ಇಂದಿನಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು: 15ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.18, 19ರಂದು ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

18 ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸುವರು. ಡಾ. ಡಿ.ಎಸ್.ಜಯಪ್ಪ ಗೌಡ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ರಾಜ್ಯ ಸಭಾ ಸದಸ್ಯ ಎಲ್.ಹನುಮಂತಯ್ಯ, ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿ.ಪಂ.ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಭಾಗವಹಿಸುವರು.

ದೇಸೀಯ ಪ್ರಜ್ಞೆ ಗೋಷ್ಠಿಯು ಮಧ್ಯಾಹ್ನ 2ಕ್ಕೆ ಬಿ.ತಿಪ್ಪೇರುದ್ರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸ್ತ್ರೀ ಪ್ರಜ್ಞೆ ಗೋಷ್ಠಿ ಸಂಜೆ 4ಕ್ಕೆ ಮಾಜಿ ಸಚಿವೆ ಮೋಟಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಿಪಂ ಸಿಇಒ ಸಿ.ಸತ್ಯಭಾಮಾ ಭಾಗವಹಿಸಲಿದ್ದಾರೆ.

ಜ.19 ರಂದು ಬೆಳಗ್ಗೆ 9.30ಕ್ಕೆ ಕಾವ್ಯಪ್ರಜ್ಞೆ ಕವಿಗೋಷ್ಠಿ ಮೈಸೂರು ಕವಯಿತ್ರಿ ಪೂರ್ಣಿಮಾ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಂದು ಮಧ್ಯಾಹ್ನ 12ಕ್ಕೆ 15ನೇಯ ಜಿಲ್ಲಾ ದರ್ಶನ ಏರ್ಪಡಿಸಲಾಗಿದೆ. ಶಾಸಕ ಡಿ.ಎಸ್.ಸುರೇಶ್ ಪ್ರವೇಶ ನುಡಿಯನ್ನಾಡಲಿದ್ದಾರೆ, ಕ.ರಾ.ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಜಯರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ.

ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಜಿಲ್ಲೆಯಲ್ಲಿ ಉದ್ಯಮ ಹಾಗೂ ಉದ್ಯೋಗ ಸೃಷ್ಠಿಗಿರುವ ಸವಾಲುಗಳು-ಸಾಧ್ಯತೆಗಳು ಬಗ್ಗೆ, ಪರಿಸರವಾದಿ ಕಲ್ಕುಳಿ ವಿಠ್ಠಲ್ ಹೆಗಡೆ ಕಸ್ತೂರಿ ರಂಗನ್ ವರದಿ ತಂದಿರುವ ಅತಂಕಗಳು, ಶಾಸಕ ವೈಎಸ್​ವಿ ದತ್ತ ಮಲೆನಾಡಿನಿಂದ ಬಯಲು ಸೀಮೆಗೆ ನೀರೊದಗಿಸುವ ಬಗ್ಗೆ ರ್ಚಚಿಸಲಿದ್ದಾರೆ. ಮಧ್ಯಾಹ್ನ 2.15ಕ್ಕೆ ಸಮ್ಮೇಳನದಲ್ಲಿ ಬದುಕು ಬರಹ ಕುರಿತು ಉಪನ್ಯಾಸ ಮತ್ತು ಸಂವಾದ ಏರ್ಪಡಿಸಲಾಗಿದೆ. ಐ.ಡಿ.ಎಸ್.ಜಿ. ಕಾಲೇಜು ಪ್ರಾಧ್ಯಾಪಕ ಡಾ. ಎಚ್.ಎಂ.ಮಹೇಶ್ ಸಮ್ಮೇಳನಾಧ್ಯಕ್ಷರ ಬದುಕು-ಬರಹ ಬಗ್ಗೆ ಉಪಾನ್ಯಾಸ ನೀಡಲಿದ್ದಾರೆ.

ಅಂದು ಮಧ್ಯಾಹ್ನ 3.45ಕ್ಕೆ ಹಾಸ್ಯ ಪ್ರಜ್ಞೆಯನ್ನು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಜೆ 6ಕ್ಕೆ ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಿ.ಎಸ್.ಜಯಪ್ಪ ಗೌಡ ಸಮ್ಮೇಳನಾಧ್ಯಕ್ಷರ ನುಡಿಯನ್ನಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್ ಧಮೇಗೌಡ ಉಪಸ್ಥಿತರಿರುವರು.

ಮೂಡಿಗೆರೆಯಲ್ಲಿ ಭವ್ಯ ವೇದಿಕೆ

ಮೂಡಿಗೆರೆ: ನುಡಿ ಜಾತ್ರೆಗೆ ಆಗಮಿಸುವವರ ಆತಿಥ್ಯಕ್ಕೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಭವ್ಯ ವೇದಿಕೆ ಸಜ್ಜುಗೊಳಿಸಲಾಗಿದೆ.ವಿವಿಧ ಮಳಿಗೆಗಳು, ಸ್ವಾಗತ ಕಮಾನುಗಳು, ಪಟ್ಟಣಕ್ಕೆ ಪ್ರವೇಶಿಸುವ ರಸ್ತೆಗಳಲ್ಲಿ ಸ್ವಾಗತ ದ್ವಾರಗಳು, ಕನ್ನಡಾಂಬೆಯ ಬಾವುಟಗಳು ಮತ್ತು ಬಂಟಿಂಗ್ಸ್​ಗಳು ರಾರಾಜಿಸುತ್ತಿವೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಜನಪದ ಮೇಳಗಳು ಮತ್ತು ಸ್ಥಳೀಯ ಕಲಾವಿದರು ಪಾಳ್ಗೊಳ್ಳಲಿದ್ದಾರೆ. ಜ.18ರಂದು ಬೆಳಗ್ಗೆ 7.30ಕ್ಕೆ ದಿ.ಪೂರ್ಣಚಂದ್ರ ತೇಜಸ್ವಿ ಮಹಾದ್ವಾರವನ್ನು ತಾಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಉದ್ಘಾಟಿಸಲಿದ್ದಾರೆ. ದಿ.ಚಂದ್ರಯ್ಯನಾಯ್ಡು ಮಹಾಮಂಟಪವನ್ನು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಉದ್ಘಾಟಿಸಲಿದ್ದಾರೆ. 8 ಗಂಟೆಗೆ ತಹಸೀಲ್ದಾರ್ ಪದ್ಮನಾಭಶಾಸ್ತ್ರಿ ಅವರಿಂದ ರಾಷ್ಟ್ರಧ್ವಜಾರೋಹಣ, ಬಳಿಕ ಇಒ ಡಿ.ಡಿ.ಪ್ರಕಾಶ್ ಅವರಿಂದ ನಾಡಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಅವರಿಂದ ಪರಿಷತ್​ನ ಧ್ವಜಾರೋಹಣ, ನಂತರ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷ ಡಾ. ಡಿ.ಎಸ್.ಜಯಪ್ಪ ಗೌಡ ಅವರ ಮೆರವಣಿಗೆ ನಡೆಯಲಿದೆ. ಸಂಸದ ಜೈರಾಮ್ ರಮೇಶ್, ಸ್ವಾಗತ ಸಮಿತಿ ಕೋಶಾಧ್ಯಕ್ಷ ರಂಜನ್ ಅಜಿತ್​ಕುಮಾರ್, ಪಪಂ ಅಧ್ಯಕ್ಷೆ ರಮೀಜಾಬಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಎರಡೂ ದಿನ ಊಟೋಪಚಾರ

ಸಮ್ಮೇಳನದಲ್ಲಿ ಉತ್ತಮ ಊಟೋಪಚಾರ ನೀಡಲು ಸಮ್ಮೇಳನದ ಆಹಾರ ಸಮಿತಿ ಗುರುವಾರವೇ ಸಿದ್ಧತೆ ನಡೆಸಿದ್ದು, ಹತ್ತು ಮಂದಿ ಸ್ಥಳೀಯ ಬಾಣಸಿಗರ ತಂಡ ಕಾರ್ಯಪ್ರವೃತ್ತವಾಗಿದೆ. ಸಮ್ಮೇಳನದ ಮೊದಲ ದಿನ ಬೆಳಗ್ಗೆ ಉಪಾಹಾರಕ್ಕೆ ಕೇಸರಿಬಾತ್, ಅವರೆಕಾಳು ಬಾತ್, ಜತೆಗೆ ಕಾಫಿ, ಟೀ ನೀಡಲಾಗುವುದು. ದಾಹ ತಣಿಸಲು ಮಜ್ಜಿಗೆ ಒದಗಿಸಲಾಗುತ್ತಿದೆ.ಅನ್ನ, ಸಾಂಬಾರು, ತಿಳಿಸಾರು, ಹಪ್ಪಳ, ಪಲ್ಯ, ಬಜ್ಜಿ ಮಧ್ಯಾಹ್ನದ ಊಟೋಪಚಾರಕ್ಕೆ ಸಿದ್ಧಪಡಿಸಲಾಗುವುದು. ಸಂಜೆ ಕಾಫಿ ಜತೆಗೆ ಬಜ್ಜಿ ನೀಡಲಾಗುವುದು. ರಾತ್ರಿ ಊಟೋಪಚಾರವೂ ಮಧ್ಯಾಹ್ನದಂತೆಯೇ ಇದ್ದರೂ ಆಹಾರದಲ್ಲಿ ವೈವಿಧ್ಯತೆ ಇರಲಿದೆ. ಎರಡನೇಯ ದಿನ ಬೆಳಗ್ಗೆ ಉಪಾಹಾರಕ್ಕೆ ಟೊಮ್ಯಾಟೋ ಬಾತ್, ಕಾಫಿ, ಟೀ ವ್ಯವಸ್ಥೆ ಇದ್ದರೆ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಮೊದಲ ದಿನದಂತೆಯೇ ಮೆನು ಇದ್ದರೂ ವೈವಿಧ್ಯತೆ ಇರಲಿದೆ ಎಂದು ಆಹಾರ ಸಮಿತಿಯ ಅಧ್ಯಕ್ಷ ಕೊಟ್ಟಿಗೆಹಾರ ಸಂಜಯ್ ಗೌಡ ತಿಳಿಸಿದ್ದಾರೆ.