ಆಳ ಸಮುದ್ರ ಮೀನುಗಾರಿಕೆ, ಹೆಚ್ಚುತ್ತಲಿದೆ ಮೀನು ವಹಿವಾಟು

ವಿಜಯವಾಣಿ ವಿಶೇಷ ಕಾರವಾರ: ಆಳ ಸಮುದ್ರ ಮೀನುಗಾರಿಕೆಯಲ್ಲಿ ವಾರ್ಷಿಕ ಮೀನು ವಹಿವಾಟು ಪ್ರಸಕ್ತ ವರ್ಷ 43.77 ಸಾವಿರ ಟನ್​ಗಳಷ್ಟು ಹೆಚ್ಚಳವಾಗಿದೆ.

2018ರ ಏಪ್ರೀಲ್​ನಿಂದ 2019ರ ಮಾರ್ಚ್ ವರೆಗೆ ಮೀನುಗಾರಿಕೆ ಇಲಾಖೆ ಜಿಲ್ಲೆಯ ಪ್ರಮುಖ ಬಂದರುಗಳಿಂದ ಪಡೆದ ಮಾಹಿತಿಯಂತೆ ವಹಿವಾಟು ಹೆಚ್ಚುತ್ತಲೇ ಇದೆ.

2016-17ನೇ ಸಾಲಲ್ಲಿ ಜಿಲ್ಲೆಯ ಟ್ರಾಲರ್, ಪರ್ಸೀನ್ ಹಾಗೂ ಗಿಲ್​ನೆಟ್ ಬೋಟ್​ಗಳಿಂದ 6009.72 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿತ್ತು. 62 ಕೋಟಿ ರೂ. ಗಳಿಸಲಾಗಿತ್ತು. 2017-18ರಲ್ಲಿ 78,493.55 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿತ್ತು ಅಂದಾಜು 400.53 ಕೋಟಿ ರೂ. ಆದಾಯ ಗಳಿಸಲಾಗಿತ್ತು. 2018-19ನೇ ಸಾಲಿನಲ್ಲಿ 1,22,271.21 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿದ್ದು, 898.02 ಕೋಟಿ ರೂ. ಆದಾಯ ಗಳಿಸಲಾಗಿದೆ.

ಆರಂಭಿಕ ವಹಿವಾಟು ಹೆಚ್ಚು: ಮೀನುಗಾರಿಕೆ ನಿಷೇಧದ ಬಳಿಕ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್​ನಲ್ಲಿ ಶುರುವಾದ ಹಂಗಾಮಿನಲ್ಲಿ ಭಾರಿ ಮೀನು ಬೇಟೆಯಾಗಿದ್ದು, ಅದರಿಂದ ಲಾಭ ಬಂದಿದೆ. 2018ರ ಆಗಸ್ಟ್ ಒಂದೇ ತಿಂಗಳಲ್ಲಿ 158 ಕೋಟಿ ರೂ. ವಹಿವಾಟು ನಡೆದಿದೆ. ಸೆಪ್ಟೆಂಬರ್​ನಲ್ಲಿ 125, ಅಕ್ಟೋಬರ್​ನಲ್ಲಿ 86 ಕೋಟಿ ರೂ. ವಹಿವಾಟು ನಡೆದಿದೆ. 2017ರ ಆಗಸ್ಟ್ ನಲ್ಲಿ ಕೇವಲ 28.99 ಕೋಟಿ ರೂ., ಸೆಪ್ಟೆಂಬರ್​ನಲ್ಲಿ 28.12 ಹಾಗೂ ಅಕ್ಟೋಬರ್​ನಲ್ಲಿ 30.19 ಕೋಟಿ ರೂ. ವಹಿವಾಟು ನಡೆದಿತ್ತು.

ಬೇಟೆ ಹೆಚ್ಚಳಕ್ಕೆ ಕಾರಣವೇನು..?: 2017ರಲ್ಲಿ ಹವಾಮಾನ ವೈಪರಿತ್ಯದಿಂದ ಸಾಕಷ್ಟು ದಿನ ಮೀನುಗಾರಿಕೆಗೆ ತೆರಳಲು ಸಾಧ್ಯವಾಗಿರಲಿಲ್ಲ. 2018ರಲ್ಲಿ ಆಗಸ್ಟ್ ಸೆಪ್ಟೆಂಬರ್​ನಲ್ಲಿ ಉತ್ತಮ ಮೀನುಗಾರಿಕೆ ನಡೆಯಿತು. ಜತೆಗೆ ಕೆಲ ಮೀನುಗಾರರು ಲೈಟ್ ಫಿಶಿಂಗ್ ಮಾಡಿದ್ದರಿಂದಲೂ ಉತ್ತಮ ಆದಾಯ ಬಂದಿದೆ ಎಂಬ ಮಾತೂ ಕೇಳಿ ಬಂದಿದೆ.

ಅವಧಿಗೂ ಮುನ್ನವೇ ಬಂದ್ : ಆಳ ಸಮುದ್ರದಲ್ಲಿ ಮೀನುಗಳು ಮೊಟ್ಟೆಯಿಟ್ಟು ಮರಿ ಮಾಡುವ ಸಮಯವಾಗಿದ್ದರಿಂದ ಜೂನ್ 1ರಿಂದ ಜುಲೈ 31ರವರೆಗೆ ಮೀನುಗಾರಿಕೆಗೆ ನಿಷೇಧವಿದೆ. ಆದರೆ, ಬೋಟ್​ಗಳು ಅದಕ್ಕೂ ಮೊದಲೇ ಮೀನುಗಾರಿಕೆಗೆ ತೆರಳುವುದನ್ನೇ ನಿಲ್ಲಿಸಿವೆ. 2019ರ ಜನವರಿಯಿಂದಲೇ ಬೋಟ್​ಗಳಿಗೆ ಮೀನು ಬೀಳುತ್ತಿಲ್ಲ. ಆಳ ಸಮುದ್ರಕ್ಕೆ ಹೋದರೂ ಖರ್ಚು ಸರಿದೂಗಿಸುವಷ್ಟೂ ಆದಾಯ ಬಾರದ ಕಾರಣ ದೋಣಿಗಳನ್ನು ಆಗಲೇ ದಡಕ್ಕೇರಿಸಲಾಗಿದೆ.

ಎಷ್ಟು ಬೋಟ್​ಗಳು..? : ಉತ್ತರ ಕನ್ನಡ ಜಿಲ್ಲೆಯಲ್ಲಿ 106 ಪರ್ಸೀನ್ ಬೋಟ್​ಗಳು, 1024 ಟ್ರಾಲರ್ ಬೋಟ್​ಗಳು 9,500 ಗಿಲ್​ನೆಟ್, ನಾಡದೋಣಿ ಮುಂತಾದ ಸಣ್ಣ ಬೋಟ್​ಗಳು ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತವೆ.

Leave a Reply

Your email address will not be published. Required fields are marked *