ಧಾರವಾಡ: ಕರೊನಾ ವೈರಸ್ ಹರಡದಂತೆ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸಂಘ, ಸಂಸ್ಥೆಗಳು ಮತ್ತು ವ್ಯಕ್ತಿಗಳು ನೇರವಾಗಿ ಆಹಾರ ಧಾನ್ಯದ ಕಿಟ್ ಹಾಗೂ ಇತರ ಸಾಮಗ್ರಿ ವಿತರಿಸುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿರುವ ಸೋಂಕಿತ ವ್ಯಕ್ತಿಗಳು ವಿವಿಧ ಕಡೆ ಆಹಾರ ಸಾಮಗ್ರಿ ವಿತರಣೆ ಮಾಡಿರುವುದು ಕಂಡು ಬಂದಿರುತ್ತದೆ. ಇದರಿಂದ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ತೀವ್ರವಾಗುತ್ತಿದೆ. ಹೀಗಾಗಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆಹಾರ ಧಾನ್ಯ ಕಿಟ್ ಹಾಗೂ ಇತರೆ ಸಾಮಗ್ರಿ ವಿತರಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
ಈ ನಿಯಮಗಳನ್ನು ಜನರು ಪಾಲಿಸದೇ ಇದ್ದಲ್ಲಿ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1987 ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್ 19 ನಿಯಂತ್ರಣ ಕಾಯ್ದೆ 2020 ಅನ್ವಯ ಕಠಿಣ ಕ್ರಮ ಜರುಗಿಸಲಾಗುವುದು. ಆಹಾರ ಪದಾರ್ಥಗಳನ್ನು ವಿತರಿಸುವವರು ಈಗಾಗಲೇ ಇದೇ ಉದ್ದೇಶಕ್ಕೆ ತೆರೆದ ಕೇಂದ್ರಗಳಲ್ಲಿ ನೀಡಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.