ಇಂದಿನಿಂದ ಇರಾನಿ ಕಪ್ ಫೈಟ್

ನಾಗ್ಪುರ: ಸತತ 2ನೇ ರಣಜಿ ಟ್ರೋಫಿ ಕಿರೀಟವನ್ನು ಗೆದ್ದ ಆತ್ಮವಿಶ್ವಾಸದಲ್ಲಿರುವ ವಿದರ್ಭ ತಂಡ ಇದೀಗ ಪ್ರತಿಷ್ಠಿತ ಇರಾನಿ ಕಪ್ ಸೆಣಸಾಟಕ್ಕೆ ಸಜ್ಜಾಗಿದೆ. ಹಾಲಿ ಚಾಂಪಿಯನ್ ಕೂಡ ಆಗಿರುವ ವಿದರ್ಭ ಸತತ 2ನೇ ಇರಾನಿ ಕಪ್ ಗೆಲ್ಲುವ ಗುರಿಯೊಂದಿಗೆ ಅಜಿಂಕ್ಯ ರಹಾನೆ ಸಾರಥ್ಯದ ಶೇಷ ಭಾರತ ತಂಡವನ್ನು ತವರಿನಲ್ಲಿ ಎದುರಿಸಲಿದೆ.

ಜಾಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಳ್ಳಲಿರುವ 5 ದಿನಗಳ ಪಂದ್ಯದಲ್ಲಿ ವಿದರ್ಭ ಮತ್ತೊಂದು ಟ್ರೋಫಿ ಗೆಲುವಿನ ಉತ್ಸಾಹದಲ್ಲಿದೆ. ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಅನುಭವಿ ಬ್ಯಾಟ್ಸ್​ಮನ್ ಅಜಿಂಕ್ಯ ರಹಾನೆಗೆ ಇದು ಮಹತ್ವದ ಪಂದ್ಯವಾಗಿದೆ. ವಿದರ್ಭ ತಂಡದಲ್ಲಿ ಹಿರಿಯ ಅನುಭವಿ ವಾಸಿಂ ಜಾಫರ್ ಹೊರತುಪಡಿಸಿ ಹೇಳಿಕೊಳ್ಳುವಂಥ ಸ್ಟಾರ್​ಗಳಿಲ್ಲ. ಆದಾಗ್ಯೂ ಕಳೆದ ಆವೃತ್ತಿಯ ರಣಜಿ, ಇರಾನಿ ಮತ್ತು ಇತ್ತೀಚೆಗೆ ಮುಗಿದ ರಣಜಿ ಆವೃತ್ತಿಯಲ್ಲಿ ಅತ್ಯಂತ ಶಿಸ್ತು ಮತ್ತು ಸಂಘಟಿತ ನಿರ್ವಹಣೆಯಿಂದಲೇ ಅಮೋಘ ಯಶಸ್ಸು ಸಾಧಿಸಿದೆ. ಇದಕ್ಕೆ ತಂಡದಲ್ಲಿರುವ ಪ್ರತಿಭಾವಂತ ಎಡಗೈ ಸ್ಪಿನ್ನರ್ ಆದಿತ್ಯ ಸರ್ವಾಟೆ, ಆಫ್ ಸ್ಪಿನ್ನರ್ ಅಕ್ಷಯ್ ವಾಖರೆ ಜೋಡಿಯ ಮಾರಕ ದಾಳಿಯೂ ಸಾಕಷ್ಟು ನೆರವಾಗಿದೆ. ಈ ಪಂದ್ಯವೂ ತವರಿನಲ್ಲೇ ನಡೆಯಲಿರುವುದು ವಿದರ್ಭಕ್ಕೆ ಮತ್ತೊಂದು ಲಾಭದ ಅಂಶ. ಆದರೆ, ಅನುಭವಿ ವೇಗಿ ಉಮೇಶ್ ಯಾದವ್ ಗಾಯದಿಂದಾಗಿ ಪಂದ್ಯಕ್ಕೆ ಅಲಭ್ಯರಾಗಿರುವುದು ವಿದರ್ಭಕ್ಕೆ ಹಿನ್ನಡೆಯಾಗಿದೆ. -ಪಿಟಿಐ

ಶೇಷ ತಂಡದಲ್ಲಿ ಮೂವರು ಕನ್ನಡಿಗರು

ಶೇಷ ಭಾರತ ತಂಡದಲ್ಲಿ ಕಳೆದ ಆವೃತ್ತಿಯಂತೆ ಈ ಪಂದ್ಯದಲ್ಲೂ ಮೂವರು ಕನ್ನಡಿಗರು ಕಣಕ್ಕಿಳಿಯುವ ನಿರೀಕ್ಷೆಯಿದೆ. ಆಸೀಸ್ ಪ್ರವಾಸದಲ್ಲಿ ಮಿಂಚಿದ್ದ ಮಯಾಂಕ್ ಅಗರ್ವಾಲ್, ಸ್ಪಿನ್ ಬೌಲಿಂಗ್ ಆಲ್ರೌಂಡರ್ ಕೆ. ಗೌತಮ್ ಹಾಗೂ ಯುವ ವೇಗಿ ರೋನಿತ್ ಮೋರೆ ಆಡಬಹುದು. ವಿದರ್ಭಕ್ಕೆ ಹೋಲಿಸಿದರೆ ಶೇಷ ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಮಯಾಂಕ್ ಜತೆ, ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಅನ್ಮೋಲ್​ಪ್ರೀತ್ ಸಿಂಗ್, ಇಶಾನ್ ಕಿಶನ್ ಬ್ಯಾಟಿಂಗ್​ಗೆ ಬಲ ತುಂಬಬಲ್ಲರು. ಕಳೆದ ಬಾರಿಯ ಇರಾನಿ ಕಪ್​ನಲ್ಲಿ ಆಡಿದ್ದ ಸಮರ್ಥ್, ಕರುಣ್ ನಾಯರ್ ಮತ್ತು ಮಯಾಂಕ್ ಗಮನ ಸೆಳೆಯುವಲ್ಲಿ ವಿಫಲಗೊಂಡಿದ್ದರು. ಹೀಗಾಗಿ ಈ ಬಾರಿ ಆಡುವವರ ಪೈಕಿ ಕನಿಷ್ಠ ಓರ್ವ ಆಟಗಾರನಾದರೂ ಮಿಂಚುವ ನಿರೀಕ್ಷೆಯಿದೆ.

ಸ್ಪಿನ್ ಸ್ನೇಹಿ ಪಿಚ್

ನಾಗ್ಪುರದಲ್ಲಿ ನಡೆದ ಕೊನೇ ರಣಜಿ ಪಂದ್ಯದ ಆಟ ಗಮನಿಸಿದರೆ ಪಿಚ್ ಬ್ಯಾಟಿಂಗ್​ಗೆ ಸವಾಲಾಗಿರಲಿದೆ. ಪಿಚ್ ಆರಂಭಿಕ 2 ದಿನ ವೇಗಿಗಳಿಗೆ ನೆರವು ನೀಡಲಿದ್ದು, ಅಂತಿಮ ದಿನಗಳಲ್ಲಿ ಸ್ಪಿನ್ನರ್​ಗಳ ಪಾತ್ರ ನಿರ್ಣಾಯಕವಾಗುವ ನಿರೀಕ್ಷೆಯಿದೆ. ಕಳೆದ ವಿದರ್ಭ-ಸೌರಾಷ್ಟ್ರ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಒಟ್ಟು 29 ವಿಕೆಟ್​ಗಳನ್ನು ಸ್ಪಿನ್ ಬೌಲರ್​ಗಳೇ ಕಬಳಿಸಿದ್ದರು. ರಹಾನೆಗೆ ಮಹತ್ವದ ಪಂದ್ಯ

ಇದು ಕೆಂಪು ಚೆಂಡಿನ ಪಂದ್ಯವಾದರೂ, ರಹಾನೆಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ ಪ್ರತಿಯೊಂದು ಇನಿಂಗ್ಸ್ ಕೂಡ ನಿರ್ಣಾಯಕವಾಗಿರಲಿದೆ. ರಹಾನೆ ಕೊನೇ 2 ಇನಿಂಗ್ಸ್​ಗಳಲ್ಲಿ ಭಾರತ ಎ ತಂಡದ ಪರ ಕ್ರಮವಾಗಿ 59 ಮತ್ತು 91 ರನ್ ಬಾರಿಸಿದ್ದಾರೆ. ಈಗಾಗಲೆ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್ ಕೂಡ ರಹಾನೆಯ ವಿಶ್ವಕಪ್ ತಂಡದ ಸಾಲಿನಲ್ಲಿದ್ದಾರೆಂದು ಹೇಳಿರುವುದರಿಂದ ಪ್ರತಿ ಪಂದ್ಯದಲ್ಲೂ ಸ್ಥಿರ ನಿರ್ವಹಣೆ ತೋರಿದಷ್ಟು ಲಾಭವಾಗಲಿದೆ.

ಸಂಭಾವ್ಯ ತಂಡಗಳು

ವಿದರ್ಭ: ಫಯಾಜ್ ಫಜಲ್(ನಾಯಕ), ಸಂಜಯ್ ರಾಮಸ್ವಾಮಿ, ವಾಸಿಂ ಜಾಫರ್, ಮೋಹಿತ್ ಕಾಳೆ, ಗಣೇಶ್ ಸತೀಶ್, ಅಕ್ಷಯ್ ವಾಡ್ಕರ್, ಆದಿತ್ಯ ಸರ್ವಾಟೆ, ಕರ್ನೆವರ್, ಅಕ್ಷಯ್ ವಾಖರೆ, ದರ್ಶನ್ ನಲ್ಕಂಡೆ, ರಜನೀಶ್ ಗುರ್ಬಾನಿ.

ಶೇಷ ಭಾರತ: ಮಯಾಂಕ್ ಅಗರ್ವಾಲ್, ಅನ್ಮೋಲ್​ಪ್ರೀತ್ ಸಿಂಗ್, ಹನುಮ ವಿಹಾರಿ, ಅಜಿಂಕ್ಯ ರಹಾನೆ(ನಾಯಕ), ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿ.ಕೀ.), ಕೆ ಗೌತಮ್ ಧಮೇಂದ್ರಸಿನ್ಹಾ ಜಡೇಜಾ, ರಾಹುಲ್ ಚಹರ್, ಅಂಕಿತ್ ರಜಪೂತ್, ರೋನಿತ್ ಮೋರೆ/ಸಂದೀಪ್ ವಾರಿಯರ್.

ನವವಿವಾಹಿತ ವಾಖರೆ ಕಣಕ್ಕೆ!

ಅಕ್ಷಯ್ ವಾಖರೆ ಶುಕ್ರವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟರೂ ಈ ಪಂದ್ಯಕ್ಕೆ ಲಭ್ಯವಿರುವುದಾಗಿ ಹೇಳಿದ್ದಾರೆ. ಪಂದ್ಯದ 2ನೇ ದಿನ ಅಕ್ಷಯ್ ವಾಖರೆ ಅವರ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದ್ದರೂ, ಅದನ್ನು ಕೈಬಿಟ್ಟು ಅವರು ಪಂದ್ಯ ಆಡಲು ಸಜ್ಜಾಗಿದ್ದಾರೆ. ಅವರ ಸ್ಥಾನದಲ್ಲಿ ಆಡಲು ತಂಡದಲ್ಲಿ ಸೂಕ್ತ ಬದಲಿ ಸ್ಪಿನ್ನರ್ ಇಲ್ಲದಿರುವುದೂ ಇದಕ್ಕೆ ಕಾರಣವಾಗಿದೆ.

57  – ಇದು 57ನೇ ಇರಾನಿ ಕಪ್ ಪಂದ್ಯವಾಗಿದೆ. ಹಿಂದಿನ 56 ಆವೃತ್ತಿಗಳಲ್ಲಿ, ರಣಜಿ ಚಾಂಪಿಯನ್ ತಂಡ ಹೊರತುಪಡಿಸಿ ಇನ್ನುಳಿದ ತಂಡಗಳಲ್ಲಿ ಮಿಂಚಿರುವ ಆಟಗಾರರನ್ನು ಒಳಗೊಂಡ ಶೇಷ ಭಾರತ ತಂಡ 28 ಬಾರಿ ಪ್ರಶಸ್ತಿ ಜಯಿಸಿದ್ದರೆ, ರಣಜಿ ಚಾಂಪಿಯನ್ ತಂಡ 29 ಬಾರಿ ಚಾಂಪಿಯನ್ ಆಗಿದೆ. ಈ ಪೈಕಿ ಒಂದು ಬಾರಿ (1965-66) ಶೇಷ ಭಾರತ ಮತ್ತು ರಣಜಿ ಚಾಂಪಿಯನ್ ಮುಂಬೈ ಜಂಟಿ ಚಾಂಪಿಯನ್ ಆಗಿತ್ತು