Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಇಂಗ್ಲಿಷ್ ವ್ಯಾಮೋಹ ಇನ್ನು ಸಾಕು

Monday, 15.10.2018, 3:02 AM       No Comments

ಬೆಂಗಳೂರು: ತಮಿಳು, ಬಂಗಾಳಿ, ಮರಾಠಿ, ಹಿಂದಿ ಭಾಷಿಕರಲ್ಲಿ ಭಾಷಾಭಿಮಾನ ಕಾಣಬಹುದು. ಆದರೆ, ಕನ್ನಡಿಗರಲ್ಲಿ ಭಾಷಾಭಿಮಾನ ಕಡಿಮೆಯಾಗುತ್ತಿರುವುದು ವಿಪರ್ಯಾಸ ಎಂದು ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶದ ಸರ್ವಾಧ್ಯಕ್ಷೆ ಡಾ. ವರದಾ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 9ನೇ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡಿಗರು ಆಂಗ್ಲಭಾಷೆ ವ್ಯಾಮೋಹದಿಂದ ಹೊರಬರಬೇಕಿದೆ ಎಂದು ಹೇಳಿದರು. ಸಾಲ ಮಾಡಿದ ರೈತರು ಸಾವಿಗೆ ಶರಣಾಗುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಸಾಲಮನ್ನಾ ನಾಟಕ ಮಾಡುತ್ತಿದೆ ಎಂದು ಟೀಕಿಸಿದರು. ಹೆಣ್ಣಿನ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಕೊನೆಯಾಗಬೇಕಿದೆ ಎಂದು ಆಶಿಸಿದರು.

ಬಡವರದ್ದು ನೆಲದ ಶಿಕ್ಷಣ: ಬಹುತ್ವದ ಭಾರತ ಕಾಣೆಯಾಗಿದ್ದು, ಅಸಮತೋಲನ ತಾಂಡವವಾಡುತ್ತಿದೆ. ಉಳ್ಳವರ ಶಿಕ್ಷಣ ಈ ನೆಲಕ್ಕೆ ಸಂಬಂಧಿಸಿದ್ದಲ್ಲ. ಅದೇ ಬಡವರು ಪಡೆಯುತ್ತಿರುವ ಶಿಕ್ಷಣ ನಮ್ಮ ನಾಡಿನ ಸೊಗಡು ಒಳಗೊಂಡಿದೆ. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಲ್ಲಿ ಸೃಜನಶೀಲತೆ ಇರುತ್ತದೆ. ಪಾಲಕರು ಜಗತ್ತಿನಲ್ಲಿರುವ ವಿವಿಧ ಭಾಷೆಗಳನ್ನು ಮಕ್ಕಳಿಗೆ ಕಲಿಸುವುದರಲ್ಲಿ ತಪ್ಪಿಲ್ಲ. ಆದರೆ, ಜ್ಞಾನವನ್ನು ಮಾತ್ರ ಮಾತೃಭಾಷೆಯಲ್ಲಿಯೇ ನೀಡುವುದು ಅತ್ಯಗತ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ವರದಾ ಶ್ರೀನಿವಾಸ್ ಅವರ ‘ಕನಸು-ನನಸು’ ಕೃತಿಯನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಲೋಕಾರ್ಪಣೆ ಮಾಡಿದರು. ಕಲಬುರಗಿಯ ಯುವಲೇಖಕ ಜಿತುರೇಶ ಹಾಗೂ ಶಿವಮೊಗ್ಗದ ಗಾಯಕಿ ಕವನ ಕೋಗಿಲೆ ಅವರಿಗೆ ಮಾಗಡಿಯ ವಿಜಯಾ ನಾಗೇಶ ದತ್ತಿ ಪ್ರಶಸ್ತಿ ವಿತರಿಸಲಾಯಿತು. ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ತಹಸೀಲ್ದಾರ್ ಶಿವರಾಜು, ಅಂಚೆ ಇಲಾಖೆ ಕೇಂದ್ರ ನೌಕರರ ಮುಖಂಡರಾದ ಆರ್. ಸೀತಾಲಕ್ಷ್ಮೀ, ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಕಾಳೇಗೌಡ, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಸ್. ರಾಮಲಿಂಗೇಶ್ವರ (ಸಿಸಿರಾ) ಮತ್ತಿತರರು ಉಪಸ್ಥಿತರಿದ್ದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ

ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶದ ಸಮಾರೋಪದಲ್ಲಿ 2018ನೇ ಸಾಲಿನ ಸಾಂಸ್ಕೃತಿಕ ಸೇವಾ ಗೌರವ ಪ್ರಶಸ್ತಿ ಹಾಗೂ ವಿವೇಕ ಜಾಗೃತಿ ಪುರಸ್ಕಾರವನ್ನು ವಿವಿಧ ಕ್ಷೇತ್ರದ 15 ಸಾಧಕರಿಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಪ್ರದಾನ ಮಾಡಿದರು. ವಾಗ್ಮಿ ಡಾ.ಕೆ.ಪಿ. ಪುತ್ತೂರಾಯ ಹಾಗೂ ಚಲನಚಿತ್ರ ಕಲಾವಿದ ಕೋಟೆ ನಾಗರಾಜ್ ಅವರಿಂದ ಹಾಸ್ಯ ಸಂಜೆ ನಡೆಯಿತು.

ಕಲಾ ಪ್ರಪಂಚದಲ್ಲಿ ನಿರಂತರ ಲೈಂಗಿಕ ಕಿರುಕುಳ

ಮೀ ಟೂ ಅಭಿಯಾನದಲ್ಲಿ ವಿವಿಧ ಕ್ಷೇತ್ರದಲ್ಲಿ ನಡೆದ ಲೈಂಗಿಕ ಕಿರುಕುಳದ ಶೇ.2 ಪ್ರಕರಣ ಮಾತ್ರ ಬಹಿರಂಗವಾಗಿವೆ. ಕಲೆ ಹಾಗೂ ಸಾಹಿತ್ಯ ಪ್ರಪಂಚದಲ್ಲಿ ನಿರಂತರವಾಗಿ ಲೈಂಗಿಕ ಕಿರುಕುಳ ನಡೆಯುತ್ತಿದೆ. ಅವಮಾನ ಹಾಗೂ ಭಯದಿಂದ ತಮಗಾದ ಶೋಷಣೆಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮಹಿಳೆಯರು ಹಿಂಜರಿಯುತ್ತಿದ್ದಾರೆ. ಪಿಎಚ್.ಡಿ ವಿದ್ಯಾರ್ಥಿನಿಯರ ಮೇಲೆ ಪ್ರಾಧ್ಯಾಪಕರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ರಂಗಕರ್ವಿು ಹಾಗೂ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಬೇಸರ ವ್ಯಕ್ತಪಡಿಸಿದರು.

ಬ್ಯಾಂಕಿಂಗ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಭಾಷೆ ಕಡೆಗಣಿಸಿರುವುದು ಸಂವಿಧಾನ ವಿರೋಧಿಯಾಗಿದ್ದು, ಸರ್ಕಾರ ನೆಲದ ಭಾಷೆ ಪ್ರೋತ್ಸಾಹಿಸಬೇಕು.

| ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Leave a Reply

Your email address will not be published. Required fields are marked *

Back To Top