ಆಹಾರ ಅರಸಿ ಬಂದ ಆನೆ ವಿದ್ಯುತ್​ಗೆ ಬಲಿ

ಕನಕಪುರ: ರಾಗಿ ಬೆಳೆ ಮೇಯಲು ಹೋದ ಕಾಡಾನೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದೆ. ತಾಲೂಕಿನ ಉಯ್ಯಂಬಳ್ಳಿಯ ಶಿವಲಿಂಗೇಗೌಡ ಎಂಬುವರ ಜಮೀನಿಗೆ ಸೋಮವಾರ ರಾತ್ರಿ ಮೇಯಲು ಹೋದ ಸುಮಾರು ನಾಲ್ಕೂವರೆ ವರ್ಷದ ಗಂಡಾನೆ ಮೃತಪಟ್ಟಿದೆ. ಮಂಗಳವಾರ ಇದನ್ನು ಗಮನಿಸಿದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಕಾವೇರಿ ವನ್ಯಜೀವಿ ಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜು ಮತ್ತು ವಲಯ ಅರಣ್ಯಾಧಿಕಾರಿ ಕಿರಣ್​ಕುಮಾರ್ ಕರತಂಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವನ್ಯಜೀವಿ ಕಾಯ್ದೆಯಡಿ ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಸ್ಕಾಂ ಇಲಾಖೆ ಎಇಇ ಪುಟ್ಟಪ್ಪ, ಜೆಇ ಸತೀಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ರೈತರು ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಕ್ಕೆ ವಿದ್ಯುತ್ ತಂತಿಯನ್ನು ವಶಕ್ಕೆ ಪಡೆದು ದೂರು ನೀಡಿದ್ದಾರೆ.

ಉಯ್ಯಂಬಳ್ಳಿ ಪಶು ಆರೋಗ್ಯಾಧಿಕಾರಿ ಡಾ. ಶ್ರೀಲೇಖ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಆನೆ ಸತ್ತಿರುವ ಜಮೀನಿನ ರೈತ ಶಿವಲಿಂಗೇಗೌಡ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆನೆ ಸತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮದ ಜನತೆ ತಂಡೋಪ ತಂಡವಾಗಿ ಸ್ಥಳದಲ್ಲಿ ಸೇರಿದ್ದರು.

ಕಾಡಿನಿಂದ ನಾಲ್ಕೈದು ಆನೆಗಳು ಗುಂಪಾಗಿ ಮೇವನ್ನು ತಿನ್ನಲು ರೈತರ ಜಮೀನಿನ ಕಡೆ ಬಂದಿವೆ. ಈ ವೇಳೆ ರೈತರು ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿಗೆ ತಗುಲಿ ನಾಲ್ಕೂವರೆ ವರ್ಷದ ಗಂಡಾನೆ ಮೃತಪಟ್ಟಿದೆ.ಸಾವನಪ್ಪಿದೆ. ಉಳಿದ ಆನೆಗಳು ವಾಪಸ್ಸು ಕಾಡಿಗೆ ಹೋಗಿವೆ. ಜಮೀನಿನಲ್ಲಿ ವಿದ್ಯುತ್ ವೈರ್ ಹಾಕಿರುವುದೇ ಈ ಅವಘಡಕ್ಕೆ ಕಾರಣ ಎಂದು ತಿಳಿದು ಬಂದಿದೆ. ಮುಂದಿನ ತನಿಖೆಯಿಂದ ಆನೆ ಸಾವಿನ ನಿಖರ ಕಾರಣ ತಿಳಿಯಲಿದೆ.

| ಕಿರಣ್​ಕುಮಾರ್ ಕರತಂಗಿ ಆರ್​ಎಫ್​ಒ