ಆರ್​ಎಂಎಸ್​ಎ ಪ್ರೌಢಶಾಲೆಯ ಗೋಳು

ಆರ್​ಎಂಎಸ್​ಎ, ಪ್ರೌಢಶಾಲೆಯ. ಗೋಳು, RMSA, School, Problem,

ಮುಳಗುಂದ: 2011-12ನೇ ಸಾಲಿನಲ್ಲಿ ಪಟ್ಟಣದ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆ ನಂ. 1ರಲ್ಲಿ ತಾತ್ಕಾಲಿಕ ಆಶ್ರಯ ಪಡೆದು ಶುರುವಾದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ (ಆರ್​ಎಂಎಸ್​ಎ) ಪ್ರೌಢಶಾಲೆಗೆ ಸ್ವಂತ ಸೂರು ಸೇರುವ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಒಂದು ವರ್ಷದ ಹಿಂದೆಯೇ ಕಟ್ಟಡ ಕಾಮಗಾರಿ ಮುಕ್ತಾಯವಾಗಿದ್ದರೂ ಉದ್ಘಾಟನೆಯಾಗಿಲ್ಲ.
ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹತ್ತಿರ ಆರ್​ಎಂಎಸ್​ಎ ಪ್ರೌಢಶಾಲೆಗೆ ಸ್ವಂತ ಕಟ್ಟಡ ನಿರ್ವಣಕ್ಕಾಗಿ ಭೂಮಿ ಗುರುತಿಸಿ 2013-14ರಲ್ಲಿ ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ 10 ಕೊಠಡಿಗಳ ಮೂರು ಮಹಡಿಗಳ ಕಟ್ಟಡ ನಿರ್ವಣಕ್ಕೆ ಎನ್.ಸಿ. ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಕಾಮಗಾರಿ ಪ್ರಾರಂಭಿಸುವುದಕ್ಕೆ ಆರು ತಿಂಗಳು ತೆಗೆದುಕೊಂಡ ಕಂಪನಿ ಆಮೆ ವೇಗದಲ್ಲಿ ಕೆಲಸ ಪೂರ್ಣಗೊಳಿಸಿದೆ.
ಸದ್ಯ ಅಂತಿಮ ಹಂತದ ಅಲ್ಪಸ್ವಲ್ಪ ಕೆಲಸ ಬಾಕಿ ಇದೆ. ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಟ್ಟಡ ಹಸ್ತಾಂತರಿಸಿಕೊಳ್ಳಲು ತಿಳಿಸಿದರೂ ಸ್ಥಳೀಯ ಆಡಳಿತದ ಕಾರಣ ಹೇಳಿ ಹಸ್ತಾಂತರ ಮಾಡಿಕೊಂಡಿಲ್ಲ. ವರ್ಷದ ಹಿಂದೆ ಹಚ್ಚಿದ್ದ ಸುಣ್ಣ ಬಣ್ಣ ಮಾಸುತ್ತಿದೆ ಎಂದು ಕಂಪನಿ ಮೇಲ್ವಿಚಾರಕ ಇಂಜಿನಿಯರ್ ವೆಂಕಟೇಶರೆಡ್ಡಿ ಹೇಳುತ್ತಾರೆ.
ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರಲ್ಲಿ ಕೊಠಡಿಗಳ ಕೊರತೆ ಇರುವುದರಿಂದ ಸ್ವಲ್ಪ ದೂರದಲ್ಲಿರುವ ಎಪಿಎಂಸಿ ಯಾರ್ಡ್​ನ ಗೋದಾಮುಗಳಲ್ಲಿ ಕೊಠಡಿಗಳನ್ನು ನಿರ್ವಿುಸಿ ಆರ್​ಎಂಎಸ್​ಎ ಪ್ರೌಢಶಾಲೆ ಮಕ್ಕಳಿಗೆ ಪಾಠಗಳನ್ನು ಬೋಧಿಸಲಾಗುತ್ತಿದೆ. ಆದರೆ, ಅಲ್ಲಿ ಕುಡಿಯುವ ನೀರು, ಶೌಚಗೃಹದ ಕೊರತೆಯಿದೆ. ಸದ್ಯ ಇಲ್ಲಿ 9, 10ನೇ ತರಗತಿಗಳು ನಡೆಯುತ್ತಿದ್ದು, 145 ವಿದ್ಯಾರ್ಥಿಗಳು ಇದ್ದಾರೆ. ಕುಡಿಯುವ ನೀರು, ಶೌಚಗೃಹ, ಬಿಸಿಯೂಟಕ್ಕಾಗಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಗೆ ಬರಬೇಕಾದ ಅನಿವಾರ್ಯತೆ ಇದೆ. ಶಾಲೆ ನಡೆಯುತ್ತಿರುವ ಕಟ್ಟಡಕ್ಕೆ ತಾತ್ಕಾಲಿಕವಾಗಿ ಕನಿಷ್ಠ ಸೌಲಭ್ಯವಾದರೂ ನೀಡಿ. ಇಲ್ಲ ನೂತನ ಕಟ್ಟಡ ಉದ್ಘಾಟಿಸಿ ಎಂದು ವಿದ್ಯಾರ್ಥಿಗಳ, ಪಾಲಕರು ಆಗ್ರಹಿಸಿದ್ದಾರೆ.
ಕಳಪೆ ಕಾಮಗಾರಿ: ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಗ್ರಿಲ್, ನಯವಿಲ್ಲದ ಬ್ಲಾಕ್ ಬೋರ್ಡ್ ಅಳವಡಿಸಿದ್ದು, ಶೌಚ ಗೃಹದ ತಗಡುಗಳು ಈಗಾಗಲೇ ಜಂಗು ಹಿಡಿದಿವೆ. ಬಾಗಿಲು, ಕಿಟಕಿಗಳ ನಿರ್ವಣವೂ ಕಳಪೆಯಾಗಿದೆ. ಆದರೂ ಅಧಿಕಾರಿಗಳು ಕಟ್ಟಡದ ಮೇಲ್ವಿಚಾರಣೆ ಮಾಡುತ್ತಿಲ್ಲ.
“ಕಟ್ಟಡ ನಿರ್ಮಾಣ ಕಾಮಗಾರಿ ಬಾಕಿ ಇದೆ. ಕಟ್ಟಡ ಪರಿಶೀಲಿಸಿ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು. ನೀರು, ಶೌಚಗೃಹ ಸಮಸ್ಯೆ ಸರಿಪಡಿಸಲಾಗುವುದು.”
| ಜಿ.ಎಲ್. ಬಾರಾಟಕ್ಕೆ, ಪ್ರಭಾರಿ ಉಪನಿರ್ದೇಶಕ ಶಿಕ್ಷಣ ಇಲಾಖೆ, ಗದಗ

Leave a Reply

Your email address will not be published. Required fields are marked *