ಆಹಾರದಲ್ಲಿ ಗುಣಮಟ್ಟ ಕಾಪಾಡಿ

ಗುಡಿಬಂಡೆ:  ಹಸಿವುಮುಕ್ತ ಕರ್ನಾಟಕ ಯೋಜನೆಯು ಇಂದಿರಾ ಕ್ಯಾಂಟೀನ್ ಮೂಲಕ ಸಾಕಾರಗೊಳ್ಳುತ್ತಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು.

ತಾಲೂಕು ಕಚೇರಿ ಆವರಣದಲ್ಲಿ ಭಾನುವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು. ಹಸಿವುಮುಕ್ತ ಕರ್ನಾಟಕ ಆಗಬೇಕೆಂಬ ಉದ್ದೇಶದಿಂದ ಅನುಷ್ಠಾನಗೊಳಿಸಿದ ಇಂದಿರಾ ಕ್ಯಾಂಟೀನ್ ಬಡವರ ಆಶಾಕಿರಣವಾಗಿದೆ. ಐದು ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ನೀಡುವ ಮೂಲಕ ಜನರಿಗೆ ಆಹಾರ ನೀಡಲಾಗುತ್ತಿದು, ಗುಣಮಟ್ಟದ ಊಟ, ತಿಂಡಿ ಸಿಗುವಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ಪಪಂ ಅಧ್ಯಕ್ಷ ದ್ವಾರಕನಾಥ್ ನಾಯ್ಡು ಮಾತನಾಡಿ, ರಾಜ್ಯ ಸರ್ಕಾರ ಹಸಿವುಮುಕ್ತ ಕರ್ನಾಟಕ ಮಾಡಲು ಹೊರಟಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡುತ್ತಿದ್ದು, ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕ್ಯಾಂಟೀನ್ ಉದ್ಘಾಟಿಸಿದ ಶಾಸಕ ಸುಬ್ಬಾರೆಡ್ಡಿ, ಪಪಂ ಅಧ್ಯಕ್ಷ ದ್ವಾರಕನಾಥ್ ನಾಯ್ಡು ಮತ್ತಿತರರು ಉಪಾಹಾರ ಸವಿದರು. ತಹಸೀಲ್ದಾರ್ ಡಿ.ಹನುಮಂತರಾಯಪ್ಪ, ಪಪಂ ಮುಖ್ಯಾಧಿಕಾರಿ ನಾಗರಾಜ್, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಮಾಜಿ ಅಧ್ಯಕ್ಷ ಚಂದ್ರಶೇಖರ್ ನಾಯ್ಡು, ಸದಸ್ಯರಾದ ರಾಜಣ್ಣ, ರಮೇಶ್, ರಿಯಾಜ್ ಪಾಷಾ, ಸಮಾಜಸೇವಕ ರಾಜಶೇಖರ್ ನಾಯ್ಡು, ಕೆಡಿಪಿ ಸದಸ್ಯ ಕೃಷ್ಣೇಗೌಡ, ಕೋಚಿಮುಲ್ ನಿರ್ದೇಶಕ ಅಶ್ವತ್ಥರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ನರಸಿಂಹರೆಡ್ಡಿ, ತಾಪಂ ಸದಸ್ಯ ಆದಿನಾರಾಯಣಪ್ಪ, ಮುಖಂಡರಾದ ಪಾವಜೇನಹಳ್ಳಿ ನಾಗರಾಜ್​ರೆಡ್ಡಿ, ರಾಮಕೃಷ್ಣರೆಡ್ಡಿ, ಇಸ್ಮಾಯಿಲ್ ಬಾಬು, ಅಮರನಾಥ್​ರೆಡ್ಡಿ, ರಘುನಾಥ್ ರೆಡ್ಡಿ, ಕಾರ್ವಿುಕ ಘಟಕ ತಾಲೂಕು ಅಧ್ಯಕ್ಷ ರಮೇಶ್ ಮತ್ತಿತರರಿದ್ದರು.