ಬೆಳಗಾವಿ: ಹಿಂದವಾಡಿಯ ಗುರುದೇವ ರಾನಡೆ ಮಂದಿರದ ಶತಮಾನೋತ್ಸವ ಆ.1ರಿಂದ ಮೂರು ದಿನಗಳ ಕಾಲ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆರ್‌ಎಸ್‌ಎಸ್ ಪ್ರಧಾನ ಸಂಚಾಲಕ ಡಾ. ಮೋಹನ್ ಭಾಗವತ್ ಆಗಮಿಸುತ್ತಿದ್ದು, ದೇಶ, ವಿದೇಶದಿಂದಲೂ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬೆಳಗಾವಿಯ ಅಕಾಡೆಮಿ ಆಫ್ ಕಂಪೆರೇಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಮಾಜಿ ವಕ್ತಾರ ಮಾರುತಿ ಝೀರಲಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 1ರಂದು ಬೆಳಗ್ಗೆ 10ಕ್ಕೆ ಹಿಂದವಾಡಿಯ ಗುರುದೇವ ಮಂದಿರದಲ್ಲಿ ದಾಸಬೋಧ ಆರತಿ, ವಚನ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 4 ಗಂಟೆಗೆ ಆರ್‌ಪಿಡಿ ಕಾಲೇಜು ರಸ್ತೆಯ ಕರ್ನಾಟಕ ಲಾ ಸೊಸೈಟಿಯ ಕೆ.ಕೆ.ವೇಣುಗೋಪಾಲ ಸಭಾಂಗಣದಲ್ಲಿ ಶತಮಾನೋತ್ಸವದ ಉದ್ಘಾಟನೆಯನ್ನು ಆರ್‌ಎಸ್‌ಎಸ್ ಪ್ರಧಾನ ಸಂಚಾಲಕ ಡಾ. ಮೋಹನ ಭಾಗವತ್ ನೆರವೇರಿಸುವರು.
ಹೈದ್ರಾಬಾದ್‌ನ ಶ್ರೀರಾಮಚಂದ್ರ ಮಿಷನ್‌ನ ಪದ್ಮಶ್ರೀ ಕನ್ಹಾ ಶಾಂತಿವನಮ್ ಕಮಲೇಶ ಪಟೇಲ ಅವರು ‘ಫುಟ್‌ಪ್ರಿಂಟ್ ಆನ್ ದಿ ಸ್ಯಾಂಡ್ಸ್ ಆಫ್ ಟೈಮ್’ ಪುಸ್ತಕ ಬಿಡುಗಡೆ ಮಾಡುವರು ಎಂದರು.
ಆ.2ರಂದು ಕೆಎಲ್‌ಎಸ್ ಕೆ.ಕೆ.ವೇಣುಗೋಪಾಲ ಸಭಾಂಗಣದಲ್ಲಿ ಬೆಳಗ್ಗೆ 9.30ರಿಂದ ಬೆಳಗ್ಗೆ 11 ಗಂಟೆವರೆಗೆ ‘ಯೂತ್ ಕಾನ್ಫರೆನ್ಸ್’ ನಡೆಯಲಿದ್ದು, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಯುವಕರನ್ನುದ್ದೇಶಿಸಿ ಜೀವನಾನುಭವ ಕುರಿತು ಪ್ರೇರಣಾತ್ಮಕ ಭಾಷಣ ಮಾಡುವರು. ಬೆಳಗ್ಗೆ 11.15ರಿಂದ ವಿಜಯಪುರದ ಕಣ್ಣೂರಿನ ಶಾಂತಿ ಕುಠೀರದ ಕೃಷ್ಣಾ ಸಂಪಗಾಂವಕರ ಅವರು ವಿವೇಕಾನಂದರು ಯುವಕರಿಗೆ ನೀಡಿದ ಸಂದೇಶ ಕುರಿತು ಮಾತನಾಡುವರು. ಮಧ್ಯಾಹ್ನ 12.15ಕ್ಕೆ ಬೆಂಗಳೂರು ಚಾಣಕ್ಯ ವಿವಿಯ ಮೌಲ್ಯಮಾಪನ ಕುಲಸಚಿವ ಡಾ. ಸಂದೀಪ ನಾಯರ್ ಅವರು ಶೈಕ್ಷಣಿಕ ಜ್ಞಾನ ಮತ್ತು ಪದವಿಗಳನ್ನು ಮೀರಿ, 21ನೇ ಶತಮಾನದ ಸ್ಪರ್ಧಾತ್ಮಕತೆ ಕುರಿತಂತೆ ಮಾತನಾಡುವರು.
ಬಾಗಲಕೋಟೆ ವಿವಿಯ ಕುಲಪತಿ ಡಾ.ಆನಂದ ದೇಶಪಾಂಡೆ ಅಧ್ಯಕ್ಷತೆ ವಹಿಸುವರು ಎಂದರು. ಆ.3ರಂದು ಬೆಳಗ್ಗೆ 9.30ಕ್ಕೆ ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅವರು ‘ನೇವಿಗೇಷನ್ ಆಫ್ ಟೀಚಿಂಗ್ ಕಮ್ಯುನಿಟಿ ಟುವರ್ಡ್ಸ್ ಅಮೃತಕಾಲ’ ವಿಷಯ ಕುರಿತು ಉಪನ್ಯಾಸ ನೀಡುವರು. ಸಂಸದ ಜಗದೀಶ ಶೆಟ್ಟರ್ ಉಪಸ್ಥಿತರಿರುವರು. 11.15ಕ್ಕೆ ಆರ್‌ಎಸ್‌ಎಸ್‌ನ ವಿ. ನಾಗರಾಜ ಅವರು ‘ಶಿಕ್ಷಕನಿಂದ ಗುರುವಿನವರೆಗೆ ಪ್ರಯಾಣ’ ವಿಷಯ ಕುರಿತು ಮಾತನಾಡುವರು. ಕಾಹೆರ್ ಉಪಕುಲಪತಿ ಡಾ.ನಿತಿನ್ ಗಂಗಾನೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಗುರುದೇವ ರಾನಡೆ ಅವರು ಜಮಖಂಡಿಯಲ್ಲಿ ಜನಿಸಿರು. ಪುಣೆಗೆ ಹೋಗಿ ಸುಮಾರು 30 ಗ್ರಂಥ್ನ ಬರೆದರು. ಮಹಾರಾಷ್ಟ್ರ, ಕರ್ನಾಟಕ ಸಂತರ ಬಗ್ಗೆ ಅವರು ಬರೆದಿದ್ದು ಮೆಚ್ಚುಗೆಗೂ ಪಾತ್ರವಾಯಿತು. 1926ರಲ್ಲಿ ಗುರುದೇವ ರಾನಡೆ ಅವರು ಮೊಟ್ಟ ಮೊದಲ ಬಾರಿಗೆ ಗ್ರಂಥ ಬರೆಯಲು ಆರಂಭಿಸಿದರು. ರಾನಡೆ ಅವರು ಬರೆದಿರುವ ಗ್ರಂಥಗಳನ್ನು ಡಿಜಿಟಲೀಕರಣ ಮಾಡುವ ಪ್ರಯತ್ನ ನಡೆಸಲಾಗಿದೆ ಎಂದೂ ಝೀರಲಿ ತಿಳಿಸಿದರು. ಸಂಸ್ಥೆಯ ಚೇರ್ಮನ್ ಅಶೋಕ ಪೋತದಾರ, ಅಮಿತ್ ಕುಲಕರ್ಣಿ, ಸುಬ್ರಹ್ಮಣ್ಯ ಭಟ್, ಅಜಯ ಜಕಾತಿ ಸುದ್ದಿಗೋಷ್ಠಿಯಲ್ಲಿದ್ದರು.