ಆಸ್ತಿ ಮೌಲ್ಯಮಾಪನದಲ್ಲಿ ತಾರತಮ್ಯ

ರಾಮನಗರ: ರಾಷ್ಟ್ರೀಯ ಹೆದ್ದಾರಿ 275ರ ಷಟ್ಪಥ ನಿರ್ವಣಕ್ಕಾಗಿ ಮಂಡ್ಯ ಜಿಲ್ಲೆ ಹಳೇ ಬೂದನೂರು ಬಳಿ ವಶಕ್ಕೆ ಪಡೆಯಲಾಗುತ್ತಿರುವ ಜಮೀನು ಮತ್ತು ಕಟ್ಟಡಗಳಿಗೆ ಮೌಲ್ಯಮಾಪನ ಮಾಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಅನ್ಯಾಯ ಸರಿಪಡಿಸದಿದ್ದರೆ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ನಗರದ ಹೊರವಲಯ ಬಸವನಪುರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಜಮಾಯಿಸಿ ಯೋಜನಾ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಪ್ರಸ್ತುತ ಮಾರುಕಟ್ಟೆ ಬೆಲೆ ಮರೆಮಾಚಿ ಒಬ್ಬರಿಗೊಂದು, ಮತ್ತೊಬ್ಬರಿಗೊಂದು ನ್ಯಾಯ ಎನ್ನುವ ರೀತಿ ಪರಿಹಾರ ನಿಗದಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ವಕೀಲ ಬೂದನೂರು ಬೊಮ್ಮಯ್ಯ, ಭೂಮಿ ಕಳೆದುಕೊಂಡ ಮಾಲೀಕರಿಗೆ ಮೊದಲು ನೋಟಿಸ್ ನೀಡಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ನಂತರ ಮಾಲೀಕರ ಸಮ್ಮುಖದಲ್ಲಿ ಸರ್ವೆ ಮಾಡಬೇಕು. ಇದೆಲ್ಲವೂ ಆದ ನಂತರ ಜಮೀನು ಮತ್ತು ಕಟ್ಟಡಗಳ ಮೌಲ್ಯಮಾಪನ ಮಾಡಿ, ಅವಾರ್ಡ್ ನೋಟಿಸ್ ನೀಡಬೇಕು.

ಆದರೆ, ಇಲ್ಲಿ ಯಾವುದೇ ನಿಯಮ ಪಾಲಿಸದೆ, ನೇರವಾಗಿ ಮಾಲೀಕರ ಖಾತೆಗೆ ಆರ್​ಟಿಜಿಎಸ್ ಮೂಲಕ ಪರಿಹಾರದ ಹಣ ಹಾಕಿ, ನಂತರ ಅವಾರ್ಡ್ ನೋಟಿಸ್ ನೀಡುತ್ತಾರೆ. ಯಾರದ್ದೋ ಮನೆಯ ಮುಂದೆ, ಮತ್ಯಾರನ್ನೋ ನಿಲ್ಲಿಸಿ ಫೋಟೋ ತೆಗೆದುಕೊಂಡು ಹೋಗಿದ್ದಾರೆ. ಆಸ್ತಿಗಳ ಮೌಲ್ಯಮಾಪನ ಮಾಡುವಲ್ಲಿಯೂ ತಾರತಮ್ಯ ಮಾಡಿದ್ದಾರೆ ಎಂದು ದೂರಿದರು.

ಇದಕ್ಕೆ ದನಿಗೂಡಿಸಿದ ಗ್ರಾಮಸ್ಥರು, ತಮಗೆ ಆಗಿರುವ ಅನ್ಯಾಯವನ್ನು ಯೋಜನಾ ನಿರ್ದೇಶಕ ಶ್ರೀಧರ್ ಎದುರು ಬಿಚ್ಚಿಟ್ಟರು.

ಮತದಾನ ಬಹಿಷ್ಕಾರ ಎಚ್ಚರಿಕೆ: ಒಂದು ವೇಳೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿದ್ದರೆ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಮರು ಮೌಲ್ಯ ಮಾಪನ ನಡೆಸಿ, ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. ಇಲ್ಲವಾದರೆ ರಸ್ತೆ ಕಾಮಗಾರಿ ನಡೆಸಲು ಸಹ ಅವಕಾಶ ನೀಡುವುದಿಲ್ಲ. ಕೆಲವರು ಜಮೀನು ಕಳೆದುಕೊಂಡರೆ ಅವರಿಗೆ ಬೇರೆ ಆಸ್ತಿಯೂ ಇಲ್ಲ. ಇಂತವರಿಗೆ ಸೂಕ್ತ ಪರಿಹಾರ ಸಿಗದಿದ್ದರೆ ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಗ್ರಾಮದ ಮಾದಪ್ಪ, ಬಿ.ಸಿ.ಸುರೇಶ್, ರಾಜೇಶ್, ಸಿದ್ದೇಗೌಡ, ಬಿ.ಸಿ.ಮಾದಪ್ಪ, ಮಾದೇವ, ಕುಮಾರ, ತಾಯಮ್ಮ ಇದ್ದರು.

ಇಲ್ಲದ ಕೊಳವೆ ಬಾವಿಗೆ ಪರಿಹಾರ: ಹಳೇಬೂದನೂರಿನಲ್ಲಿ ಶಿವಲಿಂಗಯ್ಯ ಎಂಬುವರಿಗೆ ಕೊಳವೆ ಬಾವಿ ಇಲ್ಲ. ಆದರೂ ಅಧಿಕಾರಿಗಳು ಇವರಿಗೆ ಕೊಳವೆ ಬಾವಿಗಾಗಿ ಒಟ್ಟು 6 ಲಕ್ಷ ರೂ ಪರಿಹಾರ ನೀಡಿದ್ದಾರೆ. ಇದೊಂದೇ ಉದಾಹರಣೆ ಸಾಕು ರಸ್ತೆ ವಿಸ್ತರಣೆ ನೆಪದಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಮಾತಿನ ಚಕಮಕಿ: ಗ್ರಾಮಸ್ಥರು ಮತ್ತು ಯೋಜನಾ ನಿರ್ದೇಶಕರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿಯೂ ನಡೆಯಿತು. ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದಾಗ, ನಾನು ಇತ್ತೀಚೆಗಷ್ಟೇ ಬಂದಿದ್ದೇನೆ, ಇಂತಹ ಸಾವಿರಾರು ಅರ್ಜಿಗಳು ಬಂದಿವೆ ಎನ್ನುವ ಉತ್ತರ ಅಧಿಕಾರಿಯಿಂದ ಬಂತು. ಆಗ ವಿಶೇಷ ಭೂ ಸ್ವಾಧೀನಾಧಿಕಾರಿ ಜಯಮಾಧವ ಗ್ರಾಮಸ್ಥರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಆದರೆ ಅಧಿಕಾರಿ ಮತ್ತು ಗ್ರಾಮಸ್ಥರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ಮರು ಮೌಲ್ಯಮಾಪನ: ಗ್ರಾಮಸ್ಥರ ಮನವಿ ಮೇರೆಗೆ ಸ್ಥಳದಲ್ಲಿಯೇ ದಾಖಲೆಗಳನ್ನು ಪರಿಶೀಲನೆ ಮಾಡಿದ ಯೋಜನಾ ನಿರ್ದೇಶಕ ಶ್ರೀಧರ್, ತಪ್ಪುಗಳು ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಯುಗಾದಿ ನಂತರ ಅಧಿಕಾರಿಗಳನ್ನು ಹಳೇಬೂದನೂರಿಗೆ ಕಳುಹಿಸಿ ದೂರುದಾರರ ಆಸ್ತಿಯನ್ನು ಮರು ಮೌಲ್ಯಮಾಪನ ಮಾಡಲಾಗುವುದು ಎಂದು ತಿಳಿಸಿದರು.