Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಇಂಥವರನ್ನು ಗುರುತಿಸಿ ಗೌರವಿಸಿ

Friday, 27.10.2017, 3:04 AM       No Comments

ಶಿಶುನಾಳ ಷರೀಫ, ಸರ್ ಮಿರ್ಜಾ ಇಸ್ಮಾಯಿಲ್, ಅಬ್ದುಲ್ ಕಲಾಂ ಮುಂತಾದವರು ಆದರ್ಶದ ಮಾದರಿಗಳಾಗಿ ಕಣ್ಣೆದುರು ಇದ್ದರೂ ನಮ್ಮ ಸೆಕ್ಯುಲರ್​ವಾದಿಗಳಿಗೆ ಮಾತ್ರ ಗೋಚರಿಸದು. ಇವರಿಗೆ ತುಷ್ಟೀಕರಣದ ಸಲುವಾಗಿ ಟಿಪ್ಪು ಜಯಂತಿಯಂಥ ಕಾರ್ಯಕ್ರಮಗಳೇ ಬೇಕು.

| ಡ್ಯಾನಿ ಪಿರೇರಾ

ವಿವಾದಾತ್ಮಕ ವ್ಯಕ್ತಿಗಳನ್ನು ರಾಷ್ಟ್ರದ ಜನಮಾನಸದಲ್ಲಿ ಸರ್ವಮಾನ್ಯ ಮಾಡಬೇಕೆಂಬ ಪ್ರಯತ್ನ ಭಾರತದ ಇತಿಹಾಸದುದ್ದಕ್ಕೂ ನಿರಂತರವಾಗಿ ನಡೆದಿದೆ. ಆಳುವವರ ಮರ್ಜಿಗೆ ಸಿಲುಕಿದ ಕೆಲ ಇತಿಹಾಸಕಾರರು ಮಿಥ್ಯೆಯನ್ನು ಸತ್ಯವೆಂದು ತುರುಕುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಿದ್ಧಾಂತಗಳ ಮೂಸೆಯಲ್ಲಿ ದೇಶಭಕ್ತರು ಖಳನಾಯಕರಾದರೆ, ಖಳನಾಯಕರು ದೇಶಭಕ್ತರಾಗಿ ರೂಪಾಂತರಗೊಂಡಿದ್ದಾರೆ!

ಟಿಪ್ಪು ಜಯಂತಿ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕೆಲವರಿಗೆ ಟಿಪ್ಪು ಜಾತ್ಯತೀತನಾಗಿಯೂ, ಮತ್ತೆ ಕೆಲವರಿಗೆ ಮತಾಂಧನಾಗಿಯೂ ಗೋಚರಿಸುತ್ತಿದ್ದಾನೆ. ಮುಸಲ್ಮಾನರಲ್ಲೇ ಈ ದೇಶಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟ ಮಹನೀಯರಿದ್ದಾರೆ. ಅವರ್ಯಾರನ್ನೂ ಸಮಾಜ ಧರ್ಮದ ಹೆಸರಲ್ಲಿ ಗುರುತಿಸುವುದಿಲ್ಲ. ಅವರು ಇಸ್ಲಾಂ ಚಿಂತನೆಗಳೊಂದಿಗೆ ಬೆಳೆದರೂ ತಮ್ಮ ಪ್ರಪಂಚವನ್ನು ವಿಶಾಲಗೊಳಿಸಿದ್ದರಿಂದ ಮುಸ್ಲಿಮೇತರರಲ್ಲೂ ಅವರು ಆದರಣೀಯರಾಗಿದ್ದಾರೆ. ಆದರೆ ಸೆಕ್ಯುಲರ್ ಪಟ್ಟಿಯಲ್ಲಿ ಅವರಿಗೆ ಮಹತ್ವದ ಸ್ಥಾನವಿಲ್ಲ. ಈ ದೇಶದಲ್ಲಿ ಜಾತ್ಯತೀತ ಎನಿಸಿಕೊಳ್ಳುವವ ಅಲ್ಪಸಂಖ್ಯಾತ ಸಮಾಜದಲ್ಲಿ ಗೌರವಿಸಲ್ಪಡಬೇಕು ಎಂಬುದು ಸೆಕ್ಯುಲರ್ ವಲಯದಲ್ಲಿರುವ ಅಘೊಷಿತ ನಿಯಮ. ಇದೇ ಮತೀಯ ಸಾಮರಸ್ಯಕ್ಕೆ ತೊಡಕಾಗಿರುವ ಅಂಶ!

ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಒಬ್ಬ ಶ್ರದ್ಧಾವಂತ ಮುಸಲ್ಮಾನರಾಗಿದ್ದರು. ಅವರದು ಸರ್ವಧರ್ಮ ಸಮನ್ವಯಭಾವದ ಮೈವೆತ್ತರೂಪ. ಅವರು ಕರ್ಮಠ ಮುಸಲ್ಮಾನರಾಗಿರದ ಕಾರಣ ತಮ್ಮ ಸಮಾಜದಲ್ಲಿ ಸರ್ವಮಾನ್ಯರಾಗಲಿಲ್ಲ! ಅವರ ಸರ್ವಧರ್ಮ ಸಮಭಾವವನ್ನು ಗೌರವಿಸಿ ಆದರಿಸಿದ್ದು ಸಾಮಾನ್ಯ ಜನತೆ ಹಾಗೂ ಮಠ-ಮಾನ್ಯಗಳೇ. ಹಾಗಾಗಿ ಘೊಷಿತ ಜಾತ್ಯತೀತರು ಕಲಾಂರ ಸಮನ್ವಯತೆಯನ್ನು ಮಾದರಿಯಾಗಿ ತೆಗೆದುಕೊಳ್ಳಲಿಲ್ಲ.

ಶಿಶುನಾಳ ಶರೀಫರನ್ನು ಕರ್ನಾಟಕದ ‘ಕಬೀರ್ ದಾಸ’ ಎನ್ನಲಾಗುತ್ತದೆ. ಹಿಂದೂ, ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಅವರನ್ನು ಸಂತರೆಂದು ಪರಿಗಣಿಸಿದ್ದಾರೆ. ಷರೀಫರು ಭಾರತೀಯ ಮೌಲ್ಯವಾಗಿರುವ ಎಲ್ಲ ನಂಬಿಕೆಗಳನ್ನು ಗೌರವಿಸುವ ಮನೋಭೂಮಿಕೆಯಲ್ಲಿ ಬೆಳೆದವರಾದ್ದರಿಂದ ಇಲ್ಲಿನ ಹಿಂದುಗಳೊಂದಿಗೆ ಸಮರಸರಾದರು. ಆದರೆ ಕರ್ಮಠರು ಇವರನ್ನು ದೂರವಿಟ್ಟ ಪರಿಣಾಮ ಅವರು ಸೆಕ್ಯುಲರ್ ವಲಯದ ಧ್ರುವತಾರೆಯಾಗಲಿಲ್ಲ.

ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಉಲ್ಲೇಖಿಸಿದ ಒಂದು ಪ್ರಸಂಗ ಇದು: ಅಂದಿನ ದಿನದಲ್ಲಿ ಮೈಸೂರು ಸುಂದರ, ಸ್ವಚ್ಛ ಊರಾಗಿತ್ತು. ಬೆಳಗಿನ ಜಾವದಲ್ಲಿ ಒಬ್ಬ ಅಧಿಕಾರಿ ಕುದುರೆಯ ಮೇಲೆ ಕುಳಿತು ರಸ್ತೆ ಬದಿಗಳನ್ನು ಸ್ವಚ್ಛಮಾಡಿದ್ದಾರೋ ಇಲ್ಲವೋ ಎಂದು ಪರಿಶೀಲಿಸಲು ಬರುತ್ತಿದ್ದರು. ಅವರು ಮೈಸೂರು ರಾಜ್ಯದ ದಿವಾನರಾದ ಮಿರ್ಜಾ ಇಸ್ಮಾಯಿಲ್! ‘ಮಿರ್ಜಾ ಇಸ್ಮಾಯಿಲ್ ಅವರ ಸಂಭಾವ್ಯತೆ, ವೈಯಕ್ತಿಕ ಸೊಬಗು ಇವೆಲ್ಲಕ್ಕೂ ತಿಲಕವಿಟ್ಟ ಹಾಗೆ ಆಳವಾದ ಜ್ಞಾನ, ತಿಳುವಳಿಕೆ, ಹಾಸ್ಯಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆಗಳು ಅತ್ಯಂತ ಶ್ರೇಷ್ಠ ಹಾಗೂ ಯಶಸ್ವೀ ಆಡಳಿತಗಾರನನ್ನಾಗಿ ರೂಪಿಸಿದ್ದವು’ ಎಂದು ಸರ್ ಸಿ. ವಿ. ರಾಮನ್ ಹೇಳಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮಿರ್ಜಾ ಇಸ್ಮಾಯಿಲ್ ಜೊತೆಗಾರಿಕೆಯ ಅವಧಿ ಮೈಸೂರು ಸಂಸ್ಥಾನದ ಸ್ವರ್ಣಕಾಲ ಎಂದು ಬಣ್ಣಿತವಾಗಿದೆ. ವಿಭಿನ್ನ ಧರ್ಮಗಳ ನೆಲೆಯಿಂದ ಬಂದರೂ ಸೋದರರಂತೆ ಒಂದುಗೂಡಿ ಕೆಲಸ ಮಾಡಿದ ಇವರ ಕಾರ್ಯ ಮೆಚ್ಚಿ ‘ಇದೋ ಇಲ್ಲಿದೆ ರಾಮರಾಜ್ಯ’ ಎಂದು ಗಾಂಧಿ ವರ್ಣಿಸಿದ್ದರು. ಸ್ವಾತಂತ್ರ್ಯ ಹೋರಾಟದ ಆ ಅವಧಿಯಲ್ಲಿ ಕಾಂಗ್ರೆಸ್ ಪದೇಪದೆ ಚಳವಳಿಗಳನ್ನು ನಡೆಸುತ್ತಿತ್ತು. ಆಗ ಗಾಂಧಿ, ನೆಹರು ಅಂತಹ ನಾಯಕರೊಡನೆ ಮಹಾರಾಜರ ಸಂಪರ್ಕವನ್ನು ಮಿರ್ಜಾ ಇಸ್ಮಾಯಿಲ್ಲರು ಆತ್ಮೀಯವಾಗಿರಿಸಿದ್ದರು. ಈ ಚಳವಳಿಗಳ ಸಮಯದಲ್ಲಿ ಯಾವುದೇ ಗಲಭೆಗಳು ಉಂಟಾಗದಂತೆ ಪರಿಸ್ಥಿತಿ ನಿಭಾಯಿಸುವುದು ಮಿರ್ಜಾ ಇಸ್ಮಾಯಿಲ್ಲರ ದಕ್ಷತೆಯನ್ನು ಅವಲಂಬಿಸಿತ್ತು. 1941ರಲ್ಲಿ ಜೈಪುರ ಸಂಸ್ಥಾನದಲ್ಲಿ ಅಧಿಕಾರ ವಹಿಸಿಕೊಂಡ ಸರ್ ಮಿರ್ಜಾ ಅಲ್ಲಿಯೂ ದಕ್ಷತೆಯ ಪ್ರಭಾವ ಬೀರಿದರು. ಇದರಿಂದಾಗಿ ಜಯಪುರ ನಗರ ಕೈಗಾರಿಕೋದ್ಯಮದ ಹೊಸ ಶಕೆ ಕಂಡಿತು. ಪಾಕಿಸ್ತಾನವನ್ನು ಆಧುನಿಕವಾಗಿ ನಿರ್ವಿುಸಬೇಕೆಂಬ ಬಯಕೆಯಿಂದ ಅಲ್ಲಿನ ಪ್ರಜೆಯಾಗಬೇಕೆಂದು ಆಹ್ವಾನಿಸಿದ ಮಹಮ್ಮದ್ ಆಲಿ ಜಿನ್ನಾರ ಕೋರಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಮಿರ್ಜಾ, ‘ಭಾರತದ ವಿಭಜನೆಗೆ ನನ್ನ ಸ್ಪಷ್ಟ ವಿರೋಧವಿದೆ’ ಎಂದು ನೇರವಾಗಿ ತಿಳಿಸಿ ಜಿನ್ನಾ ಅವರಿಗೆ ನಿಷ್ಠುರರಾದರು.

1946ರಲ್ಲಿ ಹೈದರಾಬಾದಿನ ದಿವಾನರಾದ ಮಿರ್ಜಾ ಇಸ್ಮಾಯಿಲ್ಲರು ಹೈದರಾಬಾದ್ ನಿಜಾಮನಿಗೆ ಯಾವುದೇ ತಕರಾರಿಲ್ಲದೆ ಭಾರತದ ಭಾಗವಾಗಲು ಮನವೊಲಿಸಲು ಪ್ರಯತ್ನಿಸಿದರು. ಆತ ಮಾತು ಕೇಳದೆ ಹೋದಾಗ ಕೆಲವು ತಿಂಗಳುಗಳಲ್ಲೇ ಕೆಲಸ ಬಿಟ್ಟು ಬಂದರು. ಮಿರ್ಜಾ ಇಸ್ಮಾಯಿಲ್ಲರು ಕರ್ಮಠ ಮುಸಲ್ಮಾನರಾಗಿರಲಿಲ್ಲ. ಹಾಗಾಗಿ ಸೆಕ್ಯುಲರ್ ವಲಯ ಅವರನ್ನು ಸಮನ್ವಯದ ಆದರ್ಶವಾಗಿ ಸ್ವೀಕರಿಸಲಿಲ್ಲ.

ಮೇಲಿನವು ಕೆಲವು ಉದಾಹರಣೆಗಳು ಮಾತ್ರ. ಈ ರೀತಿ ಜಾತಿ, ಮತ ಪಂಥಗಳನ್ನು ಮೀರಿದ್ದ ಮೇರುವ್ಯಕ್ತಿಗಳು ಮುಸ್ಲಿಂ ಸಮಾಜದಲ್ಲಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿಯೇ.

ಅಸಂಖ್ಯ ದೇಶಭಕ್ತ, ಸರ್ವಧರ್ಮ ಸಮನ್ವಯತೆಯನ್ನು ಒಪ್ಪುವ ಮುಸಲ್ಮಾನರು ಈ ದೇಶದಲ್ಲಿದ್ದಾರೆ. ಆದರೆ ದೇಶ ವಿಭಜನೆಗೊಂಡ ತರುವಾಯ ಇಂಥ ಶ್ರೇಷ್ಠ ಹಾಗೂ ಸಮನ್ವಯಭಾವದ ವಿಚಾರಗಳುಳ್ಳ ವ್ಯಕ್ತಿಗಳ, ಎಲ್ಲರ ನಂಬಿಕೆಗಳನ್ನು ಗೌರವಿಸಿ ಮುನ್ನಡೆಸಿ ಸಾಮರಸ್ಯದ ಸಂಕೇತವಾದ ಮುಸಲ್ಮಾನ ಮೇರುಪುರುಷರನ್ನು ಮುನ್ನೆಲೆಗೆ ತಂದು ಅವರ ಆದರ್ಶದ ಬದುಕನ್ನು ಪರಿಚಯಿಸಬೇಕಾದ ಕೆಲಸವನ್ನು ಈ ದೇಶವನ್ನು ದೀರ್ಘಾವಧಿ ಆಳಿದ ಕಾಂಗ್ರೆಸ್ ಅಥವಾ ಇತರೆ ಸೆಕ್ಯುಲರ್ ಪಕ್ಷಗಳಾಗಲೀ ಅಥವಾ ಎಡಪಂಥೀಯ ವಿಚಾರವಾದಿ ಬುದ್ಧಿಜೀವಿಗಳಾಗಲೀ ಮಾಡಲಿಲ್ಲ. ಕಬೀರದಾಸರು, ಶಿಶುನಾಳ ಷರೀಫರು, ಮಿರ್ಜಾ ಇಸ್ಮಾಯಿಲ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಎ ಪಿ ಜೆ ಅಬ್ದುಲ್ ಕಲಾಂ, ಅಶ್ವಾಕ್ ವುಲ್ಲಾಖಾನ್ ರಂಥ ಸಂತಶ್ರೇಷ್ಠರು, ಸಮಾಜ ಸೇವಕರು, ವಿಜ್ಞಾನಿಗಳು, ಕ್ರಾಂತಿಕಾರಿಗಳನ್ನು ಸಮಾಜಕ್ಕೆ ಇನ್ನಷ್ಟು ಪರಿಚಯಿಸುವ ಮೂಲಕ ಅವರ ಸಾಮರಸ್ಯದ ದಿವ್ಯ ಸಂದೇಶವನ್ನು ನೀಡುವ, ಹಿಂದು- ಮುಸ್ಲಿಂ- ಕ್ರೖೆಸ್ತರೆಲ್ಲರು ಒಂದೇ ಎಂಬ ಸಂದೇಶವನ್ನು ಸಾರುವ ಅಪರೂಪದ ಅವಕಾಶವನ್ನು ಕೈ ಚೆಲ್ಲಿದ ಪರಿಣಾಮ ಸ್ವಾತಂತ್ರ್ಯ ಬಂದು 70 ವಸಂತಗಳು ಕಳೆದರೂ ಇಂದಿಗೂ ಜಾತಿ, ಮತಗಳ ಹೆಸರಲ್ಲಿ ಬಡಿದಾಡುವ ಸ್ಥಿತಿ ಮುಂದುವರಿದಿದೆ. ಇತಿಹಾಸದಿಂದ ಪಾಠ ಕಲಿಯದ ಪರಿಣಾಮ ತುಷ್ಟೀಕರಣದ ವಿಷಫಲ ಮತ್ತಷ್ಟು ಹುಲುಸಾಗಿ ಬೆಳೆದಿದೆ. ಹಿಂದುಗಳು- ಕ್ರೖೆಸ್ತರ ನಂಬಿಕೆಗಳ ಮೇಲೆ ಗದಾಪ್ರಹಾರ ನಡೆಸಿ ಅವರನ್ನು ಮತಾಂತರ ಮಾಡಿ, ಒಪ್ಪದವರನ್ನು ಹತ್ಯೆಗೈದ ಟಿಪ್ಪುವನ್ನು ಸಾಮರಸ್ಯದ ಸಂಕೇತವಾಗಿ ಸ್ವೀಕರಿಸಹೊರಟಿರುವುದು, ಆತನಿಗೆ ಜಾತ್ಯತೀತ ಎನ್ನುವ ಪಟ್ಟನೀಡಲು ಮುಂದಾಗಿರುವುದಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ಮತಾಂಧರನ್ನು ಸಹ ರಾಷ್ಟ್ರವಾದಿಗಳನ್ನಾಗಿಸುವ ತುಷ್ಟೀಕರಣದ ಮುಂದುವರಿದ ಭಾಗ ಇದು ಎನ್ನಲು ಭಾರಿ ಜ್ಞಾನವೇನೂ ಬೇಕಿಲ್ಲ. ಇನ್ನೆಷ್ಟು ಕಾಲ ಈ ಸಾಮರಸ್ಯದ ನಾಟಕ? ಬೇವು ಬಿತ್ತಿದರೆ ಮಾವು ಬರುತ್ತದೆಯೇ?!

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

Back To Top