ಮೆಲ್ಬೋರ್ನ್: ವಿಕೆಟ್ ಕೀಪರ್-ಬ್ಯಾಟರ್ ಧ್ರುವ ಜುರೆಲ್ (68 ರನ್, 122 ಎಸೆತ, 5 ಬೌಂಡರಿ) ಏಕಾಂಗಿ ಹೋರಾಟದ ನಡುವೆಯೂ ಭಾರತ ಎ ತಂಡ ಎರಡನೇ ಚತುರ್ದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ 6 ವಿಕೆಟ್‌ಗಳ ಸೋಲುಂಡಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ಋತುರಾಜ್ ಗಾಯಕ್ವಾಡ್ ಪಡೆ 0-2 ವೈಟ್‌ವಾಷ್ ಎದುರಿಸಿದೆ. ಮೊದಲ ಪಂದ್ಯದಲ್ಲಿ ಭಾರತ ಎ 7 ವಿಕೆಟ್‌ಗಳಿಂದ ಪರಾಭವಗೊಂಡಿತ್ತು.
ಎಂಸಿಜಿ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ 5 ವಿಕೆಟ್‌ಗೆ 73 ರನ್‌ಗಳಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ಎ, ಜುರೆಲ್ ಹಾಗೂ ತನುಷ್ ಕೋಟ್ಯಾನ್ (44) ಆಟದ ನೆರವಿನಿಂದ ದ್ವಿತೀಯ ಇನಿಂಗ್ಸ್‌ನಲ್ಲಿ 77.5 ಓವರ್‌ಗಳಲ್ಲಿ 229 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದ ಗೆಲುವಿಗೆ 169 ರನ್‌ಗಳ ಗುರಿ ಪಡೆದ ಆಸ್ಟ್ರೇಲಿಯಾ ಎ ತಂಡಕ್ಕೆ ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ (37ಕ್ಕೆ 2) ಮೊದಲ ಓವರ್‌ನಲ್ಲಿ 2 ವಿಕೆಟ್ ಪಡೆದು ಆಘಾತ ನೀಡಿದರು. ಆಗ ಜತೆಯಾದ ಸ್ಯಾಮ್ ಕಾನ್ಟ್ಸಾಸ್ (73* ರನ್, 128 ಎಸೆತ, 7 ಬೌಂಡರಿ, 1 ಸಿಕ್ಸರ್) ಸಮಯೋಚಿತ ಆಟದ ನೆರವಿನಿಂದ 47.5 ಓವರ್‌ಗಳಲ್ಲಿ 4 ವಿಕೆಟ್‌ಗೆ 169 ರನ್ ಪೇರಿಸಿ ಜಯದ ಸಂಭ್ರಮ ಕಂಡಿತು. ಸೋಲಿನ ನಡುವೆಯೂ ಧ್ರುವ ಜುರೆಲ್, ಪ್ರಸಿದ್ಧ ಕೃಷ್ಣ ಪ್ರದರ್ಶನ ಮುಂಬರುವ ಬಾರ್ಡರ್-ಗಾವಸ್ಕರ್ ಟ್ರೋಫಿಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಮೂಡಿಸಿದೆ.
ಭಾರತ ಎ: 161 ಹಾಗೂ 229 (ಧ್ರುವ 68, ನಿತೀಶ್ 38, ತನುಷ್ 44, ಪ್ರಸಿದ್ಧ 29, ರೊಚ್ಚಿ ಸಿಯೊಲಿ 74ಕ್ಕೆ 4, ವೆಬ್ ಸ್ಟರ್ 49ಕ್ಕೆ 3). ಆಸ್ಟ್ರೇಲಿಯಾ ಎ: 229 ಹಾಗೂ 4 ವಿಕೆಟ್‌ಗೆ 169 (ಮೆಕ್‌ಸ್ವೀನಿ 25, ಹ್ಯಾರಿಸ್ 0, ಬ್ಯಾಂಕ್ರ್‌ಟಾ 0, ಸ್ಯಾಮ್ ಕಾನ್ಟ್ಸಾಸ್ 73*, ಒಲಿವಿರ್ 21, ವೆಬ್‌ಸ್ಟರ್ 46*, ಪ್ರಸಿದ್ಧ 37ಕ್ಕೆ 2).