ಇಂದಿರಾ ಕ್ಯಾಂಟೀನ್​ಗೆ ಗ್ರಹಣ!

ವಿಜಯವಾಣಿ ವಿಶೇಷ ಹಾವೇರಿ: ಕಡಿಮೆ ದರದಲ್ಲಿ ಬಡವರಿಗೆ ಊಟ, ಉಪಾಹಾರ ಒದಗಿಸುವ ಇಂದಿರಾ ಕ್ಯಾಂಟೀನ್ ಭಾಗ್ಯವು ಜಿಲ್ಲೆಯ ಜನರಿಗೆ ಮರೀಚಿಕೆಯಾಗುತ್ತ ಸಾಗಿದೆ.

ಹಿಂದಿನ ಸರ್ಕಾರ ಯೋಜನೆ ಆರಂಭಿಸಿದ ನಂತರ ಜಾಗದ ಸಮಸ್ಯೆಯಿಂದ ಮೂರ್ನಾಲ್ಕು ತಿಂಗಳು ಕ್ಯಾಂಟೀನ್ ಆರಂಭಗೊಂಡಿರಲಿಲ್ಲ. ಆದರೆ, ಈಗ ಜಾಗದ ವಿಘ್ನಗಳು ನಿವಾರಣೆಗೊಂಡು ಜಿಲ್ಲಾ ಕೇಂದ್ರದಲ್ಲಿ ಕಟ್ಟಡ ಕಾಮಗಾರಿ ಮುಗಿದು ನಾಲ್ಕೈದು ತಿಂಗಳು ಕಳೆದಿದೆ. ಆದರೂ ಕ್ಯಾಂಟೀನ್ ಆರಂಭಕ್ಕೆ ಮುಹೂರ್ತ ಕೂಡಿಬಂದಿಲ್ಲ. ಕಟ್ಟಡವೂ ಅಪೂರ್ಣಗೊಂಡು ಪಾಳು ಬೀಳುವತ್ತ ಸಾಗಿದೆ.

ನಗರದ ಕೆಇಬಿ ಎದುರಿನ ಪಶು ಸಂಗೋಪನಾ ಇಲಾಖೆಯ ಆವರಣದಲ್ಲಿ ಪಿಬಿ ರಸ್ತೆಗೆ ಹೊಂದಿಕೊಂಡು ಈ ಕಟ್ಟಡ ನಿರ್ವಣವಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ರಾಜ್ಯ ಮಟ್ಟದಲ್ಲಿಯೇ ಟೆಂಡರ್ ನೀಡಲಾಗಿದ್ದರಿಂದ ಬೆಂಗಳೂರಿನ ಮಾದರಿಯಲ್ಲಿ ಸಿಮೆಂಟ್ ಹಲಗೆಗಳನ್ನು ಜೋಡಿಸುವ ಆಧುನಿಕ ತಂತ್ರಜ್ಞಾನದ ಮೂಲಕ ಕಟ್ಟಡ ನಿರ್ವಣವಾಗಿದೆ. ನೀರಿನ ನಲ್ಲಿ ಸೇರಿ ಕೆಲ ಸಣ್ಣಪುಟ್ಟ ಕಾಮಗಾರಿಗಳು ಮಾತ್ರ ಬಾಕಿ ಇವೆ.

ಕಟ್ಟಡ ಕಾಮಗಾರಿಯಿಂದ ವಿಳಂಬ: ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಇಂದಿರಾ ಕ್ಯಾಂಟೀನ್ ಜನವರಿಯಲ್ಲಿಯೇ ಆರಂಭಗೊಳ್ಳಬೇಕಿತ್ತು. ಜಿಲ್ಲಾಡಳಿತ ನಗರದ ಹೃದಯ ಭಾಗದಲ್ಲಿರುವ ಪಶುಸಂಗೋಪನಾ ಇಲಾಖೆಯ ಆವರಣವನ್ನು ಇಂದಿರಾ ಕ್ಯಾಂಟೀನ್​ಗಾಗಿ ಆಯ್ಕೆ ಮಾಡಿಕೊಂಡಿತ್ತು. ಇಲ್ಲಿ ಕ್ಯಾಂಟೀನ್ ನಿರ್ವಣಕ್ಕೆ ಪಶು ಸಂಗೋಪನಾ ಇಲಾಖೆ ವಿರೋಧ ವ್ಯಕ್ತಪಡಿಸಿತ್ತು.

ಜಿಲ್ಲಾಡಳಿತ ಇಂದಿರಾ ಕ್ಯಾಂಟಿನ್ ಸ್ಥಾಪಿಸಲು ಉದ್ದೇಶಿಸಿರುವ ಪಶು ಇಲಾಖೆಯ ಜಾಗದ ವಾಡಿಯ ಸಂಸ್ಥೆಯವರು ಜಾನುವಾರುಗಳ ಆರೋಗ್ಯ ಸೇವೆ ಮಾಡಲು ನೀಡಿದ ದಾನದ ಭೂಮಿಯಾಗಿದೆ. ಇದನ್ನು ಬೇರೆ ಉದ್ದೇಶಗಳಿಗೆ ಬಳಸಿದರೆ ದಾನಿಗಳ ಆಶಯಕ್ಕೆ ವಿರುದ್ಧವಾಗುತ್ತದೆ. ಪಶು ಸಂಗೋಪನಾ ಇಲಾಖೆಯ ಆವರಣದಲ್ಲಿಯೇ ಧಾರವಾಡ ಹಾಲು ಒಕ್ಕೂಟದ ಉಪಕಚೇರಿ, ಪಾಲಿಕ್ಲಿನಿಕ್ ಉಪನಿ ರ್ದೇಶಕರ ಕಚೇರಿ, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕಚೇರಿ, ರೈತರ ತರಬೇತಿ ಕೇಂದ್ರ, ಕೋಳಿ ಸಾಕಾಣಿಕಾ ಕೇಂದ್ರವಿದ್ದು, ಈ ನಡುವೆ ಕ್ಯಾಂಟೀನ್ ಸ್ಥಾಪನೆ ಉತ್ತಮವಲ್ಲ. ಜತೆಗೆ ಪ್ರತಿನಿತ್ಯ ಅನಾರೋಗ್ಯ ಪೀಡಿತ ಜಾನುವಾರುಗಳು ಬರುವುದರಿಂದ ಅವುಗಳ ಮಲ, ಮೂತ್ರದಿಂದ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಅಲ್ಲಿ ಆಹಾರ ಸೇವನೆಯ ಕ್ಯಾಂಟೀನ್ ಸೂಕ್ತವಲ್ಲ ಎಂದು ಪಶು ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಹೀಗಾಗಿ ಕ್ಯಾಂಟೀನ್ ನಿರ್ವಣಕ್ಕೆ ಸ್ಥಳ ಗೊಂದಲ ಸೃಷ್ಟಿಯಾಗಿತ್ತು.

ಬಡವರಿಗೆ ಅನುಕೂಲವಾಗುವ ಉದ್ದೇಶದಿಂದ ಸ್ಥಾಪನೆ ಮಾಡುವ ಇಂದಿರಾ ಕ್ಯಾಂಟೀನ್ ಎಲ್ಲರಿಗೂ ಅನುಕೂಲವಾಗುವ ಸ್ಥಳದಲ್ಲಿಯೇ ಆರಂಭಿಸಬೇಕು. ಅದನ್ನು ಬಿಟ್ಟು ಯಾವುದೋ ಒಂದು

ಮೂಲೆಯಲ್ಲಿ ಸ್ಥಾಪಿಸಿದರೆ ಅದರ ಉದ್ದೇಶ ಸಾಕಾರಗೊಳ್ಳುವುದಿಲ್ಲ. ಆದ್ದರಿಂದ ನಗರದ ಜನನಿಬಿಡ, ಜನಸಂಪರ್ಕಕ್ಕೆ ಸೂಕ್ತವಾಗಿರುವ ಪಶು ಸಂಗೋಪನಾ ಇಲಾಖೆಯ ಸ್ಥಳವೇ ಸೂಕ್ತ ಎಂದು ಜಿಲ್ಲಾಡಳಿತ ತೀರ್ವನಿಸಿದ್ದರ ಫಲವಾಗಿ ಈಗ ಅದೇ ಸ್ಥಳದಲ್ಲಿ ಕಟ್ಟಡ ನಿರ್ವಣವಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸದೆ ಇರುವುದು ಕ್ಯಾಂಟೀನ್ ಆರಂಭಕ್ಕೆ ವಿಘ್ನ ತಂದಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಒಟ್ಟಾರೆ ಇಂದಿರಾ ಕ್ಯಾಂಟೀನ್ ಆರಂಭಿಕ ಸ್ಥಳ ಗೊಂದಲದಿಂದ ಹೊರಬಂದು ಈಗ ನಗರದಲ್ಲಿ ನಿರ್ವಣಗೊಂಡಿದೆ. ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿ ಶೀಘ್ರ ಕಾಮಗಾರಿ ಮಾಡಿಸಿ ಗ್ರಾಹಕರ ಉಪಯೋಗಕ್ಕೆ ಲಭ್ಯವಾಗಬೇಕು ಎಂಬುದು ಬಡಜನರ ಒತ್ತಾಸೆಯಾಗಿದೆ.

ಜಿಲ್ಲಾಡಳಿತದ ಸಮರ್ಥನೆ:ಬಸ್​ನಿಲ್ದಾಣ, ಜಿಲ್ಲಾಸ್ಪತ್ರೆ, ಮಾರುಕಟ್ಟೆ ಸಮೀಪ ಇರುವ ಪಶುಸಂಗೋಪನಾ ಇಲಾಖೆಯ ಖಾಲಿ ಜಾಗವೇ ಇಂದಿರಾ ಕ್ಯಾಂಟಿನ್​ಗೆ ಸೂಕ್ತವಾಗಿದೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ಬಡವರಿಗೆ, ಮಾರುಕಟ್ಟೆಯಲ್ಲಿ ದುಡಿಯುವ ಶ್ರಮಿಕ ವರ್ಗದವರಿಗೆ ಸೇರಿ ಎಲ್ಲರಿಗೂ ಅನುಕೂಲವಾಗುವ ಸ್ಥಳ ಪಶುಸಂಗೋಪನಾ ಇಲಾಖೆಯ ಜಾಗ. ಹೀಗಾಗಿ ಈ ಸ್ಥಳ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸಮರ್ಥನೆ ಮಾಡಿಕೊಂಡಿತ್ತು.