ಆಶ್ರಯ ಮನೆಗಳ ಕಾಮಗಾರಿ ಪರಿಶೀಲನೆ

ಗದಗ: 3 ತಿಂಗಳೊಳಗಾಗಿ ಮೊದಲ ಹಂತದಲ್ಲಿ 500 ಜನರಿಗೆ ಆಶ್ರಯ ಯೋಜನೆ ಮನೆಗಳನ್ನು ವಿತರಿಸುವ ತೀರ್ಮಾನ ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಆಶ್ರಯ ಯೋಜನೆಯ ಮನೆಗಳ ನಿರ್ವಣದ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಗಂಗಿಮಡಿಯಲ್ಲಿ ಆಶ್ರಯ ಯೋಜನೆಯಡಿ ನಿರ್ವಣವಾಗುತ್ತಿರುವ ಮನೆಗಳ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದ ಅವರು, 412 ಮನೆಗಳು ಫಿನಿಶಿಂಗ್ ಕಾರ್ಯ ಹೊರತುಪಡಿಸಿ ಪೂರ್ಣವಾಗಿವೆ. ಪ್ರತಿದಿನ 6 ಮನೆಗಳ ಮೌಲ್ಡಿಂಗ್ ಕಾರ್ಯ ನಡೆಯುತ್ತಿದೆ. ಈ ವೇಗವನ್ನು ಪ್ರತಿದಿನ 10ಕ್ಕೆ ಏರಿಸಬೇಕು ಎಂದು ಹೇಳಿದರು.

ಫಿನಿಶಿಂಗ್ ಹಂತದಲ್ಲಿರುವ ಮನೆಗಳಿಗೆ ಬೇಕಾದ ಸಾಮಗ್ರಿಗಳನ್ನು ಅಂತಿಮಗೊಳಿಸಲು ರಾಜೀವ್ ಗಾಂಧಿ ನಿಗಮ ಹಾಗೂ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿದೆ. ಹೀಗಾಗಿ ಹಿರಿಯ ಅಧಿಕಾರಿಗಳ ಜತೆ ರ್ಚಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಈಗಾಗಲೇ ಅಧಿಕಾರಿಗಳ ಸರ್ವೆ ನಡೆಸಿ 5,123 ಜನ ಅರ್ಹರನ್ನು ಗುರುತಿಸಿದ್ದಾರೆ. ಮೊದಲಿಗೆ ಗುಡಿಸಲಿನಲ್ಲಿ ವಾಸಿಸುತ್ತಿರುವ ಜನರಿಗೆ ಆದ್ಯತೆ ನೀಡಲಾಗುವುದು. ಹೊಸದಾಗಿ ಅರ್ಜಿ ಸಲ್ಲಿಸುವ ಜನರ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಮನೆಗಳ ಹಂಚಿಕೆಯ ಜತೆಯಲ್ಲಿಯೇ ಅಗತ್ಯವಿರುವ ಮೂಲಸೌಲಭ್ಯಗಳನ್ನೂ ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು.

ಜಿಪಂ ಸದಸ್ಯ ವಾಸಣ್ಣ ಕುರಡಗಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಎಸ್ಪಿ ಶ್ರೀನಾಥ ಜೋಶಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಇದ್ದರು.

Leave a Reply

Your email address will not be published. Required fields are marked *