ಇಂದು ಕರಗ ಶಕ್ತ್ಯುತ್ಸವ: ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಡುವ ದ್ರೌಪದಮ್ಮನ ಕರಗ

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯುತ್ಸವ ಶುಕ್ರವಾರ (ಏ.19) ಮಧ್ಯರಾತ್ರಿ ನಡೆಯಲಿದ್ದು, ಕೆಂಪೇಗೌಡರ ಕೋಟೆ ಗಡಿಯಲ್ಲಿ ದ್ರೌಪದಿದೇವಿ ಪ್ರತಿರೂಪವಾದ ಕರಗ ಸಂಚರಿಸಲಿದೆ.

ವಹ್ನಿಕುಲ ಕ್ಷತ್ರಿಯ (ತಿಗಳ) ಸಮುದಾಯದವರು ಆಚರಿಸುವ ದ್ರೌಪದಮ್ಮ ಕರಗಕ್ಕೆ ಶುಕ್ರವಾರ ಮಧ್ಯರಾತ್ರಿ ಚಾಲನೆ ದೊರೆಯಲಿದೆ. ರಾತ್ರಿ ಪೂರ್ತಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಹೂವಿನ ಕರಗಕ್ಕೆ ದ್ರೌಪದಿ ದೇವಿಯ ಮಾನಸಪುತ್ರರೆಂದೇ ಕರೆಯ ಲಾಗುವ ವೀರಕಕುಮಾರರು ಕಾವಲಾಗಿ ಸಂಚರಿಸಲಿದ್ದಾರೆ.

ಮಧ್ಯರಾತ್ರಿ 12ಕ್ಕೆ ಆರಂಭವಾಗುವ ಕರಗ ಶಕ್ತ್ಯುತ್ಸವ ಮುಂಜಾನೆ ವೇಳೆಗೆ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಮರಳಲಿದೆ. ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗ ಮಹೋತ್ಸವ ತಿಗಳರಪೇಟೆ, ಬಳೆಪೇಟೆ, ಚಿಕ್ಕಪೇಟೆ ಮಾರ್ಗವಾಗಿ ಸಾಗಲಿದೆ. ಇದೇ ವೇಳೆ ಮಾರ್ಗದಲ್ಲಿ ದೊರೆಯುವ ಶಕ್ತಿ ಗಣಪತಿ, ಅಣ್ಣಮ್ಮದೇವಿ, ಮುತ್ಯಾಲದೇವಿ ಸೇರಿ ವಿವಿಧ ದೇವಸ್ಥಾನಗಳಿಗೆ ತೆರಳುತ್ತದೆ. ವಿಶೇಷವಾಗಿ ಮಸ್ತಾನ್​ಸಾಬ್ ದರ್ಗಾಕ್ಕೆ ತೆರಳಿ ಧೂಪದಾರತಿ ಪಡೆದು ಮುಂದೆ ಸಾಗಲಿದೆ.

ಕರಗಧಾರಿಯ ಕಠಿಣ ವ್ರತ: ಈ ಬಾರಿ ಶಕ್ತ್ಯುತ್ಸವ ನಡೆಸಿಕೊಡುವ ಅರ್ಚಕ ಎನ್. ಮನು ಕರಗದ ಧಾರ್ವಿುಕ ಕಾರ್ಯಗಳು ಆರಂಭವಾದಾಗಿನಿಂದ ಪೂಜೆ, ಯೋಗ, ಮುಂತಾದ ಸಾಧನೆಯಲ್ಲಿ ತೊಡಗಿಕೊಂಡಿದ್ದಾರೆ. ಮನು ಅವರಿಗೆ ಇದು 2ನೇ ಉತ್ಸವವಾಗಿದೆ. ಕಳೆದ ಬಾರಿಯ ಗೊಂದಲದಿಂದಾಗಿ ಕರಗ ಶಕ್ತ್ಯುತ್ಸವದ ಸಂದರ್ಭದಲ್ಲಿ ಕರಗಧಾರಿಯನ್ನು ಬದಲಿಸಲಾಗಿತ್ತು.

Leave a Reply

Your email address will not be published. Required fields are marked *