ಆಸ್ತಿ, ಸ್ವತ್ತುಗಳಿಗೆ ಇ-ಸ್ವತ್ತು ನೀಡಲು ಒತ್ತಾಯ

ಚಾಮರಾಜನಗರ: ನಗರಸಭಾ ವ್ಯಾಪ್ತಿಯ ಆಸ್ತಿಗಳಿಗೆ 1992ರಿಂದ ಈವರೆಗೆ ರಚನೆಯಾಗಿರುವ ಆಸ್ತಿಗೆ ಹಾಗೂ ಸ್ವತ್ತುಗಳಿಗೆ ಇ-ಸ್ವತ್ತು ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಗುರುವಾರ ನಗರದ ಜಿಲ್ಲಾಡಳಿತ ಭವನದ ಎದುರು ತಮಟೆ ಚಳವಳಿ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ನಗರಸಭೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಚಾಮರಾಜನಗರ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಕೂಡಲೇ ಸಿಬ್ಬಂದಿ ನೇಮಕ ಮಾಡಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಸಹಕರಿಸಬೇಕು. ಒಳಚರಂಡಿ ಕಾಮಗಾರಿ ಪೂರ್ಣವಾಗಿದ್ದು, ಇದನ್ನು ನಿರ್ವಹಿಸಿದ ಗುತ್ತಿಗೆದಾರ ಸರಿಯಾಗಿ ಮ್ಯಾನ್‌ಹೋಲ್‌ಗಳನ್ನು ಮುಚ್ಚದೆ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಈ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ನಗರೋತ್ಥಾನ ಯೋಜನೆಯಡಿ ಕೆಲವೇ ವಾರ್ಡ್‌ಗಳಲ್ಲಿ ಮಾತ್ರ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಉಳಿದಂತೆ 31ವಾರ್ಡ್‌ಗಳಲ್ಲೂ ರಸ್ತೆ, ಚರಂಡಿ ನಿರ್ಮಿಸಲು ಕ್ರಮಕೈಗೊಳ್ಳಬೇಕು. ಕೆಲವು ವಾರ್ಡ್‌ಗಳಲ್ಲಿ ಮಾತ್ರ ಬೀದಿ ದೀಪ ಅಳವಡಿಸಲಾಗಿದೆ. ಚಾಮರಾಜನಗರ ಪಟ್ಟಣಕ್ಕೆ ತಿ.ನರಸೀಪುರದ ಕಪಿಲಾ-ಕಾವೇರಿ ನದಿಯಿಂದ 2ನೇ ಹಂತದ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸುರೇಶ್ ಹಾಗೂ ಜಿಲ್ಲಾಡಳಿತ ಭವನದ ಶಿರಸ್ತೇದಾರ ಅನುಷ್ ಅವರ ಮೂಲಕ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಚಾ.ಗು.ನಾಗರಾಜು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ಚಾ.ಸಿ.ಸೋಮನಾಯಕ, ನಿಜಧ್ವನಿ ಗೋವಿಂದರಾಜು, ಪುರುಷೋತ್ತಮ, ಲಿಂಗರಾಜ್, ವೀರಭದ್ರ, ತಾಂಡವಮೂರ್ತಿ, ಶಿವು, ಪ್ರಸನ್ನನಾಯಕ, ಚಾ.ಸಿ.ಸಿದ್ದರಾಜು, ಜಗದೀಶ್, ಸ್ವಾಮಿ ಇತರರಿದ್ದರು.

Leave a Reply

Your email address will not be published. Required fields are marked *