ಆರ್​ಟಿಐ ಮಹತ್ವ ಅರಿತು ಪಾಲಿಸಿ

ಧಾರವಾಡ: ದೇಶ ಒಪ್ಪಿಕೊಂಡಿರುವ ಪ್ರಜಾಸತ್ತೆಯ ಆಶಯಗಳಿಗೆ ಅನುಸಾರವಾಗಿ ರೂಪುಗೊಂಡಿರುವ ಮಾಹಿತಿ ಹಕ್ಕು ಕಾಯ್ದೆಯು ಅತ್ಯಂತ ಮಹತ್ವದ್ದಾಗಿದೆ. ಸರಳವಾಗಿರುವ ಕಾಯ್ದೆಯನ್ನು ಅರ್ಥೈಸಿಕೊಂಡು ಪಾಲನೆ ಮಾಡಬೇಕು. ಕಚೇರಿ ಕಡತಗಳನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಸಮಸ್ಯೆಗಳೇ ಉದ್ಭವಿಸುವುದಿಲ್ಲ ಎಂದು ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಡಾ. ಸುಚೇತನ್ ಸ್ವರೂಪ್ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳೊಂದಿಗೆ ಬುಧವಾರ ಜರುಗಿದ ಮಾಹಿತಿ ಹಕ್ಕು ಅಧಿನಿಯಮ- 2005 ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರ್​ಟಿಐ ತೊಂದರೆ ಕೊಡುವ ಕಾಯ್ದೆ, ದುರುಪಯೋಗವಾಗುತ್ತಿದೆ, ಇದು ಸರಿಯಲ್ಲ ಎಂಬ ಭಾವನೆ ಅಧಿಕಾರಿಗಳಲ್ಲಿದೆ. ಆದರೆ 60 ವರ್ಷಗಳಲ್ಲಿ ರೂಪುಗೊಂಡಿರುವ ಹಲವಾರು ಕಾಯ್ದೆಗಳಲ್ಲಿ ಇದು ಪ್ರಮುಖವಾಗಿದೆ. ಸಾರ್ವಜನಿಕ ಮಾಹಿತಿಯನ್ನು ಮಾತ್ರ ಒದಗಿಸಬೇಕು. ಅರ್ಜಿಗೆ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಉದ್ದೇಶವಿರಬೇಕು. ನಿಯಮ 6(1)ರಲ್ಲಿ ಅರ್ಜಿಗಳು ಬಂದಾಗ ಅದು ತಮ್ಮ ಶಾಖೆಗೆ ಸಂಬಂಧಿಸದೇ ಇದ್ದರೆ ನಿಯಮ 6(3)ರ ಅಡಿ ಸಂಬಂಧಿಸಿದ ವಿಭಾಗಕ್ಕೆ ವರ್ಗಾವಣೆ ಮಾಡಿ ಹಿಂಬರಹ ನೀಡಬೇಕು. ನಿಯಮ 4 (1) ಎ ಹಾಗೂ ಬಿ ಪ್ರಕಾರ ಕಚೇರಿಗಳ ಕಡತಗಳನ್ನು ಗಣಕೀಕರಣಗೊಳಿಸಿ ನಿರ್ವಹಿಸಿದಾಗ ಮಾಹಿತಿ ನೀಡಿಕೆ ಸುಲಭವಾಗುತ್ತದೆ ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಮಾಹಿತಿ ಆಯುಕ್ತರು ಸಂದೇಹಗಳಿಗೆ ಪರಿಹಾರ ಒದಗಿಸಿದರು. ಜಿಲ್ಲಾಧಿಕಾರಿ ಎಂ. ದೀಪಾ, ಜಿ.ಪಂ. ಸಿಇಒ ಆರ್. ಸ್ನೇಹಲ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ, ಜಿ.ಪಂ. ಉಪ ಕಾರ್ಯದರ್ಶಿ ಎಸ್.ಜಿ. ಕೊರವರ, ಇತರರಿದ್ದರು.

ಮಾಹಿತಿ ಹಕ್ಕು ಕಾಯ್ದೆ

ಭಾರತದ ಸಂಸತ್ತು ಮಾಹಿತಿ ಹಕ್ಕು ಕಾಯ್ದೆ ಅನುಮೋದಿಸಿದೆ. ಕರ್ನಾಟಕ ಸರ್ಕಾರ ಮಾಹಿತಿ ಕಾನೂನು ರೂಪಿಸಿದೆ. ನಿಯಮ 14ರ ಪ್ರಕಾರ ಅರ್ಜಿದಾರರು ಕೋರಿರುವ ಮಾಹಿತಿ 150 ಪದಗಳ ಮಿತಿಗಳಲ್ಲಿರಬೇಕು. ಒಂದೇ ಕಡತಕ್ಕೆ ಸಂಬಂಧಿಸಿದ್ದಾಗಿರಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಯಾವುದೇ ಮಾಹಿತಿಯನ್ನು ಸಂಗ್ರಹಿಸಿ, ಕ್ರೋಡೀಕರಿಸಿ ಕೊಡುವಂತಿಲ್ಲ. ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಲಭ್ಯವಿರುವ ರೂಪದಲ್ಲಿ ಮಾತ್ರ ನೀಡಬೇಕು. ಅರ್ಜಿಗಳು ಪ್ರಶ್ನೆಗಳ ರೂಪದಲ್ಲಿದ್ದರೆ, ಬೃಹತ್ ಸಂಪುಟಗಳಲ್ಲಿರುವುದನ್ನು ಕೋರಿದ್ದರೆ ಮಾಹಿತಿ ನೀಡಲು ಆಗದು. ಅದಕ್ಕೆ ಹಿಂಬರಹ ಒದಗಿಸಬೇಕು. ನಿಯಮ 8(1) ಜೆ ಪ್ರಕಾರ ವೈಯಕ್ತಿಕ ಮಾಹಿತಿ, ಸೇವಾ ಪುಸ್ತಕ, ಪಿಂಚಣಿ, ಆದಾಯ ತೆರಿಗೆ ವಿವರಗಳನ್ನು 3ನೇ ವ್ಯಕ್ತಿಗೆ ಒದಗಿಸಲು ಬರುವುದಿಲ್ಲ. ಒಂದು ತಿಂಗಳ ವೇತನದ ವಿವರ ಮಾತ್ರ ನೀಡಬಹುದು. ಸಂಬಂಧಿಸಿದ ವ್ಯಕ್ತಿಯ, ಪತಿ ಅಥವಾ ಪತ್ನಿ ಇಲ್ಲವೇ ಅಣ್ಣ ತಮ್ಮಂದಿರಿಗೆ ಮಾತ್ರ ಆಸ್ತಿ ವ್ಯಾಜ್ಯ, ವಿಚ್ಛೇದನ ಪ್ರಕರಣಗಳಿಗೆ ವೈಯಕ್ತಿಕ ಮಾಹಿತಿ ನೀಡಬಹುದು. ಕಟ್ಟಡಗಳ ನೀಲಿನಕ್ಷೆ, ಅನುಮತಿ ಪತ್ರಗಳನ್ನು ಆರ್​ಟಿಐ ಅಡಿ ನೀಡಬಹುದು. ಒಂದೇ ಅರ್ಜಿಯಲ್ಲಿ ಹಲವಾರು ವಿಷಯಗಳ ಮಾಹಿತಿ ಕೋರಿದ್ದರೆ ಮೊದಲ ವಿಷಯಕ್ಕೆ ಮಾತ್ರ ಮಾಹಿತಿ ರವಾನಿಸಬೇಕು. ವ್ಯಕ್ತಿಯ ಆರೋಗ್ಯ ಮಾಹಿತಿ, ವೈದ್ಯಕೀಯ ವರದಿಗಳನ್ನು ಪತಿ, ಪತ್ನಿ, ಸಂಬಂಧಿಕರೂ ಸೇರಿ ಯಾರಿಗೂ ನೀಡಲು ಅವಕಾಶವಿಲ್ಲ ಎಂದು ಡಾ. ಸುಚೇತನ್ ಸ್ವರೂಪ್ ಹೇಳಿದರು.