ಇಂದು ಕಸ್ತೂರು ಬಂಡಿ ಜಾತ್ರೆ

ಚಾಮರಾಜನಗರ:  ತಾಲೂಕಿನ ಕಸ್ತೂರು ಗ್ರಾಮದಲ್ಲಿ ಭಾನುವಾರ ನಡೆಯುವ ದೊಡ್ಡಮ್ಮತಾಯಿ ಬಂಡಿ ಜಾತ್ರೆಗೆ ದೇವಸ್ಥಾನದ ಆವರಣದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.


ಕಸ್ತೂರು ಬಂಡಿ ಜಾತ್ರೆಯು ಈ ಭಾಗದಲ್ಲಿ ವರ್ಷದ ಮೊದಲ ಜಾತ್ರೆಯಾಗಿದ್ದು ಸುತ್ತಮುತ್ತಲಿನ 23 ಗ್ರಾಮಗಳಲ್ಲಿ ಈ ಜಾತ್ರೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಗ್ರಾಮಗಳಲ್ಲಿ ಬಂಡಿಗಳನ್ನು ವಿವಿಧ ಹೂವು, ಬಾಳೆ ಕಂಬ, ಕಬ್ಬು, ತೆಂಗಿನಕಾಯಿಯ ಗೊನೆಗಳಿಂದ ಸಿಂಗರಿಸಿ ಕಸ್ತೂರಿಗೆ ಬಂದು ಇಲ್ಲಿನ ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ವಾಪಸ್ಸಾಗುತ್ತಾರೆ.


23 ಗ್ರಾಮಗಳಿಗೆ ಹಬ್ಬ: ಕಸ್ತೂರು ಬಂಡಿ ಜಾತ್ರೆಯು ಈ ಭಾಗದ ಪ್ರಸಿದ್ಧ ಹಬ್ಬವಾಗಿದ್ದು, ಸುತ್ತಮುತ್ತಲಿನ 23 ಗ್ರಾಮಗಳಲ್ಲಿ ಆಚರಿಸಿದರು ಸಹ 16 ಗ್ರಾಮಗಳ ಬಂಡಿಗಳು ಮಾತ್ರ ಜಾತ್ರೆಗೆ ಬರುತ್ತವೆ. ಪ್ರಮುಖವಾಗಿ ಕಸ್ತೂರು, ಮರಿಯಾಲ, ಭೋಗಾಪುರ, ಸಪ್ಪಯ್ಯನಪುರ, ಬಸವನಪುರ, ಕೆಲ್ಲಂಬಳ್ಳಿ, ಮರಿಯಾಲದ ಹುಂಡಿ, ಆನಹಳ್ಳಿ, ಮೂಕಹಳ್ಳಿ, ತೊರವಳ್ಳಿ, ಪುಟ್ಟಯ್ಯನಹುಂಡಿ, ಹೊನ್ನೇಗೌಡನಹುಂಡಿ, ಅಂಕುಶರಾಯನಪುರ, ಹೆಗ್ಗವಾಡಿ, ಕಿರಗಸೂರು, ದಾಸನೂರು ಗ್ರಾಮಗಳಿಂದ ಬಂಡಿಗಳು ಕಸ್ತೂರು ಜಾತ್ರೆಗೆ ಬರುತ್ತವೆ.


ಅಗತ್ಯ ಸಿದ್ಧತೆ: ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದ ಹೊರವಲಯದಲ್ಲಿರುವ ದೊಡ್ಡಮ್ಮತಾಯಿ ದೇವಸ್ಥಾನ ಆವರಣದಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಜಾತ್ರೆಗೆ ಬರುವ ಭಕ್ತರ ಮೇಲೆ ನಿಗಾ ಇಡಲು ಆಯಾ ಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೇ ಜಾತ್ರೆಗೆ ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ.


ಜಾತ್ರೆಗೆ ತೆರಳುವ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ಚಾಮರಾಜನಗರ, ಸಂತೇಮರಹಳ್ಳಿ ಸೇರಿದಂತೆ ಇತರ ಕಡೆಗಳಿಂದ ವಿಶೇಷ ಬಸ್‌ಗಳ ಸಂಚಾರಕ್ಕೆ ಅಗತ್ಯ ಕ್ರಮವಹಿಸಲಾಗಿದೆ. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿದೆ.

Leave a Reply

Your email address will not be published. Required fields are marked *