Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಇಂಡಿಯಾದ ಮ್ಯಾಝಿನಿ ಶ್ಯಾಮ್​ಜೀ ಕೃಷ್ಣವರ್ಮ

Thursday, 09.11.2017, 3:03 AM       No Comments

| ಡಾ. ಬಾಬು ಕೃಷ್ಣಮೂರ್ತಿ

ಪಾಂಡಿತ್ಯ, ರಾಷ್ಟ್ರಭಕ್ತಿ ಮೂಲಕ ಲಂಡನ್ನಿನಲ್ಲೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೆಚ್ಚು ತುಂಬಿದ ಪಂಡಿತ್ ಶ್ಯಾಮ್​ಜೀ ಕೃಷ್ಣವರ್ಮ ಮಹರ್ಷಿ ದಯಾನಂದರ ಆಪ್ತ ಶಿಷ್ಯ. ಶ್ಯಾಮ್​ಜೀ ಮೃತಪಟ್ಟ 55 ವರ್ಷಗಳ ಬಳಿಕ ಅವರ ಚಿತಾಭಸ್ಮ ಭಾರತಕ್ಕೆ ಬಂದಿತು ಮತ್ತು ಇದರ ಹಿಂದೆ ಈಗಿನ ಪ್ರಧಾನಿಯ ಶ್ರಮವಿತ್ತು.

 

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ‘ಸ್ವರಾಜ್ಯ’ ಎಂಬ ಪದವನ್ನು ಮೊದಲು ಬಳಸಿದವರು ದಾದಾಭಾಯ್ ನವರೋಜಿ!

ಈ ಮಾತು ಎಷ್ಟು ಸತ್ಯ?

ಗಾಂಧೀಜಿಯವರು ಅಸಹಕಾರ ಆಂದೋಲನ ಮತ್ತು ಅಹಿಂಸಾತ್ಮಕ ಹೋರಾಟದ ಕಲ್ಪನೆಗಳನ್ನು ನೀಡಿದ ಮೊಟ್ಟ ಮೊದಲಿಗರು!

ಇದು ನಿಜವೇ?

ಇವನ್ನು ನಾವು ಒಪ್ಪಿಕೊಂಡರೆ ಇನ್ನೊಬ್ಬ ಮಹಾನ್ ದೇಶಭಕ್ತನಿಗೆ ನಾವು ಘೊರ ಅಪಚಾರ ಮಾಡಿದಂತೆ.

ದಾದಾಭಾಯ್ ನವರೋಜಿ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ 1906ರಲ್ಲಿ ‘ಸ್ವರಾಜ್ಯ’ ಪದವನ್ನು ಬಳಸುವುದಕ್ಕೆ ಕೆಲವು ವರ್ಷಗಳ ಮೊದಲೇ ಒಬ್ಬ ಮಹಾನ್ ದೇಶಭಕ್ತ ಲಂಡನ್ನಿನಲ್ಲಿ ‘ಸ್ವರಾಜ್ಯ’ ಪದವನ್ನು ಹೋಂ ರೂಲ್ ಎಂಬ ಪದದ ಬಳಕೆಯ ಮೂಲಕ ಜಾರಿಗೆ ತಂದಿದ್ದ. ದಾದಾಭಾಯ್ ಅವರು ಅದನ್ನೇ ಕಲ್ಕತ್ತಾ ಕಾಂಗ್ರೆಸ್​ನಲ್ಲಿ ಪುನರುಚ್ಚರಿಸಿದರಷ್ಟೇ.

ಗಾಂಧೀಜಿ ರಾಜಕೀಯವನ್ನು ಪ್ರವೇಶಿಸುವ ಇಪ್ಪತ್ತು ವರ್ಷಗಳಿಗೂ ಹಿಂದೆ ಭಾರತದಲ್ಲಿನ ಬ್ರಿಟಿಷ್ ಸರ್ಕಾರದೊಂದಿಗೆ ಎಲ್ಲ ಬಗೆಯಲ್ಲೂ ಅಸಹಕಾರ ಹೂಡಬೇಕೆಂದು ತನ್ನ ಪತ್ರಿಕೆಯಲ್ಲಿ ಕರೆ ನೀಡಿದವನು ಆ ಮಹಾನ್ ದೇಶಭಕ್ತನೇ! ಅಹಿಂಸಾತ್ಮಕ ಹೋರಾಟದ ದಾರಿಯನ್ನು ಸೂಚಿಸಿದರೂ ಭಾರತವನ್ನು ಪಾದಾಕ್ರಾಂತ ಮಾಡಿಕೊಂಡಿದ್ದ ಬ್ರಿಟಿಷರನ್ನು ಅಲ್ಲಿಂದ ಕಿತ್ತೊಗೆಯಲು ಅನಿವಾರ್ಯವೆನಿಸಿದರೆ ಶಸ್ತ್ರಾಸ್ತ್ರಗಳನ್ನು ಬಳಸಬೇಕೆಂದು ಶತ್ರುಗಳ ಭೂಮಿಯಿಂದಲೇ ಘೊಷಿಸಿದ ಗಂಡುಗಲಿ ಆ ಮಹಾನ್ ದೇಶಭಕ್ತ. ತಾನು ನುಡಿದಂತೆ ಜೀವನ ಪರ್ಯಂತ ನಡೆದ ಆ ದೇಶಭಕ್ತ ಭಾರತ ಸ್ವಾತಂತ್ರ್ಯ ಹೋರಾಟದ ಚರಿತ್ರೆಯ ಪುಟಗಳಲ್ಲಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ.

55 ವರ್ಷಗಳ ನಂತರ ತಾಯ್ನಾಡಿಗೆ ಬಂದ ಅವನ ಚಿತಾಭಸ್ಮ: ದೇಶ ಸ್ವಾತಂತ್ರ್ಯ ಪಡೆದ ಹೊಸದರಲ್ಲಿ ಅಧಿಕಾರಕ್ಕೇರಿ ಕುಳಿತ ಮೊದಲಿಗರು ಇಂಥ ಮಹಾನುಭಾವರಾರೂ ಭಾರತೀಯರ ಗಮನಕ್ಕೆ ಬರಲೇಬಾರದೆಂದು ಧೂರ್ತತನದಿಂದ ವರ್ತಿಸಿ ಕುಟಿಲ ಬುದ್ಧಿಯ ಬುದ್ಧಿಜೀವಿ ಆಸ್ಥಾನ ವಿದ್ವಾಂಸರ ಮೂಲಕ ಅವರ ಹೆಸರುಗಳನ್ನು ಮರೆಮಾಚಿದರು. ಆದರೆ ಈಗಿನ ದೇಶಭಕ್ತ ಪ್ರಧಾನಮಂತ್ರಿ ಆ ಮರೆತು ಹೋದ ಮಹಾನುಭಾವನ ನೆನಪನ್ನು ಮಾಡಿಕೊಡಲು ಅವರು ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಛಲದಿಂದ ಹಲವು ಪ್ರಯತ್ನಗಳನ್ನು ಮಾಡಿದ್ದುಂಟು.

1930ರಲ್ಲಿ ಆ ದೇಶಭಕ್ತ ಸ್ವಿಟ್ಜರ್​ಲ್ಯಾಂಡ್​ನ ಜಿನೀವಾದಲ್ಲಿ ಕಾಲವಾದಾಗ ಆತ ತನ್ನ ಸಾವಿನ ನಂತರ ತನ್ನ ಚಿತಾಭಸ್ಮವನ್ನು ಜಿನೀವಾದಲ್ಲಿಯೇ ಇರಿಸಿಕೊಂಡಿದ್ದು ಭಾರತ ಸ್ವತಂತ್ರಗೊಂಡ ಮೇಲೆ ಅಲ್ಲಿಗೆ ಕಳುಹಿಸಬೇಕೆಂದು ಸ್ವಿಟ್ಜರ್​ಲ್ಯಾಂಡ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ. ಈ ಸಂಗತಿಯನ್ನು 2003ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಗಮನಕ್ಕೆ ತಂದವರು ಪ್ಯಾರಿಸ್ಸಿನಲ್ಲಿ ನೆಲೆಸಿದ್ದ ಬಂಗಾಳದ ಮಹಾನ್ ಕ್ರಾಂತಿಕಾರಿ ಬಾಘಾ ಜತೀನನ ಸೋದರಳಿಯ ಹಾಗೂ ಪ್ರಸಿದ್ಧ ಲೇಖಕ ಡಾ. ಪೃಥ್ವೀಂದ್ರನಾಥ ಮುಖರ್ಜಿ. ಮೋದಿ ಸ್ವಿಟ್ಜರ್​ಲ್ಯಾಂಡ್​ಗೆ ಹೋಗಿ ಅಲ್ಲಿನ ಸರ್ಕಾರದೊಂದಿಗೆ ಮಾತನಾಡಿ ಸ್ವತಃ ಚಿತಾಭಸ್ಮ ಕರಂಡವನ್ನು ಮುಂಬೈಗೆ ತಂದರು. ಅಲ್ಲಿ ಅದಕ್ಕೆ ದೇಶಾಭಿಮಾನಿ ಜನರಿಂದ ಅಪೂರ್ವ ಸ್ವಾಗತ ದೊರೆಯಿತು. ಆನಂತರ ಇಡೀ ಗುಜರಾತ್​ನಲ್ಲಿ ಎಲ್ಲಡೆ ಚಿತಾಭಸ್ಮ ಕರಂಡವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಗೌರವ ಸಮರ್ಪಣೆ ಮಾಡಿದ್ದಾಯಿತು. ಆ ಕ್ಷಣಕ್ಕಾಗಿ ಆ ದೇಶಭಕ್ತನ ಚಿತಾಭಸ್ಮ 55 ವರ್ಷಗಳು ಕಾಯಬೇಕಾಗಿ ಬಂದಿತ್ತು! ಅದರೊಂದಿಗೆ ಆತನ ಧರ್ಮಪತ್ನಿಯ ಚಿತಾಭಸ್ಮವೂ ಬಂತು.

ಮೋದಿ ಆನಂತರ ಆ ದೇಶಭಕ್ತ ಹುಟ್ಟಿದೂರು ಮಾಂಡವಿಯಲ್ಲಿ ‘ಕ್ರಾಂತಿ ತೀರ್ಥ’ ಎಂಬ ಸ್ಮಾರಕ ನಿರ್ಮಾಣ ಮಾಡಿಸಿದರು. ಅಷ್ಟೇ ಅಲ್ಲ ಆ ದೇಶಭಕ್ತನ ಭಾರತ ಪ್ರೇಮದಿಂದ ಕುಪಿತಗೊಂಡಿದ್ದ ಇಂಗ್ಲೆಂಡ್ ಸರ್ಕಾರ ಆತನ ಬ್ಯಾರಿಸ್ಟರ್ ಡಿಗ್ರಿಯನ್ನು 1909ರಲ್ಲಿ ಕಸಿದುಕೊಂಡಿತ್ತು. ಅದನ್ನೂ ಹಿಂದಿರುಗಿಸುವಂತೆ ಮೋದಿ ಒತ್ತಾಯಿಸಿದರು. ಪರಿಣಾಮವಾಗಿ 2015ರಲ್ಲಿ 96 ವರ್ಷಗಳ ಅನಂತರ ಅದನ್ನು ಹಿಂದಿರುಗಿಸಿ ತನ್ನ ತಪ್ಪನ್ನು ಇಂಗ್ಲೆಂಡ್ ಸರಿಪಡಿಸಿತು.

ಆ ಮಹಾನ್ ದೇಶಭಕ್ತನೇ ಪಂಡಿತ್ ಶ್ಯಾಮ್​ಜೀ ಕೃಷ್ಣವರ್ಮ!: ಮ್ಯಾಕ್ಸಿಂ ರ್ಗಾಯಂಥ ಶ್ರೇಷ್ಠ ರಷ್ಯನ್ ಕಾದಂಬರಿಕಾರ ಅವರನ್ನು ‘ಇಂಡಿಯಾದ ಮ್ಯಾಝಿನಿ’ ಎಂದು ಕರೆದು ಪ್ರಶಂಸಿಸಿದ.

ಸಂಸ್ಕೃತದಲ್ಲಿ ಆಜನ್ಮ ಆಸಕ್ತಿ: ಭಾರತದಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಉತ್ತುಂಗ ಸ್ಥಿತಿಯಲ್ಲಿದ್ದಾಗ ಅದೇ ವರ್ಷದ ಅಕ್ಟೋಬರ್ ನಾಲ್ಕರಂದು ಗುಜರಾತ್ ಕಛ್ ಜಿಲ್ಲೆಯ ಮಾಂಡವಿ ಎಂಬ ಗ್ರಾಮದಲ್ಲಿ ಕರ್​ಸನ್ ಬನ್ಸಾಲಿ ಎಂಬ ಹತ್ತಿ ಗಿರಣಿಯ ಕೂಲಿಕಾರನ ಮಗನಾಗಿ ಹುಟ್ಟಿದ. ಅತಿ ಬಡ ಕುಟುಂಬ. ಕರ್​ಸನ್ ಎಂದರೆ ಕೃಷ್ಣ ಶಬ್ದ ಅಪಭ್ರಂಶ. ಮುಗ್ಧೆಯಾಗಿದ್ದ ತಾಯಿ ರಮಾದೇವಿ ಹುಡುಗನನ್ನು ಹನ್ನೊಂದು ವರ್ಷಗಳವರೆಗೆ ಸಾಕಿ ಸಲಹಿ ನಂತರ ನಿಧನ ಹೊಂದಿದಳು. ತಾಯಿಯ ಸಾವಿನ ನಂತರ ಶ್ಯಾಮ್ೕಯ ಪಾಲನೆ ಪೋಷಣೆ ರಮಾದೇವಿಯ ತಂದೆ-ತಾಯಿಯರ ಪಾಲಿಗೆ ಬಂತು. ಅವನು ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸುವ ವೇಳೆಗೆ ಮುಂಬೈಯಲ್ಲಿ ಜೀವಿಸಲು ಹೆಚ್ಚು ಅನುಕೂಲಗಳುಂಟೆಂಬ ಸ್ನೇಹಿತರ ಮಾತಿನಿಂದ ಪ್ರೇರಿತನಾದ ಕರ್​ಸನ್ ಅಲ್ಲಿಗೆ ಹೋಗಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದನಂತೆ. ಅಂತೂ ಇಂತೂ ಶ್ಯಾಮ್ೕ ಮುಂಬೈಯಲ್ಲಿ ವಿಲ್ಸನ್ ಹೈಸ್ಕೂಲ್​ನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಂದುವರಿಸಿದ.

ಶ್ಯಾಮ್​ಜೀ ಮೆಟ್ರಿಕ್ಯುಲೇಷನ್ ತರಗತಿಯಲ್ಲಿ ಓದುವಾಗಲೇ ಅವನ ಸಂಸ್ಕೃತಾಸಕ್ತಿ ಗರಿಗೆದರಿತು. ಒಬ್ಬ ಸಂಸ್ಕೃತ ಪಂಡಿತರ ಬಳಿ ಸಂಸ್ಕೃತ ಕಲಿಯಲು ಸೇರಿಕೊಂಡ. ಸ್ವಲ್ಪ ಸಮಯದಲ್ಲೇ ಸಂಸ್ಕೃತದಲ್ಲಿ ಮಾತನಾಡುವುದನ್ನು ಕರತಲಾ ಮಲಕ ಮಾಡಿಕೊಂಡ ಶ್ಯಾಮ್ೕ ಮನೆಯಲ್ಲಿ ಲೈಬ್ರರಿಯಿಂದ ತಂದ ಸಂಸ್ಕೃತದ ಉತ್ತಮೋತ್ತಮ ಗ್ರಂಥಗಳನ್ನು ಅಧ್ಯಯನ ಮಾಡಿಕೊಂಡು ತನ್ನ ಜ್ಞಾನಪಿಪಾಸೆಯನ್ನು ತೀರಿಸಿಕೊಳ್ಳುತ್ತಿದ್ದ.

ಅವನ ಸಂಸ್ಕೃತ ಜ್ಞಾನದ ಕಾರಣ ಸೇಠ್ ಗೋಕುಲ್​ದಾಸ್ ಕಾಹನ್​ದಾಸ್ ಸ್ಕಾಲರ್​ಷಿಪ್ ದೊರೆತು ಅವನು ಉತ್ತಮವಾಗಿದ್ದ ಎಲಿಫನ್​ಸ್ಟನ್ ಸ್ಕೂಲ್​ಗೆ ದಾಖಲಾಗಲು ಅನುವು ಮಾಡಿಕೊಟ್ಟಿತು. ಆ ಶಾಲೆಯಲ್ಲಿ ಅಂದು ಮುಂಬೈ ಗಣ್ಯರ ಮಕ್ಕಳೇ ಹೆಚ್ಚು. ಅವರ ಜೊತೆಗೆ ಸೇರಲು ಶ್ಯಾಮ್ೕಗೆ ಅವನ ಸಂಸ್ಕೃತ ವಿದ್ವತ್ತು ಅವಕಾಶ ಮಾಡಿಕೊಟ್ಟಿತ್ತು.

ಎಲಿಫನ್​ಸ್ಟನ್ ಸ್ಕೂಲ್​ನಲ್ಲಿ ಅವನಿಗೊಬ್ಬ ಸಹಪಾಠಿ ಇದ್ದ. ಹೆಸರು ರಾಮದಾಸ. ಅವನ ತಂದೆ ಸೇಠ್ ಛಬಿಲ್​ದಾಸ್ ಲಾಲೂಭಾಯ್. ಸೇಠ್​ಜೀಗೆ ಈ ಬುದ್ಧಿವಂತ ಹುಡುಗನ ಮೇಲೆ ಕಣ್ಣು ಬಿದ್ದು, ಅವನು ಬಡವನೆಂಬುದನ್ನು ಲೆಕ್ಕಿಸದೆ, ತನ್ನ ಮಗಳು ಭಾನುಮತಿಗೆ ಕೊಟ್ಟು 1875ರಲ್ಲಿ ಮದುವೆ ಮಾಡಿದ. ಆಗ ಶ್ಯಾಮಜೀ ವಯಸ್ಸು ಹದಿನೆಂಟು.

ಮಹರ್ಷಿ ದಯಾನಂದರ ಶಿಷ್ಯತ್ತ್ವ: ವೇದ ಸಂಸ್ಕೃತಿಯ ಪುನರುದ್ಧಾರಕ, ಮೂಢನಂಬಿಕೆಗಳ ವಿರುದ್ಧ ಯುದ್ಧ ಸಾರಿದಂಥ ಮಹರ್ಷಿ ದಯಾನಂದ ಸರಸ್ವತಿಗಳು 1875ರಲ್ಲಿ ಮುಂಬೈಯಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿ ವೇದ ಹಾಗೂ ಶಾಸ್ತ್ರಗಳ ಪ್ರಚಾರದ ಮೂಲಕ ನವೋದಯಕ್ಕೆ ಕಾರಣರಾದರು.

ದಯಾನಂದರು ಸಾರ್ವಜನಿಕ ಪ್ರವಚನಗಳ ಮೂಲಕ ತಮ್ಮ ವಿಚಾರಗಳನ್ನು ಪ್ರಬಲವಾಗಿ ಮಂಡಿಸುತ್ತಿದ್ದರು. ಅದೂ ಸಂಸ್ಕೃತ ಭಾಷೆಯಲ್ಲೇ! ಯುವಕ ಶ್ಯಾಮ್​ಜೀಗೆ 1877ರಲ್ಲಿ ದಯಾನಂದರ ದಿಟ್ಟ ಚಿಂತನಶೀಲ ಉಪನ್ಯಾಸಗಳ ವಿಷಯ ಕಿವಿಗೆ ಬಿದ್ದು ಅವರ ಭಾಷಣಗಳಿದ್ದೆಡೆಯಲ್ಲೆಲ್ಲ ಅವನೂ ಹಾಜರಾಗಿ ಅವರ ಮೋಡಿಗೆ ಒಳಗಾದ. ದಯಾನಂದರಿಗೆ ಈ ಕಿಶೋರನ ಸಂಸ್ಕೃತ ಜ್ಞಾನ ಹಾಗೂ ಆಸಕ್ತಿ ಕಂಡು ಸಂತೋಷವಾಯಿತು. ಅವರೇ ಅವನಿಗೆ ಸ್ವಂತವಾಗಿ ವೇದಗಳಲ್ಲಿನ ಒಳನೋಟಗಳನ್ನು, ಶಾಸ್ತ್ರಗಳಲ್ಲಿನ ಅಂತರಾರ್ಥವನ್ನು ವೈಚಾರಿಕ ದೃಷ್ಟಿಯಿಂದ ತಿಳಿ ಹೇಳಿ ಅಲ್ಪ ಕಾಲದಲ್ಲೇ ಅವನ ಸಂಸ್ಕೃತ ವಿದ್ವತ್ತು ಹತ್ತಾರು ಪಟ್ಟು ವೃದ್ಧಿಯಾಗುವಂತೆ ಮಾಡಿದರು. ಮುಂದೊಮ್ಮೆ ಬ್ರಾಹ್ಮಣ ವರ್ಣಕ್ಕೆ ಸೇರದೆ ವೈಶ್ಯನಾಗಿದ್ದ ಶ್ಯಾಮ್ೕಗೆ ಕಾಶಿಯ ಸಂಸ್ಕೃತ ಪಂಡಿತರೆಲ್ಲ ಸೇರಿ ಅವನ ವಿದ್ವತ್ತನ್ನು ಮೆಚ್ಚಿ ಅವನಿಗೆ ‘ಪಂಡಿತ್’ ಎಂಬ ಉಪಾಧಿ ನೀಡಿ ಗೌರವಿಸಿದ್ದು ಆ ಕಾಲಕ್ಕೆ ಮಹತ್ತ್ವದ ಸಂಗತಿ.

ದಯಾನಂದ ಸರಸ್ವತಿಗಳು ಕೇವಲ ವೇದ ಪ್ರಚಾರಕರೋ ಧರ್ಮ ಗುರುಗಳೋ ಆಗಿರಲಿಲ್ಲ. ಸಮರ್ಥ ರಾಮದಾಸರು, ವಿದ್ಯಾರಣ್ಯರಂತೆ ಭಾರತ ದೇಶದ ದುರ್ದಶೆಯನ್ನು ನೋಡಿ ಮರುಗುವಂಥ ಮಹಾನ್ ದೇಶಭಕ್ತರಾಗಿದ್ದರು. ಬ್ರಿಟಿಷರಂಥ ಧೂರ್ತರಿಗೆ ಭಾರತೀಯ ಕ್ಷಾತ್ರತೇಜವೇ ಸರಿಯಾದ ಉತ್ತರ ಎಂಬ ನಂಬಿಕೆ. ಆದ್ದರಿಂದ ಶ್ಯಾಮ್ೕಯಲ್ಲಿ ವೇದ ಜ್ಞಾನದೊಂದಿಗೆ ಆರ್ಯ ಧರ್ಮ ವಿರೋಧಿಗಳಾಗಿದ್ದ ಪರಕೀಯ ಪ್ರಭುತ್ವದ ವಿರುದ್ಧ ಹೋರಾಡಿ ಅವರನ್ನು ನಾಮಾವಶೇಷ ಮಾಡಬೇಕೆಂಬ ಬಲವಾದ ಆಸೆಯನ್ನು ಹುಟ್ಟುಹಾಕಿದರು. ಶ್ಯಾಮ್ೕಗೆ ತನ್ನ ಗುರುಗಳ ಭಾವನೆಗಳು ತಾವೇ ತಾವಾಗಿ ರವಾನೆಯಾದವು.

ಮುಂದಿನ ಗುರಿ: ಇದರ ಪರಿಣಾಮವಾಗಿ ಶ್ಯಾಮ್ೕ ಹದಿನೆಂಟನೆಯ ವಯಸ್ಸಿನಲ್ಲೇ ವಿದ್ವತ್​ಪೂರ್ಣ ಭಾಷಣಗಳ ಮೂಲಕ ವೇದ ಸಂಸ್ಕೃತಿ, ಆರ್ಯ ಧರ್ಮಗಳ ಹಿರಿಮೆಯನ್ನು ಪಸರಿಸಲು ಪ್ರವಾಸೋಪನ್ಯಾಸಗಳನ್ನು ಮಾಡಲಾರಂಭಿಸಿದ. ಉತ್ತರ ಹಾಗೂ ಪಶ್ಚಿಮ ಭಾರತದ ಊರುಗಳಲ್ಲಿ ಅವನ ಪ್ರವಚನಗಳು ನಡೆದವು. ಅವನ ಪ್ರವಚನಗಳಿರುತ್ತಿದ್ದುದು ಸಂಸ್ಕೃತ ಭಾಷೆಯಲ್ಲೇ. ನಾಸಿಕ್, ಪುಣೆ, ಅಹಮದಾಬಾದ್, ಬಹ್ರೈಚ್, ಬರೋಡದಲ್ಲಿ ಪ್ರವಚನಗಳನ್ನು ಮಾಡಿ ಕೊನೆಗೆ 1878ರಲ್ಲಿ ಭುಜ್, ಮಾಂಡವಿ, ಲಾಹೋರ್​ಗಳಲ್ಲಿ ತನ್ನ ಪ್ರಭಾವಿ ಭಾಷಣಗಳಿಂದ ಜನಮನ್ನಣೆ ಗಳಿಸಿದ. ಮುಂಬೈ ಆರ್ಯ ಸಮಾಜದ ಮೊದಲ ಅಧ್ಯಕ್ಷನೆಂಬ ಖ್ಯಾತಿಯೂ ಅವನದಾಯಿತು.

ಮೋನಿಯರ್ ವಿಲಿಯಮ್್ಸ ಆಹ್ವಾನ: ಇದೇ ವೇಳೆ ಇಂಗ್ಲೆಂಡಿನ ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ, ಸಂಸ್ಕೃತ-ಇಂಗ್ಲಿಷ್ ಶಬ್ದಕೋಶವನ್ನು ರಚಿಸಿದ್ದು ಮಾತ್ರವಲ್ಲದೆ ಭಾರತೀಯ ಸಂಸ್ಕೃತಿಯನ್ನು ಕುರಿತು ಹಲವಾರು ಪುಸ್ತಕಗಳನ್ನು ರಚಿಸಿ ಮಹಾನ್ ವಿದ್ವಾಂಸನೆಂದು ಪಂಡಿತ ವಲಯದಲ್ಲಿ ಪ್ರಶಂಸೆ ಗಳಿಸಿದ್ದ ಪ್ರೊ. ಮೋನಿಯರ್ ವಿಲಿಯಮ್್ಸ ಮುಂಬೈಗೆ ಬಂದ. ಶ್ಯಾಮ್ೕಯ ಸಂಸ್ಕೃತ ಜ್ಞಾನ ಮತ್ತು ವಿದ್ವತ್ತಿನ ಬಗ್ಗೆ ಪ್ರೊ. ಮೋನಿಯರ್ ವಿಲಿಯಮ್ಸ್​ಗೆ ತಿಳಿದು ಬಂದು ಶ್ಯಾಮ್ೕಯನ್ನು ಕರೆಸಿ ಮಾತನಾಡಿದ. ಶ್ಯಾಮ್ೕಯ ಮಾತು ಮತ್ತು ವ್ಯಕ್ತಿತ್ವಗಳಿಂದ ಪ್ರಭಾವಿತನಾದ ಮೋನಿಯರ್ ವಿಲಿಯಮ್್ಸ ಅವನನ್ನು ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಲ್ಲಿ ತನ್ನ ಅಸಿಸ್ಟೆಂಟ್ ಆಗಿ ಕೆಲಸ ಮಾಡಲು ಆಹ್ವಾನಿಸಿದ. ಆಗ ಶ್ಯಾಮ್ೕ ಜೀವನಕ್ಕೊಂದು ಭಾರಿ ತಿರುವು ಸಿಕ್ಕಿತ್ತು!

ಈ ಸುದ್ದಿ ಕೇಳಿ ದಯಾನಂದ ಸರಸ್ವತಿಗಳು ಬಹು ಆನಂದಿತರಾದರು. ತಮ್ಮ ನೆಚ್ಚಿನ ಶಿಷ್ಯನಿಗೆ ದೊರೆತ ಈ ಅವಕಾಶ ವೇದ ಸಂಸ್ಕೃತಿಯನ್ನು ಇಂಗ್ಲೆಂಡಿನಲ್ಲಿ ಪಸರಿಸಲು ಹಾಗೂ ಭಾರತದ ಸ್ವಾತಂತ್ರಯೇಚ್ಛೆಯ ಕಹಳೆಯನ್ನು ಅಲ್ಲಿ ಮೊಳಗಿಸಿ ಅಲ್ಲಿನವರ ಗಮನವನ್ನು ಸೆಳೆಯಲು ಇದೊಂದು ಸುವರ್ಣಾವಕಾಶ ಎಂದು ಬಗೆದು ಮಹರ್ಷಿ ದಯಾನಂದ ಸರಸ್ವತಿಗಳು ಶ್ಯಾಮ್ೕಗೆ ಹೇಳಬೇಕಾದುದೆಲ್ಲವನ್ನು ಹೇಳಿ ಇಂಗ್ಲೆಂಡಿಗೆ ತೆರಳುವಂತೆ ಆಶೀರ್ವದಿಸಿದರು. ಶ್ಯಾಮ್ೕಯಲ್ಲಿ ಒಬ್ಬ ಅಪೂರ್ವ ದೇಶ-ಧರ್ಮಗಳ ಪ್ರಚಾರಕನನ್ನು ದಯಾನಂದರು ಕಂಡುಕೊಂಡಿದ್ದರು. ಮೋನಿಯರ್ ವಿಲಿಯಮ್ಸ್​ನ

ಆಹ್ವಾನದಂತೆ, ತನ್ನ ಗುರುಗಳ ಕನಸುಗಳನ್ನು ನನಸು ಮಾಡುವ ದೃಢ ಸಂಕಲ್ಪದೊಂದಿಗೆ ಶ್ಯಾಮ್ೕ 1879ರ ಏಪ್ರಿಲ್ 25ರಂದು ಇಂಗ್ಲೆಂಡಿನಲ್ಲಿ ಕಾಲಿರಿಸಿದ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಬಲಿಯೋಲ್ ಕಾಲೇಜಿನಲ್ಲಿ ಮುಂದಿನ ಶಿಕ್ಷಣಕ್ಕಾಗಿ ದಾಖಲಾದ. ಜೊತೆಯಲ್ಲೇ ಮೋನಿಯರ್ ವಿಲಿಯಮ್್ಸ ಸಹಾಯಕನಾಗಿ ದುಡಿಯಲಾರಂಭಿಸಿದ. ಶ್ಯಾಮ್ೕ ತನ್ನ ಜೀವನದ ಮುಂದಿನ ಒಂದು ಮಹತ್ವದ ಕ್ರಾಂತಿಕಾರಿ ಅಧ್ಯಾಯಕ್ಕೆ ನಾಂದಿ ಹಾಡಿದ.

(ಮುಂದುವರಿಯುವುದು)

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top