ಆಸೀಸ್​ಗೆ ಮಣಿದ ವನಿತೆಯರು

ವಡೋದರ: ನಿಕೊಲ್ ಬೋಲ್ಟನ್ (100*ರನ್, 101 ಎಸೆತ, 12 ಬೌಂಡರಿ) ಶತಕದಾಟಕ್ಕೆ ತಲೆಬಾಗಿದ ಆತಿಥೇಯ ಭಾರತ ಮಹಿಳಾ ತಂಡ ಮೂರು ಪಂದ್ಯಗಳ ಸರಣಿಯ ಮೊದಲ ಮುಖಾಮುಖಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್​ಗಳ ಸೋಲು ಅನುಭವಿಸಿತು. ಐಸಿಸಿ ಮಹಿಳಾ ಚಾಂಪಿಯನ್​ಷಿಪ್ ಭಾಗವಾಗಿರುವ ಸರಣಿಯ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತದ ಮಹಿಳೆಯರು 0-1ರಿಂದ ಹಿನ್ನಡೆ ಅನುಭವಿಸಿದರು. ಕಳೆದ ವರ್ಷ ಇಂಗ್ಲೆಂಡ್​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಸೆಮಿಫೈನಲ್​ನಲ್ಲಿ ಭಾರತ ವಿರುದ್ಧ ಅನುಭವಿಸಿದ ಸೋಲಿಗೆ ಆಸ್ಟ್ರೇಲಿಯಾ ತಂಡ ಸೇಡುತೀರಿಸಿಕೊಂಡಿತು.

ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ ಭಾರತ ಭರ್ತಿ 50 ಓವರ್​ಗಳಲ್ಲಿ 200 ರನ್​ಗಳಿಗೆ ಸರ್ವಪತನ ಕಂಡಿತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಪ್ರವಾಸಿ ತಂಡ ಚುರುಕಿನ ಆರಂಭ ಪಡೆದು 32.1 ಓವರ್​ಗಳಲ್ಲೇ 2 ವಿಕೆಟ್​ಗೆ 202 ರನ್​ಗಳಿಸಿ ಜಯ ದಾಖಲಿಸಿತು.

ಬೋಲ್ಟನ್ ಆಟಕ್ಕೆ ಭಾರತ ಬೌಲ್ಡ್: ಭಾರತ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಬೋಲ್ಟನ್ ಹಾಗೂ ಅಲಿಸಾ ಹೀಲಿ (38 ರನ್, 29 ಎಸೆತ, 6 ಬೌಂಡರಿ, 1 ಸಿಕ್ಸರ್) ಜೋಡಿ ಮೊದಲ ವಿಕೆಟ್​ಗೆ ಎದುರಿಸಿದ 55 ಎಸೆತಗಳಲ್ಲಿ 60 ರನ್ ಕಲೆಹಾಕುವ ಮೂಲಕ ಸುಲಭ ಗೆಲುವಿನ ಹಾದಿ ನಿರ್ವಿುಸಿಕೊಟ್ಟಿತು. ಆರಂಭದಲ್ಲೇ ರನ್ ವೇಗ ಹೆಚ್ಚಿಸಿದ ನಿಕೊಲ್ ಬೋಲ್ಟನ್ 2ನೇ ವಿಕೆಟ್​ಗೆ ನಾಯಕಿ ಮೆಗ್ ಲ್ಯಾನ್ನಿಂಗ್ (33) ಜತೆಗೂಡಿ 68 ರನ್ ಹಾಗೂ 3ನೇ ವಿಕೆಟ್​ಗೆ ಎಲ್ಲಿಸ್ ಪೆರ್ರಿ (25*) ಜತೆ 74 ರನ್ ಕಲೆಹಾಕಿ ಸುಮಾರು 18 ಓವರ್​ಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೋಲ್ಟನ್​ಗೆ ಇದು ಏಕದಿನ ಕ್ರಿಕೆಟ್​ನಲ್ಲಿ 4ನೇ ಶತಕವಾಗಿದೆ.

ಭಾರತ: 50 ಓವರ್​ಗಳಲ್ಲಿ 200 (ಪೂನಮ್ ಯಾದವ್ 51, ಸುಷ್ಮಾ ವರ್ಮ 41, ಪೂನಂ ರಾವತ್ 37, ಜೆಸ್ ಜೊನಾಸ್ಸೆನ್ 30ಕ್ಕೆ 4, ಎಜೆ ವೆಲ್ಲಿಂಗ್ಟನ್ 24ಕ್ಕೆ 3),

ಆಸ್ಟ್ರೇಲಿಯಾ: 32.1 ಓವರ್​ಗಳಲ್ಲಿ 2 ವಿಕೆಟ್​ಗೆ 202 (ಬೋಲ್ಟನ್ 100*, ಹೀಲಿ 38,ಲ್ಯಾನ್ನಿಂಗ್ 33, ಪೆರ್ರಿ 25*). -ಏಜೆನ್ಸೀಸ್

 

ಭಾರತಕ್ಕೆ ಜೊನಾಸ್ಸೆನ್ ಶಾಕ್

ವಿಶ್ವಕಪ್ ಸೆಮಿಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುವ ಛಲದೊಂದಿಗೆ ಕಣಕ್ಕಿಳಿದ ಆಸ್ಟ್ರೇಲಿಯಾ ತಂಡ, ಭಾರತಕ್ಕೆ ಬ್ರೇಕ್ ಹಾಕಲು ಯಶಸ್ವಿಯಾಯಿತು. ಜೆಸ್ ಜೊನಾಸ್ಸೆನ್ (30ಕ್ಕೆ 4) ಮಾರಕ ದಾಳಿಗೆ ನಲುಗಿದ ಭಾರತ ಭರ್ತಿ 200ರನ್​ಗೆ ಪತನ ಕಂಡಿತು. ಅನುಭವಿ ಆಟಗಾರ್ತಿ ಹಾಗೂ ನಾಯಕಿ ಮಿಥಾಲಿ ರಾಜ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಭಾರತ ಬ್ಯಾಟಿಂಗ್ ಸಂಪೂರ್ಣ ನೆಲಕಚ್ಚಿತು. ಪೂನಮ್ ರಾವತ್ (37) ಹಾಗೂ ಸ್ಮೃತಿ ಮಂದನಾ (12) ಮೊದಲ ವಿಕೆಟ್​ಗೆ 38 ರನ್ ಪೇರಿಸಿ ಉತ್ತಮ ಆರಂಭ ನೀಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮಿಥಾಲಿ ರಾಜ್ ಬದಲಿಗೆ ಕಣಕ್ಕಿಳಿದ ಜೆಮಿಮಾ ರೋಡ್ರಿಗಸ್ (1) ಪದಾರ್ಪಣೆ ಪಂದ್ಯದಲ್ಲೇ ವೈಫಲ್ಯ ಅನುಭವಿಸಿದರು. ಹಂಗಾಮಿ ನಾಯಕಿ ಹರ್ವನ್​ಪ್ರೀತ್ ಕೌರ್ (9), ಕರ್ನಾಟಕದ ವೇದಾ ಕೃಷ್ಣಮೂರ್ತಿ (16) ವಿಫಲರಾದರೆ, ಸುಷ್ಮಾ ವರ್ಮ (41) ಹಾಗೂ ಪೂಜಾ ವಸ್ತ್ರಾಕರ್ (51) ಜೋಡಿ 8ನೇ ವಿಕೆಟ್​ಗೆ 66 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 200ಕ್ಕೆ ತಲುಪಿಸಿದರು. ಗುರುವಾರ 2ನೇ ಏಕದಿನ ಪಂದ್ಯ ನಡೆಯಲಿದೆ.

 

Leave a Reply

Your email address will not be published. Required fields are marked *