ಆಲಮಟ್ಟಿ: ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ, ವಚನ ಪಿತಾಮಹ ಫ.ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು ಜಿಲ್ಲೆಯ ಪಾಲಿಗೆ ಶೈಕ್ಷಣಿಕ ಹರಿಕಾರರು. ಈ ಅನರ್ಘ್ಯ ರತ್ನಗಳ ಕಾರ್ಯ ಚಿರಸ್ಥಾಯಿ ಎಂದು ವಚನ ಪಿತಾಮಹ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಜಿ.ಎಸ್. ಮದಭಾವಿ ಅಭಿಪ್ರಾಯಪಟ್ಟರು.
ಇಲ್ಲಿಯ ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ ಸ್ಮಾರಕದಲ್ಲಿ ಭಾನುವಾರ ಮಂಜಪ್ಪನವರ ಕಂಚಿನ ಪುತ್ಥಳಿಗೆ ನಮನ ಸಲ್ಲಿಸಿ ಅವರು ಮಾತನಾಡಿದರು.
ಮಹನೀಯರು ಯಾವುದೇ ಮಠ ಮಾನ್ಯಗಳನ್ನು ಕಟ್ಟದೆ ಜನರಲ್ಲಿ ಶೈಕ್ಷಣಿಕ ಜಾಗೃತಿ, ವೈಚಾರಿಕ ಪ್ರಜ್ಞೆ, ಖಾದಿ ಬಳಕೆ, ಸ್ವ ಉದ್ಯೋಗದ ಅರಿವು ಹೆಚ್ಚಿಸಲು ನೆರವಾದರು. 1923ರ ಕಾಲಘಟ್ಟದಲ್ಲಿಯೇ ಆಲಮಟ್ಟಿಯಲ್ಲಿ ಕಾಯಕ ತತ್ವದಡಿ ಶಾಲೆ ಸ್ಥಾಪಿಸಿ ಈ ಭಾಗದಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಿಸಿ ವಿವಿಧ ಪತ್ರಿಕೆಯನ್ನು ಆರಂಭಿಸಿ, ಖಾದಿವಾದವನ್ನು ಪ್ರಚುರಗೊಳಿಸಿದವರು ಮಂಜಪ್ಪನವರಾಗಿದ್ದಾರೆ. ಅವರ ಮೂಲಕೃತಿಗಳನ್ನು ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಇಡಲಾಗಿದೆ ಎಂದರು.
ಮಂಜಪ್ಪ ಹರ್ಡೇಕರ ಸ್ಮಾರಕದ ಕಾರ್ಯದರ್ಶಿ ವಿ.ಎಂ. ಪಟ್ಟಣಶೆಟ್ಟಿ ಮಾತನಾಡಿ, ಈ ಬಾರಿ ಮಂಜಪ್ಪ ಹರ್ಡೇಕರ ಅವರು ಜನಿಸಿದ ಬನವಾಸಿಯಲ್ಲಿಯೂ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಕಳೆದ ವರ್ಷ ವಿವಿಧ ಪರೀಕ್ಷೆ ಯಲ್ಲಿ ಸಾಧನೆಗೈದ ಮಕ್ಕಳಿಗೆ ಮಂಜಪ್ಪ ಹರ್ಡೇಕರ ಅವರ ಮೊಮ್ಮಗ ನೀಡಿದ ಹಣದಲ್ಲಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಮಂಜಪ್ಪನವರ ಭಾವಚಿತ್ರದ ಮೆರವಣಿಗೆ ರಾಮಲಿಂಗೇಶ್ವರ ದೇವಸ್ಥಾನದಿಂದ ಸ್ಮಾರಕದವರೆಗೆ ಜರುಗಿತು. ಕೀಲುಗೊಂಬೆಯಾಟ, ಡೊಳ್ಳುಗಳ ನಿನಾದ, ವಿದ್ಯಾರ್ಥಿಗಳ ಡ್ರಮಸೆಟ್ ವಾದನ ಗಮನ ಸೆಳೆಯಿತು.
ಜಿ.ಎಂ. ಕೊಟ್ಯಾಳ, ಎಸ್.ಐ. ಗಿಡ್ಡಪ್ಪಗೋಳ, ಗಂಗಾಧರ ಹಿರೇಮಠ, ಎಂ.ಎಚ್. ಬಳಬಟ್ಟಿ, ಎಸ್.ಐ. ಹರಣಶಿಕಾರಿ, ಬಿ.ಎಚ್. ಗುಣದಾಳ, ನೀಲಾಂಬಿಕಾ ಪಾಟೀಲ, ಸಂಗಮೇಶ ಚೆನ್ನಗಾವಿ, ಮುತ್ತು ಕಿರಸೂರ, ಅಶೋಕ ಲಮಾಣಿ, ಅಯ್ಯಪ್ಪಗೌಡ ಪಾಟೀಲ, ವಸಂತ ಬಡಿಗೇರ, ಸಂತೋಷ ಗಾಣಿಗೇರ, ಮಹ್ಮದ್ ಯೂಸೂಫ್, ಡಾ.ಲೀಲಾ ಹೂಗಾರ, ನೀಲಮ್ಮ ಸೂರ್ಯವಂಶಿ, ದಾನಮ್ಮ ಚಿನಿವಾಲ, ಡಾ.ಸವಿತಾ ಪಾಟೀಲ, ಕಲ್ಪನಾ ಹಿರೇಮಠ ಹಾಗೂ ಹಳೇ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.