ಸೃಷ್ಟಿಸಿದ ಹಾಲಿನ ಹೊಳೆ ನಮ್ಮ ದೇಶದಲ್ಲಿ ಮುಂದೆಯೂ ಹರಿಯುತ್ತಿರುತ್ತದೆ. ರಾಷ್ಟ್ರದ ಕ್ಷೀರಕ್ರಾಂತಿಗೆ ದಿಕ್ಕುದೆಸೆ ಒದಗಿಸಿದ ಅವರು ರೈತಾಪಿ ವರ್ಗದ ಪಾಲಿಗೆ ಪ್ರಾತಃಸ್ಮರಣೀಯರು. ಕಳೆದ ಕೆಲವು ವರ್ಷಗಳಿಂದ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಹಾಲಿನ ದಿನ’ ಎಂದು ಆಚರಿಸಲಾಗುತ್ತಿದೆ.

‘ಹತ್ತಿ ಬೆಳೆದ್ರೂ ಬೆತ್ತಲೆ, ಹಳ್ಳು (ಹರಳು) ಬೆಳೆದ್ರೂ ಕತ್ತಲೆ!’

-ಹಾಗಂತ ಒಂದು ಗಾದೆಮಾತಿದೆ ನಮ್ಮ ಕಡೆ. ಇದು ನಮ್ಮ ರೈತಾಪಿ ಜನರ ಕಾರ್ಪಣ್ಯವನ್ನು ಹೇಳೋದಕ್ಕೆ ಹುಟ್ಟಿರೋ ಮಾತು. ಅದರರ್ಥ- ರೈತರು ಬೆವರು ಬಸಿದು ಹತ್ತಿ ಬೆಳೆಯುತ್ತಾರೆ. ಆ ಹತ್ತಿ ನೂಲಾಗುತ್ತದೆ, ನೂಲು ಬಟ್ಟೆಯಾಗುತ್ತದೆ. ಆ ಬಟ್ಟೆಯುಡುವವರು ಯಾರೋ! ಬೆಳೆದ ರೈತನ ಬದುಕು ಮಾತ್ರ ಬೆತ್ತಲೇ! ಹಾಗೇ ಹರಳು ಬೆಳೆಯುವವನೂ ರೈತನೇ. ಆ ಹರಳನ್ನು ಕುಟ್ಟಿ ಬೇಯಿಸಿ ಬಸಿದರೆ ಎಣ್ಣೆ (ಹರಳೆಣ್ಣೆ) ಬರುತ್ತದೆ. ಆ ಎಣ್ಣೆ ಉರಿದು ಬೆಳಕಾಗುವುದು ಯಾರ ಮನೆಯೋ! ಹರಳು ಬೆಳೆದ ರೈತನ ಮನೆ ಮಾತ್ರ ಕತ್ತಲೇ! ಒಂದು ಗಂಟೆ ಮಾತಾಡಿದರೂ ಹೇಳಲಾಗದ ರೈತನ ಒಡಲುರಿಯನ್ನು ಇದೊಂದು ಗಾದೆ ಹೇಳಿಬಿಡುತ್ತದೆ.

ನಾವೇ ನೋಡಿದ್ದೇವಲ್ಲ!

ಟೊಮ್ಯಾಟೊ, ಬೆಂಡೆ, ಬದನೆ, ಕೋಸು, ಮೂಲಂಗಿ ಬೆಳೆದ ರೈತ ಅದನ್ನು ಬಿಡಿಸಿ ಗೂಡೆ ತುಂಬಿಕೊಂಡು, ಲಾರಿ ಹತ್ತಿಕೊಂಡು ಬಂದು ಸಿಟಿ ಮಾರ್ಕೆಟ್ಟಿನ ಯಾರ್ಡಿನಲ್ಲಿಳಿಸಿ ಆಸೆಗಣ್ಣು ಬಿಟ್ಟುಕೊಂಡು ಕಾಯುತ್ತಾನೆ. ಮನೆಯಲ್ಲಿ ಸ್ನಾನ ಮಡಿ ಮಾಡಿಕೊಂಡು, ಬಿಳಿಬಿಳಿ ಬಟ್ಟೆ ಹಾಕಿಕೊಂಡು, ಕೈಗೆ ರ್ಯಾಡೋ ವಾಚು ಕಟ್ಟಿಕೊಂಡು ದೊಡ್ಡ ಕಾರಿನಲ್ಲಿ ಬರುವ ದಲ್ಲಾಳಿ ಹತ್ತೇ ನಿಮಿಷಗಳಲ್ಲಿ, ಆ ಬಡಪಾಯಿಯ ಆಸೆಗಳನ್ನು, ರಟ್ಟೆಬಲವನ್ನು, ಮೈಬೆವರನ್ನು ಆರುಕಾಸಿಗೆ ಹರಾಜುಹಾಕಿ ಅದರಲ್ಲೂ ಮೂರುಕಾಸು ಕಮಿಷನ್ ಮುರಿದುಕೊಂಡು ಉಳಿದದ್ದನ್ನು ಅವನ ಮೊಕದ ಮೇಲೆ ಬಿಸಾಕಿ ಕಾರು ಹತ್ತುತ್ತಾನೆ. ಬೆಳೆದು ತಂದ ರೈತ ತನ್ನ ಹೊಟ್ಟೆ ತಾನೇ ಹಿಸುಕಿಕೊಂಡು, ತನ್ನ ಕಣ್ಣೀರು ತಾನೇ ಕುಡಿದುಕೊಂಡು, ಮಕ್ಕಳ ಕೈಗಿಷ್ಟು ಬುರುಗಲು ಬತ್ತಾಸನ್ನೂ ತೆಗೆದುಕೊಳ್ಳದೆ ‘ಮುಂದಿನ ಸಾರಿ ರೇಟು ಬಂದಾಗ ತಕ್ಕೊಂಡರಾಯಿತು’ ಅಂದುಕೊಂಡು, ಊರ ಕಡೆ ಹೋಗೋ ಲಾರಿಗೆ ಕೈತೋರಿಸುತ್ತಾನೆ. ‘ಬೇಸಾಯ, ನೀಸಾಯ, ನಿನ್ನೆಂಡ್ರು ಸಾಯ, ನಿನ್ನ ಮನೆ ಮಕ್ಕಳೆಲ್ಲ ಸಾಯ’ ಅನ್ನೋ ಗಾದೆ ಸುಮ್ಮನೆ ಹುಟ್ಟಿದೆಯಾ?! ಭತ್ತ, ಕಬ್ಬು, ತೆಂಗು, ಅಡಕೆ, ಯಾಲಕ್ಕಿ, ಮೆಣಸು, ಈರುಳ್ಳಿ, ಬೆಳ್ಳುಳ್ಳಿ, ತೊಗರಿ, ಉದ್ದು- ಯಾವುದನ್ನು ಬೆಳೆದರೂ ರೈತ ಉದ್ಧಾರವಾಗಲಿಲ್ಲ. ಹಳ್ಳಿಗಳಲ್ಲಿ ದುಡ್ಡು ಉಳಿಯಲಿಲ್ಲ. ಹುಟ್ಟುವ ಅಷ್ಟಿಷ್ಟು ಕಾಸನ್ನೂ ನಮ್ಮ ಖೋಡೆ, ಮಲ್ಯರು ಬಾಚಿಕೊಂಡು ಬಂದು ಬ್ಯಾಂಕಿಗೆ ಹಾಕಿಕೊಳ್ಳುತ್ತಾರೆ.

ರೈತಾಪಿ ಜನರನ್ನು ಭೂತಾಯಿ ಕೈಬಿಟ್ಟರೂ ಗೋತಾಯಿ ಕೈಬಿಡಲಿಲ್ಲ. ಎಮ್ಮೆ, ಕುರಿ, ಆಡು ಅವರನ್ನೊಂದಿಷ್ಟು ಸಾಕಿಕೊಂಡವು. ಈವತ್ತು ನಮ್ಮ ಹಳ್ಳಿಗಳಲ್ಲಿ ಎಷ್ಟೋ ಬಡರೈತರ ಮನೆಯ ಒಲೆ ಉರಿಯುತ್ತಿದ್ದರೆ, ಒಲೆಯ ಮೇಲೆ ಹಿಟ್ಟೋ ರೊಟ್ಟಿಯೋ ಬೇಯುತ್ತಿದ್ದರೆ ಅದಕ್ಕೆ ಕಾರಣ ಹುಲ್ಲು ತಿಂದು ಹಾಲು ಕೊಡುವ ಹಸು-ಎಮ್ಮೆಗಳು. ಆ ಹಾಲಿನ ಸೊಸೈಟಿಗಳು.

ಇದು ನಮ್ಮ ಕಣ್ಣೆದುರಿಗೇ ಆದ ಕ್ರಾಂತಿ- ಕ್ಷೀರಕ್ರಾಂತಿ. ಇಂಗ್ಲಿಷಿನಲ್ಲಿ ’ಗಜಜಿಠಿಛಿ ್ಕಡಟ್ಝ್ಠಜಿಟ್ಞ’ ಅನ್ನುತ್ತಾರೆ. ಈವತ್ತು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಹಾಲು ಉತ್ಪಾದಿಸುವ ದೇಶ ನಮ್ಮ ಭಾರತ. ಈ ಕ್ಷೀರಕ್ರಾಂತಿಯನ್ನು ಆಗುಮಾಡಿದ ಪುಣ್ಯಾತ್ಮನ ಹೆಸರು ವರ್ಗೀಸ್ ಕುರಿಯನ್. ಈವತ್ತು ಅವರ ಹುಟ್ಟಿದ ದಿನ. ಈಗ ನಮ್ಮ ದೇಶದಲ್ಲಿ ಹಾಲು ಕರೆಯುವವರು, ಹಾಲು ಕುಡಿಯುವವರು ಆ ಮಹಾನುಭಾವನ ಹೆಸರು ಹೇಳಬೇಕು.

ವರ್ಗೀಸ್ ಕುರಿಯನ್ ಹುಟ್ಟಿದ್ದು ಕೇರಳದ ಕಲ್ಲಿಕೋಟೆಯಲ್ಲಿ 1921ರ ನವೆಂಬರ್ 26ರಂದು. ಅವರ ತಂದೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಗೋಪಿಚೆಟ್ಟಿ ಪಾಳ್ಯಂನ ಸರ್ಕಾರಿ ಆಸ್ಪತ್ರೆಯಲ್ಲಿ ಸಿವಿಲ್ ಸರ್ಜನ್ ಆಗಿದ್ದರು. ಅವರ ಬಾಲ್ಯದ ವಿದ್ಯಾಭ್ಯಾಸ ನಡೆದದ್ದು ಅಲ್ಲಿಯೇ. ಮುಂದೆ ಗಿಂಡಿಯ ಇಂಜಿನಿಯರಿಂಗ್ ಕಾಲೇಜು ಸೇರಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು (1943). ಅದೇ ಸಮಯದಲ್ಲಿ ತಂದೆ ತೀರಿಕೊಂಡರು. ಕಾಲೇಜಿನಲ್ಲಿದ್ದಾಗ ಬಾಕ್ಸಿಂಗ್ ಕಲಿತಿದ್ದ, ಮಿಲಿಟರಿ ಕೆಡೆಟ್ ಆಗಿದ್ದ ಕುರಿಯನ್​ಗೆ ಭಾರತೀಯ ಸೇನೆಯಲ್ಲಿ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರುವ ಅಭಿಲಾಷೆಯಿತ್ತು. ಆದರೆ ತಾಯಿಯ ಒತ್ತಾಯದಿಂದ, ಆಗ ಅವರ ಕುಟುಂಬಕ್ಕೆ ಒತ್ತಾಸೆಯಾಗಿದ್ದ ಅವರ ತಾಯಿಯ ಚಿಕ್ಕಪ್ಪನವರ ಶಿಫಾರಸಿನ ಮೇಲೆ ಜೆಮ್ೆಡ್​ಪುರದ ಟಾಟಾ ಉಕ್ಕು ತಂತ್ರಜ್ಞಾನ ಸಂಸ್ಥೆಯ ಉದ್ಯೋಗಿಯಾದರು. ಸ್ವತಂತ್ರ ಪ್ರವೃತ್ತಿಯನ್ನು ಅದಾಗಲೇ ಬೆಳೆಸಿಕೊಂಡಿದ್ದ ಕುರಿಯನ್​ಗೆ ತಾತನ ಹಂಗಿನಲ್ಲಿರುವುದೂ ಇಷ್ಟವಿರಲಿಲ್ಲ (ಅವರ ತಾತ ಆಗ ಆ ಸಂಸ್ಥೆಯ ನಿರ್ದೇಶಕ ಮಂಡಲಿಯಲ್ಲಿದ್ದರು). ಹಾಗಾಗಿ ಇಷ್ಟವಿಲ್ಲದಿದ್ದರೂ ಡೇರಿ ಇಂಜಿನಿಯರಿಂಗ್​ನಲ್ಲಿ ಭಾರತ ಸರ್ಕಾರದ ಸ್ಕಾಲರ್​ಷಿಪ್​ಗಾಗಿ ಅರ್ಜಿ ಹಾಕಿಕೊಂಡರು. ಸ್ಕಾಲರ್​ಷಿಪ್ ಸಿಕ್ಕಿತು ಕೂಡಾ. ಆಗ ಅವರು ಬೆಂಗಳೂರಿನ ಇಂಪೀರಿಯಲ್ ಇನ್ಸ್​ಟಿಟ್ಯೂಟ್ ಆಫ್ ಅನಿಮಲ್ ಹಸ್ಬೆಂಡರಿಗೆ ಬಂದು 9 ತಿಂಗಳ ಕಾಲ ಡೇರಿ ಇಂಜಿನಿಯರಿಂಗ್ ಅಧ್ಯಯನ ಮಾಡಿದರು. ಅನಂತರ ಅವರಿಗೆ ಅಮೆರಿಕದ ಮಿಶಿಗನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಲು ಅವಕಾಶ ದೊರೆಯಿತು. 1948ರಲ್ಲಿ ಅಲ್ಲಿಯೂ ಮಾಸ್ಟರ್ಸ್ ಪದವಿ ಪಡೆದ ಮೇಲೆ ಅಮೆರಿಕನ್ನರ ವರ್ಣ ತಾರತಮ್ಯದ ಕಹಿ ಅನುಭವಿಸಿ ಮತ್ತೆ ಡೇರಿ ಇಂಜಿನಿಯರಿಂಗ್​ಗೇ ಮರಳಬೇಕಾಯಿತು. ಡೇರಿ ಇಂಜಿನಿಯರಿಂಗ್​ನಲ್ಲೇ ಭಾರತ ಸರ್ಕಾರದ ಪ್ರಾಯೋಜಕತ್ವ ಪಡೆದು ನ್ಯೂಜಿಲೆಂಡ್, ಆಸ್ಟ್ರೇಲಿಯಾ ದೇಶಗಳಿಗೆ ಹೋಗಿ ಸಹಕಾರ ಪದ್ಧತಿಯ ಡೇರಿ ಪದ್ಧತಿಯ ಅಧ್ಯಯನ ಮಾಡಿದರು.

ಈ ನಡುವೆ ಗುಜರಾತ್​ನ ಖೇಡಾ ಜಿಲ್ಲೆಯಲ್ಲಿ ಒಂದು ಪ್ರಯೋಗ ನಡೆದಿತ್ತು. ಈ ಪ್ರಯೋಗದ ನೇತಾರರು ಗಾಂಧೀಜಿ ಮತ್ತು ವಲ್ಲಭಭಾಯಿ ಪಟೇಲ್ ವ್ಯಕ್ತಿತ್ವದಿಂದ ಗಾಢವಾಗಿ ಪ್ರಭಾವಿತರಾದ ತ್ರಿಭುವನದಾಸ್ ಕಾಶಿಭಾಯಿ ಪಟೇಲ್. ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಭಾಗವಹಿಸಿದ್ದ ತ್ರಿಭುವನದಾಸ್​ಗೆ ಗುಜರಾತಿನ ಆ ಭಾಗದಲ್ಲಿ ಮತ್ತೆಮತ್ತೆ ಎದುರಾಗುತ್ತಿದ್ದ ಬರ ಪರಿಸ್ಥಿತಿಯಿಂದ ಕಂಗಾಲಾಗಿದ್ದ ರೈತರಿಗಾಗಿ ಏನಾದರೊಂದು ಮಾಡಬೇಕೆಂಬ ಬಯಕೆಯಿತ್ತು. ತ್ರಿಭುವನ್​ದಾಸರು ಕೆಲವು ರೈತರನ್ನು ಒಟ್ಟುಗೂಡಿಸಿ ಹಾಲು ಉತ್ಪಾದನೆ ಮಾಡಿ ಆ ಹಾಲನ್ನು ಮುಂಬಯಿ ಮಹಾನಗರಕ್ಕೆ ಸರಬರಾಜು ಮಾಡಿ ಸಾಮೂಹಿಕ ಬಂಡವಾಳ ಸ್ಥಾಪಿಸುವ ಯೋಜನೆ ಹಾಕಿದ್ದರು. ಆದರೆ ಖೇಡಾ ಜಿಲ್ಲೆಯಿಂದ ಮುಂಬಯಿಗೆ ಸುಮಾರು 400 ಕಿ.ಮೀ.ಗಳಷ್ಟು ದೂರ. ಎಷ್ಟೇ ಕಾಳಜಿ, ಎಚ್ಚರಿಕೆ ವಹಿಸಿದರೂ ಎಷ್ಟೋ ಬಾರಿ ಹಾಲು ಮುಂಬಯಿ ತಲುಪುವಷ್ಟರಲ್ಲಿ ಒಡೆದು ಹೆಪ್ಪಾಗಿಬಿಡುತ್ತಿತ್ತು. ಆ ಸಮಯದಲ್ಲಿ ಅಕಸ್ಮಾತ್ ಅನ್ನುವಂತೆ ತ್ರಿಭುವನ್​ದಾಸ್ ಸಂಪರ್ಕಕ್ಕೆ ಬಂದವರು ವರ್ಗೀಸ್ ಕುರಿಯನ್. ಆಗಲೇ ಕುರಿಯನ್ ಅಲ್ಲೊಂದು ಹಾಲಿನಪುಡಿ ತಯಾರಿಸುವ ಪ್ರಯೋಗವನ್ನು ರೂಪಿಸಿದರು. ಆ ಘಟಕ ಆರಂಭವಾದುದು ಗುಜರಾತಿನ ಆನಂದ್​ನಲ್ಲಿ. ಅಲ್ಲಿ ಆರಂಭವಾದುದೇ ‘ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್’ (AMUL). ಅದೇ ಭಾರತದ ಹಾಲಿನ ರಾಜಧಾನಿ. ಅದೇ ಈ ದೇಶದ ಕ್ಷೀರಕ್ರಾಂತಿಯ ಗಂಗೋತ್ರಿ. ಜಗತ್ತಿನಲ್ಲಿ ಅದು ಆನಂದ್ ಮಾದರಿ (ANAND MODEL) ಎಂದೇ ಹೆಸರಾಯಿತು. ಅಲ್ಲಿ ಉತ್ಪನ್ನವಾದ ಎಲ್ಲ ಹಾಲಿನ ಉತ್ಪನ್ನಗಳಿಗೂ AMUL ಎಂಬುದೇ ಬ್ರಾ್ಯಂಡ್ ಆಯಿತು. ಇದನ್ನು ಸ್ಥಾಪಿಸಿದವರು ತ್ರಿಭುವನ್​ದಾಸ್ ಪಟೇಲರೇ ಆದರೂ, ಇದರ ರೂವಾರಿ, ದ್ರಷ್ಟಾರ ವರ್ಗೀಸ್ ಕುರಿಯನ್ ಅವರೇ. ಅಮುಲ್​ನ ಹಾಲು, ಹಾಲಿನ ಉತ್ಪನ್ನಗಳು ಎಷ್ಟು ಜನಪ್ರಿಯವಾದುವೆಂದರೆ ನೆಸ್ಲೆ, ಪೋಲ್​ಸನ್ ಮುಂತಾದ ಅಂತಾರಾಷ್ಟ್ರೀಯ ಬ್ರಾ್ಯಂಡ್​ಗಳೂ ಅಮುಲ್​ನ ಎದುರು ಮಂಡಿಯೂರಿದವು.

1962ರಲ್ಲಿ ಇಂಡಿಯಾ-ಚೀನಾ ಯುದ್ಧ ನಡೆದಾಗ ಭಾರತದ ಯುದ್ಧಭೂಮಿಗೆ ಹಾಲು ಸರಬರಾಜು ಮಾಡಿದ್ದು ಕುರಿಯನ್ ಅವರೇ.

1964ರ ಅಕ್ಟೋಬರ್ 31ನೇ ತಾರೀಕು ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದಂದು ಪ್ರಧಾನಿ ಜವಾಹರಲಾಲ್ ನೆಹರು ಆನಂದ್​ನಲ್ಲಿ ಭಾರತದಲ್ಲಿಯೇ ಅತಿದೊಡ್ಡ ಹಾಲಿನಪುಡಿ ಘಟಕ ಮತ್ತು ಪಶು ಆಹಾರದ ಘಟಕವನ್ನು ಉದ್ಘಾಟಿಸಿದರು. 1965ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರು ಅಮುಲ್ ಡೇರಿಯ ಯಶಸ್ಸನ್ನು ಮನಗಂಡು ಖೇಡಾ ಜಿಲ್ಲೆಯ ಅಜರ್ಪರ ಎಂಬ ಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಿ ಅಲ್ಲಿ ಆಗಿರುವ ಬದಲಾವಣೆಯನ್ನು, ಸ್ವಾವಲಂಬನೆಯನ್ನು ಕಣ್ಣಾರೆ ನೋಡಿ ಕುರಿಯನ್​ಗೆ ಹೇಳಿದರು- ‘ನಿಮ್ಮ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಇನ್ನು ಇಡೀ ದೇಶದಲ್ಲಿ ಇದೇ ಮಾದರಿಯನ್ನು ಮುಂದುವರಿಸಿ. ಇದೇ ನಿಮ್ಮ ಜೀವಿತದ ಉದ್ದೇಶವಾಗಲಿ. ಭಾರತ ಸರ್ಕಾರ ನಿಮಗೆ ಬೇಕಾದ ಎಲ್ಲ ಸೌಲಭ್ಯ ಸವಲತ್ತುಗಳನ್ನೂ ನೀಡಲು ಸಿದ್ಧವಿದೆ’. ಆಗಲೇ ಭಾರತದಲ್ಲಿ ‘ನ್ಯಾಷನಲ್ ಡೇರಿ ಡೆವಲಪ್​ವೆುಂಟ್ ಬೋರ್ಡ್’ ಅನ್ನು ಅಸ್ತಿತ್ವಕ್ಕೆ ತಂದರು. ಸಹಜವಾಗಿ ವರ್ಗೀಸ್ ಕುರಿಯನ್ ಅವರೇ ಅದರ ಅಧ್ಯಕ್ಷರಾದರು. ಈಗಲೂ ಅದೇ ಸಹಕಾರಿ ತತ್ತ್ವದ ಅಡಿಯಲ್ಲೇ ಭಾರತದಲ್ಲಿ ಹೈನುಗಾರಿಕೆ ನಡೆಯುತ್ತಿದೆ. ಭಾರತ ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿದೆ. ಇದರ ಯಶಸ್ಸಿಗೆ ತಮ್ಮ ಬದುಕನ್ನೇ ತೆತ್ತುಕೊಂಡು ಬೆಳೆಸಿದವರು ವರ್ಗೀಸ್ ಕುರಿಯನ್. ಅಂತೆಯೇ ಅವರನ್ನು ‘ಭಾರತದ ಕ್ಷೀರಕ್ರಾಂತಿಯ ಪಿತಾಮಹ’ ಎಂದು ಕರೆಯಲಾಗುತ್ತದೆ. ಕುರಿಯನ್ ಇಡೀ ರಾಷ್ಟ್ರದ ಕ್ಷೀರಕ್ರಾಂತಿಗೆ ದಿಕ್ಕುದೆಸೆಗಳನ್ನು ಒದಗಿಸಿದರು.

ಭಾರತದಲ್ಲಿ ಯೋಜನೆಗಳಿಗೆ ಬರವಿಲ್ಲ. ಆದರೆ ಅವಿದ್ಯೆ, ಭ್ರಷ್ಟಾಚಾರ, ಅಪ್ರಾಮಾಣಿಕತೆ, ಕ್ಷುದ್ರ ರಾಜಕೀಯ ಯಾವ ಯೋಜನೆಗಳೂ ಮುನ್ನಡೆಯದಂತೆ ಮಗ್ಗುಲು ಮುಳ್ಳಾಗಿದೆ. ಈ ಕ್ಷೀರಕ್ರಾಂತಿ ಮಾತ್ರ ಆ ಎಲ್ಲ ಆತಂಕಗಳನ್ನೂ ದಾಟಿ ದಿಗ್ವಿಜಯ ಸಾಧಿಸಿದ್ದಕ್ಕೆ ಕಾರಣ ಒಂದೇ, ಒಬ್ಬರೇ. ಅವರು ವರ್ಗೀಸ್ ಕುರಿಯನ್.

ಈವತ್ತು ಈ ಕ್ಷೀರಕ್ರಾಂತಿಯಿಂದ ಭಾರತದಲ್ಲಿ ಹಾಲು ಉತ್ಪಾದನೆ ಹೇರಳವಾಯಿತು ಅಂತಷ್ಟೇ ಹೇಳಿದರೆ ಏನೂ ಹೇಳಿದಂತಲ್ಲ. ಇದರಿಂದ ಹಳ್ಳಿಗಳ ಜೀವ ಉಳಿಯಿತು, ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯಿತು. ಶಿಕ್ಷಣ ಸಿಕ್ಕಿತು. ಎಷ್ಟೋ ಕುಟುಂಬಗಳು ಸ್ವಾವಲಂಬಿಯಾದವು. ಅಶುದ್ಧ ಹಾಲಿನಿಂದ ಬರುತ್ತಿದ್ದ ರೋಗಗಳು ನಿಂತವು. ಹಸಿರುಕ್ರಾಂತಿಗೆ ಹಾಲಿನ ಕ್ರಾಂತಿ ಪೂರಕವಾಯಿತು. ಹೆಣ್ಣುಮಕ್ಕಳಿಗೆ ಒಂದಿಷ್ಟು ಆರ್ಥಿಕ ಸ್ವಾವಲಂಬನೆ ದೊರೆತಂತಾಯಿತು. ಜಾನುವಾರುಗಳ ಸಂರಕ್ಷಣೆಯಾಯಿತು- ಹೀಗೆ ಕ್ಷೀರಕ್ರಾಂತಿಯು ದೇಶದ ನೆಮ್ಮದಿಗೂ ಬಹುದೊಡ್ಡ ಸಹಾಯವನ್ನೇ ಮಾಡಿತು.

ಈ ಅಂಕಿ-ಅಂಶಗಳನ್ನು ನೋಡಿದರೆ ನಮಗೇ ಹೆಮ್ಮೆಯಾಗುತ್ತದೆ. 1970ರಲ್ಲಿ ಭಾರತ ಉತ್ಪಾದಿಸುತ್ತಿದ್ದ ಹಾಲಿನ ಪ್ರಮಾಣ ಒಟ್ಟು 22 ಮಿಲಿಯನ್ ಟನ್. ಈಗ ಅದು 160 ಮಿಲಿಯನ್ ಟನ್. ಭಾರತದಲ್ಲಿ ಈಗ 15 ರಾಜ್ಯಮಟ್ಟದ ಸಹಕಾರಿ ಹಾಲು ಫೆಡರೇಷನ್​ಗಳಿವೆ. ಗ್ರಾಮ ಮಟ್ಟದ 1,56,000 ಹಾಲಿನ ಸಹಕಾರ ಸಂಘಗಳಿವೆ. ಒಂದೂವರೆ ಕೋಟಿ ಸದಸ್ಯರಿದ್ದಾರೆ. ಅದರಲ್ಲಿ ಶೇ. 29ರಷ್ಟು ಮಹಿಳೆಯರೇ ಇದ್ದಾರೆ. 26,600 ಮಹಿಳಾ ಸಹಕಾರ ಸಂಘಗಳೇ ಇವೆ. ಒಟ್ಟಾರೆ ಆದಾಯ ಹತ್ತತ್ತಿರ ನಲವತ್ತು ಸಾವಿರ ಕೋಟಿಯಷ್ಟಾಗುತ್ತದೆ.

ಕರ್ನಾಟಕದಲ್ಲೇ 22 ಸಾವಿರ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಪ್ರತಿದಿನದ ಹಾಲು ಶೇಖರಣೆ 6,500 ಟನ್. ಪ್ರತಿದಿನ ರೈತರಿಗೆ ಪಾವತಿಯಾಗುವ ಹಣ 15 ಕೋಟಿ ರೂ. ನಂದಿನಿ ಬ್ರಾ್ಯಂಡಿನಲ್ಲಿ ಈವರೆಗೆ 65 ಬಗೆಯ ವಿವಿಧ ಹಾಲಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

1948ರಲ್ಲಿ ಗುಜರಾತಿನ ಆನಂದ್​ನಲ್ಲಿ 275 ರೂಪಾಯಿ ಸಂಬಳಕ್ಕೆ ಸೇರಿದ 27 ವರ್ಷದ ಹುಡುಗ ಕುರಿಯನ್, ಈ ದೇಶದಲ್ಲಿ ಒಂದು ದೊಡ್ಡ ಆಂದೋಲನವನ್ನು ಸೃಷ್ಟಿಸಿದ ಕತೆಯಿದು. ಆಗ 430 ಜನ ರೈತರಿಂದ 5000 ಲೀಟರ್ ಹಾಲು ಸಂಗ್ರಹಿಸುತ್ತಿದ್ದ ಅಮುಲ್ ಡೇರಿ ಈಗ 16,000 ಹಳ್ಳಿಗಳ 30 ಲಕ್ಷ ರೈತರಿಂದ ಪ್ರತಿದಿನ ಒಂದು ಕೋಟಿ ಲೀಟರ್ ಹಾಲು ಸಂಗ್ರಹಿಸುತ್ತಿದೆ.

1976ರಲ್ಲಿ ಭಾರತದ ಖ್ಯಾತ ಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್ ‘ಮಂಥನ್’ ಎಂಬ ಸಿನಿಮಾ ತೆಗೆದರು. ಅದಕ್ಕೆ ಗುಜರಾತಿನ ಪ್ರತಿ ಹಾಲು ಉತ್ಪಾದಕರಿಂದ 2 ರೂಪಾಯಿ ದೇಣಿಗೆ ಕೊಡಿಸಿದರು ಕುರಿಯನ್. ದೇವತೆಗಳು, ದಾನವರು ಸೇರಿ ಕ್ಷೀರಸಾಗರವನ್ನು ಮಂಥನ ಮಾಡಿ ಅಮೃತ ಪಡೆದರೆಂಬ ಪುರಾಣ ಕತೆಯಿದೆಯಲ್ಲ, ಅದೇ ಚಿತ್ರದ ಧ್ವನಿ. ಆದರೆ ಕತೆ ಮಾತ್ರ ಆನಂದ್ ಮಿಲ್ಕ್ ಯೂನಿಯನ್ ಮತ್ತು ವರ್ಗೀಸ್ ಕುರಿಯನ್​ರ ಸಾಧನೆಯದು. ಸಿನಿಮಾ ಎಷ್ಟೋ ಜನರ ಬದುಕಿಗೆ ಸ್ಪೂರ್ತಿಯಾಯಿತು. ಈ ಚಿತ್ರ ಆಸ್ಕರ್ ಪ್ರಶಸ್ತಿಯವರೆಗೂ ಹೋಗಿಬಂತು. 2013ರಲ್ಲಿ ‘ಅಮರ ಚಿತ್ರಕಥಾ’ವು ವರ್ಗೀಸ್ ಕುರಿಯನ್ ಜೀವನ ಸಾಧನೆಗಳ ಕಾಮಿಕ್ ಪುಸ್ತಕವನ್ನು ಹೊರತಂದಿದೆ.

ಅಮೆರಿಕದ ಮಿಶಿಗನ್ ಸ್ಟೇಟ್ ಯೂನಿವರ್ಸಿಟಿಯ ಆವರಣದಲ್ಲಿರುವ ಇಂಟರ್​ನ್ಯಾಷನಲ್ ಸೆಂಟರ್​ನಲ್ಲಿ ಮತ್ತು ಕಾಲೇಜ್ ಆಫ್ ಇಂಜಿನಿಯರಿಂಗ್​ನಲ್ಲಿ- ಎರಡೂ ಕಡೆ- ವರ್ಗೀಸ್ ಕುರಿಯನ್​ರ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಈ ಪುತ್ಥಳಿಗಳ ಸ್ಥಾಪನೆಗೆ ಕಾರಣರಾಗಿರುವವರು ಈಗ ಶಿವಮೊಗ್ಗೆಯ ಹಾಲು ಒಕ್ಕೂಟದ ಉಪವ್ಯವಸ್ಥಾಪಕರಾಗಿರುವ ಡಿ.ವಿ. ಮಲ್ಲಿಕಾರ್ಜುನ್. ಮಿಶಿಗನ್ ವಿಶ್ವವಿದ್ಯಾಲಯದ ಆಡಳಿತ ವರ್ಗದವರ ಜತೆ ಪತ್ರ ವ್ಯವಹಾರ ಮಾಡಿ, ಅವರಿಗೆ ಕುರಿಯನ್ ಸಾಧನೆಗಳನ್ನು ಮನದಟ್ಟು ಮಾಡಿಸಿದ್ದು, ಪುತ್ಥಳಿಗಳನ್ನು ಸ್ವಂತ ಖರ್ಚಿನಲ್ಲೇ ಮಾಡಿಸಿಕೊಂಡು ಅಮೆರಿಕೆಗೆ ಹೊತ್ತೊಯ್ದು ಸ್ಥಾಪನೆಯ ಸಮಾರಂಭದಲ್ಲಿ ಭಾಗವಹಿಸಿದ್ದು ಎಲ್ಲವೂ ಮಲ್ಲಿಕಾರ್ಜುನ್ ಅವರೇ. ಅವರನ್ನು ಪ್ರೀತಿಯಿಂದ ಅಭಿನಂದಿಸೋಣ. ಏಕೆಂದರೆ ಅಮೆರಿಕೆಯಲ್ಲಿ ಸ್ಥಾಪನೆಗೊಂಡಿರುವ ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದರ ನಂತರದ ಪುತ್ಥಳಿಯೆಂದರೆ ವರ್ಗೀಸ್ ಕುರಿಯನ್ ಅವರದ್ದೇ.

ನಮ್ಮ ಕರ್ನಾಟಕದ ಊರೂರುಗಳಲ್ಲಿ ಯಾರು ಯಾರದೋ ಮಹನೀಯರ ಕಟೌಟುಗಳು ಕೈಮುಗಿದುಕೊಂಡು ನಿಂತಿರುತ್ತವೆ. ಪೇಟೆಗಳಲ್ಲಿ ಯಾರ್ಯಾರದೋ ಕಟೌಟುಗಳಿಗೆ ಕ್ಷೀರಾಭಿಷೇಕ ನಡೆಯುತ್ತದೆ. ಆದರೆ ಕರ್ನಾಟಕದ ಹಳ್ಳಿಗಳಿಗೊಂದು ಸ್ವಾವಲಂಬನೆಯ ಚೈತನ್ಯ ತಂದ ಕುರಿಯನ್ ಅವರದೊಂದು ಭಾವಚಿತ್ರವನ್ನು ನಮ್ಮ ಹಾಲು ಉತ್ಪಾದಕರ ಸಹಕಾರ ಸಂಘಗಳ ಗೋಡೆಗೆ ತಗಲುಹಾಕಬಾರದಾ? ನಮ್ಮ ದೇಶದಲ್ಲಿ ಯಥೇಚ್ಛ ಹಾಲಿನ ಹೊಳೆ ಹರಿಸಿದಾತ ಈ ಪುಣ್ಯಾತ್ಮನೇ ಅಂತ ನಮ್ಮ ಹಳ್ಳಿಜನಕ್ಕೂ ತಿಳಿಯಬಾರದಾ?

2012ನೇ ಇಸವಿ ಸೆಪ್ಟೆಂಬರ್ 9ನೇ ತಾರೀಕು ಗುಜರಾತಿನ ನಡಿಯಾದ್​ನ ಮುಲ್​ಜಿಭಾಯಿ ಪಟೇಲ್ ಯೂರಾಲಜಿ ಆಸ್ಪತ್ರೆಯಲ್ಲಿ ವರ್ಗೀಸ್ ಕುರಿಯನ್ ಕೊನೆಯುಸಿರೆಳೆದರು. ಆದರೆ ಅವರು ಸೃಷ್ಟಿಸಿದ ಹಾಲಿನ ಹೊಳೆ ನಮ್ಮ ದೇಶದಲ್ಲಿ ಈಗಲೂ, ಮುಂದೆಯೂ ಹರಿಯುತ್ತಿರುತ್ತದೆ. ಆ ಮಹಾನ್ ಚೇತನಕ್ಕೊಂದು ಹೃತ್ಪೂರ್ವಕ ನಮಸ್ಕಾರ.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top