ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ ಸಮಗ್ರ ತನಿಖೆಗೆ ಪಟ್ಟು

ಕೋಲಾರ: ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣವನ್ನು ಸಮಗ್ರ ತನಿಖೆಗೆ ಒಪ್ಪಿಸುವಂತೆ ಎಸ್​ಎಫ್​ಐ ಮತ್ತು ಜನವಾದಿ ಮಹಿಳಾ ಸಂಘಟನೆ ಮುಖಂಡರು ನಗರದ ಗಾಂಧಿವನದಲ್ಲಿ ಭಾನುವಾರ ಧರಣಿ ನಡೆಸಿದರು.

ಜೆಎಂಎಸ್ ಮುಖಂಡರಾದ ಮಂಜುಳಾ ಮಾತನಾಡಿ, ರಾಯಚೂರಿನ ಖಾಸಗಿ ಕಾಲೇಜಿನ ಇಂಜಿನಿಯರಿಂಗ್ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಶವ ಮಾಣಿಕ್​ಪ್ರಭು ಬೆಟ್ಟ ಪ್ರದೇಶದ ಹನುಮಪ್ಪ ದೇವಾಲಯ ಹಿಂಭಾಗದ ಹೊಲದಲ್ಲಿ ಸುಟ್ಟು ಕರಕಲಾಗಿ, ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೇಲ್ನೋಟಕ್ಕೆ ಹೇಳಲಾಗುತ್ತಿದ್ದರೂ ಅನುಮಾನದ ಹುತ್ತ ಮೂಡಿದೆ. ಹೀಗಾಗಿ ಕೂಡಲೇ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪ್ರೇಮ ಪ್ರಕರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಮತ್ತೊಂದೆಡೆ ಆಕೆಯ ಡೆತ್​ನೋಟ್ ಪ್ರಕಾರ ಅಭ್ಯಾಸದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡದಿರುವುದಕ್ಕೆ ಬೇಸರಗೊಂಡು ಈ ರೀತಿ ಘಟನೆಗೆ ಒಳಗಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಸುಟ್ಟ ಸ್ಥಿತಿಯಲ್ಲಿ ದೇಹವನ್ನು ನೇಣಿಗಿರಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿಕೊಟ್ಟಿದೆ ಎಂದರು.

ಆತ್ಮಹತ್ಯೆಯೋ, ಕೊಲೆಯೋ ಎನ್ನುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮಗಳನ್ನು ಹತ್ಯೆ ಮಾಡಲಾಗಿದೆ ಎಂದು ಪಾಲಕರು ಆರೋಪಿಸುತ್ತಿದ್ದಾರೆ. ಈ ದೃಷ್ಟಿಯಿಂದ ಪ್ರಕರಣದ ಸಮಗ್ರ ತನಿಖೆ ಕೈಗೊಂಡು ಎಲ್ಲ ಅನುಮಾನಗಳಿಗೂ ತೆರೆ ಎಳೆಯಬೇಕು ಎಂದರು.

ಭೀಮಸೇನೆ ರಾಜ್ಯಾಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ವಕೀಲ ಸತೀಶ್, ಎಸ್​ಎಫ್​ಐ ಜಿಲ್ಲಾ ಉಪಾಧ್ಯಕ್ಷೆ ಆರ್.ಎನ್.ಗಾಯತ್ರಿ, ಕಾರ್ಯದರ್ಶಿ ಶಿವಪ್ಪ, ಸಹಕಾರ್ಯದರ್ಶಿಗಳಾದ ಶ್ರೀಕಾಂತ್, ಬೀರಾಜು, ಜಿಲ್ಲಾ ಸಮಿತಿ ಸದಸ್ಯರಾದ ವೇಗಶ್ರೀ, ಅಂಕಿತಾ, ಜೆಎಂಎಸ್ ಮುಖಂಡರಾದ ಸುಜಾತಾ, ವಿದ್ಯಾರ್ಥಿನಿಯರಾದ ವಿನುತಾ, ರೂಪಾ, ಅನುಷಾ, ಗಾಯತ್ರಿ, ಕುಸುಮಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *