ಆಲೂಗಡ್ಡೆ, ಬೆಳ್ಳುಳ್ಳಿ ಬೆಲೆ ತೀವ್ರ ಕುಸಿತ

| ಹೂವಪ್ಪ ಎಚ್. ಇಂಗಳಗೊಂದಿ

ಬೆಂಗಳೂರು: ಹೊರರಾಜ್ಯಗಳಿಂದ ಆಲೂಗಡ್ಡೆ ಮತ್ತು ಬೆಳ್ಳುಳ್ಳಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗತೊಡಗಿದ್ದು ಬೆಲೆಯಲ್ಲಿ ತೀವ್ರ ಕುಸಿತವಾಗಿದೆ.

ಮಧ್ಯಪ್ರದೇಶ, ಉತ್ತರಪ್ರದೇಶ ಬೆಳ್ಳುಳ್ಳಿ ಹೆಚ್ಚು ಬೆಳೆಯುತ್ತಿದ್ದು, ದಿನಾ ಸುಮಾರು 2 ಲಕ್ಷ ಚೀಲ ಬೆಳ್ಳುಳ್ಳಿ ಅಲ್ಲಿಂದ ಪೂರೈಕೆ ಆಗುತ್ತಿದೆ. ಈ ಹಿಂದೆ ಕ್ವಿಂಟಾಲ್​ಗೆ ಸಗಟು ಉತ್ತಮ ದರ್ಜೆ ಬೆಳ್ಳುಳ್ಳಿ 6,500-7,000 ರೂ., ಮಧ್ಯಮ 3,000-4,000 ಇತ್ತು. ಈಗ 2,000-1,000 ರೂ. ಗೆ ಇಳಿದಿದೆ. ಎಕರೆಗೆ 50-60 ಸಾವಿರ ರೂ. ಖರ್ಚು ಮಾಡಿದ್ದೇವೆ, ಆದರೆ ಬೆಲೆ ಇಲ್ಲ. ಈಗಿನ ಬೆಲೆ ಪ್ರಕಾರ ಬೆಳೆಗೆ ವ್ಯಯಿಸಿದ ಅರ್ಧ ಖರ್ಚೂ ಬರುವುದಿಲ್ಲ ಎನ್ನುತ್ತಾರೆ ಬೆಳ್ಳುಳ್ಳಿ ಬೆಳೆಗಾರರು.

ಸೀಸನ್​ನಲ್ಲಿ ನೆರೆ ರಾಜ್ಯಗಳಿಗೆ ಬೆಳ್ಳುಳ್ಳಿ ಬೆಳೆಯುವ ಪ್ರದೇಶದಿಂದಲೇ ಪೂರೈಕೆ ಆಗುವುದರಿಂದ ರಾಜ್ಯದಿಂದ ಹೊರರಾಜ್ಯಕ್ಕೆ ಪೂರೈಕೆ ಕಡಿಮೆಯಾಗುತ್ತದೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ದಾಸ್ತಾನಾಗುತ್ತದೆ. ಇದು ಕೂಡ ಬೆಳ್ಳುಳ್ಳಿ ಬೆಲೆ ಇಳಿಕೆಗೆ ಕಾರಣ ಎನ್ನುತ್ತಾರೆ ಬೆಂಗಳೂರು ಎಪಿಎಂಸಿ ಸಗಟು ಬೆಳ್ಳುಳ್ಳಿ ವ್ಯಾಪಾರಿ ಎಸ್.ಜೆ. ಸೋನಾ.

ಆಲೂಗಡ್ಡೆ ಪರಿಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ಇಳುವರಿ ಚೆನ್ನಾಗಿದೆ, ಆದರೆ ಬೆಲೆ ಇಲ್ಲ. ಚಿಪ್ಸ್ ಆಲೂಗಡ್ಡೆ ಸೀಜನ್​ಗೆ ಮೊದಲು ಕ್ವಿಂಟಾಲ್​ಗೆ 1000-1100, ಮಧ್ಯಮ 700-800 ರೂ. ಇತ್ತು. ಈಗ ಅದರ ಬೆಲೆ 450-700 ರೂ.ಗೆ ಇಳಿದಿದೆ. ಕೋಲಾರ, ಹಾಸನ, ಬೆಳಗಾವಿ ಪ್ರದೇಶದಲ್ಲಿ ನೀರಾವರಿಗೆ ಅಲೂಗಡ್ಡೆ ಬೆಳೆದಿದ್ದು, ಬೆಲೆ ಕುಸಿತ ಭಾರಿ ನಿರಾಸೆ ತಂದಿದೆ. ದಿನಂಪ್ರತಿ 15-20 ಸಾವಿರ ಚೀಲಗಳಷ್ಟು ಆಲೂಗಡ್ಡೆ ಪೂರೈಕೆಯಾಗುತ್ತಿದೆ. ಜತೆಗೆ ಉತ್ತರಪ್ರದೇಶ, ಮಹಾರಾಷ್ಟ್ರಗಳಿಂದ ಸರಬರಾಜಾಗುತ್ತಿದೆ. ನೆರೆರಾಜ್ಯ ಗಳಿಗೆ ನೇರ ಪೂರೈಕೆಯಾಗುತ್ತಿದೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ತಗ್ಗಿದೆ ಎನ್ನುತ್ತಾರೆ ಆಲೂಗಡ್ಡೆ ಎಪಿಎಂಸಿ ಸಗಟು ವ್ಯಾಪಾರಿ ಸ್ವಾಮಿ.

‘ದುಬಾರಿ ಗೊಬ್ಬರ, ಕೂಲಿ ಖರ್ಚು ಮಾಡಿ ಆಲೂಗಡ್ಡೆ ಬೆಳೆದಿದ್ದೇವೆ. ಬೋರ್​ವೆಲ್​ಗಳಲ್ಲಿ ನೀರು ಬತ್ತಿ ಹೋಗಿವೆ. ಆದರೆ ಆಲೂಗಡ್ಡೆ ಬೆಲೆ ಕುಸಿತದಿಂದ ದಿಕ್ಕು ತೋಚದಂತಾಗಿದೆ’ ಎನ್ನುತ್ತಾರೆ ಹಾಸನ ತಾಲೂಕಿನ ರೈತ ಲೋಕೇಶ್.

ಬೇಡಿಕೆಗಿಂತ ಹೆಚ್ಚು ಬೆಳ್ಳುಳ್ಳಿ ಪೂರೈಕೆ ಆಗುತ್ತಿದೆ, ರಫ್ತು ಬೇಡಿಕೆಯೂ ಇಲ್ಲ. ಜತೆಗೆ ವಹಿವಾಟು ಶೇ.60 ಕುಸಿದಿದ್ದೇ ಬೆಲೆ ತಗ್ಗಲು ಕಾರಣ.

| ಬಿ.ಆರ್.ಶ್ರೀರಾಮರೆಡ್ಡಿ, ಬೆಂಗಳೂರು ದಾಸನಪುರ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ

 

ಈಗಿರುವ ದರದಲ್ಲಿ ಆಲೂಗಡ್ಡೆ ಮಾರಿದರೆ ಲಾಭ ಬಿಡಿ, ಬೆಳೆಗೆ ಮಾಡಿದ ಸಾಲ ಕೂಡ ತೀರಲ್ಲ. ಮುಂದಿನ ಬೆಳೆಗೆ ಸಾಲ ಸಿಗುವುದೂ ಕಷ್ಟ. ಮುಂದೆ ಹೇಗೆ ಎಂಬುದು ಚಿಂತೆಯಾಗಿದೆ.

| ಕೆ.ಶ್ರೀನಿವಾಸ್, ಕೊಲಾರ ಆಲೂಗಡ್ಡೆ ಬೆಳೆಗಾರ