ನರೇಗಲ್ಲ: ಸತತ ಬರಗಾಲ, ಅಕಾಲಿಕ ಮಳೆಗೆ ಹೈರಾಣಾಗಿರುವ ಹೋಬಳಿಯ ರೈತರಿಗೆ ಈ ವರ್ಷವೂ ಮತ್ತದೇ ಸಂಕಷ್ಟ ಎದುರಾಗಿದೆ. ಮುಂಗಾರು ಮುನಿಸಿಕೊಂಡಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.
ಪಟ್ಟಣ ಸೇರಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಕೆಲ ರೈತರು 15 ದಿನಗಳ ಹಿಂದೆ ಸುರಿದ ಅಲ್ಪ ಸ್ವಲ್ಪ ಮಳೆಯನ್ನು ನೆಚ್ಚಿಕೊಂಡು, ಮುಂದೆ ಮಳೆಯಾಗಬಹುದು ಎಂಬ ನಿರೀಕ್ಷೆಯಿಂದ ಹೆಸರು, ಶೇಂಗಾ ಬಿತ್ತನೆ ಮಾಡಿದ್ದಾರೆ. ಮೊದಮೊದಲು ಆಸೆ ಹುಟ್ಟಿಸಿದ ಮಳೆರಾಯ ಈಗ ಮಂಗಮಾಯವಾಗಿರುವುದು ಅನ್ನದಾತನಿಗೆ ನುಂಗಲಾರದ ತುತ್ತಾಗಿದೆ. ಜಮೀನಿನಲ್ಲಿರುವ ನಾಟಿಗಳು ಗಾಳಿಯ ರಭಸಕ್ಕೆ ನಲುಗಿ ಹೋಗುತ್ತಿವೆ. ತೇವಾಂಶದ ಕೊರತೆಯಿಂದಾಗಿ ಶೇಂಗಾ, ಹೆಸರು ಬೆಳೆ ಕಪ್ಪಗಾಗುತ್ತಿವೆ. ಮಳೆಗಾಗಿ ರೈತ ಸಮುದಾಯ ದೇವರ ಮೊರೆ ಹೋಗಿದ್ದು, ಕತ್ತೆ ಮದುವೆ, ಗುರ್ಜಿ ಪ್ರದಕ್ಷಿಣೆ, ವಾರ ಆಚರಣೆ ಸೇರಿ ವಿವಿಧ ರೀತಿಯಲ್ಲಿ ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ಕಾರ ಹುಣ್ಣಿಮೆಗೆ ಕಡೇ ಕೂರಿಗಿ ಎಂಬ ಮಾತಿದೆ. ಆದರೆ, ಈ ವರ್ಷ ಕಾರ ಹುಣ್ಣಿಮೆ ಮುಗಿದರೂ ಬಿತ್ತನೆ ಮಾಡಲಾಗದ ಪರಿಸ್ಥಿತಿ ನಿರ್ವಣವಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 44820 ಹೆಕ್ಟೇರ್ ಕೃಷಿ ಕ್ಷೇತ್ರವಿದ್ದು, ಅಲ್ಪ ಮಳೆಯ ಪರಿಣಾಮ ಶೇ. 20ರಷ್ಟು ಮಾತ್ರ ಬಿತ್ತನೆಯಾಗಿದೆ. ಎರೇ ಭೂಮಿಯಲ್ಲಿ ಹೆಸರು ಹಾಗೂ ಮಸಾರಿ ಭೂಮಿಯಲ್ಲಿ ಶೇಂಗಾ ಬಿತ್ತನೆ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಬಹುತೇಕ ಮುಂಗಾರಿನ ಪ್ರಮುಖ ಬೆಳೆಗಳಾದ ಹೆಸರು, ಶೇಂಗಾ ಬಿತ್ತನೆಗೆ ಅವಧಿ ಮುಗಿದ್ದು, ಮುಂದೆ ಮಳೆಯಾಗಿ ಬಿತ್ತನೆ ಮಾಡಿದರೆ ಇಳುವರಿ ಕಡಿಮೆ, ಬೆಳೆ ರೋಗಬಾಧೆಗೆ ಸಿಲುಕುವ ಸಾಧ್ಯತೆಗಳೇ ಹೆಚ್ಚಾಗಿದೆ.
ವಾಡಿಕೆಯಂತೆ ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಜೂನ್ ಮಧ್ಯಕ್ಕೆ 200 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 105 ಮಿ.ಮೀ. ಮಳೆಯಾಗಿದೆ. ಹೀಗಾಗಿ ಬಿತ್ತನೆಯೂ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇನ್ನು ಮುಂದೆ ಮಳೆಯಾದರೂ ಹೆಸರು ಮತ್ತು ಶೇಂಗಾ ಬಿತ್ತನೆಗೆ ಸೂಕ್ತವಲ್ಲ. ಬದಲಾಗಿ ಬಿಟಿ ಹತ್ತಿ, ಮೆಣಸಿನಕಾಯಿ, ಬಳ್ಳಿ ಶೇಂಗಾ, ಈರುಳ್ಳಿ, ಗೋವಿನ ಜೋಳ ಬೆಳೆಯುವುದು ಉತ್ತಮ.
| ಸಿದ್ದೇಶ ಕೋಡಿಹಳ್ಳಿ ತಾಲೂಕ ಕೃಷಿ ಅಧಿಕಾರಿ ರೋಣ
ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ವಲಯಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ರೈತರ ಸಹಾಯಕ್ಕೆ ಮುಂದಾಗಬೇಕು. ಕಳೆದ ವರ್ಷದ ಫಸಲ್ ಬಿಮಾ ಸೇರಿ ಯಾವುದೇ ವಿಮೆ ಹಣ ಸಮರ್ಪಕವಾಗಿ ವಿತರಣೆಯಾಗಿಲ್ಲ. ಈ ವರ್ಷವಾದರೂ ವಿಮೆ ಹಣವನ್ನು ಸಕಾಲಕ್ಕೆ ನೀಡಬೇಕು.
| ಶರಣಪ್ಪ ಧರ್ವಯತ, ಆನಂದ ಕೋಟಗಿ, ನರೇಗಲ್ಲನ ರೈತರು.