ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರ್​ಟಿಇ ಸೀಟು 209 ಇಳಿಕೆ ; ಅವಕಾಶ ವಂಚಿತ ಬಡವರ ಅಸಮಾಧಾನ

ವೆಂಕಟೇಶ್ ಚಿಕ್ಕಬಳ್ಳಾಪುರ

ಕಳೆದ ಸಾಲಿನಲ್ಲಿ ಜಿಲ್ಲೆಗೆ ಆರ್​ಟಿಇ ಅನ್ವಯ (ಕಡ್ಡಾಯ ಶಿಕ್ಷಣ ಕಾಯ್ದೆ) ಮಂಜೂರಾದ ಸೀಟುಗಳು ಬರೋಬ್ಬರಿ 2751. ಆದರೆ, ಪ್ರಸಕ್ತ ಸಾಲಿನಲ್ಲಿ ನಿಗದಿತ ಗುರಿ ಕೇವಲ 209. ಹೌದು! ಒಂದೇ ವರ್ಷದಲ್ಲಿ ಸೀಟುಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ದುಬಾರಿ ಡೊನೇಷನ್ ಪಾವತಿಸಿ ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಓದಿಸಲು ಹಲವರು ಆರ್ಥಿಕ ಸಂಕಷ್ಟ ಅನುಭವಿಸುತ್ತಾರೆ. ಇದರ ನಡುವೆ ಜಾರಿಗೆ ಬಂದ ಆರ್​ಟಿಇ ಕಾಯ್ದೆಯಿಂದ ಸರ್ಕಾರಿ ಅನುದಾನದಲ್ಲೇ ಖಾಸಗಿ ಶಾಲೆಗೆ ದಾಖಲಿಸಲು ಪಾಲಕರಿಗೆ ಅವಕಾಶ ಸಿಕ್ಕಿದೆ. ಆದರೆ, ಈಗ ಕಡಿಮೆ ಪ್ರಮಾಣದ ಸೀಟಿಗೆ ಹೆಚ್ಚಿನ ಮಕ್ಕಳು ಸವಲತ್ತಿನಿಂದ ವಂಚಿತರಾಗಲಿದ್ದಾರೆ ಎಂಬ ಮಾತು ಕೇಳಿಬಂದಿದೆ. 2018-19ನೇ ಸಾಲಿನಲ್ಲಿ 2751 ಸೀಟು ಪೈಕಿ ಎಸ್ಸಿಗೆ 857, ಎಸ್ಟಿ 176 ಮತ್ತು ಸಾಮಾನ್ಯ ವರ್ಗಕ್ಕೆ 1718 ಸೀಟು ಮಂಜೂರಾಗಿತ್ತು. ಆದರೆ, ಈ ಸಾಲಿನಲ್ಲಿ ಎಸ್ಸಿಗೆ 69, ಎಸ್ಟಿ 12 ಮತ್ತು ಸಾಮಾನ್ಯ ವರ್ಗಕ್ಕೆ 128 ಸೇರಿ ಕೇವಲ 209 ಸೀಟು ಮೀಸಲಿರಿಸಲಾಗಿದೆ.

ಸೀಟು ಇಳಿಕೆಗೆ ಪ್ರಮುಖ ಕಾರಣ: ಹಿಂದೆ ಮಗು ವಾಸಸ್ಥಳದ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳಿಗೆ ಆರ್​ಟಿಇ ಕಾಯ್ದೆಯಲ್ಲಿ ಒಂದನೇ ತರಗತಿ ದಾಖಲಾತಿಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ, ಕಾಯ್ದೆ ಜಾರಿಯ ನಡುವೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಹಂತ ಹಂತವಾಗಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಪಾಲಕರಲ್ಲಿ ಖಾಸಗಿ ಶಾಲೆಗಳ ವ್ಯಾಮೋಹ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವ್ಯಾಪ್ತಿಯಲ್ಲಿರುವ ಮಕ್ಕಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದಿರುವ ನಿಯಮ ರೂಪಿಸಲಾಗಿದೆ.

ಆರ್​ಟಿಇ ಕಾಯ್ದೆ ಅಂದ್ರೆ ಏನು?: ಆರ್​ಟಿಇ ಕಾಯ್ದೆ ಅನ್ವಯ ಖಾಸಗಿ ಶಾಲೆಗಳಲ್ಲಿ ಶೇ.25 ಸೀಟು ಮೀಸಲಿರಿಸಿ, ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಹಂಚಿಕೆ ಮಾಡಲಾಗುತ್ತದೆ. ಸರ್ಕಾರಿ ಅನುದಾನದಲ್ಲಿ ಉಚಿತ ಶಿಕ್ಷಣ ಕೊಡಿಸಲಾಗುತ್ತದೆ.

ಜಾತಿವಾರು ಮಂಜೂರಾತಿ: ಬಾಗೇಪಲ್ಲಿ ತಾಲೂಕಿನಲ್ಲಿ ಎಸ್ಸಿಗೆ 4, ಎಸ್ಟಿ 1, ಸಾಮಾನ್ಯ ವರ್ಗ 8 ಸೇರಿ 13, ಚಿಕ್ಕಬಳ್ಳಾಪುರದಲ್ಲಿ ಎಸ್ಸಿ 8, ಎಸ್ಟಿ 2, ಸಾಮಾನ್ಯ ವರ್ಗಕ್ಕೆ 16, ಚಿಂತಾಮಣಿಯಲ್ಲಿ ಎಸ್ಸಿ 29, ಎಸ್ಟಿ 5, ಸಾಮಾನ್ಯ ವರ್ಗಕ್ಕೆ 57 ಸೇರಿ 91, ಗೌರಿಬಿದನೂರಿನಲ್ಲಿ ಎಸ್ಸಿ 6, ಎಸ್ಟಿ1, ಸಾಮಾನ್ಯ ವರ್ಗಕ್ಕೆ 12 ಸೇರಿ 19, ಗುಡಿಬಂಡೆಯಲ್ಲಿ ಎಸ್ಸಿಗೆ 1, ಇತರ 1 ಸೇರಿ 2, ಶಿಡ್ಲಘಟ್ಟದಲ್ಲಿ ಎಸ್ಸಿಗೆ 21, ಎಸ್ಟಿ 3, ಸಾಮಾನ್ಯ ವರ್ಗ 34 ಸೇರಿ 58 ಸೀಟು ಮೀಸಲಿರಿಸಲಾಗಿದೆ.