ಜೋಗನ್ ಶಂಕರ್​ಗೆ ಪಿಆರ್​ಸಿಐ ಜೀವಮಾನ ಸಾಧನೆ ಪ್ರಶಸ್ತಿ

ಶಿವಮೊಗ್ಗ: ಜಿಲ್ಲೆಯಲ್ಲಿ 18,666 ವಿದ್ಯಾರ್ಥಿಗಳು ಮಾ.1ರಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲಿದ್ದಾರೆ.

ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ಒಟ್ಟು 33 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿದೆ. ಶಿವಮೊಗ್ಗದಲ್ಲಿ 12 ಹೊಸನಗರ ಹಾಗೂ ಸೊರಬ ತಾಲೂಕಿನಲ್ಲಿ ತಲಾ 2, ಭದ್ರಾವತಿ 6, ತೀರ್ಥಹಳ್ಳಿ ಹಾಗೂ ಶಿಕಾರಿಪುರ ತಾಲೂಕಿನಲ್ಲಿ ತಲಾ 3, ಸಾಗರ ತಾಲೂಕಿನಲ್ಲಿ 5 ಪರೀಕ್ಷಾ ಕೇಂದ್ರಗಳಿವೆ.

ಜಿಲ್ಲೆಯಲ್ಲಿ ಕಲಾ ವಿಭಾಗದಿಂದ 5,244, ವಾಣಿಜ್ಯ ವಿಭಾಗ 6,990 ಹಾಗೂ 6,432 ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸೇರಿ ಒಟ್ಟು 18,666 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಅರ್ಹತೆ ಪಡೆದಿದ್ದಾರೆ. 10,524 ವಿದ್ಯಾರ್ಥಿನಿಯರು ಹಾಗೂ 8,142 ವಿದ್ಯಾರ್ಥಿಗಳು ಅರ್ಹರಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ಮುಖ್ಯ ಅಧೀಕ್ಷಕ, ಓರ್ವ ಸಹ ಮುಖ್ಯ ಅಧಿಕ್ಷಕ ಮತ್ತು ಬೇರೆ ಜಿಲ್ಲೆಯ ಒಬ್ಬರು ಉಪನ್ಯಾಸಕರನ್ನು ವಿಶೇಷ ಜಾಗೃತದಳದ ಸದಸ್ಯರನ್ನಾಗಿ ನಿಯೋಜಿಸಲಾಗಿದೆ.

ಪರೀಕ್ಷೆಯ ಮೇಲುಸ್ತುವಾರಿ ನೋಡಿಕೊಳ್ಳಲು ಉಪನಿರ್ದೇಶಕರ ತಂಡವಲ್ಲದೆ ಬೇರೆ ಜಿಲ್ಲೆಗಳಿಂದ 10 ಜಾಗೃತ ತಂಡಗಳನ್ನು ನೇಮಿಸಿಕೊಳ್ಳಲಾಗಿದೆ. ಪ್ರತಿ ತಂಡದಲ್ಲಿ ಪ್ರಾಚಾರ್ಯರು ಹಾಗೂ ಮೂವರು ಉಪನ್ಯಾಸಕರಿರುತ್ತಾರೆ. ಈ ತಂಡಗಳು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಂಚರಿಸಿ ಪರೀಕ್ಷಾ ಅಕ್ರಮಗಳು ನಡೆಯದಂತೆ ನೋಡಿಕೊಳ್ಳುತ್ತವೆ.

ಪರೀಕ್ಷಾ ದಿನಗಳಂದು ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಿಸಿದ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕರು ಪ್ರವೇಶಿಸುವಂತಿಲ್ಲ. ನಿಷೇಧಿತ ಪ್ರದೇಶದಲ್ಲಿ 5 ಹಾಗೂ ಅದಕ್ಕಿಂತಲೂ ಹೆಚ್ಚಿನ ಜನರು ಗುಂಪು ಸೇರುವಂತಿಲ್ಲ. ಯಾವುದೇ ರೀತಿಯ ಘೊಷಣೆಗಳನ್ನು ಕೂಗುವಂತಿಲ್ಲ.

ಪರೀಕ್ಷಾ ಅವಧಿಯಲ್ಲಿ ಕೇಂದ್ರದ ಸುತ್ತ ಜೆರಾಕ್ಸ್, ಟೈಪಿಂಗ್ ಹಾಗೂ ಫ್ಯಾಕ್ಸ್ ಸೆಂಟರ್​ಗಳನ್ನು ತೆರೆಯುವಂತಿಲ್ಲ. ನಿಷೇಧಿತ ಪ್ರದೇಶದಲ್ಲಿ ಮೊಬೈಲ್ ಬಳಕೆ ಸಲ್ಲದು. ಪರೀಕ್ಷೆ ಮುಗಿಯುವವರೆಗೂ ರಾತ್ರಿ 10ರ ನಂತರ ಯಾವುದೇ ಜೆರಾಕ್ಸ್ ಸೆಂಟರ್​ಗಳನ್ನು ತೆರೆಯುವಂತಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಆದೇಶಿಸಿದ್ದಾರೆ.