ಆಸ್ತಿ ತೆರಿಗೆ ಬಾಕಿದಾರರ ಪಟ್ಟಿ ಬಹಿರಂಗ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಇದೇ ಮೊದಲ ಬಾರಿಗೆ ಅಸ್ತಿ ತೆರಿಗೆ ಬಾಕಿದಾರರ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದೆ.

ಮೊದಲ ಹಂತದಲ್ಲಿ ಅತಿ ಹೆಚ್ಚು 50 ಬಾಕಿದಾರರ ಪಟ್ಟಿಯನ್ನು ಬುಧವಾರ ಪತ್ರಿಕೆಯಲ್ಲಿ ಜಾಹೀರಾತು ರೂಪದಲ್ಲಿ ಪ್ರಕಟಿಸುವ ಮೂಲಕ ಬಾಕಿದಾರರ ನಿದ್ದೆಗೆಡಿಸಿದ್ದು, ಮುಂಬರುವ ದಿನಗಳಲ್ಲಿ ಎಲ್ಲರ ಹೆಸರು ಬಹಿರಂಗ ಪಡಿಸಲು ಪಾಲಿಕೆ ಆಯುಕ್ತರು ಮುಂದಾಗಿದ್ದಾರೆ.

ಆಗಸ್ಟ್ ತಿಂಗಳಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಸ್ತಿ ತೆರಿಗೆ ಬಾಕಿ ಬಗ್ಗೆ ಗಂಭೀರ ಚರ್ಚೆ ನಡೆದು ಬಾಕಿದಾರರ ಹೆಸರು ಪ್ರಕಟಿಸಬೇಕೆಂದು ನಿರ್ಣಯಿಸಲಾಗಿತ್ತು. ಅದರಂತೆ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಅವರು ಆಸ್ತಿ ತೆರಿಗೆ ಬಾಕಿದಾರರ ಪಟ್ಟಿ ಪ್ರಕಟಿಸಿದ್ದಾರೆ. ಸೆಪ್ಟೆಂಬರ್ ತಿಂಗಳ ಸಾಮಾನ್ಯ ಸಭೆ (29ರಂದು ಕರೆಯಲಾಗಿದೆ)ಯ ಮೊದಲೇ ಕ್ರಮ ಜರುಗಿಸಿದ್ದಾರೆ.

ಈ ರೀತಿಯ ಕ್ರಮ ಕೈಗೊಂಡಿರುವುದು ಪಾಲಿಕೆ ಇತಿಹಾಸದಲ್ಲಿಯೇ ಪ್ರಥಮವಾಗಿದೆ. ಹಿಂದೆಲ್ಲ ಇಂಥ ನಿರ್ಣಯ ಕೈಗೊಂಡಿದ್ದರೂ ಅಧಿಕೃತವಾಗಿ ಹೆಸರು ಪ್ರಕಟಿಸುವ ಧೈರ್ಯ ತೋರಿಸಿರಲಿಲ್ಲ. ಆಯುಕ್ತ ಶಕೀಲ್ ಅಹ್ಮದ್ ಅವರ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಹೆಸರು ಬಹಿರಂಗ ಪಡಿಸಿ ಪಾಲಿಕೆ ಸುಮ್ಮನೆ ಕುಳಿತಿಲ್ಲ. ವಸೂಲಿಗೂ ಕ್ರಮ ಜರುಗಿಸಿದೆ. ರೂಪಂ ಟಾಕೀಸ್ ಮಾಲೀಕ ದಿಗಂಬರ ನಾರಾಯಣರಾವ್ ಪಾಠಕ 11.66 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಇವರ ಹೆಸರು ಬಾಕಿದಾರರ ಪಟ್ಟಿಯಲ್ಲಿ ಪ್ರಕಟವಾಗಿತ್ತು. ಬುಧವಾರ ಉಪ ಆಯುಕ್ತ (ಕಂದಾಯ) ಇಸ್ಮಾಯಿಲ್ ಶಿರಹಟ್ಟಿ ನೇತೃತ್ವದಲ್ಲಿ ವಲಯ ಕಚೇರಿ ನಂ. 8ರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಚಿತ್ರಮಂದಿರವನ್ನು ಬಂದ್ ಮಾಡಲು ಮುಂದಾಗಿದ್ದರು. ಆದರೆ, ಮಾಲೀಕರು ತಕ್ಷಣ 5 ಲಕ್ಷ ರೂ. ಪಾವತಿಸಿದ್ದಲ್ಲದೇ ಉಳಿದ ಹಣವನ್ನು ಪಾವತಿಸಲು 15 ದಿನಗಳ ಸಮಯ ಕೋರಿದರು. ಉಳಿದ ವಲಯ ಕಚೇರಿ ವ್ಯಾಪ್ತಿಯಲ್ಲೂ ಕಾರ್ಯಾಚರಣೆ ನಡೆದಿವೆ.

ಅತಿ ಹೆಚ್ಚು ಐವರು ಬಾಕಿದಾರ ಆಸ್ತಿ ಮಾಲೀಕರ ಹೆಸರು————–ಮೊತ್ತ (ರೂ.ಗಳಲ್ಲಿ)

1. ಎಪಿಎಂಸಿ ಸೆಂಟ್ರಲ್ ವೇರಹೌಸ್ ಎಂಎಸ್​ಐಎಲ್ ಅಮರಗೋಳ, ಹುಬ್ಬಳ್ಳಿ- 35,31,041

2. ಫಾತೀಮಾ ನಾಸೀರುದ್ದಿನ್ ಬಾಗವಾನ, ರಹೀಸ ಅಹ್ಮದ್ ಬಾಗವಾನ, ಹುಬ್ಬಳ್ಳಿ- 32,94,175

3. ಮುಖ್ಯಾಧ್ಯಾಪಕ, ಬಾಸೆಲ್ ಮಿಶನ್ ಹೈಯರ್ ಸೆಕೆಂಡರಿ ಸ್ಕೂಲ್, ಜುಬಿಲಿ ಸರ್ಕಲ್, ಧಾರವಾಡ- 29,95,055

4. ಬಸಲಿಂಗಯ್ಯ ಹಿರೇಮಠ, ಹಿರೇಪೇಟ, ಹುಬ್ಬಳ್ಳಿ, – 22,78,111

5. ಅಧ್ಯಕ್ಷರು, ಈಶ್ವರ ದೇವಸ್ಥಾನ ಸಮಿತಿ ನವನಗರ, ಹುಬ್ಬಳ್ಳಿ- 11,79,978

ಪೂರ್ಣ ವಸೂಲಿ ಮಾಡುತ್ತೇವೆ

ಮೊದಲ ಹಂತವಾಗಿ ಅತಿ ಹೆಚ್ಚು ತೆರಿಗೆ ಬಾಕಿದಾರರ 50 ಜನರ ಹೆಸರು ಪ್ರಕಟಿಸಿದ್ದೇವೆ. ಹಂತ ಹಂತವಾಗಿ ಎಲ್ಲರ ಹೆಸರು ಪ್ರಕಟಿಸುತ್ತೇವೆ. ಬಾಕಿ ಮೊತ್ತವನ್ನು ಪೂರ್ಣ ವಸೂಲಿ ಮಾಡುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಬಾಕಿ ಮೊತ್ತಕ್ಕೆ ವಿಧಿಸಿರುವ ಮಾಸಿಕ ಶೇ. 2 ರಷ್ಟು ದಂಡವನ್ನು ಕೈ ಬಿಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹಣಕಾಸು ವರ್ಷದ ಆರಂಭದಲ್ಲಿ ತೆರಿಗೆ ಪಾವತಿ ಮೇಲೆ ಶೇ. 5ರಷ್ಟು ರಿಯಾಯಿತಿ ಹಾಗೂ ದಂಡ ರಹಿತ ಪಾವತಿಗೆ ಅವಕಾಶ ಇರುತ್ತದೆ. ಇದರ ಪ್ರಯೋಜನವನ್ನು ಆಸ್ತಿಧಾರಕರು ಪಡೆದುಕೊಳ್ಳಬೇಕು. ದಂಡ ಹಾಗೂ ಕಠಿಣ ಕ್ರಮಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಬೇಕು.

| ಶಕೀಲ್ ಅಹ್ಮದ್, ಪಾಲಿಕೆ ಆಯುಕ್ತ