ಇಂದಿರಾ ಕ್ಯಾಂಟೀನ್​ಗೆ ಪಾಲಿಕೆ ವಂತಿಗೆ ಇಲ್ಲ

ಹುಬ್ಬಳ್ಳಿ: ಅವಳಿ ನಗರದಲ್ಲಿ ಚಾಲನೆಯಲ್ಲಿರುವ 9 ಇಂದಿರಾ ಕ್ಯಾಂಟೀನ್ (ಪ್ರಸ್ತಾಪಿತ 12)ಗಳ ನಿರ್ವಹಣೆಗೆ ಹು-ಧಾ ಮಹಾನಗರ ಪಾಲಿಕೆಯಿಂದ ವಂತಿಗೆ ನೀಡದಿರಲು ಆಡಳಿತಾರೂಢ ಬಿಜೆಪಿ ನಿರ್ಧರಿಸಿದೆ.

ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗೌಜಿ ಗದ್ದಲದ ನಡುವೆ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ರಾಜ್ಯ ಸರ್ಕಾರವೇ ಪೂರ್ಣ ಅನುದಾನವನ್ನು ನೀಡಿ ಇಂದಿರಾ ಕ್ಯಾಂಟೀನ್ ನಡೆಸಲಿ ಎಂದು ಠರಾವು ಸಹ ಸ್ವೀಕರಿಸಲಾಯಿತು.

ಪಾಲಿಕೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ತೀವ್ರ ವಿರೋಧದ ನಡುವೆಯೂ ಪಾಲಿಕೆಯ ಆಡಳಿತಾರೂಢ ಪಕ್ಷ ಈ ತೀರ್ವನವನ್ನು ಕೈಗೊಂಡಿದೆ. ಒಂದು ಗಂಟೆಗೂ ಹೆಚ್ಚು ಕಾಲ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾದ ಈ ವಿಷಯದಲ್ಲಿ ಸದಸ್ಯರು ಟೇಬಲ್ ಮೇಲಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದರು.

ವಿಷಯದ ಕುರಿತು ಚರ್ಚೆ ಆರಂಭಿಸಿದ ಬಿಜೆಪಿ ಸದಸ್ಯ ವೀರಣ್ಣ ಸವಡಿ, ಇಂದಿರಾ ಕ್ಯಾಂಟೀನ್ ನಿರ್ವಹಣೆ ವೆಚ್ಚದಲ್ಲಿ ಶೇ. 70ರಷ್ಟು ಅನುದಾನವನ್ನು ಪಾಲಿಕೆ ಭರಿಸಬೇಕು ಹಾಗೂ ಶೇ. 30ರಷ್ಟು ಅನುದಾನವನ್ನು ಕಾರ್ವಿುಕ ಇಲಾಖೆಯಿಂದ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಮಾಡಿದೆ. ಪಾಲಿಕೆಯ ಆರ್ಥಿಕ ಸ್ಥಿತಿ ಸರಿಯಾಗಿಲ್ಲ. ಶೇ. 70ರಷ್ಟು ಅನುದಾನ ನೀಡಲು ಬರುವುದಿಲ್ಲ ಎಂದು ವಾದಿಸಿದರು.

ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಪಾಲಿಕೆಯಿಂದ ಶೇ. 70ರಷ್ಟು ವಂತಿಗೆ ನೀಡುವುದಾದರೆ ಸರ್ಕಾರದ ಪಾಲು ಏನು? ಸರ್ಕಾರ ತನ್ನ ಖಜಾನೆಯಿಂದ ಹಣ ಕೊಡಬೇಕು ಎಂದು ಹಿರಿಯ ಸದಸ್ಯ ಡಾ. ಪಾಂಡುರಂಗ ಪಾಟೀಲ ಆಗ್ರಹಿಸಿದರು.

ಜೆಡಿಎಸ್​ನ ರಾಜಣ್ಣ ಕೊರವಿ ಮಾತನಾಡಿ, ಇಂದಿರಾ ಕ್ಯಾಂಟೀನ್ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ನಿನ್ನೆ (ಬುಧವಾರ) ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹ ಇದ್ದರು. ಅಲ್ಲಿಯ ನಿರ್ಣಯವನ್ನು ಸಭೆಗೆ ತಿಳಿಸಿ ಎಂದು ಹೇಳಿದರು.

ಈ ಕುರಿತು ಉತ್ತರ ನೀಡಿದ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಶೇ. 70ರಷ್ಟು ವಂತಿಗೆ ನೀಡಿದರೆ ಪಾಲಿಕೆಗೆ ಆರ್ಥಿಕ ಹೊರೆಯಾಗುತ್ತದೆ ಎಂಬುದು ಗೊತ್ತಿದೆ. ಈ ಆದೇಶವನ್ನು ಮರುಪರಿಶೀಲಿಸಿ ಪರಿಷ್ಕರಣೆ ಮಾಡಲು ಮುಂದಿನ ದಿನಗಳಲ್ಲಿ ಅವಕಾಶವಿದೆಯೆಂದು ಸರ್ಕಾರ ಹೇಳಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರದ ಬಜೆಟ್​ನಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ವಿಷಯ ಪ್ರಸ್ತಾಪಿಸಲಾಗಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಪಾಲಿಕೆ ಹಣ ನೀಡಬೇಕು ಎನ್ನುವುದಾದರೆ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದರ್ಥ ಎಂದು ಬಿಜೆಪಿಯ ಶಿವಾನಂದ ಮುತ್ತಣ್ಣವರ ಹೇಳುತ್ತಿದ್ದಂತೆ ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು.

ವಿರೋಧ ಪಕ್ಷದ ನಾಯಕ ಗಣೇಶ ಟಗರಗುಂಟಿ, ಪ್ರಫುಲ್ಲಚಂದ್ರ ರಾಯನಗೌಡ್ರ, ಜೆಡಿಎಸ್​ನ ರಾಜಣ್ಣ ಕೊರವಿ ಮೇಯರ್ ಪೀಠದ ಬಳಿ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಂತದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಗೌಜಿ ಗದ್ದಲದ ನಡುವೆ ಟೇಬಲ್ ಮೇಲಿನ ಪೇಪರ್, ನೀರಿನ ಬಾಟಲಿ, ಲೋಟವನ್ನು ಚೆಲ್ಲಾಪಿಲ್ಲಿ ಮಾಡಿದರು. ಕೈ ಕೈ ಮಿಲಾಯಿಸುವುದೊಂದೇ ಬಾಕಿ ಉಳಿದಿತ್ತು. ಬಡವರ ವಿರೋಧಿ, ಕೋಮುವಾದಿ ಬಿಜೆಪಿಗೆ ಧಿಕ್ಕಾರ…ಬೇಕೆ ಬೇಕು ಇಂದಿರಾ ಕ್ಯಾಂಟೀನ್ ಎಂದು ಪ್ರತಿಪಕ್ಷಗಳ ಸದಸ್ಯರು ಘೊಷಣೆ ಕೂಗಿದರು. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂದು ಬಿಜೆಪಿ ಸದಸ್ಯರು ಘೊಷಣೆ ಹಾಕಿದರು.

ಇಷ್ಟೆಲ್ಲ ಗೌಜಿ ಗದ್ದಲದ ನಡುವೆ ಇಂದಿರಾ ಕ್ಯಾಂಟೀನ್​ಗೆ ಪಾಲಿಕೆಯಿಂದ ವಂತಿಗೆ ನೀಡಲು ಸಾಧ್ಯವಿಲ್ಲ ಎಂದು ಮೇಯರ್ ಸುಧೀರ ಸರಾಫ್ ರೂಲಿಂಗ್ ನೀಡಿ ಸಭೆಯನ್ನು ಮುಕ್ತಾಯಗೊಳಿಸಿದರು.