ಆಸೀಸ್ ತಂಡದಲ್ಲಿ ಅಚ್ಚರಿಯ ಆಯ್ಕೆ: ಹ್ಯಾಸಲ್​ವುಡ್, ಹ್ಯಾಂಡ್ಸ್​ಕೊಂಬ್ ಔಟ್

ಮೆಲ್ಬೋರ್ನ್: ಮುಂದಿನ ಏಕದಿನ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಕೆಲವೊಂದು ಅಚ್ಚರಿಯ ಆಯ್ಕೆಗಳ ತಂಡವನ್ನು ಪ್ರಕಟಿಸಲಾಗಿದೆ. ಚೆಂಡು ವಿರೂಪದ ಕಳಂಕಕ್ಕೆ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿದ್ದ ಸ್ಪೋಟಕ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್ ತಂಡಕ್ಕೆ ವಾಪಸಾಗಿದ್ದಾರೆ. ಭರ್ಜರಿ ಫಾಮ್ರ್ ನಲ್ಲಿರುವ ಆರನ್ ಫಿಂಚ್​ಗೆ ವಿಶ್ವಕಪ್​ನ 15 ಸದಸ್ಯರ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ವೇಗಿ ಪ್ಯಾಟ್ ಕಮ್ಮಿನ್ಸ್ ಉಪನಾಯಕನಾಗಿದ್ದಾರೆ.

ಆದರೆ ಅನುಭವಿ ವೇಗಿ ಜೋಸ್ ಹ್ಯಾಸಲ್​ವುಡ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಪೀಟರ್ ಹ್ಯಾಂಡ್ಸ್​ಕೊಂಬ್​ರನ್ನು ಕೈ ಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಸ್ವತಃ ಆಸ್ಟ್ರೇಲಿಯಾ ಕ್ರಿಕೆಟ್ ವೆಬ್​ಸೈಟ್ ‘ಕ್ರಿಕೆಟ್ ಆಸ್ಟ್ರೇಲಿಯಾ’ದಲ್ಲೆ ಈ ಬಗ್ಗೆ ಅಚ್ಚರಿಯ ವರದಿಯನ್ನು ಪ್ರಕಟಿಸಿದೆ. ಇನ್ನುಳಿದಂತೆ ವೇಗದ ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೇಯ್ ರಿಚರ್ಡ್ಸನ್, ನಥನ್ ಕೌಲ್ಟರ್ ನಿಲ್, ಜೇಸನ್ ಬೆಹ್ರೆನ್​ಡಾರ್ಫ್ ಇದ್ದರೆ, ಸ್ಪಿನ್ ಬೌಲಿಂಗ್ ಜವಾಬ್ದಾರಿ ಆಡಂ ಜಂಪಾ, ನಥಾನ್ ಲ್ಯಾನ್​ಗೆ ಸಿಕ್ಕಿದೆ. ಆಲ್ರೌಂಡರ್ ಕೋಟಾದಲ್ಲಿ ಮಾರ್ಕಸ್ ಸ್ಟೊನಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಫಿಕ್ಸ್ ಆಗಿದ್ದಾರೆ.

ಹ್ಯಾಸಲ್​ವುಡ್, ಪೀಟರ್ ಡ್ರಾಪ್​ಗೆ ಅಚ್ಚರಿ!: ಹರ್ಷ ಭೋಗ್ಲೆ, ಡೀನ್ ಜೋನ್ಸ್ ಸೇರಿದಂತೆ ಹಲವರು ಹ್ಯಾಂಡ್ಸ್​ಕೊಂಬ್ ಬದಲು ವಿಕೆಟ್ ಕೀಪರ್ ಆಗಿ ಅಲೆಕ್ಸ್ ಕ್ಯಾರಿಯನ್ನು ಮತ್ತು ವೇಗಿ ಹ್ಯಾಸಲ್​ವುಡ್​ರನ್ನು ಆಯ್ಕೆ ಮಾಡದಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಂಡ: ಆರನ್ ಫಿಂಚ್(ನಾಯಕ), ಉಸ್ಮಾನ್ ಖವಾಜ, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್​ವೆಲ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಜೇಯ್ ರಿಚರ್ಡ್ಸನ್, ನಥನ್ ಕೌಲ್ಟರ್ ನಿಲ್, ಜೇಸನ್ ಬೆಹ್ರನ್​ಡಾರ್ಫ್, ಆಡಂ ಜಂಪಾ, ನಥಾನ್ ಲ್ಯಾನ್.

ವಾರ್ನರ್, ಸ್ಮಿತ್ ಐಪಿಎಲ್ ಅಂತಿಮ ಹಂತಕ್ಕೆ ಅಲಭ್ಯ

ಮೆಲ್ಬೋರ್ನ್: ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ ಗೊಂಡಿರುವುದರಿಂದ ಐಪಿಎಲ್​ನಲ್ಲಿ ಆಡುತ್ತಿರುವ ಪ್ರಮುಖ ಆಟಗಾರರಾದ ವಾರ್ನರ್, ಸ್ಮಿತ್, ಸ್ಟೊಯಿನಿಸ್ ಹಾಗೂ ಜೇಸನ್ ಬೆಹ್ರನ್​ಡಾರ್ಫ್ ಲೀಗ್​ನ ಅಂತಿಮ ಹಂತಕ್ಕೆ ಅಲಭ್ಯರಾಗಲಿದ್ದಾರೆ. ವಾರ್ನರ್ ಸನ್​ರೈಸರ್ಸ್ ಹೈದರಾಬಾದ್, ಸ್ಮಿತ್ ರಾಜಸ್ಥಾನ ರಾಯಲ್ಸ್, ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಆರ್​ಸಿಬಿ ಮತ್ತು ಬೆಹ್ರೆನ್​ಡಾರ್ಫ್ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಮೇ 2ರ ನಂತರ ರಾಷ್ಟ್ರೀಯ ಶಿಬಿರ ಆರಂಭಗೊಳ್ಳುವುದರಿಂದ ಆಗ ಈ ನಾಲ್ವರು ತಮ್ಮ ಐಪಿಎಲ್ ತಂಡವನ್ನು ತೊರೆದು ತವರಿಗೆ ಮರಳಲಿದ್ದಾರೆ.