ಆಲಂಬಗಿರೀಲಿ ವೈಭವದ ಬ್ರಹ್ಮರಥೋತ್ಸವ

ಚಿಂತಾಮಣಿ: ಆಲಂಬಗಿರಿಯ ಪುರಾಣ ಪ್ರಸಿದ್ಧ ಕಲ್ಕಿ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವ ಸಂದರ್ಭದಲ್ಲಿ ಆಕಾಶದಲ್ಲಿ ಬಂದ ಗರುಡ ಪಕ್ಷಿ ರಥವನ್ನು ಪ್ರದಕ್ಷಿಣೆ ಹಾಕಿ ಭಕ್ತರಿಗೆ ದರ್ಶನ ನೀಡಿತು. ಬಳಿಕ ಗೋವಿಂದ… ಗೋವಿಂದ… ಎಂದು ಸ್ಮರಿಸುತ್ತ ಭಕ್ತರು ರಥ ಎಳೆದರು.

ರಥೋತ್ಸವ ಪ್ರಯುಕ್ತ ದೇವಾಲಯ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಕೈವಾರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿ ತಂದು, ದೇವಾಲಯ ಪ್ರಾಂಗಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಶ್ರೀಕೃಷ್ಣ ಗಂಧೋತ್ಸವ ನೆರವೇರಿಸಲಾಯಿತು. ಬಳಿಕ ಭೂನೀಳಾ ಸಮೇತ ಲಕ್ಷ್ಮೀವೆಂಕಟರಮಣಸ್ವಾಮಿ ಉತ್ಸವ ಮೂರ್ತಿಗಳನ್ನು ವೇದ ಘೊಷಗಳೊಂದಿಗೆ ರಥದಲ್ಲಿ ಇಡುತ್ತಿದ್ದಂತೆಯೇ ಗೋವಿಂದ ನಾಮಸ್ಮರಣೆ ಮುಗಿಲು ಮುಟ್ಟಿತು. ಭಕ್ತರು ಬಾಳೆ ಹಣ್ಣು, ದವನ ತೇರಿಗೆ ಅರ್ಪಿಸಿ ಹರಕೆ ಸಲ್ಲಿಸಿದರು. ಯೋಗಿನಾರೇಯಣ ಮಠದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ದಂಪತಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಗ್ರಾಮಸ್ಥರು ಎತ್ತಿನ ಬಂಡಿ ಹಾಗೂ ಟ್ರಾ್ಯಕ್ಟರ್​ಗಳಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು.

ಸುಮಾರು 11 ದಿನ ನಡೆಯುವ ಬ್ರಹ್ಮರಥೋತ್ಸವದ ಪೂಜಾ ಕೈಂಕರ್ಯ ಶ್ರೀರಾಮನವಮಿಯಂದು ಆರಂಭವಾಗಿ ಅಂಕುರಾರ್ಪಣೆ, ಧ್ವಜಾರೋಹಣ ನಡೆಯುತ್ತದೆ. ನಂತರದ ದಿನಗಳಲ್ಲಿ ಸಿಂಹವಾಹನೋತ್ಸವ, ಹನುಮಂತವಾಹನೋತ್ಸವ, ಶೇಷವಾಹನೋತ್ಸವ, ಸೂರ್ಯಪ್ರಭ ವಾಹನೋತ್ಸವ, ಗರುಡೋತ್ಸವ, ಗಜವಾಹನೋತ್ಸವ ಸೇರಿ ಇತರ ಧಾರ್ವಿುಕ ಕಾರ್ಯಕ್ರಮಗಳು ನಡೆಯುತ್ತವೆ.

ಗಿರಿ ಪ್ರದಕ್ಷಿಣೆ: ಆಲಂಬಗಿರಿ ದೇವಾಲಯದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿರುವ ಆಲಂಬಗಿರಿ ಬೆಟ್ಟದ ಪ್ರಕೃತಿಯ ತೊಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀರ್ತನಾ ಗಿರಿಪ್ರದಕ್ಷಿಣೆ ನಡೆಯಿತು. ಗಿರಿಪ್ರದಕ್ಷಿಣೆಯಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಪಾಲ್ಗೊಂಡಿದ್ದರು.