ಆಸ್ತಿ ತೆರಿಗೆ ಪಾವತಿಗೆ ಕ್ಯೂ

ಕಾರವಾರ: ಸಿಎಂಸಿ ಕಚೇರಿ ಹಾಗೂ ಬ್ಯಾಂಕ್​ನ ಎದುರು ತೆರಿಗೆದಾರರ ಸಾಲು ಮಂಗಳವಾರ ಹನುಮಂತನ ಬಾಲದಂತೆ ಬೆಳೆದಿತ್ತು.

ಏ.30 ರ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡಿದವರಿಗೆ ಶೇ. 5ರ ರಿಯಾಯಿತಿ ಇದೆ. ಮೇ ಅಂತ್ಯದವರೆಗೆ ಯಾವುದೇ ದಂಡ ಶುಲ್ಕವಿಲ್ಲದೇ ತೆರಿಗೆ ಪಾವತಿಸಬಹುದಾಗಿದೆ. ರಿಯಾಯಿತಿ ಪಡೆಯುವ ಸಲುವಾಗಿ ಸೋಮವಾರ ಹಾಗೂ ಮಂಗಳವಾರ ಸಾವಿರಾರು ಜನರು ಒಮ್ಮೆಲೇ ನಗರಸಭೆ ಕಚೇರಿಯಲ್ಲಿ ಚಲನ್ ಪಡೆಯಲು ಹಾಗೂ ಎಕ್ಸಿಸ್ ಬ್ಯಾಂಕ್​ಗೆ ಹಣ ಕಟ್ಟಲು ಆಗಮಿಸಿದ್ದರಿಂದ ಸರತಿ ಉದ್ದವಾಗಿತ್ತು.

ನಾಗರಿಕರು ತೆರಿಗೆ ಪಾವತಿಗಾಗಿ ತಾಸುಗಟ್ಟಲೇ ಕಾದು ನಿಂತರು. ಕಾರ್ಡ್ ಪಾವತಿಯನ್ನು ಸ್ವೀಕರಿಸದ ಬಗ್ಗೆ ಮತ್ತು ಬೇರೆ ಬ್ಯಾಂಕ್​ನ ಚೆಕ್ ನೀಡಿದಲ್ಲಿ ತಕ್ಷಣ ಮರುಪಾವತಿ ರಶೀದಿ ನೀಡದ ಕುರಿತು ವಕೀಲ ಪಿ.ಎಸ್. ಭಟ್ ಬ್ಯಾಂಕ್ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಉದ್ದ ಸರದಿ ಇದ್ದರೂ ಹಿರಿಯ ನಾಗರಿಕರಿಗೆ ಬೇರೊಂದು ಕೌಂಟರ್ ತೆರೆದಿಲ್ಲ. ನಗರಸಭೆಯಲ್ಲಿ ಚಲನ್ ಸೃಷ್ಟಿ ಮಾಡಬೇಕು. ನಂತರ ಬ್ಯಾಂಕ್​ಗೆ ಹೋಗಿ ಹಣ ಕಟ್ಟಬೇಕು. ಎರಡೆರಡು ಕಡೆ ಕ್ಯೂ ನಿಲ್ಲಬೇಕು ಎಲ್ಲ ಒಂದೇ ಕಡೆ ಕೌಂಟರ್ ತೆರೆದಲ್ಲಿ ಅನುಕೂಲವಾಗುತ್ತಿತ್ತು ಎಂದು ಹಿರಿಯ ನಾಗರಿಕ ಶ್ರೀಕಾಂತ ನಾಯ್ಕ ಬೇಸರಿಸಿದರು.

ಸಾರ್ವಜನಿಕರು ಆನ್​ಲೈನ್ ಮೂಲಕ ತಮ್ಮ ಮನೆಯಲ್ಲಿ ಅಥವಾ ಖಾಸಗಿಯಾಗಿ ಚಲನ್ ಸೃಜಿಸಲು ಅವಕಾಶವಿದೆ. ನಾವು ಹೆಚ್ಚುವರಿಯಾಗಿ ನಮ್ಮ ಕಚೇರಿಯಲ್ಲಿ ಆ ಸೇವೆಯನ್ನು ನೀಡುತ್ತಿದ್ದೇವೆ. ಎರಡು ಬ್ಯಾಂಕ್​ಗಳಲ್ಲಿ ಹಣ ಕಟ್ಟಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ, ಮಂಗಳವಾರ ರಾತ್ರಿ ಎಷ್ಟೇ ಹೊತ್ತಾದರೂ ಚಲನ್ ತುಂಬಿಸಿಕೊಳ್ಳುವಂತೆ ಬ್ಯಾಂಕ್​ಗೆ ಸೂಚಿಸಲಾಗಿದೆ. ಬುಧವಾರ ರಜಾ ದಿನವಾದರೂ ಬ್ಯಾಂಕ್ ತೆರೆದಿರಲಿದೆ.
| ಎಸ್. ಯೋಗೇಶ್ವರ ನಗರಸಭೆ ಪೌರಾಯುಕ್ತ