ಚಿತ್ರದುರ್ಗ: ವಿದ್ಯೆ, ಅನ್ನದಾನ, ಗೋವುಗಳ ಸಂರಕ್ಷಣೆ, ವೃದ್ಧರಿಗೆ ಆಶ್ರಯ ನೀಡುವ ತಾಣವಾಗಿ ಕಬೀರಾನಂದಾಶ್ರಮ ಹೊರಹೊಮ್ಮಿದೆ. ಇದಕ್ಕೆ ಶಿವಲಿಂಗಾನಂದ ಶ್ರೀ ಕಾರಣರು ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ತಿಳಿಸಿದರು.
ಕಬೀರಾನಂದಾಶ್ರಮದ ಆವರಣದಲ್ಲಿ ಪೀಠಾಧಿಪತಿ ಶಿವಲಿಂಗಾನಂದ ಶ್ರೀ ಅವರ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮೀಜಿ ಆದವರು ಆರೋಗ್ಯವಂತರಾಗಿದ್ದಾಗ ಮಾತ್ರ ಸಮಾಜದ ಕೊಳೆ ತೊಳೆಯಲು ಸಾಧ್ಯ. ಕೆಲ ದಶಕಗಳ ಹಿಂದೆ ಹಾಳು ಕೊಂಪೆಯಾಗಿದ್ದ ಆಶ್ರಮವನ್ನು ಸುಂದರ ಮಠವನ್ನಾಗಿ ಶ್ರೀಗಳು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಮಾತನಾಡಿ, ಶಿವಲಿಂಗಾನಂದ ಶ್ರೀ ಒಂದು ಮಠಕ್ಕೆ ಪೀಠಾಧ್ಯಕ್ಷರಲ್ಲ. ತಾಯಿ ಹೃದಯಿ ಉಳ್ಳವರಾಗಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ಸಮುದಾಯಕ್ಕೂ ಗುರುಪೀಠವಿದ್ದು, ಕಬೀರಾನಂದಾಶ್ರಮ ಯಾವ ಜಾತಿ, ಧರ್ಮದ ಸೋಂಕಿಲ್ಲದೆ ಎಲ್ಲರನ್ನು ತಮ್ಮವರೆಂದು ಭಾವಿಸಿರುವ ಕಾರಣ ಜಾತ್ಯತೀಕ ಮಠವಾಗಿ ಹೊರಹೊಮ್ಮಿದೆ ಎಂದು ಬಣ್ಣಿಸಿದರು.
ಕಾರಜೋಳರ ಋಣವಿದೆ: ಮಾದಾರ ಚನ್ನಯ್ಯ ಗುರುಪೀಠದ ಮೇಲೆ ಸಂಸದ ಗೋವಿಂದ ಎಂ ಕಾರಜೋಳ ಅವರ ಋಣವಿದೆ. ಲೋಕಸಭಾ ಚುನಾವಣೆ ವೇಳೆ ನನ್ನ ಹೆಸರು ಪ್ರಸ್ತಾಪವಾಗಿತ್ತು. ಟಿಕೆಟ್ ಸಿಕ್ಕರೆ ಸ್ಪರ್ಧಿಸಲು ಒಪ್ಪಿಕೊಳ್ಳುವಂತೆ ಕೆಲವರು ಸಲಹೆ ನೀಡಿದ್ದರು. ಆದರೂ ಸ್ಪರ್ಧಿಸಲಿಲ್ಲ. ಆದಿಚುಂಚನಗಿರಿ ಮಠದಲ್ಲಿ ಕೊನೆಗೆ ಚಿತ್ರದುರ್ಗ ಕ್ಷೇತ್ರಕ್ಕೆ ಕಾರಜೋಳರ ಹೆಸರನ್ನು ಅಂತಿಮಗೊಳಿಸಲಾಯಿತು ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು. ನಾವು ಮಠದ ಪೀಠಾಧಿಪತಿಯಾಗಲು ಎಸ್.ಕೆ.ಬಸವರಾಜನ್ ಕಾರಣ ಎಂದರು.
ಶಿವಲಿಂಗಾನಂದ ಶ್ರೀ, ವಚನಾನಂದ ಶ್ರೀ, ಕೈಲಾಸಪತಿ ಶ್ರೀ, ಜ್ಯೋರ್ತಿಲಿಂಗ ಶ್ರೀ, ನಗರಸಭೆ ಸದಸ್ಯ ಭಾಸ್ಕರ್, ಗುತ್ತಿಗೆದಾರ ಶಿವಕುಮಾರ್, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಸಿದ್ಧವ್ವನಹಳ್ಳಿ ಪರಮೇಶ್, ಪತ್ರಕರ್ತ ಉಜ್ಜನಪ್ಪ, ಮುಖಂಡರಾದ ಕೆ.ಸಿ.ನಾಗರಾಜ್, ಪಿಳ್ಳೆಕೇರನಹಳ್ಳಿ ದೇವೇಂದ್ರಪ್ಪ, ನಾಗರಾಜ್ ಸಂಗಂ, ಗಣಪತಿ ಶಾಸ್ತ್ರಿ, ನಿರಂಜನಮೂರ್ತಿ, ತಿಪ್ಪೇಸಾಮಿ ಇತರರಿದ್ದರು.