ಇಂದಿರಾ ಕ್ಯಾಂಟೀನ್ ಆಹಾರ ಪರೀಕ್ಷೆ ಬಗ್ಗೆ ತನಿಖೆ

ಬೆಂಗಳೂರು: ಇಂದಿರಾ ಕ್ಯಾಂಟೀನ್ ಆಹಾರ ಗುಣಮಟ್ಟ ಕಳಪೆ ಎಂಬ ಆರೋಪದ ಬಗ್ಗೆ ಮತ್ತು ಗುಣಮಟ್ಟ ಪರೀಕ್ಷಿಸಿದ ರೀತಿಯ ಕುರಿತು ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.

ಕ್ಯಾಂಟೀನ್​ನಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟ ಸರಿಯಿಲ್ಲ. ಅದನ್ನು ಸೇವಿಸಿದರೆ ಜನರ ಆರೋಗ್ಯ ಹದಗೆಡುತ್ತದೆ ಎಂದು ಬಿಬಿಎಂಪಿ ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.

ಅದಕ್ಕೆ ಪ್ರತ್ಯುತ್ತರವಾಗಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಮೇಯರ್, ಚುನಾವಣಾ ಗಿಮಿಕ್​ಗೋಸ್ಕರ ಉತ್ತಮ ಯೋಜನೆಗೆ ಮಸಿ ಬಳಿಯಲಾಗುತ್ತಿದೆ. ಯೋಜನೆ ಜಾರಿಯಾದಾಗಿನಿಂದ ಬಿಜೆಪಿ ಸದಸ್ಯರು ವಿರೋಧಿಸುತ್ತಲೇ ಬಂದಿದ್ದಾರೆ. ಆಹಾರದ ಗುಣಮಟ್ಟ ಹೆಚ್ಚಿಸುವಂತೆ ಜನರಿಂದ ಸಲಹೆ ಬಂದಿದೆ. ಆದರೆ, ಯಾರೂ ಕೂಡ ಆಹಾರದಿಂದ ಆರೋಗ್ಯ ಹದಗೆಟ್ಟಿದೆ ಎಂಬುದನ್ನು ಹೇಳಿಲ್ಲ. ಲಕ್ಷಾಂತರ ಜನರ ಹಸಿವು ನೀಗಿಸುತ್ತಿರುವ ಯೋಜನೆ ಬಗ್ಗೆ ಸುಳ್ಳು ಆರೋಪ ಮಾಡಲಾಗಿದೆ. ಉಮೇಶ್​ಶೆಟ್ಟಿ ಅವರು ಕ್ಯಾಂಟೀನ್​ನಿಂದ ಆಹಾರ ಪಡೆದ ಬಗೆ ಸೇರಿ ಇನ್ನಿತರ ವಿಷಯಗಳ ಬಗ್ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳ ಮೂಲಕ ಆಂತರಿಕ ತನಿಖೆ ನಡೆಸಲಾಗುವುದು. ಒಂದು ವೇಳೆ ಉಮೇಶ್​ಶೆಟ್ಟಿ ಸುಳ್ಳು ಹೇಳಿದ್ದಾರೆ ಎಂಬುದು ದೃಢಪಟ್ಟರೆ ಅವರ ವಿರುದ್ಧವೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪ್ರಯೋಗಾಲಯದ ಬಗ್ಗೆಯೇ ಅನುಮಾನ: ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, ಆಹಾರ ಪರೀಕ್ಷೆ ನಡೆಸಿದ ರಾಮಯ್ಯ ಪ್ರಯೋಗಾಲಯ ನಿಯಮದಂತೆ ನೊಂದಣಿಯಾದದ್ದೇ ಎಂಬುದನ್ನು ಪರೀಕ್ಷಿಸಬೇಕಿದೆ. ಅಲ್ಲದೆ, ಅದರ ಸಾಮರ್ಥ್ಯ ಮತ್ತು ನಂಬಿಕೆಯ ಬಗ್ಗೆಯೂ ಪರಿಶೀಲಿಸಬೇಕು. ಒಂದು ವೇಳೆ ಒತ್ತಡಕ್ಕೊಳಗಾಗಿ ವರದಿ ನೀಡಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಭದ್ರೇಗೌಡ, ಮಾಜಿ ಮೇಯರ್​ಗಳಾದ ಮಂಜುನಾಥರೆಡ್ಡಿ, ಪದ್ಮಾವತಿ, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್ ಸೇರಿ ಇನ್ನಿತರರಿದ್ದರು.

ಪರಿಶೀಲನೆ ಕಾನೂನು ಬದ್ಧವಾಗಿಲ್ಲ

ಬಿಬಿಎಂಪಿ ವ್ಯಾಪ್ತಿಯಲ್ಲಿ 173 ಸ್ಥಿರ ಮತ್ತು 18 ಸಂಚಾರಿ ಕ್ಯಾಂಟೀನ್​ಗಳಿವೆ. ಆ ಕ್ಯಾಂಟೀನ್​ಗಳಿಗೆ ಆಹಾರ ಪೂರೈಸಲು 18 ಅಡುಗೆ ಮನೆ ನಿರ್ವಿುಸಲಾಗಿದೆ. ಅವೆಲ್ಲವುಗಳ ಆಹಾರವನ್ನು ಪ್ರತಿದಿನ ಪರೀಕ್ಷಿಸಲಾಗುವುದು. ಆದರೆ, ಉಮೇಶ್​ಶೆಟ್ಟಿ ತಾವು ತಂದಿದ್ದ ಬಾಕ್ಸ್ ಗಳಲ್ಲಿ ಆಹಾರವನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ, ಫೆ.26ರಂದು ಸಂಗ್ರಹಿಸಿದ್ದ ಆಹಾರವನ್ನು ಫೆ.28ಕ್ಕೆ ಪ್ರಯೋಗಾಲಯಗಳಿಗೆ ನೀಡಲಾಗಿದೆ. ಇವೆಲ್ಲವನ್ನು ಗಮನಿಸಿದರೆ ಚುನಾವಣಾ ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಒಂದು ವೇಳೆ ಆಹಾರದ ಗುಣಮಟ್ಟದ ಬಗ್ಗೆ ಅನುಮಾನವಿದ್ದರೆ, ಬಿಬಿಎಂಪಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಪರೀಕ್ಷಿಸಬಹುದಿತ್ತು ಎಂದು ಮೇಯರ್ ಹೇಳಿದರು.

ಪರೀಕ್ಷೆಗೆ ಪದಾರ್ಥಗಳು ಪ್ರಯೋಗಾಲಯಕ್ಕೆ

ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟ ಸರಿಯಿಲ್ಲ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಬಿಬಿಎಂಪಿ ಅಧಿಕಾರಿಗಳು ಎಲ್ಲ 18 ಅಡುಗೆ ಮನೆಯಲ್ಲಿ ತಯಾರಾದ ಆಹಾರ ಮತ್ತು ಅಡುಗೆ ಮನೆಯಲ್ಲಿ ಸಂಗ್ರಹಿಸಲಾದ ಅಕ್ಕಿ, ಬೇಳೆ ಸೇರಿ ಇನ್ನಿತರ ಪದಾರ್ಥಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಇಂದಿರಾ ಕ್ಯಾಂಟೀನ್​ಗೆ ಆಹಾರ ಪೂರೈಸುವ ಗುತ್ತಿಗೆದಾರರನ್ನು ಬದಲಿಸುವ ಬಗ್ಗೆ ರ್ಚಚಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೋಟೆಲ್ ಉದ್ಯಮಿ ಉಮೇಶ್ ಶೆಟ್ಟಿ ಆಹಾರ ಗುಣಮಟ್ಟದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅದನ್ನು ನೋಡಿದರೆ, ಕ್ಯಾಂಟೀನ್​ಗೆ ಆಹಾರ ಪೂರೈಸುವ ಗುತ್ತಿಗೆಯನ್ನು ಪಡೆಯಲು ಅವರು ಹುನ್ನಾರ ನಡೆಸಿದಂತಿದೆ.

| ಅಬ್ದುಲ್ ವಾಜಿದ್, ಆಡಳಿತ ಪಕ್ಷದ ನಾಯಕ