ಚಿಕ್ಕಬಳ್ಳಾಪುರ : ನಗರದ ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ 71 ನೇ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಂಡಿದ್ದು ಶನಿವಾರ ಪಥ ಸಂಚಲನ ತಾಲೀಮು ನಡೆಯಿತು.
ಕಾರ್ಯಕ್ರಮದಲ್ಲಿ ಆಕರ್ಷಕ ಕವಾಯತು ಪ್ರದರ್ಶಿಸಬೇಕೆಂಬ ಉದ್ದೇಶದಿಂದ ಮೂರು ದಿನಗಳಿಂದಲೂ ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಅಭ್ಯಾಸ ನಡೆಸಿದ್ದು, ಪಂಚಗಿರಿ ಬೋಧನಾ ಪ್ರೌಢಶಾಲೆ, ನ್ಯೂ ಹೊರೈಜಾನ್ ಶಾಲೆ, ಸರ್.ಎಂ.ವಿ. ಶಾಲೆ, ಪೂರ್ಣಪ್ರಜ್ಞ ಶಾಲೆ, ಸೆಂಥ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು, ಪೊಲೀಸರು, ಗೃಹ ರಕ್ಷಕದ ದಳ ಸಿಬ್ಬಂದಿಗಳು ಧ್ವಜಾರೋಹಣ ಹಾಗು ಧ್ವಜವಂದನೆ ಸಲ್ಲಿಸುವ ತಾಲೀಮು ನಡೆಸಿದರು.
ಜಿಲ್ಲಾ ಸಶಸ ಮೀಸಲು ಪೊಲೀಸ್ ಪಡೆ, ನಾಗರಿಕ ಪೊಲೀಸ್ ಪಡೆ, ಮಹಿಳಾ ಪೊಲೀಸ್ ಪಡೆ ಹಾಗೂ ಗೃಹ ರಕ್ಷಕ ಸಿಬ್ಬಂದಿ, ವಿವಿಧ ಶಾಲೆಯ ವಿದ್ಯಾರ್ಥಿಗಳ ತಂಡಗಳು ಕವಾಯತು ನಡೆಸಿದವು. ಪಥ ಸಂಚಲನ, ಗೌರವ ವಂಧನೆ ಸ್ವೀಕರಿಸುವ ತಾಲೀಮಿನ ದೃಶ್ಯ ಗಣರಾಜ್ಯೋತ್ಸವ ಸಂಭ್ರಮಕ್ಕೆ ಪೂರಕವಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂಜೆ 4 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಪಥ ಸಂಚಲನಕ್ಕೆ ವ್ಯವಸ್ಥೆ : ಈಗಾಗಲೇ ಮೈದಾನದಲ್ಲಿ ಪಥ ಸಂಚಲನ ತಂಡಗಳು ನಿಲ್ಲುವ, ಮಾರ್ಗದ ಗುರುತುಗಳನ್ನು ಹಾಕಲಾಗಿದೆ. ಧ್ವಜಸ್ತಂಭ, ಗಣ್ಯರು ಕೂರಲು ಆಸನ, ಸಭಿಕರಿಗೆ ಫೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಗಣ್ಯರಿಗೆ ಯಾವ ರೀತಿ ವಂದನೆ ಸಲ್ಲಿಸಬೇಕು, ಪಥ ಸಂಚಲನ ಹೇಗಿರಬೇಕು ಎಂಬುದರ ಬಗ್ಗೆ ಆಯಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದ ದೃಶ್ಯ ಕಂಡುಬಂತು.
ನಗರಸಭೆಯಿಂದ ಸ್ವಚ್ಛತೆ : ಈಗಾಗಲೇ ಪೌರಕಾರ್ಮಿಕರು ಕ್ರೀಡಾಂಗಣದ ಪ್ರವೇಶದ್ವಾರ, ಕಟ್ಟಡದ ಸುತ್ತಲು ಬೆಳೆದಿರುವ ಗಿಡಗಳನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಮೈದಾನದಲ್ಲಿ ಬಿದ್ದಿದ್ದ ಕಲ್ಲು ಚೂರುಗಳನ್ನು ಸಂಗ್ರಹಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖೆ ಸಿಬ್ಬಂದಿ ಮತ್ತು ಜನರು ಆಗಮಿಸುವ ಹಿನ್ನೆಲೆಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಂಡಿದೆ. ಗಣರಾಜ್ಯೋತ್ಸವದಲ್ಲಿ ಕಡ್ಡಾಯವಾಗಿ ಭಾಗವಹಿಸಲು ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ.
ಸಚಿವಗಿರಿಲ್ಲ ಧ್ವಜಾರೋಹಣ ಭಾಗ್ಯ: ಉಪ ಚುನಾವಣೆ ಮುಗಿದು ಒಂದು ತಿಂಗಳು ಮುಗಿಯುತ್ತಿದ್ದರೂ ಬಿಜೆಪಿ ಶಾಸಕ ಡಾ ಕೆ.ಸುಧಾಕರ್‌ಗೆ ಸಚಿವ ಸ್ಥಾನ ಸಿಕ್ಕಿಲ್ಲ. ಇನ್ನು ಉಪ ಮುಖ್ಯಮಂತ್ರಿ ಸಿ.ಎಸ್.ಅಶ್ವತ್ಥನಾರಾಯಣ್ ಚಿಕ್ಕಬಳ್ಳಾಪುರದೊಂದಿಗೆ ರಾಮನಗರ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿದ್ದು, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಸಚಿವರ ಬದಲಿಗೆ ಜಿಲ್ಲಾಧಿಕಾರಿಗಳಿಗೆ ಧ್ವಜಾರೋಹಣ (ಬೆಳಗ್ಗೆ 9 ಕ್ಕೆ) ನೆರವೇರಿಸುವ ಭಾಗ್ಯ ಸಿಕ್ಕಿದೆ. ಶಾಸಕ ಡಾ ಕೆ.ಸುಧಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ.