ಆಲಿಕಲ್ಲು ಮಳೆಯಿಂದ ದ್ರಾಕ್ಷಿ ಬೆಳೆ ಹಾನಿ

ವಿಜಯಪುರ: ಹೋಬಳಿಯಾದ್ಯಂತ ಶನಿವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಅಪಾರ ಹಾನಿಯಾಗಿದೆ.

ಸಂಜೆ 6 ಗಂಟೆಗೆ ಆರಂಭಗೊಂಡ ಬಿರುಗಾಳಿ ಸಹಿತ ಮಳೆ ರಾತ್ರಿ 10 ಗಂಟೆವರೆಗೆ ಸುರಿಯಿತು. ಒಂದೇ ದಿನ 63.1 ಮಿ.ಮೀ. ಮಳೆ ದಾಖಲಾಗಿದೆ.

ದ್ರಾಕ್ಷಿ, ಮಾವು, ತರಕಾರಿ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಆಲಿಕಲ್ಲು ಬಿದ್ದಿರುವುದರಿಂದ ಮಾವು, ದ್ರಾಕ್ಷಿ ಸಂಪೂರ್ಣ ನಾಶವಾಗಿದೆ. ಟಿಪ್ಪುನಗರದ ರೈತ ಕೆ.ಕೇಶವಪ್ಪ ಎಂಬುವವರ ದ್ರಾಕ್ಷಿ ತೋಟ ಹಾನಿಗೀಡಾಗಿದೆ. ಯಲುವಹಳ್ಳಿಯಲ್ಲೂ ದ್ರಾಕ್ಷಿ ಬೆಳೆ ಹಾಳಾಗಿದೆ ಎಂದು ಗ್ರಾಮಲೆಕ್ಕಾಧಿಕಾರಿ ಸಿ.ವೈ.ಕುಮಾರ್ ತಿಳಿಸಿದ್ದಾರೆ.

ದಂಡಿಹಾನಹಳ್ಳಿಯಲ್ಲಿ ರಾಜೇಂದ್ರ ಪ್ರಸಾದ್ ಎಂಬುವರಿಗೆ ಸೇರಿದ ಕೋಳಿಫಾರಂನ 2 ಶೆಡ್​ಗಳ ಶೀಟ್​ಗಳು ಹಾರಿಹೋಗಿವೆ. ಸುಮಾರು 500ಕ್ಕೂ ಹೆಚ್ಚು ಕೋಳಿಮರಿಗಳು ಸತ್ತಿವೆ. ಅದೇ ಗ್ರಾಮದ ಭಾಗ್ಯಮ್ಮ, ಹೊಲೇರಹಳ್ಳಿಯ ಚನ್ನಮ್ಮ ಎಂಬುವವರ ಹೊಸಮನೆ ಸೇರಿ ಮೇಲ್ಛಾವಣಿ ಶೀಟುಗಳು ಹಾರಿಹೋಗಿವೆ. ಹಾರೋಹಳ್ಳಿಯಲ್ಲಿ ದ್ರಾಕ್ಷಿ ತೋಟದ ಚಪ್ಪರ ಉರುಳಿದೆ. ತಿಮ್ಮಹಳ್ಳಿಯಲ್ಲಿ ತೊಂಡೆಕಾಯಿ ಚಪ್ಪರ, ತರಕಾರಿ ತೋಟವೂ ನಾಶವಾಗಿದೆ.

ಅಧಿಕಾರಿಗಳ ಭೇಟಿ: ಕಂದಾಯ ಇಲಾಖೆ ಇನ್​ಸ್ಪೆಕ್ಟರ್ ಆಂಜಿನಪ್ಪ ನೇತೃತ್ವದ ಅಧಿಕಾರಿಗಳ ತಂಡ ಹೋಬಳಿಯ ದಂಡಿಗಾನಹಳ್ಳಿ, ಹಾರೋಹಳ್ಳಿ, ತಿಮ್ಮಹಳ್ಳಿ ತೋಟಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿತು.

ದ್ರಾಕ್ಷಿ ಫಲ ಬಿಟ್ಟಾಗ ಮಳೆಯಾದರೆ ಹಾನಿ ಜಾಸ್ತಿ. ಅದರಲ್ಲಿಯೂ ಆಲಿಕಲ್ಲು ಸಹಿತ ಮಳೆ ಬಿದ್ದರಂತೂ ಸರ್ವನಾಶ. ಲಕ್ಷಗಟ್ಟಲೇ ರೂಪಾಯಿಗೆ ಕಟಾವು ಮಾಡಲು ಕೊಟ್ಟಿರುತ್ತೇವೆ. ಮಳೆಯಿಂದ ಹಣ್ಣು ಬಾಯಿ ಬಿಟ್ಟಿದೆ. ಕಟಾವು ಅಸಾಧ್ಯ. ಹಣವೂ ಸಿಗುವುದಿಲ್ಲ.

| ಕೇಶವಪ್ಪ, ರೈತ

ಮನೆಗೆ ನುಗ್ಗಿದ ಮಳೆನೀರು: 

ವಿಜಯಪುರ: ಪಟ್ಟಣದ ಕೆಲ ರಾಜಕಾಲುವೆ ಬಂದಾಗಿ ತಗ್ಗು ಪ್ರದೇಶದಲ್ಲಿದ ಕೆಲ ಮನೆಗಳಿಗೆ ಶನಿವಾರ ರಾತ್ರಿ ಬಿದ್ದ ಮಳೆಯ ನೀರು ನುಗ್ಗಿತು.ಪಟ್ಟಣದ ಚನ್ನರಾಯಪಟ್ಟಣ ಸರ್ಕಲ್, ಮಂಡಿಬೆಲೆ ರಸ್ತೆ, ಬಸವೇಶ್ವರ ಬಡಾವಣೆಯ ರಾಜಕಾಲುವೆಗಳಲ್ಲಿ ಕಸ, ಕಲ್ಲುಚಪ್ಪಡಿ ತುಂಬಿಕೊಂಡು ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ರಸ್ತೆ ಆವರಿಸಿಕೊಂಡು ಮನೆಗಳಿಗೂ ನುಗ್ಗಿತು. ತಕ್ಷಣ ಎಚ್ಚೆತ್ತ ಪುರಸಭೆ ಅಧಿಕಾರಿಗಳ ತಂಡ ಜೆಸಿಬಿ ಮೂಲಕ ರಾಜಕಾಲುವೆಗಳಲ್ಲಿನ ಕಸ ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟಿತು. ಭಾನುವಾರವೂ ಸ್ವಚ್ಛತಾ ಕಾರ್ಯ ಮುಂದುವರಿಯಿತು.

ರಾಜಕಾಲುವೆಗೆ ಉರುಳಿದ ಕಾರು: ಜನಸಂದಣಿ ಹೆಚ್ಚಿರುವ ಗುರಪ್ಪನ ಮಠಕ್ಕೆ ಹೋಗುವ ಮುಖ್ಯರಸ್ತೆಯ ರಾಜಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ರಾತ್ರಿ ಕಾರು ಉರುಳಿ ಬಿದ್ದು, ಚಾಲಕ ಗಾಯಗೊಂಡಿದ್ದಾನೆ.

ಧರೆಗುರುಳಿದ ಮರದ ಕೊಂಬೆಗಳು: ಹೋಬಳಿಯ ಕೊಮ್ಮಸಂದ್ರದ ಮುನಿರಾಜು ಎಂಬುವರ ಮನೆಯ ಮೇಲೆ ಬೃಹತ್ ಗಾತ್ರದ ಕೊಂಬೆ ಬಿದ್ದು ಛಾವಣಿ ನಾಶವಾಗಿದೆ. ಮೇಲೂರು ಮುಖ್ಯರಸ್ತೆಯ ಭಟ್ರೇನಹಳ್ಳಿ ಬಳಿ ಬೃಹತ್ ಮರದ ಕೊಂಬೆಗಳು ರಸ್ತೆಗೆ ಉರುಳಿದ್ದು, ವಾಹನ ಸಂಚಾರಕ್ಕೆ ತೊಡಕಾಯಿತು. ಚಂದೇನಹಳ್ಳಿಯ ಮುನಿಯಪ್ಪ ಎಂಬುವವರಿಗೆ ಸೇರಿದ ಪಾಲಿಹೌಸ್ ನಾಶವಾಗಿದೆ.

ವಿದ್ಯುತ್ ಸ್ಥಗಿತ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಯಿಂದ ಶನಿವಾರ ಸಂಜೆ ಸ್ಥಗಿತಗೊಂಡ ವಿದ್ಯುತ್ ಸರಬರಾಜು ಭಾನುವಾರ ಬೆಳಗ್ಗೆವರೆಗೂ ಕಡಿತವಾಗಿತ್ತು. ಕೆಲವೆಡೆ ವಿದ್ಯುತ್ ಕಂಬಗಳು ಧರೆಗುಳಿವೆ.

ಅಂಡರ್​ಪಾಸ್ ಸೇತುವೆ ದುರಸ್ತಿಗೆ ಒತ್ತಾಯ: ವಿಜಯಪುರ: ಹೋಬಳಿಯ ಬುಳ್ಳಹಳ್ಳಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಿಗುವ ರೈಲ್ವೆ ಅಂಡರ್​ಪಾಸ್ ಸೇತುವೆ ಕೆಳಗೆ ಮಳೆನೀರು ತುಂಬಿಕೊಂಡು ಸಂಚಾರಕ್ಕೆ ತೊಡಕಾಗಿದೆ.

ಆವತಿ, ದೇವನಹಳ್ಳಿ ಕಡೆಗೆ ನಿತ್ಯ ವ್ಯವಹಾರಕ್ಕೆ ಸಬ್​ವೇ ಬ್ರಿಡ್ಜ್ ಮೂಲಕವೇ ಸಂಚರಿಸಬೇಕು. ಮೂರು ದಿನಗಳಿಂದ ಬಿದ್ದ ಮಳೆ ನೀರು ಬ್ರಿಡ್ಜ್ ಕೆಳಗೆ ಸುಮಾರು ನಾಲ್ಕೈದು ಅಡಿ ನೀರು ತುಂಬಿ ಸಂಚಾರಕ್ಕೆ ಅಡ್ಡಿಯಾಗಿದೆ.

ಅಂಡರ್​ಪಾಸ್ ಅವೈಜ್ಞಾನಿಕವಾಗಿರುವುದೆ ಇದಕ್ಕೆ ಕಾರಣ. ಎರಡೂ ಬದಿಗಳಲ್ಲಿ ಇಳಿಜಾರು ಇದೆ. ಸುತ್ತಬಿದ್ದ ನೀರು ಬ್ರಿಡ್ಜ್ ಕೆಳಗೆ ತುಂಬಿಕೊಳ್ಳುತ್ತದೆ. ಪಾದಚಾರಿ, ವಾಹನ ಸಂಚಾರವೂ ಕಷ್ಟ ಎನ್ನುತ್ತಾರೆ ಗ್ರಾಪಂ ಸದಸ್ಯ ಬುಳ್ಳಹಳ್ಳಿ ರಾಜಪ್ಪ.

ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ರಸ್ತೆ ದಾಟಲಾಗುವುದಿಲ್ಲ. ಎರಡು ವರ್ಷಗಳಿಂದಲೂ ಸಮಸ್ಯೆ ಬಗೆಹರಿಸುವಂತೆ ಗ್ರಾಪಂನಿಂದ ರೈಲ್ವೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ರಾಜಣ್ಣ ದೂರಿದರು.